ಚಿಕ್ಕಬಳ್ಳಾಪುರ | ಕಾಂಗ್ರೆಸ್-ಜೆಡಿಎಸ್ ನಡುವೆ ಜಿದ್ದಾಜಿದ್ದಿಯ ಹೋರಾಟ; ಠೇವಣಿ ಉಳಿಸಿಕೊಳ್ಳಲೂ ಬಿಜೆಪಿ ಪರದಾಟ

Date:

ಚಿಕ್ಕಬಳ್ಳಾಪುರ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ನೋಡುವುದಾದರೆ, ಇಲ್ಲಿನ ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಹಣಾಹಣಿ ಇದೆ. ಚಿಕ್ಕಬಳ್ಳಾಪುರ ಕ್ಷೇತ್ರ ಹೊರತುಪಡಿಸಿದರೆ, ಜಿಲ್ಲೆಯ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಠೇವಣಿ ಉಳಿಸಿಕೊಳ್ಳಲೂ ಪರದಾಡಬೇಕಾದ ಸ್ಥಿತಿ ಇದೆ.

ರಾಜ್ಯ ರಾಜಧಾನಿ ಬೆಂಗಳೂರಿಗೆ ಹತ್ತಿರವಿದ್ದರೂ ಅಭಿವೃದ್ಧಿಯಿಂದ ತುಂಬಾ ದೂರ ಇರುವ ಜಿಲ್ಲೆ ಚಿಕ್ಕಬಳ್ಳಾಪುರ. ಆಂಧ್ರದ ಗಡಿಗೆ ಹೊಂದಿಕೊಂಡಿರುವ, ರಾಯಲಸೀಮೆಯ ದಟ್ಟ ಪ್ರಭಾವ ಇರುವ ಜಿಲ್ಲೆಯಲ್ಲಿ ಹಣ, ಜಾತಿ, ಕುಟುಂಬ ಪ್ರತಿಷ್ಠೆಯ ವಿಚಾರಗಳು ಚುನಾವಣೆಯಲ್ಲಿ ಮುಖ್ಯ ಪಾತ್ರ ವಹಿಸುತ್ತಿವೆ. ಜೊತೆಗೆ ನೀರಾವರಿ ವಿಚಾರವೂ ಕೂಡ ಚುನಾವಣೆಯ ಸಂದರ್ಭದಲ್ಲಿ ಮುನ್ನೆಲೆಗೆ ಬರುತ್ತದೆ.       

ಎಚ್ ಎನ್ ವ್ಯಾಲಿ, ಕೆ ಸಿ ವ್ಯಾಲಿ, ಎತ್ತಿನ ಹೊಳೆ ನೀರಾವರಿ ಯೋಜನೆಗಳು ಪ್ರತಿ ಬಾರಿ ಜಿಲ್ಲೆಯಲ್ಲಿ ಚುನಾವಣೆಯ ವಿಷಯಗಳಾಗುತ್ತವೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಮೂರೂ ಪಕ್ಷಗಳು ಈ ಯೋಜನೆಗಳ ಕ್ರೆಡಿಟ್‌ಗಾಗಿ ಬಡಿದಾಡುತ್ತಿವೆ. ವಿಶೇಷ ಅಂದರೆ, ಎತ್ತಿನ ಹೊಳೆ ಯೋಜನೆಯ ಹೆಸರಿನಲ್ಲಿ ಕೋಟಿ ಕೋಟಿ ರೂಪಾಯಿ ಹಣ ಹರಿದಿದ್ದರೂ ಇದುವರೆಗೂ ಒಂದು ಹನಿ ನೀರೂ ಜಿಲ್ಲೆಗೆ ಹರಿದು ಬಂದಿಲ್ಲ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಹಿಂದೊಂದು ಕಾಲದಲ್ಲಿ ಈ ಜಿಲ್ಲೆ ಹಾಲು ಮತ್ತು ರೇಷ್ಮೆಗೆ ಪ್ರಖ್ಯಾತವಾಗಿತ್ತು. ಸರ್ಕಾರಗಳ ನೀತಿಗಳಿಂದ ಮತ್ತು ನೀರಿನ ಕೊರತೆಯಿಂದ ರೇಷ್ಮೆ ಕೃಷಿ ಜಿಲ್ಲೆಯಿಂದ ಕಾಲ್ತೆಗೆಯುತ್ತಿದೆ. ಉತ್ಪಾದನಾ ವೆಚ್ಚದ ಹೆಚ್ಚಳದಿಂದಾಗಿ ಹೈನುಗಾರಿಕೆ ಕೂಡ ಅದೇ ಹಾದಿಯಲ್ಲಿದೆ. ಚುನಾವಣೆಯಲ್ಲಿ ಇವು ಯಾವುವೂ ಮುಖ್ಯ ವಿಷಯಗಳಾಗಿಲ್ಲ.         

ಚಿಕ್ಕಬಳ್ಳಾಪುರ ಜಿಲ್ಲೆಯ ವ್ಯಾಪ್ತಿಯಲ್ಲಿ ಐದು ವಿಧಾನಸಭಾ ಕ್ಷೇತ್ರಗಳು ಬರುತ್ತವೆ; ಇವುಗಳ ಪೈಕಿ 2018ರ ಚುನಾವಣೆಯಲ್ಲಿ ಗೌರಿಬಿದನೂರು, ಶಿಡ್ಲಘಟ್ಟ, ಬಾಗೇಪಲ್ಲಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿತ್ತು. ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಗೆದ್ದಿದ್ದರೆ, ಚಿಂತಾವಣಿಯಲ್ಲಿ ಜೆಡಿಎಸ್ ಗೆದ್ದಿತ್ತು. ಈ ಬಾರಿಯ ಚಿತ್ರಣ ಕೊಂಚ ಭಿನ್ನವಾಗಿದೆ.

ಚಿಕ್ಕಬಳ್ಳಾಪುರ: ಪ್ರದೀಪ್ ಈಶ್ವರ್ ಸುನಾಮಿಯಲ್ಲಿ ಕೊಚ್ಚಿ ಹೋಗಲಿದ್ದಾರಾ ಡಾ.ಕೆ ಸುಧಾಕರ್?

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರವು ಈ ಬಾರಿ ಜಿಲ್ಲೆಯಲ್ಲಿಯೇ ಅತ್ಯಂತ ಜಿದ್ದಾಜಿದ್ದಿನ ಕ್ಷೇತ್ರವಾಗಿ ಮಾರ್ಪಟ್ಟಿದೆ. 2008ರವರೆಗೆ ಈ ಕ್ಷೇತ್ರ ಎಸ್ಸಿ ಮೀಸಲು ಕ್ಷೇತ್ರವಾಗಿತ್ತು. ಆನಂತರ ಇದು ಸಾಮಾನ್ಯ ಮೀಸಲು ಕ್ಷೇತ್ರವಾಯಿತು. ದೇವನಹಳ್ಳಿ ವಿಮಾನ ನಿಲ್ದಾಣ ನಿರ್ಮಾಣವಾದ ಮೇಲೆ ತ್ವರಿತ ಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶವಿದು. ಅದಕ್ಕೆ ತಕ್ಕಂತೆ ಇಲ್ಲಿನ ರಾಜಕೀಯವೂ ತೀವ್ರ ಗತಿಯಲ್ಲಿ ಬದಲಾವಣೆಯಾಗುತ್ತಿದೆ.

ಡಾ ಕೆ.ಸುಧಾಕರ್ ಪ್ರವೇಶವಾದ ಮೇಲೆ ಕ್ಷೇತ್ರ ಮತ್ತಷ್ಟು ಸುದ್ದಿ ಮಾಡತೊಡಗಿತು. ಕಾಂಗ್ರೆಸ್ ಪಕ್ಷದಿಂದ ಎರಡು ಬಾರಿ ಶಾಸಕರಾಗಿದ್ದ ಸುಧಾಕರ್, ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರಿ ನಂತರ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರು. ಬಿಜೆಪಿ ಸರ್ಕಾರದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರೂ ಆದರು. ಕೋವಿಡ್ 19 ಸಾಂಕ್ರಾಮಿಕದ ಅಸಮರ್ಪಕ ನಿರ್ವಹಣೆ, ಉಪಕರಣಗಳ ಖರೀದಿಯಲ್ಲಿ ಅವ್ಯವಹಾರದ ಆರೋಪಗಳು, 40% ಕಮಿನಷ್ ಆರೋಪಗಳು ಬಂದವು. ಗುತ್ತಿಗೆದಾರರ ಸಂಘವು ಸಚಿವರ ವಿರುದ್ಧ ದೊಡ್ಡ ಮಟ್ಟದ ಭ್ರಷ್ಟಾಚಾರ ಆರೋಪಗಳನ್ನು ಮಾಡಿತು.  

ಈ ಸುದ್ದಿ ಓದಿದ್ದೀರಾ: 40% ಕಮಿಷನ್ ಸರ್ಕಾರದಿಂದ ಮುಕ್ತಿ ಪಡೆಯಲು ರಾಜ್ಯ ತೀರ್ಮಾನಿಸಿದೆ: ಜೈರಾಮ್ ರಮೇಶ್

ಇಷ್ಟೆಲ್ಲ ಆದರೂ ಸುಧಾಕರ್, ‘ನಾನೇ ಈ ಬಾರಿಯೂ ಗೆಲ್ಲುವ ಫೇವರೆಟ್’ ಎನ್ನುತ್ತಿದ್ದಾರೆ. ಆದರೆ, ಅಲ್ಲಿನ ವಾಸ್ತವ ಸ್ಥಿತಿ ಬೇರೆಯೇ ಇದೆ. ಕಣದಲ್ಲಿ ಜೆಡಿಎಸ್‌ನ ಕೆ ಪಿ ಬಚ್ಚೇಗೌಡ ಮಾತ್ರವೇ ಇದ್ದಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತೋ ಏನೋ. ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರದೀಪ್ ಈಶ್ವರ್ ರಂಗ ಪ್ರವೇಶಿಸಿದ ನಂತರ ಕದನದ ಸಂಪೂರ್ಣ ಚಿತ್ರಣವೇ ಬದಲಾಗಿದೆ.

ಪ್ರದೀಪ್ ಈಶ್ವರ್ ಪರಿಕ್ರಮ ನೀಟ್ ಕೋಚಿಂಗ್ ಸೆಂಟರ್ ಮಾಲೀಕರು. ಜೊತೆಗೆ ಸಿನಿಮಾ ರಂಗದಲ್ಲೂ ಒಂದಿಷ್ಟು ಕೈಯಾಡಿಸಿದವರು. ಮುಖ್ಯವಾಗಿ ಕ್ಷೇತ್ರದ ಬಹುಸಂಖ್ಯಾತ ಬಲಿಜ ಸಮುದಾಯಕ್ಕೆ ಸೇರಿದವರು.

ಆರಂಭದಲ್ಲಿ ಕೆಲವರು ಪ್ರದೀಪ್ ಈಶ್ವರ್ ಅವರನ್ನು ಸುಧಾಕರ್ ಬೇನಾಮಿ ಎಂದರು. ಆದರೆ, ತನ್ನ ಮಾತಿನ ಸುನಾಮಿಯಿಂದ ಅಂಥ ಆರೋಪಗಳನ್ನೆಲ್ಲ ಮೀರಿ ಮುಂದೆ ಬಂದಿರುವ ಪ್ರದೀಪ್ ಈಶ್ವರ್, ನಾನಾ ಅವತಾರಗಳಲ್ಲಿ ಮತದಾರರನ್ನು ಎದುರುಗೊಳ್ಳುತ್ತಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರೇಳಿ ಒಮ್ಮೆ. ತನ್ನ ಬಲಿಜ ಸಮುದಾಯದ ಹೆಸರಲ್ಲಿ ಒಮ್ಮೆ, ಸಿದ್ದರಾಮಯ್ಯನವರ ಹೆಸರಲ್ಲಿ ಒಮ್ಮೆ, ಅಕಾಲದಲ್ಲಿ ಸತ್ತುಹೋದ ತನ್ನ ತಂದೆ ತಾಯಿಯನ್ನು ನೆನದು ಒಮ್ಮೆ ಹೀಗೆ ಥರಾವರಿ ರೀತಿಯಲ್ಲಿ ಜನರನ್ನು ಎದುರುಗೊಳ್ಳುತ್ತಿದ್ದಾರೆ; ಮತದಾರರನ್ನು ತನ್ನತ್ತ ಸೆಳೆಯುತ್ತಿದ್ದಾರೆ.

ಪ್ರದೀಪ್ ಈಶ್ವರ್ ಅವರ ಮಾತಿನ ವೈಖರಿಗೆ ಮತದಾರರು ಫಿದಾ ಆಗುತ್ತಿದ್ದು, ಸುಧಾಕರ್ ಹಣಬಲ ಅವರ ಮಾತಿನ ಮುಂದೆ ಏನೂ ಕೆಲಸ ಮಾಡುವುದಿಲ್ಲ ಎನ್ನುವ ಭಾವನೆ ಕ್ಷೇತ್ರದಲ್ಲಿದೆ. ಜೊತೆಗೆ ಬಿಜೆಪಿಯ ಸುಧಾಕರ್ ಮತ್ತು ಜೆಡಿಎಸ್‌ನ ಕೆ ಪಿ ಬಚ್ಚೇಗೌಡ ಇಬ್ಬರೂ ಒಕ್ಕಲಿಗರಾಗಿದ್ದು, ಒಕ್ಕಲಿಗರ ಮತಗಳು ಹರಿದು ಹಂಚಿ ಹೋಗಲಿವೆ.

ನಿರ್ಣಾಯಕವಾದ ಬಲಿಜರ ಮತಗಳು ಅದರ ಜೊತೆಗೆ ಕಾಂಗ್ರೆಸ್‌ನ ಸಾಂಪ್ರದಾಯಿಕ ಓಟ್ ಬ್ಯಾಂಕ್ ಆದ ದಲಿತರು, ಮುಸ್ಲಿಮರು, ಹಿಂದುಳಿದವರು ಮತ ಹಾಕಿದರೆ ಪ್ರದೀಪ್ ಈಶ್ವರ್ ಗೆಲ್ಲುವ ಸಂಭವವಿದೆ. ಸುಧಾಕರ್ ಅವರ ಬೇನಾಮಿ ಎನ್ನಲಾಗುತ್ತಿದ್ದ ಪ್ರದೀಪ್ ಈಶ್ವರ್, ಸದ್ಯಕ್ಕಂತೂ ಅವರಿಗೆ ನಡುಕ ಹುಟ್ಟಿಸಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿಯ ಹಿಡಿತದಲ್ಲಿದ್ದ ಏಕೈಕ ಕ್ಷೇತ್ರವೂ ಈ ಬಾರಿ ಕೈತಪ್ಪುವ ಸಾಧ್ಯತೆಯಿದೆ. ಜೆಡಿಎಸ್‌ನ ಕೆ ಪಿ ಬಚ್ಚೇಗೌಡ ಪ್ರದೀಪ್ ಈಶ್ವರ್ ಆಗಮನದ ನಂತರ ಮಂಕಾಗಿದ್ದು, ಪಕ್ಷದ ಒಂದಷ್ಟು ಮತಗಳಷ್ಟೇ ಅವರಿಗೆ ಗಟ್ಟಿ ಎನ್ನಲಾಗುತ್ತಿದೆ.

ಈ ಕ್ಷೇತ್ರದಲ್ಲಿ ಅಂದಾಜು 45 ಸಾವಿರ ಒಕ್ಕಲಿಗ ಮತಗಳಿದ್ದರೆ, 40 ಸಾವಿರ ಪರಿಶಿಷ್ಟ ಜಾತಿಯ ಮತಗಳು, 30 ಸಾವಿರ ಬಲಿಜ, 20 ಸಾವಿರ ಕುರುಬ ಹಾಗೂ 16 ಸಾವಿರ ಮುಸ್ಲಿಂ ಮತಗಳಿವೆ.

ಶಿಡ್ಲಘಟ್ಟ: ಒಕ್ಕಲಿಗರ ಪ್ರಾಬಲ್ಯದ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಗೆಲುವಿನ ಸಾಧ್ಯತೆ

ಶಿಡ್ಲಘಟ್ಟ ಕ್ಷೇತ್ರದಲ್ಲಿ ಈ ಬಾರಿಯೂ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಪೈಪೋಟಿ ಇದೆ. ಕಳೆದ ಮೂರೂವರೆ ದಶಕಗಳಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಎಂದರೆ ವಿ ಮುನಿಯಪ್ಪ ಎನ್ನುವ ವಾತಾವರಣವಿತ್ತು. ಆದರೆ, ಈ ಬಾರಿ ಕ್ಷೇತ್ರದಲ್ಲಿ ಮುನಿಯಪ್ಪ ಸ್ಪರ್ಧಾಕಣದಿಂದ ಹಿಂದೆ ಸರಿದ ನಂತರ ಪುಟ್ಟು ಆಂಜಿನಪ್ಪ ಮತ್ತು ಎಡಿಬಿ ಮಾಲೀಕ ರಾಜೀವ್ ಗೌಡ ನಡುವೆ ಟಿಕೆಟ್‌ಗಾಗಿ ಸ್ಪರ್ಧೆ ಇತ್ತು. ಅಂತಿಮವಾಗಿ ರಾಜೀವ್ ಗೌಡ ಅವರಿಗೆ ಟಿಕೆಟ್ ಸಿಕ್ಕಿದ್ದರಿಂದ ಪುಟ್ಟು ಆಂಜಿನಪ್ಪ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ರಾಜೀವ್ ಗೌಡ ಅವರಿಗೆ ಹಾಲಿ ಶಾಸಕ ಮುನಿಯಪ್ಪ ಬೆಂಬಲ ಇದೆ.

ಜೆಡಿಎಸ್‌ನಿಂದ ಮೇಲೂರು ರವಿಕುಮಾರ್ ಕಣದಲ್ಲಿದ್ದಾರೆ. ಕಳೆದ ಬಾರಿಯೂ ಜೆಡಿಎಸ್‌ನಿಂದ ರವಿಕುಮಾರ್ ಅವರೇ ಸ್ಪರ್ಧಿಸಿದ್ದರು. ಮೊದಲು ರಾಜಣ್ಣ ಅವರಿಗೆ ಟಿಕೆಟ್ ಘೋಷಿಸಿದ್ದ ಜೆಡಿಎಸ್ ವರಿಷ್ಠರು ಹೈಡ್ರಾಮಾದ ನಂತರ ರವಿಕುಮಾರ್ ಅವರಿಗೆ ಟಿಕೆಟ್ ನೀಡಿದ್ದರು. ಬಿಜೆಪಿಯಿಂದ ಉದ್ಯಮಿ ಮತ್ತು ಕಬ್ಜ ಸಿನಿಮಾದ ನಿರ್ಮಾಪಕ ಸೀಕಲ್ ರಾಮಚಂದ್ರಗೌಡ ಸ್ಪರ್ಧಿಸಿದ್ದಾರೆ.

ಬಿಜೆಪಿಯಿಂದ ಸ್ಪರ್ಧಿಸಿರುವ ಸೀಕಲ್ ರಾಮಚಂದ್ರಗೌಡ, ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಆದರೆ, ಸಿಕ್ಕಾಪಟ್ಟೆ ಹಣ ಚೆಲ್ಲಿ ಅವರು ನಿರ್ಮಿಸಿದ ‘ಕಬ್ಜ; ಸಿನಿಮಾದಂತೆಯೇ ಅವರ ರಾಜಕೀಯ ಜೀವನ ಕೂಡ ಮುಗುಚಿಕೊಳ್ಳಲಿದೆ ಎಂದು ಕ್ಷೇತ್ರದ ಜನ ಆಡಿಕೊಳ್ಳುತ್ತಿದ್ದಾರೆ.  

ಈ ಸುದ್ದಿ ಓದಿದ್ದೀರಾ: ಅಭ್ಯರ್ಥಿ ಕುಸುಮಾ ಮೇಲೆ ಪೊಲೀಸರಿಂದ ಹಲ್ಲೆ ಆರೋಪ, ನ್ಯಾಯಯುತ ಮತದಾನ ಸಾಧ್ಯವೇ ಎಂದು ಕಾಂಗ್ರೆಸ್‌ ಕಿಡಿ

ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಮೂರೂ ಪಕ್ಷಗಳು ಒಕ್ಕಲಿಗರನ್ನೇ ಕಣಕ್ಕಿಳಿಸಿವೆ. ಸದ್ಯದ ಮಟ್ಟಿಗೆ ನೋಡುವುದಾದರೆ, ಕಾಂಗ್ರೆಸ್‌ ಮತಗಳು ರಾಜೀವ್ ಗೌಡ ಮತ್ತು ಪುಟ್ಟು ಆಂಜಿನಪ್ಪ ನಡುವೆ ಹರಿದು ಹಂಚಿಹೋಗುವುದಿರಂದ ಜೆಡಿಎಸ್‌ಗೆ ಗೆಲ್ಲುವ ಸಾಧ್ಯತೆಗಳು ಹೆಚ್ಚಿವೆ. ರವಿಕುಮಾರ್ ಬಗ್ಗೆ ಜನರ ಕೈಗೆ ಸಿಗುವ ವ್ಯಕ್ತಿ ಎನ್ನುವ ಭಾವನೆ ಇದೆ. ಜೊತೆಗೆ ಮಾಜಿ ಶಾಸಕ ರಾಜಣ್ಣ ಅವರ ಬೆಂಬಲವೂ ರವಿಕುಮಾರ್‌ಗಿದೆ.      

ಕಾಂಗ್ರೆಸ್ ಎರಡನೇ ಸ್ಥಾನ ಪಡೆಯಲಿದೆ. ಕಳೆದ ಮೂರು ಚುನಾವಣೆಗಳಿಂದ ನಿರಂತರವಾಗಿ ಠೇವಣೆ ಕಳೆದುಕೊಂಡಿರುವ ಬಿಜೆಪಿ ಈ ಬಾರಿ ಸೀಕಲ್ ರಾಮಚಂದ್ರಗೌಡರ ದಯೆಯಿಂದ ಠೇವಣೆ ಉಳಿಸಿಕೊಂಡರೆ ಅದೇ ಸಾಧನೆ ಎನ್ನುತ್ತಿದ್ದಾರೆ ರಾಜಕೀಯ ವಿಶ್ಲೇಷಕರು.

ಶಿಡ್ಲಘಟ್ಟ ಕ್ಷೇತ್ರದಲ್ಲಿ ದಲಿತರು ಮತ್ತು ಒಕ್ಕಲಿಗರು ಸಮಾನ ಸಂಖ್ಯೆಯಲ್ಲಿದ್ದಾರೆ. 60 ಸಾವಿರದಷ್ಟು ಒಕ್ಕಲಿಗ ಮತಗಳಿದ್ದರೆ, 40 ಸಾವಿರ ಎಸ್ಸಿ ಮತ್ತು 20 ಸಾವಿರ ಎಸ್ಟಿ ಮತಗಳಿವೆ. 25 ಸಾವಿರ ಮುಸ್ಲಿಂ ಮತಗಳಿದ್ದರೆ, ಕುರುಬ, ಗೊಲ್ಲ, ಬಲಿಜಿಗ ಮುಂತಾದ ಮತಗಳು ಸುಮಾರು 50 ಸಾವಿರದಷ್ಟಿವೆ.

ಚಿಂತಾಮಣಿ: ಜೆಕೆಕೆ ಹ್ಯಾಟ್ರಿಕ್ ಕನಸಿಗೆ ಅಡ್ಡಿಯಾಗ್ತಾರಾ ಆಂಜನೇಯ ರೆಡ್ಡಿ ಮೊಮ್ಮಗ?

ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಅತಿ ಹೆಚ್ಚು ಮಂದಿ ಶಾಸಕರು ಮಂತ್ರಿಗಳಾದ ಕ್ಷೇತ್ರ ಚಿಂತಾಮಣಿ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಎರಡಕ್ಕೂ ಸಮಾನ ದೂರದಲ್ಲಿರುವ ಚಿಂತಾಮಣಿ ಜಿಲ್ಲೆಯ ಮಟ್ಟಿಗೆ ಅತ್ಯಂತ ಪ್ರಭಾವಿ ಕ್ಷೇತ್ರವೂ ಆಗಿತ್ತು.

ಈ ಕ್ಷೇತ್ರದ ಅಧಿಕಾರ ಎರಡು ಕುಟುಂಬಗಳ ನಡುವಿನ ಜಹಗೀರಿನಂತಾಗಿತ್ತು. ಟಿ ಕೆ ಗಂಗಿರೆಡ್ಡಿ ಮತ್ತು ಎಂ ಸಿ ಆಂಜನೇಯ ರೆಡ್ಡಿ ಎರಡೂ ಕುಟುಂಬಗಳು ದಶಕಗಳ ಕಾಲ ಪೈಪೋಟಿಗೆ ಬಿದ್ದು ಈ ಕ್ಷೇತ್ರವನ್ನು ಆಳಿದವು. ಬೆಂಗಳೂರು ಮೂಲದ ಉದ್ಯಮಿ ಜೆ ಕೆ ಕೃಷ್ಣಾರೆಡ್ಡಿ ಆಗಮನದೊಂದಿಗೆ ಆ ಎರಡು ಕುಟುಂಬಗಳ ಆಡಳಿತಕ್ಕೆ ತಡೆಯುಂಟಾಗಿತ್ತು.

ಈ ಬಾರಿಯೂ ಜೆಡಿಎಸ್‌ನಿಂದ ಜೆ ಕೆ ಕೃಷ್ಣಾ ರೆಡ್ಡಿ ಸ್ಪರ್ಧಿಸಿದ್ದರೆ, ಕಾಂಗ್ರೆಸ್‌ನಿಂದ ಡಾ.ಎಂ ಸಿ ಸುಧಾಕರ್ ಕಣಕ್ಕಿಳಿದಿದ್ದಾರೆ. ಬಿಜೆಪಿಯಿಂದ ವೇಣುಗೋಪಾಲ್ ಸ್ಪರ್ಧಿಸಿದ್ದಾರೆ. ಮೇಲ್ನೋಟಕ್ಕೆ ಹೇಳುವುದಾದರೆ, ಈ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಇದೆ. ಕ್ಷೇತ್ರದಲ್ಲಿ ನೆಲೆಯೇ ಇಲ್ಲದ ಬಿಜೆಪಿ ಕಳೆದ ಎರಡು ಚುನಾವಣೆಗಳಲ್ಲಿ ಠೇವಣೆ ಕಳೆದುಕೊಂಡಿತ್ತು.

ಕಾಂಗ್ರೆಸ್‌ನ ಡಾ.ಎಂ ಸಿ ಸುಧಾಕರ್, ಮಾಜಿ ಶಾಸಕ ಆಂಜನೇಯರೆಡ್ಡಿ ಮೊಮ್ಮಗ. ಇವರು 2004 ಮತ್ತು 2008ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದರು. ನಂತರ ಸ್ವಂತ ಪಕ್ಷದ ಕೆ ಎಚ್ ಮುನಿಯಪ್ಪ ಅವರೊಂದಿಗಿನ ಮನಸ್ತಾಪದಿಂದ ಕಾಂಗ್ರೆಸ್ ತೊರೆದು 2013 ಮತ್ತು 2018ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಇದೀಗ ಮತ್ತೆ ಕಾಂಗ್ರೆಸ್ ಸೇರಿರುವ ಎಂ ಸಿ ಸುಧಾಕರ್, ಭಾರಿ ವಿಶ್ವಾಸದಿಂದ ಪ್ರಚಾರದಲ್ಲಿ ತೊಡಗಿದ್ದಾರೆ. ಇವರಿಗೆ ಇದು ಐದನೇ ಚುನಾವಣೆ.  

ಈ ಸುದ್ದಿ ಓದಿದ್ದೀರಾ: ಕಲಬುರಗಿ | ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಬಂಧನಕ್ಕೆ ದಲಿತ ಮುಖಂಡರ ಆಗ್ರಹ

ಇನ್ನು ಜೆಡಿಎಸ್‌ನ ಜೆ ಕೆ ಕೃಷ್ಣಾರೆಡ್ಡಿ 2013 ಮತ್ತು 2018ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಈಗ ಮೂರನೇ ಬಾರಿ ಕಣಕ್ಕೆ ಇಳಿದಿರುವ ಅವರು ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಆದರೆ, ಕೃಷ್ಣಾರೆಡ್ಡಿ ಎರಡು ಬಾರಿ ಗೆದ್ದಿದ್ದರೂ ಅವರ ಗೆಲುವಿನ ಅಂತರ ಕಡಿಮೆ ಇದೆ. 2013ರಲ್ಲಿ 1696 ಮತಗಳ ಅಂತರದಿಂದ ಗೆದ್ದಿದ್ದ ಕೃಷ್ಣಾರೆಡ್ಡಿ, 2018ರಲ್ಲಿ 5240 ಮತಗಳ ಅಂತರದಿಂದಷ್ಟೇ ಗೆಲುವು ಸಾಧಿಸಿದ್ದರು. ಇದರ ಜೊತೆಗೆ ಜೆ ಕೆ ಕೃಷ್ಣಾರೆಡ್ಡಿ ವಿರುದ್ಧ ಆಡಳಿತ ವಿರೋಧಿ ಅಲೆಯಿದ್ದು, ಅದು ಎಂ ಸಿ ಸುಧಾಕರ್‌ಗೆ ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆಯಿದೆ. ಎರಡು ಬಾರಿ ಸೋತ ಅನುಕಂಪವೂ ಅವರಿಗೆ ನೆರವಾಗಬಹುದು ಎನ್ನಲಾಗುತ್ತಿದೆ.                       

ಇನ್ನು ದೇವನಹಳ್ಳಿ ಮೂಲದ ಬಿಜೆಪಿ ಅಭ್ಯರ್ಥಿ ವೇಣುಗೋಪಾಲ್, ಕೆ ಎಂ ಕೃಷ್ಣಾರೆಡ್ಡಿ ಚಾರಿಟಿಬಲ್ ಟ್ರಸ್ಟ್ ಮೂಲಕ ಜನರಿಗೆ ಆಹಾರದ ಕಿಟ್ ನೀಡುವುದು, ಆರೋಗ್ಯ ಶಿಬಿರ ಏರ್ಪಡಿಸುವುದು ಮುಂತಾದವುಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಆದರೆ, ಕ್ಷೇತ್ರದಲ್ಲಿ ಬಿಜೆಪಿಗೆ ನೆಲೆಯೇ ಇಲ್ಲದಿರುವುದರಿಂದ ಇಲ್ಲಿ ಬಿಜೆಪಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಿದೆ.

ಚಿಂತಾಮಣಿಯಲ್ಲಿ ದಲಿತ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಎಸ್‌ಸಿ 53 ಸಾವಿರ, ಎಸ್‌ಟಿ 25000, ಒಕ್ಕಲಿಗರು 50000, ಮುಸ್ಲಿಂ 38000 ಮತ್ತು ಇತರೆ ಸಮುದಾಯಗಳಾದ ಕುರುಬರು, ಗೊಲ್ಲರು, ಬಲಜಿಗರು ಸೇರಿ 55000 ಇದ್ದಾರೆ.

ಗೌರಿಬಿದನೂರು: ಶಿವಶಂಕರ ರೆಡ್ಡಿಯ ಸತತ 6ನೇ ಗೆಲುವಿಗೆ ಸವಾಲಾಗಿರುವ ಪಕ್ಷೇತರ ಅಭ್ಯರ್ಥಿ

ಪಿನಾಕಿನಿ ಬೀಡು ಗೌರಿಬಿದನೂರಿನ ಚುನಾವಣಾ ಕಣ ಹಿಂದೆಂದಿಗಿಂತ ಈ ಬಾರಿ ಹೆಚ್ಚು ಅಬ್ಬರ ಹಾಗೂ ತೀವ್ರ ಪೈಪೋಟಿಯಿಂದ ಕೂಡಿದೆ. ಇದಕ್ಕೆ ಕಾರಣ ಪಕ್ಷೇತರರ ಸ್ಪರ್ಧೆ. ಚಿಕ್ಕಬಳ್ಳಾಪುರ ಜಿಲ್ಲೆಯ ಮಟ್ಟಿಗೆ ಪಕ್ಷೇತರರು ತೀವ್ರ ಸ್ಪರ್ಧೆ ಒಡ್ಡುವ ಕ್ಷೇತ್ರ ಇದಾಗಿದೆ. 1957ರಿಂದಲೂ ಪಕ್ಷೇತರರು ಹಲವು ಬಾರಿ ಗೆದ್ದ ಇತಿಹಾಸ ಇಲ್ಲಿದೆ.

ಹಾಲಿ ಶಾಸಕ ಎನ್ ಎಚ್ ಶಿವಶಂಕರೆಡ್ಡಿ ಅವರೂ ಕೂಡ ಮೊದಲ ಬಾರಿಗೆ 1999ರಲ್ಲಿ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದು ಪಕ್ಷೇತರರಾಗಿಯೇ. ನಂತರ ಅವರು ಕಾಂಗ್ರೆಸ್‌ ಸೇರಿದರು. ಅಂದಿನಿಂದ ಇದುವರೆಗೆ ಸತತ ಐದು ಬಾರಿ ಗೆದ್ದಿರುವ ಅವರು ಇದೀಗ ಆರನೇ ಬಾರಿ ಕಾಂಗ್ರೆಸ್‌ನಿಂದಲೇ ಸ್ಪರ್ಧಿಸಿದ್ದಾರೆ. ಶಿವಶಂಕರ ರೆಡ್ಡಿ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳ ಜೊತೆಗೆ ಒಕ್ಕಲಿಗರ ಮತಗಳನ್ನು ನಂಬಿಕೊಂಡಿದ್ದಾರೆ.   

ಚುನಾವಣಾ ಕಣದಲ್ಲಿ ಎನ್ ಎಚ್ ಶಿವಶಂಕರ ರೆಡ್ಡಿಗೆ ತೀವ್ರ ಸ್ಪರ್ಧೆ ಒಡ್ಡುತ್ತಿರುವವರು ಕೆ ಎಚ್ ಪುಟ್ಟಸ್ವಾಮಿ ಗೌಡ. ನಾಗಮಂಗಲ ಮೂಲದ ಪುಟ್ಟಸ್ವಾಮಿಗೌಡ ಮೂಲತಃ ಉದ್ಯಮಿ; ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಅವರ ಮಾವ. ಸಾವಿರ ಕೋಟಿಯ ಒಡೆಯನಾಗಿರುವ ಪುಟ್ಟಸ್ವಾಮಿಗೌಡರಿಂದ ಕಣದಲ್ಲಿ ಹಣ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಕಳೆದ ನಾಲ್ಕೈದು ವರ್ಷಗಳಿಂದ ‘ಸಮಾಜ ಸೇವೆ’ ಹೆಸರಲ್ಲಿ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಪುಟ್ಟಸ್ವಾಮಿಗೌಡರು, ಕ್ಷೇತ್ರದ ಪ್ರಮುಖ ಕಾಂಗ್ರೆಸ್ ಮುಖಂಡರನ್ನು ತನ್ನೆಡೆಗೆ ಸೆಳೆದುಕೊಂಡಿದ್ದಾರೆ. ಪಂಚಾಯ್ತಿ ಮಟ್ಟದಿಂದಲೇ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ್ದಾರೆ. ಕೋವಿಡ್ ಸಂದರ್ಭವೂ ಸೇರಿದಂತೆ ಹಿಂದಿನಿಂದಲೂ ಅವರು ಹಲವು ಬಾರಿ ಆಹಾರದ ಕಿಟ್ ಮತ್ತಿತರ ಸಹಾಯ ಮಾಡುವ ಮೂಲಕ ಮತದಾರರ ಮನ ಗೆಲ್ಲಲು ಪ್ರಯತ್ನ ಮಾಡುತ್ತಿದ್ದಾರೆ.

ಈ ಸುದ್ದಿ ಓದಿದ್ದೀರಾ: ಬಿಜೆಪಿ ಲೂಟಿಯಿಂದ ಕರ್ನಾಟಕ ರಕ್ಷಿಸಲು ಕಾಂಗ್ರೆಸ್‌ಗೆ ಮತ ನೀಡಿ : ಸೋನಿಯಾ ಗಾಂಧಿ

ಎನ್ ಎಚ್ ಶಿವಶಂಕರ ರೆಡ್ಡಿಯ ವಿರುದ್ಧ ತೀವ್ರವಾದ ಆಡಳಿತ ವಿರೋಧಿ ಅಲೆ ಇದೆ. 23 ವರ್ಷಗಳಿಂದ ಶಾಸಕರಾಗಿದ್ದರೂ ಅಭಿವೃದ್ಧಿ ಬಗ್ಗೆ ಅವರ ನಿರ್ಲಕ್ಷ್ಯದಿಂದ ಮತದಾರರು ರೋಸಿ ಹೊಸ ಮುಖಕ್ಕೆ ಹಾತೊರೆಯುತ್ತಿದ್ದಾರೆ. ಹೀಗಾಗಿ ಪುಟ್ಟಸ್ವಾಮಿ ಗೌಡರಿಗೆ ಗೆಲುವಿನ ಸಾಧ್ಯತೆ ಇದೆ.

ಎಲ್ಲ ಸಮುದಾಯಗಳ ಮುಖಂಡರೂ ಪುಟ್ಟಸ್ವಾಮಿ ಗೌಡ ಅವರ ಜೊತೆಗಿದ್ದಾರೆ ಎನ್ನುವುದೊಂದು ವಿಶೇಷ. ಆದರೆ, ಹೊಸಕೋಟೆಯಿಂದ ಎಂಟಿಬಿ ನಾಗರಾಜ್ ಅವರು ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗುವ ಪಕ್ಷೇತರ ಅಭ್ಯರ್ಥಿ ಕೆಂಪರಾಜು ಪುಟ್ಟಸ್ವಾಮಿಗೌಡ ಅವರ ಗೆಲುವಿಗೆ ತೊಡಕಾಗುವ ಸಾಧ್ಯತೆಗಳಿವೆ. ಅವರು ಕುರುಬರ ಒಂದಷ್ಟು ಮತಗಳನ್ನು ಸೆಳೆದರೆ ಮತ ವಿಭಜನೆ ಆಗಿ, ಅದರಿಂದ ಕಾಂಗ್ರೆಸ್‌ಗೆ ಅನುಕೂಲವಾಗಬಹುದು ಎನ್ನಲಾಗುತ್ತಿದೆ. ಜೊತೆಗೆ ಅವರು ಹೊರಗಿನವರು ಎನ್ನುವುದೂ ಕೂಡ ಅವರ ಗೆಲುವಿಗೆ ಅಡ್ಡಿಯಾಗುವ ಸಂಭವವಿದೆ.

ಕಳೆದ ಬಾರಿ 40 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದು ಎರಡನೇ ಸ್ಥಾನ ಗಳಿಸಿದ್ದ ಜೆಡಿಎಸ್‌ನ ನರಸಿಂಹಮೂರ್ತಿ ಈ ಬಾರಿಯೂ ಜೆಡಿಎಸ್‌ನಿಂದಲೇ ಸ್ಪರ್ಧಿಸಿದ್ದಾರೆ. ಅವರು ಹಿಂದೂ ಸಾದರ ಮತಗಳ ಜೊತೆಗೆ ಇನ್ನಿತರರ ಮತಗಳನ್ನೂ ಸೆಳೆಯಬಲ್ಲರಾದರೂ ಕ್ಷೇತ್ರದಲ್ಲಿ ಅವರ ಪ್ರಭಾವ ಕಳೆದ ಬಾರಿಯಷ್ಟು ಇಲ್ಲ. ಬಿಜೆಪಿಯಿಂದ ಮಾನಸ ಆಸ್ಪತ್ರೆಯ ಡಾ.ಶಶಿಧರ್ ಸ್ಪರ್ಧಿಸಿದ್ದು, ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ ಅವರ ಸ್ಥಿತಿ.

ಈ ಬಾರಿಯ ಜಿದ್ದಾಜಿದ್ದಿನ ಹೋರಾಟ ಎನ್ ಎಚ್ ಶಿವಶಂಕರ ರೆಡ್ಡಿ ಹಾಗೂ ಪುಟ್ಟಸ್ವಾಮಿ ಗೌಡ ಅವರ ನಡುವೆ ಇದ್ದು, ಅಂತಿಮ ಹಂತದಲ್ಲಿ ಯಾರ ಕೈ ಮೇಲಾಗುವುದೋ ಅವರು ಗೆಲ್ಲಲಿದ್ದಾರೆ.

ಗೌರಿಬಿದನೂರಿನಲ್ಲಿ ಪರಿಶಿಷ್ಟ ಜಾತಿಯ 45 ಸಾವಿರ, ಪರಿಶಿಷ್ಟ ಪಂಗಡದ 35 ಸಾವಿರ, ಕುರುಬರು 30 ಸಾವಿರ, ಒಕ್ಕಲಿಗರು 20 ಸಾವಿರ, ಸಾದರ 20 ಸಾವಿರ ಅಂದಾಜು ಮತದಾರರು ಇದ್ದಾರೆ.  

ಬಾಗೇಪಲ್ಲಿ: ಸುಬ್ಬಾರೆಡ್ಡಿ ಹ್ಯಾಟ್ರಿಕ್ ಗೆಲುವಿಗೆ ಸಿಪಿಎಂ, ಜೆಡಿಎಸ್‌ ಅಡ್ಡಗಾಲು

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ ಆಂಧ್ರಪ್ರದೇಶದ ಗಡಿಭಾಗದಲ್ಲಿರುವ ಕ್ಷೇತ್ರ. ಇಲ್ಲಿ ತೆಲುಗಿನ ಪ್ರಭಾವ ದಟ್ಟವಾಗಿದೆ. ಇದು ಕರ್ನಾಟಕದ ರಾಜಕಾರಣದಲ್ಲಿ ಹೆಚ್ಚು ಗಮನ ಸೆಳೆದ ಕ್ಷೇತ್ರವಾಗಿದೆ. ಅದಕ್ಕೆ ಕಾರಣ ಸಿಪಿಎಂ ಮೂರು ಬಾರಿ ಕ್ಷೇತ್ರದ ಚುಕ್ಕಾಣಿ ಹಿಡಿದದ್ದು.

ಸಿಪಿಎಂ ಅಭ್ಯರ್ಥಿಯಾಗಿ ಈ ಬಾರಿ ಡಾ.ಅನಿಲ್ ಕುಮಾರ್ ಸ್ಪರ್ಧಿಸಿದ್ದಾರೆ. ಇವರು ವೃತ್ತಿಯಲ್ಲಿ ವೈದ್ಯರಾದರೂ ಸಾಮಾಜಿಕ ಬದ್ಧತೆಯಿಂದ ಜನಪರ ಚಳವಳಿ, ರೈತರು, ಕೂಲಿ ಕಾರ್ಮಿಕರು, ದಲಿತ-ದಮನಿತರ ಧ್ವನಿಯಾಗಿ ಹಲವು ಹೋರಾಟಗಳಲ್ಲಿ ತೊಡಗಿಕೊಂಡಂಥವರು. ಅವರ ಇಡೀ ಕುಟುಂಬವೇ ವೈದ್ಯಕೀಯ ಕ್ಷೇತ್ರದಲ್ಲಿದ್ದು, ಸಾಮಾಜಿಕ ಸೇವೆಯಲ್ಲಿ ತೊಡಗಿದೆ.

ಕೊರೊನಾ ಸಮಯದಲ್ಲೂ ಎನ್‌ಜಿಓ ಜೊತೆ ಸೇರಿ ಬಹಳಷ್ಟು ಕೆಲಸ ಮಾಡಿರುವ ಅವರು ಜನಮನ್ನಣೆ ಗಳಿಸಿ ಜನಪರ ವೈದ್ಯರೆನಿಸಿಕೊಂಡಿದ್ದಾರೆ. ಬಾಗೇಪಲ್ಲಿಯಲ್ಲಿಯೇ ನೆಲೆಸಿ ಪೀಪಲ್ಸ್ ಆಸ್ಪತ್ರೆ ತೆರೆಯುವ ಮೂಲಕ ಕ್ಷೇತ್ರದ ಜನರ ಸೇವೆ ಮತ್ತು ಪಕ್ಷ ಸಂಘಟನೆ ಮಾಡಿಕೊಂಡು ಬರುತ್ತಿದ್ದಾರೆ. ಅದರ ಜೊತೆಗೆ ಜೆಡಿಎಸ್‌ ಈ ಬಾರಿ ಚುನಾವಣೆಯಿಂದ ಹಿಂದೆ ಸರಿದಿದ್ದು, ಸಿಪಿಎಂ ಅಭ್ಯರ್ಥಿ ಡಾ.ಅನಿಲ್‌ ಕುಮಾರ್‌ ಅವರಿಗೆ ಬೆಂಬಲ ನೀಡಿದೆ. ಇದು ಅನಿಲ್ ಕುಮಾರ್ ಅವರಿಗೆ ಪ್ಲಸ್ ಪಾಯಿಂಟ್ ಆಗಿದೆ.

ಸತತ ಎರಡು ಬಾರಿ ಆಯ್ಕೆಯಾಗಿರುವ ಕಾಂಗ್ರೆಸ್‌ ಅಭ್ಯರ್ಥಿ ಹಾಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮೂರನೆಯ ಬಾರಿಗೆ ಹ್ಯಾಟ್ರಿಕ್‌ ಗೆಲುವು ಸಾಧಿಸಲು ಮುಂದಾಗಿದ್ದಾರೆ. ಆದರೆ ಅವರ ಹತ್ತು ವರ್ಷದ ಆಡಳಿತ ವಿರೋಧಿ ಅಲೆ, ಕ್ಷೇತ್ರದ ಅಭಿವೃದ್ಧಿಯ ವಿಚಾರದಲ್ಲಿನ ವೈಫಲ್ಯ ಅವರ ಗೆಲುವಿಗೆ ಅಡ್ಡಗಾಲಾಗಲಿವೆ ಎನ್ನಲಾಗುತ್ತಿದೆ.

ಈ ಸುದ್ದಿ ಓದಿದ್ದೀರಾ: ಕಾಂಗ್ರೆಸ್‌ ಯಾವತ್ತಿಗೂ ರೈತರ, ಕಾರ್ಮಿಕರ, ಜನಸಾಮಾನ್ಯರ ಪಕ್ಷ: ರಾಹುಲ್‌ ಗಾಂಧಿ

ಬಿಜೆಪಿಯಿಂದ ಸಿ.ಮುನಿರಾಜು ಅವರು ಅಭ್ಯರ್ಥಿಯಾಗಿದ್ದಾರೆ. ಬಿಜೆಪಿಗೆ ಈ ಕ್ಷೇತ್ರದಲ್ಲಿ ಠೇವಣಿ ಉಳಿಸಿಕೊಳ್ಳಲೂ ಸಾಧ್ಯವಾಗಿಲ್ಲ. 2008ರಲ್ಲಿ ಚಿತ್ರನಟ ಸಾಯಿಕುಮಾರ್ ಅವರನ್ನು ಬಿಜೆಪಿ ಕಣಕ್ಕೆ ಇಳಿಸಿ ಕ್ಷೇತ್ರವನ್ನು ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನಿಸಿ ವಿಫಲವಾಗಿದೆ. ಕ್ಷೇತ್ರದಲ್ಲಿ ನಡೆದ 13 ಚುನಾವಣೆಗಳಲ್ಲಿ ಒಮ್ಮೆಯಾದರೂ ಗೆಲ್ಲುವುದಿರಲಿ, ಎರಡನೆಯ ಸ್ಥಾನ ಪಡೆಯಲೂ ಸಾಧ್ಯವಾಗದ ಬಿಜೆಪಿ ಈ ಬಾರಿ ಹಣದ ಹೊಳೆಯನ್ನೇ ಹರಿಸಿ ಗೆಲ್ಲಲೇಬೇಕೆಂದು ಪಣ ತೊಟ್ಟಿದೆ. ಆದರೂ ಮೂರನೆಯ ಸ್ಥಾನಕ್ಕೆ ತಲುಪುವುದೂ ಕಷ್ಟವೆಂದು ಹೇಳಲಾಗುತ್ತಿದೆ.

ಈ ಹಿಂದೆ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದ ಮಿಥುನ್ ರೆಡ್ಡಿ ಈಗ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಇವರು ಮೂರ್ನಾಲ್ಕು ವರ್ಷಗಳಿಂದ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಬಂದವರು. ಕೊರೊನಾ ಸಂದರ್ಭದಲ್ಲಿ ಬಡಜನರಿಗೆ ಆಹಾರದ ಕಿಟ್‌ ಹಂಚುವುದರಂಥ ಚಟುವಟಿಕೆಗಳ ಮೂಲಕ ಕ್ಷೇತ್ರದಲ್ಲಿ ತಮ್ಮದೇ ಪ್ರಾಬಲ್ಯ ಗಳಿಸಿದ್ದು, ಶ್ರೀರಾಮರೆಡ್ಡಿಯವರ ಹಾದಿಯಲ್ಲಿ ನಡೆಯುವುದಾಗಿ ಭರವಸೆ ನೀಡಿ PSS ಬೆಂಬಲವನ್ನು ಪಡೆದುಕೊಂಡು ಕ್ಷೇತ್ರದಲ್ಲಿ ಸದ್ದು ಮಾಡುತ್ತಿದ್ದಾರೆ. ಸಿಪಿಎಂ ಪಿಎಸ್‌ಎಸ್ ಬೆಂಬಲ ಪಡೆಯುವುದರಲ್ಲಿ ವಿಫಲವಾಗಿದ್ದು, ಆ ಪಕ್ಷದ ಮತಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.

ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್, ಸಿಪಿಎಂ ಮತ್ತು ಪಕ್ಷೇತರ ಅಭ್ಯರ್ಥಿಗಳ ಮಧ್ಯೆ ಪೈಪೋಟಿ ನಡೆಯುತ್ತಿದೆ. ಜೆಡಿಎಸ್‌ ಸಿಪಿಎಂಗೆ ಸಂಪೂರ್ಣ ಬೆಂಬಲ ನೀಡಿದೆಯಾದರೂ ಅನಿಲ್‌ಕುಮಾರ್‌ಗೆ ಗೆಲುವು ಅಷ್ಟು ಸುಲಭವಿಲ್ಲ ಎನ್ನಲಾಗುತ್ತಿದೆ. ಕಾಂಗ್ರೆಸ್‌ನ ಎಸ್ ಎನ್ ಸುಬ್ಬಾರೆಡ್ಡಿ ಪಕ್ಷದ ಸಾಂಪ್ರದಾಯಿಕ ಮತಗಳ ಜೊತೆಗೆ ರೆಡ್ಡಿ ಒಕ್ಕಲಿಗರ ಮತಗಳನ್ನು ನೆಚ್ಚಿಕೊಂಡಿದ್ದಾರೆ.

ಕ್ಷೇತ್ರದಲ್ಲಿ ರೆಡ್ಡಿ-ಒಕ್ಕಲಿಗ ಮತದಾರರು 60,000 ಇದ್ದು, ದಲಿತ ಸಮುದಾಯದ ಮತಗಳು 50,000 ಇವೆ. 25,000 ಕುರುಬ ಸಮುದಾಯದ ಮತಗಳಿದ್ದರೆ, ಬಲಿಜ ಸಮುದಾಯದ 23,000, ಮುಸ್ಲಿಮರ 20,000, ಇತರ ಸಮುದಾಯಗಳ 30,000 ಮತದಾರರಿದ್ದಾರೆ ಎನ್ನಲಾಗಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತೀರ್ಥಯಾತ್ರೆ ನೆಪದಲ್ಲಿ ಮಹಿಳೆಯರು ಎಲ್ಲೆಲ್ಲೋ ಹೋಗ್ತಿದ್ದಾರೆ ಎಂದ ನಟಿ ಶೃತಿ: ಮಹಿಳಾ ಆಯೋಗದಿಂದ ನೋಟಿಸ್

“ಪ್ರೀ ಬಸ್ ಬಿಟ್ಟ ತಕ್ಷಣ ಹೆಣ್ಣುಮಕ್ಕಳು ತೀರ್ಥಯಾತ್ರೆ ಹೋಗ್ತೇವೆಂದು ಹೇಳಿ, ಎಲ್ಲಿಗೆ...

ಮಸ್ಲಿಮರನ್ನು ಒಬಿಸಿಗೆ ಸೇರಿಸಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ್‌: ಮೋದಿಗೆ ದ್ವಾರಕಾನಾಥ್ ಇತಿಹಾಸ ಪಾಠ

"ಒಬಿಸಿಗಳನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟುವ ಸಂಚನ್ನು ಮೋದಿ ರೂಪಿಸಿದ್ದಾರೆ, ಮಂಡಲ್‌ ಆಯೋಗ...

ಹಾಸನದ ‘ಪೆನ್‌ಡ್ರೈವ್’ ನಮಗೂ ತಲುಪಿದೆ; ಎಸ್ಐಟಿ ರಚಿಸಲು ಸಿಎಂಗೆ ಮನವಿ: ಮಹಿಳಾ ಆಯೋಗ

ರಾಜ್ಯದ ರಾಜಕೀಯ ವಲಯದಲ್ಲಿ ಭಾರೀ ಸುದ್ದಿ ಮಾಡುತ್ತಿರುವ ಹಾಸನದ ಪೆನ್‌ಡ್ರೈವ್‌ ಬಗ್ಗೆ...

ಲೋಕಸಭಾ ಚುನಾವಣೆ | ಮತದಾನ ಮಾಡಲು ವಿಕಲಚೇತನರು, ಹಿರಿಯ ನಾಗರಿಕರಿಗೆ ಸೌಲಭ್ಯ

ರಾಜ್ಯದಲ್ಲಿ ಏಪ್ರಿಲ್ 26ರಂದು ಮೊದಲ ಹಂತದ ಲೋಕಸಭಾ ಚುನಾವಣೆ ನಡೆಯಲಿದೆ. ಈ...