ಚುನಾವಣೆ 2023 | ಈ ಬಾರಿಯ ಚುನಾವಣೆಯ ಬಗ್ಗೆ ದುಡಿಯುವ ಮಹಿಳೆಯರು ಏನನ್ನುತ್ತಾರೆ?

Date:

Advertisements
  • ಸರ್ಕಾರದ ಸಾಧನೆ ಅಂದರೆ ಕೇವಲ ಆಶ್ವಾಸನೆ ಕೊಡೋದಷ್ಟೇ
  • ಒಂದು ಮನೆ ನಡೆಸೋ ಹೆಣ್ಣು, ಒಂದು ದೇಶವನ್ನೂ ನಡೆಸಬಹುದು

ವಿಧಾನಸಭಾ ಚುನಾವಣೆಗಾಗಿ ಎಲ್ಲಾ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರದಲ್ಲಿ ತೊಡಗಿಕೊಂಡಿವೆ. ಈ ರಾಜಕೀಯ ಪಕ್ಷಗಳು ತಮ್ಮ ಪ್ರಚಾರದಲ್ಲಿ, ಪ್ರಣಾಳಿಕೆಯಲ್ಲಿ ಮುಖ್ಯವಾಗಿ ಟಾರ್ಗೆಟ್ ಮಾಡೋದು ಮಹಿಳೆಯರನ್ನು. ಯಾಕಂದ್ರೆ, ಯಾವುದೇ ಚುನಾವಣೆ ಇರಲಿ, ಮಹಿಳೆಯರದ್ದೇ ನಿರ್ಣಾಯಕ ಪಾತ್ರ. ಆದರೆ, ಆಳುವ ಸರ್ಕಾರಗಳು ಮಹಿಳಾ ಪರ ಯೋಜನೆಗಳನ್ನ ಕಾರ್ಯರೂಪಕ್ಕೆ ತರೋದಾಗಲಿ, ಮಹಿಳಾ ಪರ ಸರ್ಕಾರವಾಗಲಿ ಅಥವಾ ಮಹಿಳೆಯರನ್ನು ಸಮಾನವಾಗಿ ಒಳಗೊಳ್ಳುವ ಸರ್ಕಾರವಾಗಲಿ ಈವರೆಗೆ ರೂಪುಗೊಂಡಿಲ್ಲ ಅನ್ನೋದು ವಿಷಾದನೀಯ. 

ದೇಶಕ್ಕೆ ಸ್ವಾತಂತ್ರ್ಯ ದೊರೆತು 76 ವರ್ಷಗಳೇ ಕಳೆದಿವೆ. ಆದರೂ ದೇಶದ ರಾಜಕೀಯದಲ್ಲಿ ಲಿಂಗಸಮಾನತೆ ಅನ್ನೋದು ಮರೀಚಿಕೆಯಾಗಿಯೇ ಉಳಿದಿದೆ. ಈ ಬಾರಿಯ ಕರ್ನಾಟಕ ಚುನಾವಣೆಯಲ್ಲಿ ಮಹಿಳಾ ಪ್ರಾತಿನಿಧ್ಯವನ್ನೇ ಗಮನಿಸೋದಾದ್ರೆ, ಎಲ್ಲಾ ರಾಜಕೀಯ ಪಕ್ಷಗಳು, ಪಕ್ಷೇತರರು ಸೇರಿದಂತೆ ಒಟ್ಟು 2,613 ಅಭ್ಯರ್ಥಿಗಳು ಅಂತಿಮ ಅಖಾಡದಲ್ಲಿ ಸ್ಪರ್ಧಿಸುತ್ತಿದ್ದಾರೆ. ಇದರಲ್ಲಿ 2,427 ಪುರುಷರಿದ್ದರೆ, ಕೇವಲ 184 ಮಹಿಳಾ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.

ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಮಹಿಳೆಯರು ರಾಜಕೀಯವಾಗಿ ಇಷ್ಟು ಹಿಂದುಳಿಯಲು ಕಾರಣವೇನು? ರಾಜಕೀಯ ಪ್ರಾತಿನಿಧ್ಯ ಪಡೆಯಲು ಮಹಿಳೆಯರಿಗೆ ಯಾಕೆ ಸಾಧ್ಯವಾಗುತ್ತಿಲ್ಲ ಅನ್ನೋದು ಗಂಭೀರ ಪ್ರಶ್ನೆಯಾಗಿದೆ.  

Advertisements
Advertisements

ಹೀಗೆ ಪುರುಷಹಂಕಾರದ ಕೂಪವಾಗಿರುವ ರಾಜಕಾರಣದಿಂದ ಮಹಿಳಾ ಪರ ಯೋಜನೆಗಳನ್ನ ಕಾರ್ಯರೂಪಕ್ಕೆ ತರೋದಕ್ಕೆ ಸಾಧ್ಯವಾಗುತ್ತಾ? ಈಗಿನ ಸರ್ಕಾರಗಳು ಮಹಿಳೆಯರಿಗಾಗಿ ಯಾವ ಯೋಜನೆಗಳನ್ನ ರೂಪಿಸಿವೆ? ದುಡಿದು ತಿನ್ನುವ ಮಹಿಳೆಯರ ಸ್ಥಿತಿಗತಿ ಏನು? ಹಾಗೇ ಈ ಚುನಾವಣೆಯ ಬಗ್ಗೆ ಸ್ವಾಭಿಮಾನಿ ಮಹಿಳೆಯರ ಮನದಾಳದ ಮಾತುಗಳೇನು ಅನ್ನೋದನ್ನ ತಿಳಿಯುವ ಸಲುವಾಗಿ ಈದಿನ.ಕಾಮ್ ಒಂದಷ್ಟು ಜನ ಮಹಿಳೆಯರನ್ನ ಮಾತನಾಡಿಸಿದೆ. ಅವರ ಬದುಕಿನ ಬಗ್ಗೆ, ಅಲ್ಲಿನ ರಾಜಕಾರಣಿಗಳು, ಅಧಿಕಾರಿಗಳ ಬಗ್ಗೆ, ಹಾಗೇ ಭರವಸೆಗಳಲ್ಲೇ ಮುಳುಗೇಳಿಸುವ ಸರ್ಕಾರಗಳ ಬಗ್ಗೆ ಪ್ರಶ್ನೆಗಳನ್ನ ಕೇಳಿದಾಗ ಅವರು ಕೊಟ್ಟ ಉತ್ತರಗಳನ್ನ ಹಾಗೇ ದಾಖಲಿಸೋ ಪ್ರಾಮಾಣಿಕ ಪ್ರಯತ್ನವಿದು. 

ಈ ಪ್ರಯತ್ನದಲ್ಲಿ ನಾವು ಬೆಂಗಳೂರಿನ್ನ ಸ್ವಚ್ಛವಾಗಿಡುವ ಪೌರಕಾರ್ಮಿಕರನ್ನ, ತೆಳ್ಳೋ ಗಾಡಿಗಳಲ್ಲಿ ಅನ್ನ ನೀಡುತ್ತಾ ಬದುಕು ಸಾಗಿಸೋ ಮಹಿಳೆಯರನ್ನ, ಸಣ್ಣ ಅಂಗಡಿ, ಉದ್ದಿಮೆಗಳ ಮೂಲಕ ಕುಟುಂಬ ನಿರ್ವಹಿಸೋ ಮಹಿಳೆಯರನ್ನ ಹಾಗೇ ಕಡಿಮೆ ಸಂಬಳಕ್ಕೆ ಕೂಲಿ ಆಳುಗಳಂತೆ ದಿನವಿಡೀ ದುಡಿಯೋ ಗಾರ್ಮೆಂಟ್ಸ್ ಮಹಿಳೆಯರನ್ನ ಮಾತನಾಡಿಸಿದ್ದೇವೆ.anjinamma min

ಬಿಜೆಪಿ ಸರ್ಕಾರ ಆಶ್ವಾಸನೆ ಕೊಟ್ಟಿದ್ದು ಬಿಟ್ರೆ, ಬೇರೇನು ಮಾಡಲಿಲ್ಲ:  ಆಂಜಿನಮ್ಮ, ಪೌರಕಾರ್ಮಿಕ ಮಹಿಳೆ

‘ಕಳೆದ 25 ವರ್ಷಗಳಿಂದ ಪೌರಕಾರ್ಮಿಕಳಾಗಿ ಕೆಲಸ ಮಾಡ್ತಿದ್ದೇನೆ, 500 ರೂಪಾಯಿ ಸಂಬಳ ಕೊಡುವಾಗಲಿಂದಲೂ ದುಡಿದಿದ್ದೇನೆ. ಈಗ 14,000 ಸಾವಿರ ಸಂಬಳ ಕೈಗೆ ಬರುತ್ತೆ. ಈಗಿನ ಪರಿಸ್ಥಿತಿಯಲ್ಲಿ ಇದು ಏನಕ್ಕೂ ಸಾಕಾಗೋದಿಲ್ಲ. ಯಾವ ಸರ್ಕಾರ ಬಂದ್ರೂ ನಮ್ಮನ್ನ ಮನುಷ್ಯರಂತೆ ನೋಡೋದಿಲ್ಲ’ ಅನ್ನೋದು ಪೌರಕಾರ್ಮಿಕ ಮಹಿಳೆ ಆಂಜಿನಮ್ಮ ಅವರ ನೋವಿನ ಮಾತು. 

ಅನಕ್ಷರಸ್ಥರು, ಬಡವರು, ದಲಿತರೇ ಹೆಚ್ಚಾಗಿರುವ ಪೌರಕಾರ್ಮಿಕರ ಬದುಕಿಗೆ ಯಾವುದೇ ಭರವಸೆ ಇಲ್ಲ. ನಮ್ಮ ಮಕ್ಕಳ ಶಿಕ್ಷಣಕ್ಕೆ ಸರ್ಕಾರದಿಂದ ಯಾವುದೇ ಸಹಕಾರ ಇಲ್ಲ. ಗ್ಯಾಸ್ ಸಿಲಿಂಡರ್ ನಿಂದ, ಮಕ್ಕಳ ಶಾಲಾ ಶುಲ್ಕದವರೆಗೆ ಪ್ರತಿಯೊಂದರ ಬೆಲೆಯೂ ಹೆಚ್ಚಾಗಿದೆ. ಬರೋ ಸಂಬಳದಿಂದ ಕುಟುಂಬ ನಿರ್ವಹಣೆ ಸಾಧ್ಯವಿಲ್ಲ. ಹೀಗಾಗಿ ಪೌರಕಾರ್ಮಿಕರು ನಾಲ್ಕೈದು ದಿನ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದೋ, ಮುಖ್ಯಮಂತ್ರಿ ಬೊಮ್ಮಾಯಿ ಅವರು ಸಂಬಳ ಹೆಚ್ಚಿಸೋದಾಗಿ ಆಶ್ವಾಸನೆ ಕೊಟ್ಟಿದ್ರು. ಆಶ್ವಾಸನೆ ಬಿಟ್ರೆ ಬಿಜೆಪಿ ಸರ್ಕಾರದಿಂದ ಈವರೆಗೆ ಯಾವುದೇ ರೀತಿಯ ಸ್ಪಂದನೆ ಸಿಕ್ಕಿಲ್ಲ. 

ಸ್ಪಚ್ಛ ಬೆಂಗಳೂರು ಅಂತಾ ಹೇಳಿಕೊಳ್ತಾರೆ, ಇದಕ್ಕೆ ಬೆವರು ಸುರಿಸಿ ದುಡಿಯೋದು ಪೌರಕಾರ್ಮಿಕರು, ನಮ್ಮ ಮೇಲಿನ ದೌರ್ಜನ್ಯಗಳು ನಿಂತಿಲ್ಲ. ಬಿಸಿಲಲ್ಲಿ ಸುಸ್ತಾಗಿ ಕೂತ್ರೆ ಫೋಟೋ ತೆಗೆದು ದೂರು ನೀಡ್ತಾರೆ. ನಮ್ಮ ಆರೋಗ್ಯಕ್ಕೆ ಯಾವ ಕ್ರಮವನ್ನು ಕೈಗೊಳ್ಳೋದಿಲ್ಲ. ಹಾಗಾಗಿ ಇನ್ನು ಮುಂದೆ ಬರೀ ಆಶ್ವಾಸನೆ ನೀಡದೆ ಅವನ್ನ ಈಡೇರಿಸುವಂತವರಿಗೆ ನಾವು ವೋಟ್ ಹಾಕ್ತೇವೆ ಅನ್ನೋದು ಆಂಜಿನಮ್ಮ ಅವರ ನಿಲುವು. 

ಇನ್ನು ಕಳೆದ 35 ವರ್ಷಗಳಿಂದ ಬೆಂಗಳೂರನ್ನ ಸ್ವಚ್ಛಗೊಳಿಸೋ ಪೌರಕಾರ್ಮಿಕರಾಗಿ ದುಡಿದ ಹಿರಿಯ ಮಹಿಳೆಯೊಬ್ಬರು ತಮ್ಮ ನೋವನ್ನ ತೋಡಿಕೊಂಡಿದ್ದಾರೆ. ಕಸಗುಡಿಸ್ತಾ, ಬೀದಿ ಸ್ವಚ್ಛಗೊಳಿಸ್ತಾ 35 ವರ್ಷ ದುಡಿದಿದ್ದೀನಿ, ಇದ್ದಕ್ಕಿದ್ದ ಹಾಗೆ ಕೆಲಸದಿಂದ ಕಿತ್ತಾಕಿದ್ರು, ಏನನ್ನು ಹೇಳಲಿಲ್ಲ ಅನ್ನೋದು ಅವರ ನೋವು. ಹೆಸರು ಹೇಳಲಿಚ್ಛಿಸದ ಆ ಹಿರಿಯ ಮಹಿಳೆ ಈದಿನ.ಕಾಮ್ ನೊಂದಿಗೆ ತಮ್ಮ ಅನುಭವ ಹಂಚಿಕೊಂಡು, `ನಾವು ಪೌರಕಾರ್ಮಿಕರು ಎಷ್ಟೇ ದುಡಿದ್ರು, ನಮ್ಮ ಕೆಲಸ ಶಾಶ್ವತ ಅಲ್ಲ. 35 ವರ್ಷದಿಂದ ದುಡಿದರೂ ನಮ್ಮ ಕೆಲಸ ಖಾಯಂ ಮಾಡಲಿಲ್ಲ. ಬಂದ ರಾಜಕಾರಣಿಗಳೆಲ್ಲಾ ಖಾಯಂ ಮಾಡ್ತೀವಿ ಅಂತಾ ಭರವಸೆ ಕೊಡ್ತಿದ್ರು. ಈಗ ಇದ್ದಕ್ಕಿದ್ದಹಾಗೆ ನೀವು ಕೆಲಸಕ್ಕೆ ಬರ್ಬೇಡಿ ಅಂತೇಳಿದ್ರು. ಇದ್ದ ಕೆಲಸವೂ ಹೋಯ್ತು. ಈ ಅತಂತ್ರದಲ್ಲೇ ಎಷ್ಟೋ ಜನ ಪೌರಕಾರ್ಮಿಕರು ದುಡೀತಿದ್ದಾರೆ’ ಅಂದ್ರು. ಹೋಗ್ಲಿ ಈ ಬಾರಿ ಚುನಾವಣೆಯಲ್ಲಿ ಯಾರಿಗೆ ವೋಟ್ ಹಾಕ್ತೀರಿ, ಯಾರು ನಿಮಗೆ ಕೆಲಸ ಮಾಡ್ತಾರೆ ಅನ್ಸುತ್ತೆ ಅಂದ್ರೆ ಅವರದು ರಾಜಕೀಯ ನಿರಾಸಕ್ತಿ. ದುಡ್ಡಿದ್ದೋರು ಗೆಲ್ತಾರೆ, ನಮ್ ಕಷ್ಟ ಸುಖ ಅವ್ರಿಗೆ ಎಲ್ಲಿ ಗೊತ್ತಾಗುತ್ತಮ್ಮ ಅಂತಾ ನಿಟ್ಟುಸಿರು ಬಿಟ್ರು. ಇದು ಸರ್ಕಾರಗಳು ಜನಸಾಮಾನ್ಯರಲ್ಲಿ ಹುಟ್ಟಿಸಿರೋ ಭರವಸೆ!?lakshmi

ಯಾವ ಸರ್ಕಾರ ಬಂದ್ರು ಬಡಬಗ್ಗರ ಬದುಕನ್ನ ಹಸನುಗೊಳಿಸೋದಿಲ್ಲ: ಲಕ್ಷ್ಮಿ, ರಸ್ತೆಬದಿ ವ್ಯಾಪಾರಿ 

‘ಯಾವ ಸರ್ಕಾರ ಬಂದ್ರು ಬಡಬಗ್ಗರ ಬದುಕನ್ನ ಹಸನುಗೊಳಿಸೋದಿಲ್ಲ’ ಅನ್ನೋದು ರಸ್ತೆ ಬದಿಯಲ್ಲಿ ತಳ್ಳುವ ಗಾಡಿಯಿಟ್ಟುಕೊಂಡು ಹೋಟೆಲ್ ನಡೆಸುವ ಲಕ್ಷ್ಮಿಅವರ ಮಾತು. ಅಂದ್ಹಾಗೆ ಲಕ್ಷ್ಮಿ ಅವರು ಕಳೆದ 20 ವರ್ಷಗಳಿಂದ ಗಾಯತ್ರಿನಗರದ ಸಮೀಪ ಅಂದರೆ, ಈಗಿನ ಕುವೆಂಪು ಮೆಟ್ರೋ ಸ್ಟೇಷನ್ ಸಮೀಪದಲ್ಲಿ ತಳ್ಳೋ ಗಾಡಿಯಲ್ಲಿ ಹೋಟೆಲ್ ನಡೆಸುತ್ತಾ ಬದುಕು ಸಾಗಿಸ್ತಿದ್ದಾರೆ. ಇವರಿಗೆ ಚುನಾವಣೆ ಬಗ್ಗೆ ಸರ್ಕಾರದ ಸಹಕಾರದ ಬಗ್ಗೆ ಪ್ರಶ್ನಿಸಿದ್ರೆ ಅವರು ಹೇಳಿದ ಮಾತುಗಳಿವು. ‘ಯಾರು ಬಂದ್ರೂ ನಮ್ಮ ಅನ್ನ ನಾವೇ ದುಡಿದು ತಿನ್ಬೇಕು. ಅವ್ರನ್ನ ದೂರಿ ಪ್ರಯೋಜನ ಇಲ್ಲಾ..ಆದ್ರೆ ಮೊದಲಿನ ಹಾಗೆ ಈಗಿನ ಪರಿಸ್ಥಿತಿ ಇಲ್ಲಾ..ಒಂದು ಸಿಲಿಂಡರ್ ಬೆಲೆ, ಅಕ್ಕಿ, ಬೇಳೆ, ಎಣ್ಣೆ ಎಲ್ಲಾದ್ರ ಬೆಲೆ ಹೆಚ್ಚಾಗಿದೆ. ಆದ್ರೆ ಇಲ್ಲಿ ತಿನ್ನೋಕೆ ಬರೋರಿಗೆ 5 ರೂಪಾಯಿ ಹೆಚ್ಚಂದ್ರು, ಅವರು ಮತ್ತೆ ಬರೋದೆ ಇಲ್ಲ. ಹೀಗಾಗಿ ಈಗ ಬದುಕು ಸಾಗಿಸೋದು ಕಷ್ಟ ಆಗ್ತಿದೆ’ ಅಂದ್ರು.

‘ಕಳೆದ ಇಪ್ಪತ್ತು ವರ್ಷಗಳಿಂದ ಇದೇ ತಳ್ಳೋ ಗಾಡಿಯಲ್ಲಿ ವ್ಯಾಪಾರ ಮಾಡ್ತಿದ್ದೇವೆ. ಮಳೆ-ಗಾಳಿ-ಬಿಸಿಲಿನಿಂದ ವ್ಯಾಪಾರ ಮಾಡೋದು ಸುಲಭವಾಗ್ತಿಲ್ಲ. ಆದ್ರೆ ಯಾವೊಬ್ಬ ರಾಜಕಾರಣಿಯೂ ಒಂದು ಅಂಗಡಿ ಹಾಕೋಕೆ ಸಹಾಯ ಮಾಡ್ಲಿಲ್ಲ. ಕೋವಿಡ್ ಸಮಯದಲ್ಲಂತೂ ನಮ್ಮ ಬದುಕು ಅಕ್ಷರಶಃ ಬೀದಿಗೆ ಬಂದಿತ್ತು. ವ್ಯಾಪಾರ ಇಲ್ಲದೆ ಹೊರಗೆ ಬರೋಕು ಸಾಧ್ಯವಾಗದೇ ಹೆಚ್ಚಿನ ತೊಂದರೆ ಆಗಿತ್ತು. ಆಗ 3 ತಿಂಗಳು ಸರ್ಕಾರದಿಂದ 500 ರೂಪಾಯಿ ಅಕೌಂಟಿಗೆ ಹಾಕಿದ್ರು. ಆಗಿನ ಸಮಸ್ಯೆಗೆ ಅದೇ ದೊಡ್ಡ ಸಹಕಾರ ನಮ್ಗೆ, ಆನಂತರ ವ್ಯಾಪಾರ ಕುಸಿಯಿತು. ಈಗ ಸುಧಾರಿಸಿಕೊಳ್ತಿದ್ದೇವೆ. ಆದ್ರೆ ಎಲ್ಲಾ ವಸ್ತುಗಳ ಬೆಲೆ ಜಾಸ್ತಿಯಾಗಿ ಲಾಭ ಅಲ್ಲಾ, ಇದನ್ನ ಸರಿದೂಗಿಸಿಕೊಂಡು ಹೋಗೋದು ಸಾಧ್ಯ ಆಗ್ತಿಲ್ಲ. ಈ ಕೆಲಸ ಬಿಟ್ರೆ ಬೇರೆ ಕೆಲಸ ಗೊತ್ತಿಲ್ಲ’ ಅಂತಾ ತಮ್ಮ ಅಸಹಾಯಕತೆ ಬಗ್ಗೆ ಹೇಳಿಕೊಂಡ್ರು. ಕಷ್ಟ ಪಟ್ಟು ದುಡಿದು ತಿನ್ನೋ ಮಹಿಳೆಯರಿಗೆ ಸರ್ಕಾರದ ಬೆಲೆ ಏರಿಕೆಯಿಂದಾಗಿ ಆಗ್ತಿರೋ ಸಮಸ್ಯೆ ಅವರ ಮಾತುಗಳಲ್ಲಿ ಎದ್ದು ಕಾಣ್ತಿತ್ತು.

ಮಹಿಳೆಯರು ರಾಜಕೀಯಕ್ಕೆ ಬರೋದ್ರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅನ್ನೋ ಪ್ರಶ್ನೆಗೆ ಉತ್ತರಿಸಿದ ಲಕ್ಷ್ಮಿ ಅವರು ‘ಹೌದು ಮಹಿಳೆಯರಿಗೆ ಅವಕಾಶ ಕೊಡ್ಬೇಕು. ಆಗಲಾದ್ರು ಈ ಸಮಸ್ಯೆಗಳು ಪರಿಹಾರ ಆಗಬಹುದು. ಹೆಣ್ಣು ಮಕ್ಕಳು ರಾಜಕೀಯಕ್ಕೆ ಬಂದ್ರೆ ಈ ಸಮಸ್ಯೆಗಳು ಅವರಿಗೂ ಅರಿವಾಗುತ್ವೆ’ ಅಂತಾ ತಮ್ಮ ನಿಲುವನ್ನ ಸ್ಪಷ್ಟಪಡಿಸಿದ್ರು. yashoda edited

ಒಂದು ಮನೆ ನಡೆಸೋ, ಹೆಣ್ಣು ಒಂದು ದೇಶವನ್ನು ನಡೆಸಬಹುದು: ಯಶೋಧ, ಸಣ್ಣ ವ್ಯಾಪಾರಿ 

‘ಹೆಣ್ಣು ಮಕ್ಕಳು ರಾಜಕೀಯಕ್ಕೆ ಬರಬೇಕು, ಒಂದು ಮನೆ ನಡೆಸೋ ಹೆಣ್ಣು, ಒಂದು ದೇಶವನ್ನು ನಡೆಸ್ಬೋದು’ ಇದು ಸಣ್ಣ ಅಂಗಡಿ ಇಟ್ಟು ಬದುಕು ನಡೆಸ್ತಿರೋ ಯಶೋಧ ಅವರ ಮಾತು. ಕಳೆದ ನಾಲ್ಕು ವರ್ಷಗಳಿಂದ ಮರಿಯಪ್ಪನ ಪಾಳ್ಯದಲ್ಲಿ ಸಣ್ಣ ಅಂಗಡಿ ಇಟ್ಟು ಜೀವನ ಸಾಗಿಸ್ತಿರೋ ಅವರು ಚುನಾವಣೆ ಬಗ್ಗೆ ಹೇಳಿದ್ದು, ‘ಯಾರೇ ಅಧಿಕಾರಕ್ಕೆ ಬರ್ಲಿ, ದೇಶಕ್ಕೆ ಒಳ್ಳೇದು ಮಾಡ್ಬೇಕು. ಬಡ ಜನರಿಗೆ, ನಮ್ಮಂಥ ಮಿಡಲ್ ಕ್ಲಾಸ್ ಜನರಿಗೆ ಸಹಾಯ ಮಾಡ್ಬೇಕು’ ಅಂದ್ರು. 

‘ಮೊದಲಿದ್ದ ಜೀವನಕ್ಕೂ ಈಗಿನ ಜೀವನಕ್ಕೂ ತುಂಬಾ ವ್ಯತ್ಯಾಸಗಳಿವೆ. ಯಾವ್ದನ್ನ ತರೋದಿಕ್ಕೆ ಹೋದ್ರು ಜಿಎಸ್‌ಟಿ ಹಾಕ್ತಾರೆ, ಎಲ್ಲಾದ್ರ ಬೆಲೆ ಏರಿದೆ. ವಸ್ತುಗಳನ್ನ ಖರೀದಿಸೋದು ತುಂಬಾ ಕಷ್ಟ. ಅದರಲ್ಲಿ ಅಂಗಡಿಯ ಬಾಡಿಗೆ ಕೊಟ್ಟು, ಬದುಕು ನಡೆಸೋದು ಕಷ್ಟ ಆಗ್ತಿದೆ ಅಂದ್ರು. ಹಾಗೇ ಹೆಣ್ಣು ಮಕ್ಕಳು ರಾಜಕೀಯಕ್ಕೆ ಬರೋದ್ರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅಂದಾಗ. ‘ಖಂಡಿತ ಹೆಣ್ಣು ಮಕ್ಕಳು ಅಧಿಕಾರಕ್ಕೆ ಬರ್ಬೇಕು. ಯಾಕಂದ್ರೆ ಅವರಿಗೆ ಮನೆ ನಡೆಸೋದು ಗೊತ್ತಿರುತ್ತೆ. ಸಿಲಿಂಡರ್ ಬೆಲೆ, ಅಕ್ಕಿ-ಬೇಳೆ-ಎಣ್ಣೆ ಈ ಎಲ್ಲವುಗಳ ಅನಿವಾರ್ಯತೆ ಗೊತ್ತಿರೋದ್ರಿಂದ ಒಳ್ಳೆ ಯೋಜನೆಗಳನ್ನ ತರಬಹುದು. ಒಂದು ಮನೆಯನ್ನ ಸರಿಯಾದ ರೀತಿ ನಿರ್ವಹಿಸೋ ಹೆಣ್ಣಿಗೆ, ಒಂದು ದೇಶವನ್ನು ಸರಿಯಾದ ರೀತಿ ನೆಡೆಸೋದಕ್ಕೆ ಬರುತ್ತೆ. ಹಾಗಾಗಿ ಹೆಣ್ಣು ಮಕ್ಕಳು ಹೆಚ್ಚು ರಾಜಕೀಯಕ್ಕೆ ಬರ್ಬೇಕು ಅಂದ್ರು’. ಜೊತೆಗೆ ‘ಈ ಬಾರೀ ಯಾವ ಪಕ್ಷ, ಯಾವ ಸಿದ್ಧಾಂತ ಅಂತಾ ನೋಡೋದಿಲ್ಲ, ಕೆಲಸ ಮಾಡೋರಿಗೆ ವೋಟ್ ಹಾಕ್ತೀವಿ’ ಅಂತಾ ತಮ್ಮ ನಿಲುವನ್ನ ಸ್ಪಷ್ಟಪಡಿಸಿದ್ರು. 

ಇನ್ನು ಚುನಾವಣೆ ಬಗ್ಗೆ ಅಭಿಪ್ರಾಯ ಕೇಳೋಕೆ ಅಂತಾ ಗಾರ್ಮೆಂಟ್ಸ್ ಮಹಿಳೆಯರನ್ನ ಮಾತಾಡಿಸೋಕೆ ಪ್ರಯತ್ನ ಪಟ್ಟಾಗ ಅವರಿಂದ ಕೆಲಸ ಮುಗಿಯೋವರೆಗೂ ಫೋನ್ ಬಳಸುವಂತಿಲ್ಲ. ಇಡೀ ದಿನ ಕೆಲಸದಲ್ಲೇ ಕಳೆದು ಹೋಗಿರುತ್ತೆ ಅನ್ನೋ ಮಾತುಗಳೇ ಹೆಚ್ಚಾಗಿ ಕೇಳಿ ಬಂದ್ವು. ಮಾತಿಗೆ ಸಿಕ್ಕ ಒಬ್ಬಿಬ್ಬರು ತಮ್ಮ ನೋವು ಹೇಳಿಕೊಂಡು ನಿಟ್ಟುಸಿರಿಟ್ಟರು. ಕೊಡೋ ಕಡಿಮೆ ಸಂಬಳದಲ್ಲಿ ಮನೆ ನಡೆಸುತ್ತಾ, ಇಡೀ ದಿನ ಗಾರ್ಮೆಂಟ್ಸ್ ಗಳಲ್ಲಿ ದುಡಿಯೋ ನಮಗೆ ಯಾವ ಸರ್ಕಾರ ಬಂದರೂ ನೆಮ್ಮದಿಯನ್ನೋದು ಇರೋದಿಲ್ಲ. ಸರ್ಕಾರಗಳಿಗೆ ನಮ್ಮಂಥವರ ಬದುಕು ಮುಖ್ಯ ಅಲ್ಲಾ. ಅವ್ರು ಮಾತಿಗೆ ಸಿಗೋದು ಕೇವಲ ಚುನಾವಣೆ ಬಂದಾಗ, ವೋಟ್ ಕೇಳೋಕೆ ಬರ್ತಾರಲ್ಲ ಹಾಗಷ್ಟೇ ಅಂತಾ ವಾಸ್ತವ ಸ್ಥಿತಿಯನ್ನ ಬಿಚ್ಚಿಟ್ಟರು. 

ಒಟ್ಟಿನಲ್ಲಿ ದುಡಿದು ತಿನ್ನುವ ಸ್ವಾಭಿಮಾನಿ ಮಹಿಳೆಯರಲ್ಲಿ ಹೆಚ್ಚಿನವರು ಡಬಲ್ ಎಂಜಿನ್ ಸರ್ಕಾರಗಳ ಬೆಲೆ ಏರಿಕೆಯಿಂದ ತತ್ತರಿಸಿಹೋಗಿರುವುದು ಸ್ಪಷ್ಟವಾಗುತ್ತದೆ. ಅಡುಗೆ ಅನಿಲ ದರ ಏರಿಕೆಯಿಂದ ಆರಂಭವಾಗಿ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಹೆಚ್ಚಾಗಿರುವುದು, ಎಷ್ಟೇ ದುಡಿದರೂ ಆ ಬೆಲೆ ಏರಿಕೆಗೆ ಸರಿದೂಗಿಸಲಾಗದಿರುವುದು, ಅವರನ್ನು ಹೈರಾಣಾಗಿಸಿದೆ. ಆಳುವ ಸರ್ಕಾರಗಳ ಸುಳ್ಳು ಭರವಸೆಗಳಿಂದ ಬೇಸತ್ತು ಹೋಗಿದ್ದಾರೆ. ಅವರ ಸಿಟ್ಟು- ಒಡಲ ಸಂಕಟ ಈ ಬಾರಿ ಮತ ಚಲಾವಣೆಯಲ್ಲಿ ಕಾಣುತ್ತದಾ, ನೋಡಬೇಕು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Advertisements

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಜೆಪಿಗೆ ವೇದಾಂತ ನೀಡಿದ ದೇಣಿಗೆ ನಾಲ್ಕು ಪಟ್ಟು ಹೆಚ್ಚಳ: 97 ಕೋಟಿ ರೂ. ನೀಡಿದ ಗಣಿಗಾರಿಕೆ ಸಂಸ್ಥೆ

ಬಿಲಿಯನೇರ್ ಅನಿಲ್ ಅಗರ್ವಾಲ್ ಅವರ ಗಣಿಗಾರಿಕೆ ಸಂಸ್ಥೆ ವೇದಾಂತ ಲಿಮಿಟೆಡ್, ಆಡಳಿತಾರೂಢ...

ಚುನಾವಣಾ ಆಯೋಗ ಯಾವಾಗಲೂ ಮೋದಿ ಸರ್ಕಾರದ ‘ಕೈಗೊಂಬೆ’ಯಾಗಿದೆ: ಕಪಿಲ್ ಸಿಬಲ್

ಚುನಾವಣಾ ಆಯೋಗವು ಯಾವಾಗಲೂ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕೈಯಲ್ಲಿ 'ಕೈಗೊಂಬೆ'ಯಾಗಿದೆ...

ಬಿಹಾರ | ಉದ್ಯಮಿ ಖೇಮ್ಕಾ ಹತ್ಯೆ ಬೆನ್ನಲ್ಲೇ ಬಿಜೆಪಿ ನಾಯಕನಿಗೆ ಗುಂಡಿಕ್ಕಿ ಕೊಲೆ

ಬಿಹಾರದ ಪಟನಾದಲ್ಲಿ ಪ್ರಮುಖ ಉದ್ಯಮಿ ಗೋಪಾಲ್ ಖೇಮ್ಕಾ ಅವರನ್ನು ಗುಂಡಿಕ್ಕಿ ಹತ್ಯೆ...

Download Eedina App Android / iOS

X