ಆರ್ಥಿಕವಾಗಿ ಹಿಂದುಳಿದ ವರ್ಗದ ಮಹಿಳೆಯರಿಗೆ, ತುಟ್ಟಿಯಾಗಿರುವ ವೈದ್ಯಕೀಯ ಚಿಕಿತ್ಸೆಯನ್ನು, ಉಚಿತವಾಗಿ ನೀಡುವ ನಿಟ್ಟಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಏಪ್ರಿಲ್ ವೇಳೆಗೆ ನಗರದ 57 ಪ್ರದೇಶಗಳಲ್ಲಿ ‘ಆಯುಷ್ಮತಿ ಮಹಿಳಾ ಕ್ಲಿನಿಕ್’ ಆರಂಭಿಸುತ್ತಿದೆ… ಯಾವ್ಯಾವ ಚಿಕಿತ್ಸೆಗಳಿರಲಿವೆ ಎಂಬ ಪೂರ್ಣ ವಿವರ ಇಲ್ಲಿದೆ.
ಏನಿದು ಆಯುಷ್ಮತಿ ಮಹಿಳಾ ಕ್ಲಿನಿಕ್?
‘ಆಯುಷ್ಮತಿ ಮಹಿಳಾ ಕ್ಲಿನಿಕ್’ ಮಹಿಳೆಯರಿಗೆ ಸಂಬಂಧಿಸಿದ ಸಮಸ್ಯೆಗಳ ಮೇಲೆ ಕೇಂದ್ರೀಕರಿಸುತ್ತವೆ. ಪ್ರತಿ ಅರೋಗ್ಯ ಕೇಂದ್ರದದಲ್ಲಿ ಸ್ತ್ರೀರೋಗತಜ್ಞರು ಇರಲಿದ್ದಾರೆ. ಮಹಿಳೆಯರಿಗೆ ಚಿಕಿತ್ಸೆ ಮತ್ತು ತಪಾಸಣೆಯನ್ನು ನೀಡುತ್ತಾರೆ. ಮಕ್ಕಳಿಂದ ವೃದ್ಧರವರೆಗೆ, ಎಲ್ಲ ವಯೋಮಾನದ ಮಹಿಳೆಯರಿಗೂ ಚಿಕಿತ್ಸೆ ಲಭ್ಯವಾಗಲಿದೆ. ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ ಕ್ಲಿನಿಕ್ ಸೌಲಭ್ಯದ ಫಲಾನುಭವಿಗಳಾಗಬಹುದಾಗಿದೆ.
ಕ್ಲಿನಿಕ್ ತೆರೆಯಲು ಕಾರಣವೇನು?
ಇತ್ತೀಚಿನ ಜೀವನ ಶೈಲಿಯಲ್ಲಿ ಮಹಿಳೆಯರು ಹೆಚ್ಚಾಗಿ ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ. ಬೆಂಗಳೂರಿನಲ್ಲಿ ಕಳೆದ ಆರು ವರ್ಷಗಳಲ್ಲಿ 305 ತಾಯಂದಿರು ಮೃತಪಟ್ಟಿದ್ದರು. ಹೀಗಾಗಿ, ಗರ್ಭಿಣಿಯರಿಗೆ ಆತ್ಮಸ್ಥೈರ್ಯ ತುಂಬುವುದು. ಯಾವೆಲ್ಲ ಆಹಾರ ತಿನ್ನಬೇಕು. ಆರೋಗ್ಯ ಕಾಪಾಡಿಕೊಳ್ಳುವುದು. ಆಗಾಗ್ಗೆ ತಪಾಸಣೆ ಏರ್ಪಾಟು ಮಾಡುವ ಉದ್ಧೇಶದಿಂದ ಚಿಕಿತ್ಸಾಲಯ ಸ್ಥಾಪನೆಯಾಗಲಿದೆ.
ಯಾವೆಲ್ಲ ಚಿಕಿತ್ಸೆ ಇರಲಿದೆ?
ಋತುಚಕ್ರ, ಮಾನಸಿಕ ಆರೋಗ್ಯ, ಸಂತಾನೋತ್ಪತ್ತಿ ನಾಳದ ಸೋಂಕುಗಳು (ಆರ್‌ಟಿಐ) ಅಥವಾ ಲೈಂಗಿಕವಾಗಿ ಹರಡುವ ರೋಗಗಳು, ಹೃದಯ ರಕ್ತನಾಳದ ಕಾಯಿಲೆ, ದೀರ್ಘಕಾಲದ ಕಾಯಿಲೆಗಳು, ಗರ್ಭಿಣಿಯರು ಮತ್ತು ಮಕ್ಕಳು, ಕ್ಯಾನ್ಸರ್ ಮತ್ತು ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುವ ಇತರ ಆರೋಗ್ಯ ಸಮಸ್ಯೆಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಗರ್ಭಿಣಿಯರಿಗೆ ಅವರ ಆಹಾರ, ಪೋಷಣೆ ಮತ್ತು ವೈಯಕ್ತಿಕ ನೈರ್ಮಲ್ಯದ ಬಗ್ಗೆಯೂ ಸಲಹೆ ನೀಡಲಾಗುತ್ತದೆ. ಇದನ್ನು ಹೊರತುಪಡಿಸಿ ಮಧುಮೇಹ, ರಕ್ತದೊತ್ತಡ ಸಮಸ್ಯೆಗಳಿಗಗೂ ಚಿಕಿತ್ಸೆ ನೀಡಲಾಗುತ್ತದೆ.
ಎಲ್ಲೆಲ್ಲಿ ಆಸ್ಪತ್ರೆ ಸ್ಥಾಪನೆ?
ಆರ್ ಆರ್ ನಗರ ಸುತ್ತಮುತ್ತಲಿರುವ ಮಲ್ಲತ್ತ್ ಹಳ್ಳಿ, ನಂದಿನಿ ಲೇಔಟ್, ಮತ್ತಿಕೆರೆ, ಹಾರೋಹಳ್ಳಿ ಕೆಂಗೇರಿಯಲ್ಲಿ ಆಯುಷ್ಮತಿ ಕ್ಲಿನಿಕ್ ಇರಲಿದೆ. ಬೊಮ್ಮನ ಹಳ್ಳಿಯ ಸುತ್ತಮುತ್ತ ಪ್ರದೇಶಗಳಾದ ಬೇಗೂರು, ಅರೆಕೆರೆ, ಸಿಂಗಸಂದ್ರ, ಕೋಣನಕುಂಟೆ, ಯಲಚೇನಹಳ್ಳಿ ಬಳಿ ಇರಲಿದೆ. ಮಹದೇವಪುರ ಕಾಡುಗೋಡಿ, ವರ್ತೂರು, ದೊಡ್ಡನೆಕ್ಕುಂದಿ, ಮಾರತ್ ಹಳ್ಳಿ, ವಿಭೂತಿ ಪುರ, ನಾರಾಯಣ ಪುರ, ತಾವರೆಕೆರೆ, ಎನ್ ಎಸ್ ಪಾಳ್ಯ, ವಿದ್ಯಾ ಪೀಠ, ವಿಲ್ಸನ್ ಗಾರ್ಡನ್, ಯಡಿಯೂರು ಆವಲಹಳ್ಳಿ, ಬಾಪೂಜಿ ನಗರ, ಆಡುಗೋಡಿ, ಯಲಹಂಕ, ಎಂ ಎಸ್ ಪಾಳ್ಯ, ತಣಿಸಂದ್ರ, ಅಮೃತ ಹಳ್ಳಿ, ಕೋಡಿಗೆ ಹಳ್ಳಿ ತಿಂಡ್ಲು ದಾಸರಹಳ್ಳಿ ಮತ್ತಿತ್ತರ ಪ್ರದೇಶಗಳಲ್ಲಿ ಆಯುಷ್ಮತಿ ಕ್ಲಿನಿಕ್‌ಗಳು ಇರಲಿವೆ.
ಅಧಿಕಾರಿಗಳು ಹೇಳೋದೇನು?
“ಈಗಾಗಲೇ ಇರುವಂತಹ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಬಳಿ, ಲಭ್ಯವಿರುವ ಕಟ್ಟಡಕ್ಕೆ ಗುಲಾಬಿ ಬಣ್ಣ ಬಳಿದು ಮಹಿಳೆಯರಿಗಾಗಿ ಎಂದು ಗುರುತಿಸಲಾಗುತ್ತದೆ. ಎಲ್ಲವು ಗುಲಾಬಿ ಬಣ್ಣದಿಂದ ಕೂಡಿರುತ್ತದೆ. ಮಹಿಳೆಯರಿಗಾಗಿ ವಿಶೇಷಸ್ಥಾನ ಕೊಡುವ ನಿಟ್ಟಿನಲ್ಲಿ ಪ್ರತ್ಯೇಕ ಕ್ಲಿನಿಕ್ ಮಾಡುವ ಆಶಯ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಮಹಿಳೆಯರಲ್ಲಿ ಅಪೌಷ್ಠಿಕತೆ ಇದೆ. ಮಹಿಳೆಯರು ಯಾವುದೇ ಸಮಯದಲ್ಲಿ ಆಸ್ಪತ್ರೆಗೆ ಬಂದರೂ ಸಹ ವೈದ್ಯರು ಲಭ್ಯವಿರುತ್ತಾರೆ. ವೈದ್ಯರು, ನೇತ್ರ ತಜ್ಞರು, ಸ್ತ್ರೀರೋಗ ತಜ್ಞರು ಮತ್ತು ಪ್ರಸೂತಿ ತಜ್ಞರು, ಇಎನ್‌ಟಿ ತಜ್ಞರು, ಮಕ್ಕಳ ತಜ್ಞರು ಮತ್ತು ಚರ್ಮರೋಗ ತಜ್ಞರನ್ನು ಸಲಹಾ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು. ಮೂಲಸೌಕರ್ಯ ಕಲ್ಪಿಸಲು ಸರ್ಕಾರ ಪ್ರತಿ ಕ್ಲಿನಿಕ್‌ಗೆ 1.60 ಲಕ್ಷ ರೂಪಾಯಿ ನೀಡುತ್ತಿದೆ. ವೈದ್ಯರು ಮತ್ತು ಇತರ ಸಿಬ್ಬಂದಿಗೆ ಸರ್ಕಾರದಿಂದ ಗೌರವ ವೇತನ ಮತ್ತು ವೇತನ ನೀಡಲಾಗುವುದು. ವಿಶೇಷ ಮಹಿಳಾ ಚಿಕಿತ್ಸಾಲಯಗಳನ್ನು ಸ್ಥಾಪಿಸಲು ಪಾಲಿಕೆಯು 93 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ,” ಎಂದು ಈ ದಿನ.ಕಾಮ್‌ನ ಸಂಪರ್ಕಕ್ಕೆ ಸಿಕ್ಕ ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ. ಬಾಲಸುಂದರ್ ಈ ಬಗ್ಗೆ ವಿವರಿಸಿದರು.

ಪತ್ರಕರ್ತೆ. ರಂಗಭೂಮಿ, ಬರವಣಿಗೆ ಮೇಲೆ ಪ್ರೀತಿ. ಬೆಂಗಳೂರು ನಿವಾಸಿ.