ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರ | ಹಿಂದುತ್ವದ ವಿರುದ್ಧ ಗೆಲ್ಲುವರೇ ‘ಸ್ವಾಭಿಮಾನಿ’ ಶೆಟ್ಟರ್?

Date:

ಬಿಜೆಪಿಯ ಹಿಂದುತ್ವ, ಶೆಟ್ಟರ್‌ ಅವರ 'ಸ್ವಾಭಿಮಾನ' ಹಾಗೂ ಎಎಪಿಯ ಬದಲಾವಣೆ ಮತ್ತು ಅಭಿವೃದ್ಧಿ - ಇವು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರದ ಚುನಾವಣಾ ವಿಷಯಗಳಾಗಿವೆ. ಈ ಮೂರರಲ್ಲಿ ಮತದಾರರು ಯಾರಿಗೆ ಮಣೆ ಹಾಕುತ್ತಾರೆಂಬ ಕೌತುಕವಿದೆ.

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರವು ಹಾಲಿ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಬಿಜೆಪಿ ತೊರೆದ ನಂತರ ರಾಷ್ಟ್ರದ ಗಮನ ಸೆಳೆದಿದೆ. ಬಿಜೆಪಿ ಟಿಕೆಟ್‌ ನೀಡಲು ನಿರಾಕರಿಸಿದ್ದರಿಂದ ಅವರು ಕಾಂಗ್ರೆಸ್‌ ಸೇರಿ, ಕೈ ಪಕ್ಷದ ಅಭ್ಯರ್ಥಿಯಾಗಿದ್ದಾರೆ; ಏಳನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಲು ಕಸರತ್ತು ನಡೆಸುತ್ತಿದ್ದಾರೆ.

ಶೆಟ್ಟರ್‌ಗೆ ಟಿಕೆಟ್ ನಿರಾಕರಿಸಿದ ಬಿಜೆಪಿ, ಮಹೇಶ್ ಟೆಂಗಿನಕಾಯಿ ಅವರನ್ನು ಕಣಕ್ಕಿಳಿಸಿದೆ. ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಮತ್ತು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರ ನಿಕಟವರ್ತಿ ಎಂದು ಹೇಳಲಾಗಿದೆ. ಕಾಂಗ್ರೆಸ್‌ನಿಂದ ಶೆಟ್ಟರ್‌, ಬಿಜೆಪಿಯಿಂದ ಮಹೇಶ್‌ ಸ್ಪರ್ಧಿಸಿರುವ ಕ್ಷೇತ್ರವು ಹೈವೋಲ್ಟೇಜ್‌ ಕ್ಷೇತ್ರವಾಗಿ ಹೊರಹೊಮ್ಮಿದೆ. ಈ ಚುನಾವಣೆ ಶೆಟ್ಟರ್‌ಗೆ ಸ್ವಾಭಿಮಾನದ ಕಣವಾಗಿದ್ದರೆ, ಬಿಜೆಪಿಗೆ ಶೆಟ್ಟರ್‌ ಅವರನ್ನು ಹಣಿಯಲೇಬೇಕೆಂಬ ಜಿದ್ದಿನ ಕಣವಾಗಿದೆ.

ಶೆಟ್ಟರ್ ಅವರು ಈಗ ತಮ್ಮ ಕೆಲಸದ ಬಗ್ಗೆ ಜನರಿಗೆ ತಿಳಿಸುತ್ತಿದ್ದಾರೆ. ವಿನಮ್ರ ಸ್ವಭಾವ ಮತ್ತು ಎಲ್ಲರೊಂದಿಗೆ ಉತ್ತಮ ಒಡನಾಟ ಸಾಧಿಸುವುದರಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಟೆಂಗಿನಕಾಯಿ ಹಿಂದುತ್ವ ಹಾಗೂ ಮೋದಿ ಮತ್ತು ಜೋಶಿಯವರ ಕಾರ್ಯಗಳ ಬಗ್ಗೆ ಹೊಗಳುತ್ತಾ ಮತ ಕ್ರೋಡೀಕರಣಕ್ಕೆ ಪ್ರಯತ್ನಿಸುತ್ತಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಹಿಂದೆ, ಕ್ಷೇತ್ರವು ಹುಬ್ಬಳ್ಳಿ ಗ್ರಾಮಾಂತರ ಎಂದು ಕರೆಸಿಕೊಳ್ಳುತ್ತಿತ್ತು. 2008ರ ಕ್ಷೇತ್ರ ಮರುವಿಂಗಡಣೆ ಸಮಯದಲ್ಲಿ ಕ್ಷೇತ್ರಕ್ಕೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಎಂದು ಮರುಹೆಸರು ನೀಡಲಾಯಿತು. ಜನದೀಶ್‌ ಶೆಟ್ಟರ್‌ ಕ್ಷೇತ್ರದಲ್ಲಿ ಗೆಲ್ಲುವ ಮೊದಲು ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್‌.ಆರ್‌ ಬೊಮ್ಮಾಯಿ ಅವರು ಪ್ರತಿನಿಧಿಸುತ್ತಿದ್ದರು. ಅವರು ಇದೇ ಕ್ಷೇತ್ರದಿಂದ ಮೂರು ಬಾರಿ ಗೆದ್ದಿದ್ದರು. 1994ರಲ್ಲಿ ಕ್ಷೇತ್ರದಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದ ಶೆಟ್ಟರ್‌, ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಮಣಿಸಿ, ಗೆಲುವು ಸಾಧಿಸಿದ್ದರು. ಆಗ ಜನತಾ ದಳದಲ್ಲಿದ್ದ ಬೊಮ್ಮಾಯಿ, ನಂತರದಲ್ಲಿ ಬಿಜೆಪಿ ಸೇರಿದರು. 1994ರಿಂದ ಇಂದಿನವರೆಗೆ ನಿರಂತರವಾಗಿ ಶೆಟ್ಟರ್‌ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.

ಈ ಬಾರಿ, ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಇವರಿಬ್ಬರ ನಡುವೆ ಎಎಪಿಯೂ ಸ್ಪರ್ಧೆಯೊಡ್ಡಿದ್ದು, ಎಎಪಿಯಿಂದ ವಿಕಾಸ್ ಸೊಪ್ಪಿನ್ ಅವರು ಕಣಕ್ಕಿಳಿದಿದ್ದಾರೆ. ಅವರು ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತ್ತು ಲಿಂಗಾಯತ ಮತಗಳನ್ನು ವಿಭಜಿಸುತ್ತಾರೆ ಎಂಬ ಅಭಿಪ್ರಾಯಗಳಿವೆ.

ಕ್ಷೇತ್ರದಲ್ಲಿ ಲಿಂಗಾಯತರ ಪ್ರಾಬಲ್ಯ ಹೆಚ್ಚಾಗಿದ್ದು, ಎಲ್ಲ ಪಕ್ಷಗಳು ಲಿಂಗಾಯತ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಅಲ್ಲದೆ, ಕ್ಷೇತ್ರದಲ್ಲಿ ಮುಸ್ಲಿಮರು, ಎಸ್‌ಸಿ, ಎಸ್‌ಟಿ ಮತ್ತು ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯರೂ ಕೂಡ ನಿರ್ಣಾಯಕ ಪಾತ್ರವಹಿಸುತ್ತಾರೆ.

‘ಪಕ್ಷ ಮುಖ್ಯವೇ ಹೊರತು ಅಭ್ಯರ್ಥಿಯಲ್ಲ’ ಎಂದು ಬಿಜೆಪಿ ಪ್ರತಿಪಾದಿಸುತ್ತಿದ್ದರೆ, ‘ಪಕ್ಷ ಮುಖ್ಯವಲ್ಲ. ಅಭ್ಯರ್ಥಿಯ ಕೆಲಸ ಮತ್ತು ನಡವಳಿಕೆಯನ್ನು ನೋಡಿ ಜನ ತೀರ್ಮಾನ ಮಾಡುತ್ತಾರೆ’ ಎಂದು ಶೆಟ್ಟರ್ ಪ್ರತಿಪಾದಿಸುತ್ತಿದ್ದಾರೆ. ರಾಜಕೀಯ ಉಳಿವಿಗಾಗಿ ಹೋರಾಟ ನಡೆಸುತ್ತಿರುವ ಶೆಟ್ಟರ್ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಬೆಂಬಲವಾಗಿ ನಿಂತರೂ, ಬಿಜೆಪಿಯ ಸಾಂಪ್ರದಾಯಿಕ ಮತಗಳನ್ನೂ ಅವರು ವಿಭಜಿಸಬೇಕು. ಆಗ ಮಾತ್ರ ಅವರಿಗೆ ಗೆಲುವು ಸಾಧ್ಯವೆಂದು ಹೇಳಲಾಗುತ್ತಿದೆ.

“ನಾನು ಬಿಆರ್‌ಟಿಎಸ್ ಯೋಜನೆ ಅನುಷ್ಠಾನಗೊಳಿಸಿದ್ದು, ಹಲವು ಉದ್ಯಾನಗಳನ್ನು ಅಭಿವೃದ್ಧಿಪಡಿಸಿದ್ದೇನೆ. ರಸ್ತೆಗಳು ಮತ್ತು ಇತರ ಮೂಲಸೌಕರ್ಯಗಳನ್ನು ಒದಗಿಸಿದ್ದೇನೆ. ಜನರು ನನ್ನನ್ನು ಏಳನೇ ಬಾರಿಗೆ ಆಯ್ಕೆ ಮಾಡುತ್ತಾರೆ ಎಂಬ ವಿಶ್ವಾಸವಿದೆ” ಎಂದು ಶೆಟ್ಟರ್ ಹೇಳಿಕೊಂಡಿದ್ದಾರೆ.

ಅಲ್ಲದೆ, ಕ್ಷೇತ್ರದಲ್ಲಿ ಹುಬ್ಬಳ್ಳಿ ಈದ್ಗಾ ಮೈದಾನದ ವಿವಾದವೂ ಇದೆ. ಅದನ್ನು ಮುಂದಿಟ್ಟುಕೊಂಡಿರುವ ಬಿಜೆಪಿ, ಹಿಂದುತ್ವದ ಆಧಾರದ ಮೇಲೆ ಪ್ರಚಾರ ನಡೆಸುತ್ತಿದೆ. ಜೊತೆಗೆ, ‘ಶೆಟ್ಟರ್ ಅವರು ಅಧಿಕಾರ ದಾಹದ ರಾಜಕಾರಣಿ. ಅವರಿಗೆ ಬಿಜೆಪಿ ಎಲ್ಲವನ್ನೂ ನೀಡಿದೆ. ಆದರೆ, ಅವರು ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ’ ಎಂದೂ ಬಿಂಬಿಸುತ್ತಿದೆ.

ಪ್ರತಿಯಾಗಿ, ಶೆಟ್ಟರ್ ಅವರು ‘ಈ ಪ್ರದೇಶದಲ್ಲಿ ಬಿಜೆಪಿಯನ್ನು ತಳಮಟ್ಟದಿಂದ ಕಟ್ಟಿದ್ದೇನೆ. ತಾವು ಕಟ್ಟಿದ ಪಕ್ಷದಿಂದಲೇ ತಮಗೆ ಹೇಗೆ ಅವಮಾನವಾಯಿತು. ಈ ಸ್ಥಿತಿಗೆ ಪ್ರಹ್ಲಾದ್‌ ಜೋಶಿ ಮತ್ತು ಬಿ.ಎಲ್‌ ಸಂತೋಷ್‌ ಕಾರಣ’ ಎಂದು ದೂರುತ್ತಿದ್ದಾರೆ. ಆ ಮೂಲಕ ಅನುಕಂಪದ ಮತಗಳನ್ನು ಸೆಳೆಯಲು ಯತ್ನಿಸುತ್ತಿದ್ದಾರೆ.

ಇದೆಲ್ಲದರ ನಡುವೆ, ಮಹೇಶ್‌ ಟೆಂಗಿನಕಾಯಿ ಅವರು ತಾವು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ತಮ್ಮೊಂದಿಗೆ ಪಕ್ಷದ ಎಲ್ಲ ಕಾರ್ಯಕರ್ತರು ನಿಲ್ಲುತ್ತಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ. “ನನ್ನ ಹಿರಿಯರಾದ ಜೋಶಿ ಮತ್ತು ಇತರರು ನನಗೆ ಬೆಂಬಲ ನೀಡುತ್ತಿದ್ದಾರೆ. ಈ ಚುನಾವಣೆಯಲ್ಲಿ ಗೆಲ್ಲಲು ಎಲ್ಲ ಸಮುದಾಯಗಳ ಬೆಂಬಲ ಅಗತ್ಯವಿರುವುದರಿಂದ ನಾವು ಜಾತಿ ಆಧಾರಿತ ರಾಜಕಾರಣ ಮಾಡುತ್ತಿಲ್ಲ” ಎಂದು ಮಹೇಶ್‌ ಹೇಳುತ್ತಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಶಿವಾಜಿನಗರ ಕ್ಷೇತ್ರ | ಕಾಂಗ್ರೆಸ್‌ ಭದ್ರಕೋಟೆ ಭೇದಿಸುವುದೇ ಬಿಜೆಪಿ

ಮತ್ತೊಂದೆಡೆ, ಎಎಪಿ ಅಭ್ಯರ್ಥಿ ವಿಕಾಸ್‌ ಸೊಪ್ಪಿನ ಅವರು ಕ್ಷೇತ್ರದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಅಭಿವೃದ್ಧಿ ಕೆಲಸಗಳನ್ನು ಮಾಡುವಲ್ಲಿ ವಿಫಲವಾಗಿವೆ ಎಂದು ದೂರುತ್ತಿದ್ದಾರೆ. “ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಯಾವುದೇ ದೊಡ್ಡ ಉದ್ಯಮವಿಲ್ಲ. ಅಲ್ಲದೆ, ಚರಂಡಿಗಳಂತಹ ಮೂಲಸೌಕರ್ಯಗಳು ಕೂಡ ಇಲ್ಲವಾಗಿವೆ. ಜನರು ಇನ್ನೂ ಕುಡಿಯುವ ನೀರು ಪಡೆಯಲು ಹೆಣಗಾಡುತ್ತಿದ್ದಾರೆ. ಬೇಸಿಗೆಯಲ್ಲಿ ಪರಿಸ್ಥಿತಿಗಳು ಹದಗೆಡುತ್ತವೆ. ಹೀಗಾಗಿ ಜನರು ಈ ಬಾರಿ ಎಎಪಿಯನ್ನು ಬೆಂಬಲಿಸುತ್ತಾರೆ” ಎಂದು ಸೊಪ್ಪಿನ ಭರವಸೆಯ ಮಾತುಗಳನ್ನಾಡುತ್ತಿದ್ದಾರೆ.

ಅಂತಿಮವಾಗಿ, ಇಬ್ಬರು ಮೂಲ ಬಿಜೆಪಿಗರು ಎರಡು ರಾಷ್ಟ್ರೀಯ ಪಕ್ಷಗಳಿಂದ ಸ್ಪರ್ಧಿಸಿದ್ದಾರೆ. ಬಿಜೆಪಿ-ಕಾಂಗ್ರೆಸ್‌ ಜಂಗಿಕುಸ್ತಿ ನಡುವೆ ಎಎಪಿಯೂ ಸೆಣಸಾಡುತ್ತಿದೆ. ಜನರು ಯಾರಿಗೆ ಮಣೆ ಹಾಕುತ್ತಾರೆ. ಕ್ಷೇತ್ರದಲ್ಲಿ ಹಿಂದುತ್ವವಾ, ಸ್ವಾಭಿಮಾನವಾ ಅಥವಾ ಬದಲಾವಣೆಯಾ? ಯಾವುದನ್ನು ಜನರು ಅಪ್ಪಿಕೊಳ್ಳುತ್ತಾರೆ? – ಚುನಾವಣಾ ಕಣ ಉತ್ತರಿಸಲಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಮತಗಟ್ಟೆ ಬಳಿ ಮಹಿಳೆಗೆ ಹೃದಯಾಘಾತ; ಮತದಾನ ಮಾಡಲು ಬಂದ ವೈದ್ಯನಿಂದ ಜೀವ ರಕ್ಷಣೆ

ಬೆಂಗಳೂರಿನ ಜೆ ಪಿ ನಗರದಲ್ಲಿರುವ ಜಂಬೂ ಸವಾರಿ ದಿನ್ನೆ ಮತಗಟ್ಟೆಯಲ್ಲಿ ಮತದಾನ...

ಚಿತ್ರದುರ್ಗ | ಲೋಕಸಭಾ ಚುನಾವಣೆ; ಕರ್ತವ್ಯದಲ್ಲಿದ್ದ ಮಹಿಳಾ ಸಿಬ್ಬಂದಿ ಸಾವು

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಹೊಟ್ಟೆಪ್ಪನಹಳ್ಳಿ ಮತಗಟ್ಟೆಯಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಮಹಿಳಾ...

ಶಿವಮೊಗ್ಗ | ಬಂಗಾರಪ್ಪನವರು ನಮ್ಮ ಮನೆಯ ನಂದಾದೀಪ; ತಿಮ್ಲಾಪುರದ ಮಹಿಳೆಯರು ಸಂತಸ

"ಬಂಗಾರಪ್ಪನವರು ನಮ್ಮ ಮನೆಯ ನಂದಾದೀಪ" ಯಾವ ಸರ್ಕಾರ ಏನೇ ಮಾಡಿದರೂ 32...

ಕೋಲಾರ | ಮೂಲಭೂತ ಸೌಕರ್ಯ ಕೊರತೆ : ಮತದಾನ ಬಹಿಷ್ಕರಿಸಿದ ಗ್ರಾಮಸ್ಥರು

ದೇಶದಲ್ಲಿ ಎರಡನೇ ಹಂತದ ಮತದಾನ ನಡೆಯುತ್ತಿದ್ದರೇ, ರಾಜ್ಯದ 14 ಕ್ಷೇತ್ರಗಳಲ್ಲಿ ಮೊದಲ...