- ಸೋಮವಾರ ನಾಮಪತ್ರ ಸಲ್ಲಿಸಿದ ಹಲವು ನಾಯಕರು
- ನಾಮಪತ್ರ ಸಲ್ಲಿಕೆಗೆ ಹರಿದು ಬಂದ ಅಭಿಮಾನಿ ಜನಸಾಗರ
ನಾಮಪತ್ರ ಸಲ್ಲಿಕೆಗೆ ಕಡೆಯ ಮೂರುದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿದೆ.
‘ಶುಭ ಸೋಮವಾರ’ದ ಹೆಸರಿನಲ್ಲಿ ನಾಮಪತ್ರ ಸಲ್ಲಿಸಿರುವ ಹಲವು ನಾಯಕರು ಇಂದಿನಿಂದ ಅಧಿಕೃತ ಚುನಾವಣಾ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ.
ಏಪ್ರಿಲ್ 17ರ ಸೋಮವಾರದಂದು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದ ನಾಯಕರು ಉಮೇದುವಾರಿಕೆ ಸಲ್ಲಿಸಿದರು.
ಹೊಳೆನರಸೀಪುರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಹೆಚ್.ಡಿ ರೇವಣ್ಣ ನಾಮಪತ್ರ ಸಲ್ಲಿಸಿದರು. ಈ ವೇಳೆ ಹೆಚ್.ಡಿ ರೇವಣ್ಣಗೆ ಪತ್ನಿ ಭವಾನಿ ರೇವಣ್ಣ, ಪುತ್ರ ಸೂರಜ್ ಜೊತೆಯಾದರು.
ಹಾಗೆಯೇ ಕನಕಪುರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿಕೆ ಶಿವಕುಮಾರ್ ನಾಮಪತ್ರ ಸಲ್ಲಿಕೆ ಮಾಡಿದರು. ಬೆಂಬಲಿಗರೊಂದಿಗೆ ಬೈಕ್ ರ್ಯಾಲಿ ಮೂಲಕ ಬಂದ ಡಿಕೆಶಿ, ಈ ವೇಳೆ ತಮ್ಮ ಶಕ್ತಿ ಪ್ರದರ್ಶನ ಮಾಡಿದರು.
ಇನ್ನು ರಾಮನಗರ ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದರು. ಇವರಿಗೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಜೊತೆಯಾಗಿದ್ದರು.
ಇದಕ್ಕೂ ಮುನ್ನ ರಾಮನಗರದ ಚಾಮುಂಡೇಶ್ವರಿ ದೇಗುಲದಲ್ಲಿ ಪೂಜೆ ಸಲ್ಲಿಸಿದ ನಂತರ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದರು.
ಇನ್ನೊಂದೆಡೆ ಮಲ್ಲೇಶ್ವರಂನಲ್ಲಿ ಸಚಿವ ಅಶ್ವತ್ಥನಾರಾಯಣ್, ಚಿಕ್ಕಮಗಳೂರಿನಲ್ಲಿ ಶಾಸಕ ಸಿಟಿ ರವಿ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದರು.
ಈ ಸುದ್ದಿ ಓದಿದ್ದೀರಾ? : ರಂಗೇರಿದ ರಾಜಕೀಯ ಅಖಾಡ: ಹೆಲಿಪ್ಯಾಡ್‌ನಲ್ಲೇ ಬಿ ಫಾರಂ ವಿತರಣೆ
ಸೊರಬದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕುಮಾರ್ ಬಂಗಾರಪ್ಪ, ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ವರೂಪ್ ಉಮೇದುವಾರಿಕೆ ಸಲ್ಲಿಸಿದರು.
ಬೆಂಗಳೂರಿನ ಗಾಂಧಿ ನಗರದ ಅಭ್ಯರ್ಥಿ ದಿನೇಶ್ ಗುಂಡೂರಾವ್, ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ, ಸಕಲೇಶಪುರದ ಜೆಡಿಎಸ್‌ನ ಎಚ್ ಕೆ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದರು.