ಚಿತ್ರದುರ್ಗ ಕ್ಷೇತ್ರ | ಸೌಭಾಗ್ಯ ಬಸವರಾಜನ್-ರಘು ಆಚಾರ್ ರಣತಂತ್ರವೇನು?

Date:

  • ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಬಗ್ಗೆ ಘೋಷಿಸಿದ ಸೌಭಾಗ್ಯ
  • ಕಾಂಗ್ರೆಸ್‌ ಸೋಲಿಸುವುದಾಗಿ ರಘು ಆಚಾರ್‌ ಪ್ರತಿಜ್ಞೆ ಫಲ ನೀಡುತ್ತಾ

ಕಾಂಗ್ರೆಸ್‌ನ 2ನೇ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ, ಚಿತ್ರದುರ್ಗದಲ್ಲಿ ಬಂಡಾಯ ಭುಗಿಲೆದ್ದಿದ್ದು, ಬಸವರಾಜನ್‌ ದಂಪತಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ.

ಮತ್ತೋರ್ವ ಕೈ ಟಿಕೆಟ್‌ ಆಕಾಂಕ್ಷಿ ರಘು ಆಚಾರ್‌ ಜೆಡಿಎಸ್‌ ಸೇರಿ ಜಿಲ್ಲೆಯಾದ್ಯಂತ ಕಾಂಗ್ರೆಸ್‌ ಸೋಲಿಸುವುದಾಗಿ ಪ್ರತಿಜ್ಞೆ ಮಾಡಿದ್ದಲ್ಲದೇ, ಕಾಂಗ್ರೆಸ್‌ನ ಅತೃಪ್ತ ನಾಯಕರನ್ನು ಭೇಟಿ ಮಾಡಿ ತನಗೆ ಬೆಂಬಲಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು 10 ಕ್ಕೂ ಹೆಚ್ಚು ಆಕಾಂಕ್ಷಿಗಳು ಕಾಂಗ್ರೆಸ್‌ನಿಂದ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ಮಾಜಿ ಶಾಸಕ ಎಸ್‌ ಕೆ ಬಸವರಾಜನ್ ದಂಪತಿ, ವಿಧಾನ ಪರಿಷತ್‌ ಮಾಜಿ ಸದಸ್ಯ ರಘು ಆಚಾರ್‌ ಮತ್ತು ಕಳೆದ ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿ, 2ನೇ ಸ್ಥಾನ ಪಡೆದಿದ್ದ ಪರಾಜಿತ ಅಭ್ಯರ್ಥಿ ವೀರೇಂದ್ರ ಪಪ್ಪಿ ನಡುವೆ ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆದಿತ್ತು.

ಕಾಂಗ್ರೆಸ್‌ ವರಿಷ್ಠರು ಅಂತಿಮವಾಗಿ ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ವೀರೇಂದ್ರ ಪಪ್ಪಿ ಅವರಿಗೆ ಟಿಕೆಟ್‌ ಘೋಷಣೆ ಮಾಡಿದ್ದರಿಂದ ಕಾಂಗ್ರೆಸ್‌ನಲ್ಲಿ ಬಂಡಾಯ ಭುಗಿಲೆದ್ದಿದೆ. ಟಿಕೆಟ್ ಆಕಾಂಕ್ಷಿಗಳಾಗಿದ್ದ ಮಾಜಿ ಶಾಸಕ ಎಸ್‌ ಕೆ ಬಸವರಾಜನ್‌ ಮತ್ತು ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷೆ ಪತ್ನಿ ಸೌಭಾಗ್ಯ ಬಸವರಾಜನ್ ಅವರು ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಅಷ್ಟೇ ಅಲ್ಲ, “ಕಾಂಗ್ರೆಸ್‌ ಟಿಕೆಟ್‌ ಬಯಸಿ ನಾವಿಬ್ಬರು ಅರ್ಜಿ ಸಲ್ಲಿಸಿದ್ದೆವು. ಆದರೆ, ಕಾಂಗ್ರೆಸ್‌ ಪಕ್ಷವು ನಮ್ಮಿಬ್ಬರಿಗೂ ಟಿಕೆಟ್‌ ತಪ್ಪಿಸಿದೆ. ಜೆಡಿಎಸ್‌ನಿಂದ ಸ್ಪರ್ಧೆ ಮಾಡುವ ಇಚ್ಛೆ ಇತ್ತು, ಆದರೆ, ರಘು ಆಚಾರ್ ಈಗಾಗಲೇ ಜೆಡಿಎಸ್‌ನಿಂದ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ. ನಾವು ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡಲೇಬೇಕು ಎಂದು ನಿರ್ಧರಿಸುವುದರಿಂದ ಪಕ್ಷೇತರವಾಗಿ ಸ್ಪರ್ಧೆ ಮಾಡಲು ತೀರ್ಮಾನಿಸಿದ್ದೇವೆ. ಸೌಭಾಗ್ಯ ಬಸವರಾಜನ್‌ ಅವರನ್ನು ಕಣಕ್ಕೆ ಇಳಿಸುತ್ತಿದ್ದು, ಎಲ್ಲರೂ ನಮ್ಮನ್ನು ಬೆಂಬಲಿಸಬೇಕು” ಎಂದು ಮನವಿ ಮಾಡಿಕೊಂಡಿದ್ದಾರೆ.

ರಘು ಆಚಾರ್‌ ಗೇಮ್ ಪ್ಲಾನ್, ಬಸವರಾಜನ್‌ ದಂಪತಿಗಳು ಚುನಾವಣಾ ಅಖಾಡಕ್ಕೆ?

ಇನ್ನು ಇದೇ ಕ್ಷೇತ್ರದಿಂದ ವಿಧಾನಪರಿಷತ್‌ ಚುನಾವಣೆಗೆ ಒಮ್ಮೆ ಪಕ್ಷೇತರರಾಗಿ ಹಾಗೂ ಮತ್ತೊಮ್ಮೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ರಘು ಆಚಾರ್, ಈ ಚುನಾವಣೆಯಲ್ಲಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಇಚ್ಛೆ ವ್ಯಕ್ತಪಡಿಸಿ ಕಳೆದ ವಿಧಾನಪರಿಷತ್‌ ಚುನಾವಣಾ ಕಣದಿಂದ ಹಿಂದೆ ಸರಿದಿದ್ದರು. ಆದರೆ, ಕಾಂಗ್ರೆಸ್‌ನ ವರಿಷ್ಠರು ಇವರಿಗೆ ಟಿಕೆಟ್‌ ತಪ್ಪಿಸಿ, ಜೆಡಿಎಸ್‌ನಿಂದ ಬಂದಿದ್ದ ಉದ್ಯಮಿ ವೀರೇಂದ್ರ ಪಪ್ಪಿ ಅವರಿಗೆ ಮಣೆ ಹಾಕಿತ್ತು.

ಸಿಟ್ಟಾದ ರಘು ಆಚಾರ್ ಜೆಡಿಎಸ್ ಪರಿಷತ್‌ ಸದಸ್ಯ ಸರವಣ ಅವರೊಂದಿಗೆ ಸಮಾಲೋಚನೆ ನಡೆಸಿ, ಏ.15ರಂದು ಜೆಡಿಎಸ್‌ ಸೇರಿ, ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳುತ್ತೇನೆ ಎಂದು ಗುಡುಗಿದ್ದರು. ಅದರಂತೆ ರಘು ಆಚಾರ್‌ ಕಾಂಗ್ರೆಸ್‌ ಅತೃಪ್ತರನ್ನು ಭೇಟಿ ಮಾಡಿ, ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಇದೇ ರೀತಿ ಕಳೆದ ಶನಿವಾರ ಬಸವರಾಜನ್‌ ದಂಪತಿಗಳನ್ನು ಭೇಟಿ ಮಾಡಿದ್ದ ರಘು ಆಚಾರ್, ತನಗೆ ಬೆಂಬಲ ನೀಡುವಂತೆ ಕೇಳಿದ್ದಲ್ಲದೇ, ಇಬ್ಬರಲ್ಲಿ ಒಬ್ಬರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಮನವಿ ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಜಿಲ್ಲೆಯ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಬಸವರಾಜನ್‌ ದಂಪತಿ ಭೇಟಿ ಮಾಡಿದ್ದ ರಘು ಆಚಾರ್‌

ಲಿಂಗಾಯತ ಸಮುದಾಯದ ಮತ ವಿಭಜನೆ ತಂತ್ರ

ಕಾಂಗ್ರೆಸ್‌ ಅಭ್ಯರ್ಥಿ ವೀರೇಂದ್ರ ಪಪ್ಪಿ ಲಿಂಗಾಯತ ಸಮುದಾಯದವರಾಗಿದ್ದು, ಎಸ್‌ ಕೆ ಬಸವರಾಜನ್‌ ಕೂಡ ಲಿಂಗಾಯತ ಸಮುದಾಯದವರೇ ಆಗಿದ್ದಾರೆ. ಇವರಿಬ್ಬರು ಅಖಾಡಕ್ಕೆ ಇಳಿದರೆ, ಲಿಂಗಾಯತ ಸಮುದಾಯದ ಮತಗಳು ವಿಭಜನೆ ಆಗುತ್ತವೆ ಎಂಬುದು ರಘು ಆಚಾರ್‌ ಲೆಕ್ಕಾಚಾರವಾಗಿದೆ ಎನ್ನಲಾಗಿದೆ.

ಇನ್ನು ಬಿಜೆಪಿಯು ತನ್ನ ಅಭ್ಯರ್ಥಿಯನ್ನು ಇದುವರೆಗೂ ಘೋಷಣೆ ಮಾಡಿಲ್ಲ. ಹಾಲಿ ಶಾಸಕ ಜಿ ಹೆಚ್‌ ತಿಪ್ಪಾರೆಡ್ಡಿಗೆ ಟಿಕೆಟ್‌ ಕೈ ತಪ್ಪುವ ಸಾಧ್ಯತೆ ಇದೆ. ಇದರಿಂದ ಅವರು ಸ್ಪರ್ಧಿಸುತ್ತಾರೋ ಇಲ್ಲವೋ ಎನ್ನುವುದು ತಿಳಿದಿಲ್ಲ.

ಈ ಸುದ್ದಿ ಓದಿದ್ದೀರಾ? : ಬಿಜೆಪಿ ಟಿಕೆಟ್‌ ಘೋಷಣೆಗೂ ಮುನ್ನವೇ ಬಂಡಾಯ; ಶಾಸಕ ರಾಮಪ್ಪ ಲಮಾಣಿ ವಿರುದ್ಧ ಭುಗಿಲೆದ್ದ ಆಕ್ರೋಶ

ತಿಪ್ಪಾರೆಡ್ಡಿ ವಿರುದ್ಧ ಆಡಳಿತ ವಿರೋಧಿ ಅಲೆ ಕೂಡ ಸೃಷ್ಟಿಯಾಗಿದೆ. ಇಂತಹ ಸಂದರ್ಭದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ, ಇತರೆ ಸಮುದಾಯದ ಮತಗಳನ್ನು ಅನಾಯಾಸವಾಗಿ ತಾವು ಪಡೆದು, ಗೆಲುವು ಸಾಧಿಸಬಹುದು ಎಂಬುದು ರಘು ಆಚಾರ್‌ ಗೇಮ್‌ ಪ್ಲಾನ್‌ ಆಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಇಟ್ಟಿನಲ್ಲಿ ಚಿತ್ರದುರ್ಗ ವಿಧಾನಸಭಾ ಚುನಾವಣೆ ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದು, ಬಿಜೆಪಿ ಟಿಕೆಟ್‌ ಘೋಷಣೆ ಆದ ಮೇಲೆ ಮತ್ತಷ್ಟು ರಂಗೇರುವ ಸಾಧ್ಯತೆ ಇದೆ.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಂಚರಾಜ್ಯಗಳ ಫಲಿತಾಂಶ; ಜನರ ತೀರ್ಮಾನ ಗೌರವಿಸುತ್ತೇವೆ: ಸಿದ್ದರಾಮಯ್ಯ

ತೆಲಂಗಾಣ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದ್ದು, ಇನ್ನುಳಿದ ಮೂರು...

ಬೆಂಗಳೂರು | ನಿವೃತ್ತ ಐಎಎಸ್‌ ಅಧಿಕಾರಿ ವಿರುದ್ಧ ಅತ್ಯಾಚಾರ ಆರೋಪ: ದೂರು ದಾಖಲು

ಪಾನೀಯದಲ್ಲಿ ಮತ್ತು ಬರಿಸುವ ಪದಾರ್ಥ ಬೆರೆಸಿ ಅತ್ಯಾಚಾರ ಎಸಗಿದ್ದಾರೆ ಎಂದು 28...

ಎಚ್‌ ಡಿ ಕುಮಾರಸ್ವಾಮಿ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆ

ಸಾಮಾಜಿಕ ಹೋರಾಟಗಾರ ಸಿ ಎಸ್ ​ಸಿದ್ದರಾಜು ಅವರಿಂದ ದೂರು ಚುನಾವಣಾ...