ಇತ್ತೀಚಿನ ವರ್ಷಗಳಲ್ಲಿ ಆಡಳಿತ ನಡೆಸಿದ ಸರ್ಕಾರಗಳ ಧೋರಣೆಗಳಿಂದ ರಾಜ್ಯದ ಜನತೆ ತೀವ್ರವಾಗಿ ನಲುಗಿದ್ದಾರೆ. ಜನತೆಯ ಬಹುತೇಕ ಸಮಸ್ಯೆಗಳು ಹಾಗೇ ಉಳಿದುಕೊಂಡಿವೆ. ಬಿಜೆಪಿ ಸರ್ಕಾರದ ಕೆಲವಾರು ನಿಲುವು ಮತ್ತು ನಿರ್ಧಾರಗಳಿಂದ ಜನರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಂತದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯು ಜನತೆಯ ಪಾಲಿಗೆ ಮಹತ್ವದ್ದಾಗಿದೆ ಎಂದು ಸಮಾನ ಮನಸ್ಕರ ಒಕ್ಕೂಟ ಹೇಳಿದೆ.
ಬೆಂಗಳೂರು ನಗರದ ಪ್ರೆಸ್ ಕ್ಲಬ್ನಲ್ಲಿ ಸಮಾನ ಮನಸ್ಕರ ಒಕ್ಕೂಟದ ಮುಖಂಡರು ಪತ್ರಿಕಾಗೋಷ್ಠಿ ನಡೆಸಿದ್ದಾರೆ. “ಜನ ಜೀವನ ದಿನೇದಿನೆ ಸಂಕಷ್ಟಕ್ಕೆ ಸಿಲುಕುತ್ತಿದೆ. ನಿತ್ಯ ಬಳಕೆಯ ವಸ್ತು-ಪರಿಕರಗಳ ದರ ಏರಿಕೆ ಗಗನಮುಖಿಯಾಗುತ್ತಿರುವುದರಿಂದ ಪ್ರತಿಯೊಬ್ಬರೂ ಬಸವಳಿಯುವಂತಾಗಿದೆ. ಜೊತೆಗೆ ಜಾತಿ-ಮತಗಳ ನಡುವಿನ ಸಾಮರಸ್ಯಕ್ಕೆ ಧಕ್ಕೆಯುಂಟಾಗಿ ಶಾಂತಿ-ನೆಮ್ಮದಿಗೂ ಭಂಗವುಂಟಾಗುತ್ತಿದೆ. ಸಾಹಿತಿಗಳು, ಕಲಾವಿದರು, ಚಿಂತಕರು, ವಕೀಲರು, ಹೋರಾಟಗಾರರು ಒಗ್ಗೂಡಿ ‘ಸಮಾನ ಮನಸ್ಕರ ಒಕ್ಕೂಟ-ಕರ್ನಾಟಕ’ದ ಅಡಿಯಲ್ಲಿ ‘ಮತದಾರರ ಜಾಗೃತಿ‘ ಅಭಿಯಾನ ನಡೆಸುತ್ತಿದ್ದೇವೆ. ಮತ್ತೆ ನಾವು ಎಚ್ಚರ ತಪ್ಪುವುದು ಬೇಡ-‘ನಮ್ಮ ಶಾಂತಿಯ ನೆಲೆವೀಡಾದ ಕರ್ನಾಟಕ’ವನ್ನು ಮರು ಸ್ಥಾಪಿಸಿಕೊಳ್ಳುವ ಜವಾಬ್ದಾರಿ ನಮ್ಮ ಕೈಯ್ಯಲ್ಲೇ ಇದೆ” ಎಂದು ಹೇಳಿದ್ದಾರೆ.
“ನಿರುದ್ಯೋಗ ಸಮಸ್ಯೆಯಿಂದ ಬಹುತೇಕ ಆಪತ್ತುಗಳು ಎದುರಾಗಿವೆ. ‘ಯುವಕರು ಪಕೋಡ ಮಾರಿ ಜೀವನ ಮಾಡಿ’ ಎಂದು ಪ್ರಧಾನಿಯವರು ಗೇಲಿ ಮಾಡಿಬಿಟ್ಟರು. ಭಾರೀ ಉದ್ಯಮಿಗಳಿಗೆ ನೆರವಾಗುವ ಮೂಲಕ ಸಣ್ಣ ಉದ್ಯಮಿಗಳ ಕತ್ತು ಹಿಚುಕಲಾಗಿದೆ. ಹಾಗಾಗಿ ಪ್ರತಿ ವರ್ಷ ಸಹಸ್ರಾರು ನಿರುದ್ಯೋಗಿಗಳು ನೇಣಿಗೆ ಶರಣಾಗುತ್ತಿದ್ದಾರೆ” ಎಂದರು.
ವಿನಾಶದತ್ತ ಕೃಷಿ ಮತ್ತು ಕೃಷಿಕರು
ಅಧಿಕಾರಕ್ಕೆ ಬರುವ ಮುನ್ನ ‘ಕೃಷಿಕರ ಆದಾಯ ದುಪ್ಪಟ್ಟು ಮಾಡುತ್ತೇವೆ’ ಎಂದಿದ್ದ ಕೇಂದ್ರ ಸರ್ಕಾರ, ದೇಶದ ಕೃಷಿಕರನ್ನು ಅತಂತ್ರ ಸ್ಥಿತಿಗೆ ತಳ್ಳಿದೆ. ಕೃಷಿಕರು ಸರ್ಕಾರದ ದುರುಳ ಕ್ರಮಗಳ ವಿರುದ್ಧ ನಿತ್ಯವೂ ಬೀದಿಯಲ್ಲಿ ನಿಂತು ಪ್ರತಿಭಟನೆ ನಡೆಸಬೇಕಾದ ಸ್ಥಿತಿ ಬಂದಿದೆ. ಅವರ ಪ್ರತಿಭಟನೆಯತ್ತ ಕನಿಷ್ಟ ಕಾಳಜಿಯೂ ಇಲ್ಲದಂತೆ ಸರ್ಕಾರ ವರ್ತಿಸುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಕೃಷಿ ಕ್ಷೇತ್ರವನ್ನು ಕಾರ್ಪೊರೇಟ್ ಕುಳಗಳ ಕೈಗೊಪ್ಪಿಸಲು ಹುನ್ನಾರ ನಡೆದಿದೆ. ಕೃಷಿಕರ ಸಾಲ ಮನ್ನಾ ಮಾಡದೆ ಉದ್ಯಮಿಗಳ ಸಹಸ್ರಾರು ಕೋಟಿ ರೂ ಸಾಲ ಮನ್ನಾ ಮಾಡಲಾಗುತ್ತಿದೆ. ಕೃಷಿಕರು ಸಂಕಷ್ಟ ತಾಳದೆ ಆತ್ಮಹತ್ಯೆ ಮಾಡಿಕೊಂಡರೂ ನೆರವಿಗೆ ಧಾವಿಸುತ್ತಿಲ್ಲ” ಎಂದು ಆರೋಪಿಸಿದರು.
ʼಕನ್ನಡಿಗರ ಅಸ್ಮಿತೆಗೆ ಭಂಗ ತರುತ್ತಿರುವ ದುರುಳ ಯತ್ನಗಳು ನಡೆಯುತ್ತಿವೆʼ
“ರಾಜ್ಯದ ಜನತೆ ಹೋರಾಟದ ಮೂಲಕ ನಾಡು-ನುಡಿ-ನೆಲ-ಜಲ-ಸಂಸ್ಕೃತಿ ರಕ್ಷಣೆ ಮಾಡಿಕೊಂಡು ಬಂದಿರುವುದು ಹೆಮ್ಮೆಯ ಸಂಗತಿ. ಆದರೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದಂದಿನಿಂದ ಕನ್ನಡಿಗರ ಅಸ್ಮಿತೆಯ ಮೇಲೆ ದಾಳಿ-ದಬ್ಬಾಳಿಕೆ ನಿರಂತರವಾಗಿ ನಡೆಯುತ್ತಿದ್ದು, ಜನತೆ ಆತಂಕಗೊಂಡಿದ್ದಾರೆ. ಆಕ್ರೋಶಗೊಳ್ಳುತ್ತಿದ್ದಾರೆ. ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಸೆಟೆದು ನಿಲ್ಲದಿದ್ದರೆ ಉಳಿಗಾಲವಿಲ್ಲವಾಗುತ್ತದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚುನಾವಣೆ 2023| ಬಸವಣ್ಣನವರ ಪರಿಕಲ್ಪನೆಯ ಪ್ರಜಾಪ್ರಭುತ್ವದ ಮೇಲೆ ಸಂಘ ಪರಿವಾರ ಆಕ್ರಮಣ ನಡೆಸುತ್ತಿದೆ: ರಾಹುಲ್ ಗಾಂಧಿ
ಪ್ರಸ್ತುತ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ ಮತದಾರರು ಎಚ್ಚರದಿಂದ ಮತದಾನ ಮಾಡಬೇಕಾದ ಸ್ಥಿತಿ ಬಂದೊದಗಿದೆ. ಯೋಚಿ ನಿರ್ಧಾರ ಕೈಗೊಳ್ಳಿ” ಎಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಸಮಾನ ಮನಸ್ಕರ ಒಕ್ಕೂಟ ಹೊರತಂದಿರುವ ಕರಪತ್ರವನ್ನು ಬಿಡುಗಡೆ ಗೊಳಿಸಲಾಯಿತು.
ಡಾ. ಕೆ.ಮರುಳಸಿದ್ದಪ್ಪ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಜಾಣಗೆರೆ ವೆಂಕಟರಾಮಯ್ಯ, ಪ್ರೊ.ಜಾಫೆಟ್ ಶಾಂತಪ್ಪ, ಡಾ.ಬಂಜಗೆರೆ ಜಯಪ್ರಕಾಶ್, ಡಾ. ನಿರಂಜನಾರಾಧ್ಯ ವಿ .ಪಿ, ಡಾ.ಲೀಲಾ ಸಂಪಿಗೆ, ಎಸ್. ವಿ.ರಾಜೇಂದ್ರ ಸಿಂಗ್ ಬಾಬು, ಮಾವಳ್ಳಿ ಶಂಕರ್, ಡಾ.ಕೆ.ಷರೀಫ , ಕರುಣಾಕರ ಎ.ಕೆ. ಇದ್ದರು.