ಹಳ್ಳಿ ದಾರಿ | ಉದ್ಯೋಗ ಖಾತ್ರಿ; ಮೊಬೈಲ್ ಬಳಕೆ ವಿಷಯದಲ್ಲಿ ಜೂಟಾಟ ಆಡುತ್ತಿರುವ ಸರ್ಕಾರಗಳು

Date:

ಉದ್ಯೋಗ ಖಾತರಿಯಲ್ಲಿ ಕೆಲಸಕ್ಕೆ ಬಂದ ಕಾರ್ಮಿಕರ ಹಾಜರಿಗಾಗಿ 'ನ್ಯಾಶನಲ್ ಮೊಬೈಲ್ ಮಾನಿಟರಿಂಗ್ ಸಿಸ್ಟಂ' (ಎನ್‌ಎಮ್‌ಎಮ್‌ಎಸ್) ಕಡ್ಡಾಯ ಕುರಿತು ಒಕ್ಕೂಟ ಸರ್ಕಾರ ಹೇಳುವುದೇ ಬೇರೆ, ರಾಜ್ಯ ಸರ್ಕಾರಗಳ ಮಾತು ಬೇರೆ, ಸ್ಥಳೀಯ ವಾಸ್ತವಗಳೇ ಬೇರೆ. ಈ ಯೋಜನೆ ಬಗ್ಗೆ ಇಷ್ಟೊಂದು ನಿರ್ಲಕ್ಷ್ಯ ಏಕೆ?

ಲಾಲು, ಕೃಷ್ಣ ದೇವರಯಾಲು, ಬಾಲಶೌರಿ ವಲ್ಲಭನೇನಿ ಇವರುಗಳು ಇದೇ ಮಾರ್ಚ್ 14ರಂದು ಲೋಕಸಭೆಯಲ್ಲಿ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಸರ್ಕಾರವು ತಪ್ಪಿಸಿಕೊಳ್ಳುವ ಉತ್ತರವನ್ನು ನೀಡಿದೆ.

ಅವರ ಪ್ರಶ್ನೆಗಳು ಇಂತಿದ್ದವು:

ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿಯಲ್ಲಿ ಕೆಲಸಕ್ಕೆ ಬಂದ ಕಾರ್ಮಿಕರ ಹಾಜರಿಗಾಗಿ ‘ನ್ಯಾಶನಲ್ ಮೊಬೈಲ್ ಮಾನಿಟರಿಂಗ್ ಸಿಸ್ಟಂ’ (ಎನ್‌ಎಮ್‌ಎಮ್‌ಎಸ್) ಕಡ್ಡಾಯಗೊಳಿಸಿದೆಯೇ? ಕಡ್ಡಾಯಗೊಳಿಸಿದ್ದರೆ ವಿವರ ಕೊಡಿ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಉದ್ಯೋಗ ಖಾತರಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ಜಂತರ್ ಮಂತರ್ ಎದುರು ಅನಿರ್ದಿಷ್ಟಾವಧಿ ಧರಣಿ ಕುಳಿತಿರುವ ಬಗ್ಗೆ ಸರಕಾರಕ್ಕೆ ಮಾಹಿತಿ ಇದೆಯೇ? ಮಾಹಿತಿ ಇದ್ದರೆ ವಿವರ ಕೊಡಿ.

ಎನ್‌ಎಮ್‌ಎಮ್‌ಎಸ್ ಕಾರಣದಿಂದಾಗಿ ಹತ್ತು ಜನರಲ್ಲಿ ಕೇವಲ ಇಬ್ಬರು ಕಾರ್ಮಿಕರು ಕೆಲಸಕ್ಕೆ ಹಾಜರಾಗುತ್ತಿದ್ದಾರಂತೆ; ಇದು ನಿಜವೇ? ನಿಜವಾಗಿದ್ದಲ್ಲಿ ಜನರಿಗೆ ಬೇಡಿದಷ್ಟು ಕೆಲಸವು ಸಿಗುತ್ತಿಲ್ಲವೇ?

ಎನ್‌ಎಮ್‌ಎಮ್‌ಎಸ್ ಬಳಸುವಲ್ಲಿ ಆಗುತ್ತಿರುವ ತಾಂತ್ರಿಕ ತೊಂದರೆಗಳನ್ನು ಅಥವಾ ದೂರುಗಳನ್ನು ನಿವಾರಿಸುವಲ್ಲಿ ಸರ್ಕಾರ ಯಾವ ಕ್ರಮಗಳನ್ನು ಕೈಗೊಳ್ಳುತ್ತಿದೆ?

ಪ್ರತೀ ದಿನಕ್ಕೆ ಎರಡು ಬಾರಿ ಉದ್ಯೋಗ ಖಾತರಿಯ ಕಾರ್ಮಿಕರ ಫೋಟೋಗಳನ್ನು ಜಿಯೋ ಟ್ಯಾಗ್ ಮಾಡಬೇಕಂತೆ. ಮಾಡದಿದ್ದರೆ ಕಾರ್ಮಿಕರ ಹಾಜರಾತಿ ಆಗುವುದಿಲ್ಲ ಮತ್ತು ಕೆಲಸ ಮಾಡಿದ್ದರೂ ಅವರಿಗೆ ಸಂಬಳ ಸಿಗುವುದಿಲ್ಲ ಎಂಬುದು ಹೌದೇ? ಹೌದಾದರೆ, ಈ ಸಮಸ್ಯೆಗೆ ಪರಿಹಾರವಾಗಿ – ಇಂದಿಗೂ ಡಿಜಿಟಲೀಕರಣದ ಕಂದರವು ದೇಶದಲ್ಲಿ ಬಲು ದೊಡ್ಡದಿರುವಾಗ ಮತ್ತು ಲಕ್ಷಾಂತರ ಜನರಿಗೆ ಸ್ಮಾರ್ಟ್ ಫೋನುಗಳನ್ನು ಖರೀದಿಸುವ ಶಕ್ತಿ ಇಲ್ಲದಿರುವ ಈ ಸಂಧರ್ಭದಲ್ಲಿ – ನ್ಯಾಯಯುತವಾಗಿ ಈ ಹೊಸ ವ್ಯವಸ್ಥೆಯನ್ನು ಜಾರಿಯಲ್ಲಿ ತರಲು ಸರ್ಕಾರವು ಏನು ಕ್ರಮ ಕೈಗೊಳ್ಳುತ್ತಿದೆ?

* * *

ಸಾಂದರ್ಭಿಕ ಚಿತ್ರ

ಈ ಪ್ರಶ್ನೆಗಳಿಗೆ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ಕೊಟ್ಟಿರುವ ಉತ್ತರವು ಇಂತಿದೆ:

2023ರ ಜನವರಿ 1ರಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿಯಲ್ಲಿ ವೈಯಕ್ತಿಕ ಕಾಮಗಾರಿಗಳನ್ನು ಹೊರತುಪಡಿಸಿ ಎಲ್ಲ ಕಾಮಗಾರಿಗಳದ್ದೂ ಎನ್‌ಎಮ್‌ಎಮ್‌ಎಸ್ ಮೂಲಕವೇ ಹಾಜರಾತಿಗಳನ್ನು ರಾಜ್ಯ/ಕೇಂದ್ರಾಡಳಿತ ಸರ್ಕಾರಗಳು ಖಾತರಿಪಡಿಸಬೇಕೆಂದು ಭಾರತ ಸರಕಾರವು ನಿರ್ಧರಿಸಿದೆ.

ಕೆಲಸದ ಪ್ರದೇಶದಲ್ಲಿರುವ ಸುಪರ್ವೈಸರ್‌ಗಳು ಹಾಜರಾಗಿರುವ ಕಾರ್ಮಿಕರ ಫೋಟೋಗಳನ್ನು ಜಿಯೋ ಟ್ಯಾಗ್ ಮಾಡಿ ಹಾಜರಾತಿಗಳನ್ನು ಎನ್‌ಎಮ್‌ಎಮ್‌ಎಸ್ ಮೂಲಕ ಖಾತರಿಪಡಿಸಲು ಜವಾಬ್ದಾರರಾಗಿರುತ್ತಾರೆ. ಇದು ಯಾವ ಸಮಸ್ಯೆಯಿಲ್ಲದೆ ಜಾರಿಯಾಗಲು ಯಾವುದೇ ರಾಜ್ಯ/ಕೇಂದ್ರಾಡಳಿತ ಸರ್ಕಾರವು ವಿನಂತಿಸಿದಲ್ಲಿ ಅವರಿಗೆ ಅವಶ್ಯವಿರುವ ತರಬೇತಿಗಳನ್ನೂ ಕೇಂದ್ರ ಸರ್ಕಾರವು ನೀಡುತ್ತಿದೆ. ಯಾವುದೇ ತಾಂತ್ರಿಕ ಸಮಸ್ಯೆ ಬಂದಾಗ ಗ್ರಾಮೀಣಾಭಿವೃದ್ಧಿ ಇಲಾಖೆ, National Informatics Centreಗಳು ಆಗಿಂದಾಗ್ಗೆ ಪರಿಹಾರ ನೀಡುತ್ತವೆ. ರಾಜ್ಯಗಳು ನೀಡಿದ ಸಲಹೆಗಳನ್ನು ಜೊತೆ ಸೇರಿಸಿಕೊಳ್ಳಲಾಗುತ್ತಿದೆ. ಬಂದಂತಹ ಎಲ್ಲ ಸಮಸ್ಯೆಗಳನ್ನೂ ಬಗೆಹರಿಸಲಾಗುತ್ತಿದೆ. ಕೈಗೊಂಡ ಮುಖ್ಯ ಕ್ರಮಗಳೆಂದರೆ:

2023ರ ಜನವರಿ 1ರಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿಯಲ್ಲಿ ವೈಯಕ್ತಿಕ ಕಾಮಗಾರಿಗಳನ್ನು ಹೊರತುಪಡಿಸಿ ಎಲ್ಲ ಕಾಮಗಾರಿಗಳದ್ದೂ ಎನ್‌ಎಮ್‌ಎಮ್‌ಎಸ್ ಮೂಲಕವೇ ಹಾಜರಾತಿಗಳನ್ನು ರಾಜ್ಯ/ಕೇಂದ್ರಾಡಳಿತ ಸರ್ಕಾರಗಳು ಖಾತರಿಪಡಿಸಬೇಕೆಂದು ಭಾರತ ಸರಕಾರವು ನಿರ್ಧರಿಸಿದೆ.

1.ಫೋಟೊಗಳನ್ನು ಅಪ್ಲೋಡ್ ಮಾಡಲು ಇದ್ದ ತೊಂದರೆಯನ್ನು ನಿವಾರಿಸಲಾಗಿದೆ. ಹಾಜರಾತಿ ಜೊತೆಗೆ, ಫೋಟೊ ತೆಗೆದ ನಾಲ್ಕು ತಾಸುಗಳ ನಂತರವೂ ಅಪ್ಲೋಡ್ ಮಾಡಲು ಸಾಧ್ಯವಾಗುವಂತೆ ಎನ್‌ಎಮ್‌ಎಮ್‌ಎಸ್ ಅಭಿವೃದ್ಧಿಪಡಿಸಲಾಗಿದೆ. ಅಂದರೆ, ಬೆಳಗಿನ ಹಾಜರಾತಿ ಹಾಕಿ, ಫೋಟೊ ತೆಗೆದ ನಂತರ ನೆಟ್‌ವರ್ಕ್ ಸಿಗುವ ಜಾಗಕ್ಕೆ ಬಂದ ನಂತರ ಅವನ್ನು ಅಪ್ಲೋಡ್ ಮಾಡಬಹುದು.

2.ಹಾಜರಾತಿಯನ್ನು ಅಪ್ಲೋಡ್ ಮಾಡಲು ಸಾಧ್ಯವೇ ಇಲ್ಲವೆನ್ನುವ ವಿಶೇಷ ಸಂದರ್ಭಗಳಲ್ಲಿ ಜಿಲ್ಲಾ ಸಂಯೋಜಕರು ಮ್ಯಾನ್ಯುವಲ್ ಹಾಜರಾತಿ ತೆಗೆದುಕೊಳ್ಳಲು ಅವಕಾಶವಿದೆ.

ಇನ್ನು, ಜಂತರ್ ಮಂತರ್ ಎದುರಿಗೆ ಧರಣಿ ನಡೆಯುತ್ತಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಎನ್‌ಎಮ್‌ಎಮ್‌ಎಸ್ ಬಳಸಲು ಮತ್ತು ಸ್ಮಾರ್ಟ್ ಫೋನ್ ಖರೀದಿ ತೊಂದರೆಯ ಬಗೆಗೂ ಯಾವುದೇ ಘಟನೆಗಳ ವರದಿಯಾಗಿಲ್ಲ.

* * *

ಸಾಂದರ್ಭಿಕ ಚಿತ್ರ

ಯಾವುದೇ ಧರಣಿಗಳನ್ನು ನಡೆಸಲು (ಬೆಂಗಳೂರಿನಲ್ಲಿ ಫ್ರೀಡಂ ಪಾರ್ಕ್‌ನಲ್ಲಿ ಜಾಗ ನಿರ್ಧರಿಸಿರುವಂತೆ) ದೆಹಲಿಯಲ್ಲಿ ಜಂತರ್ ಮಂತರ್ ಅನ್ನು ನಿಗದಿಪಡಿಸಿಟ್ಟಿದೆ ಸರ್ಕಾರ. ಫೆಬ್ರವರಿ 13ರಿಂದಲೇ ಅಲ್ಲಿ ದೇಶದ ಬೇರೆ-ಬೇರೆ ಭಾಗಗಳಿಂದ ಬಂದ ಕಾರ್ಮಿಕರು ಧರಣಿ ನಡೆಸುತ್ತಿದ್ದಾರೆ. ಆ ಬಗ್ಗೆ ತನಗೇನೂ ಗೊತ್ತೇ ಇಲ್ಲವೆನ್ನುತ್ತಿದೆಯಲ್ಲ ಈ ಸರ್ಕಾರ? ಸ್ಮಾರ್ಟ್ ಫೋನ್ ಕಡ್ಡಾಯ ಜಾರಿಗೊಳಿಸಿದಾಗಿನಿಂದಲೂ ದೇಶದೆಲ್ಲೆಡೆ – ನಮ್ಮ ರಾಜ್ಯದಲ್ಲೂ ಅನೇಕ ಬಾರಿ ಜಿಲ್ಲಾ ಪಂಚಾಯತಿಗಳ ಎದುರು ಹೋರಾಟಗಳು ನಡೆದಿವೆ. “ಇವು ಕೇಂದ್ರ ಸರ್ಕಾರ ಮಾಡಿರುವ ನಿಯಮ. ನಾವೇನೂ ಮಾಡಲಿಕ್ಕಾಗುವುದಿಲ್ಲ,” ಎಂದು ಹೇಳಿ ತಪ್ಪಿಸಿಕೊಳ್ಳುತ್ತಾರೆ ಎಂದು ಗೊತ್ತಿದ್ದೇ, ಆ ಹಕ್ಕೊತ್ತಾಯ ಪತ್ರಗಳನ್ನೆಲ್ಲ ಪ್ರಧಾನ ಮಂತ್ರಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಿಗೇ ಉದ್ದೇಶಿಸಿ ಬರೆಯಲಾಗಿತ್ತು. ಎಲ್ಲಿಂದಲೂ ದೂರು ಬಂದಿಲ್ಲ, ಎಲ್ಲಿಯೂ ಸಮಸ್ಯೆ ಎದ್ದಿಲ್ಲ ಎನ್ನುತ್ತಿದೆಯಲ್ಲ ಈ ಸರ್ಕಾರ? ಹಾಗಾದರೆ ನಾವು ಕೊಟ್ಟ ಪತ್ರಗಳನ್ನು ನಮ್ಮ ಅಧಿಕಾರಿಗಳು ದೆಹಲಿಗೆ ಕಳಿಸಿಯೇ ಇಲ್ಲವೇ?

ಈ ಲೇಖನ ಓದಿದ್ದೀರಾ: ಮೈಯೆಲ್ಲ ಕಾಲು | ಬಸವಣ್ಣನವರ ‘ಕೊಲುವವನೇ ಮಾದಿಗ, ಹೊಲಸು ತಿಂಬವನೇ ಹೊಲೆಯ’ ಸಾಲು ನಿಜಕ್ಕೂ ಹೇಳುವುದೇನು?

ಈ ವಿಷಯದಲ್ಲಿ ರಾಜ್ಯ ಸರ್ಕಾರವೇ ಖಾತರಿಪಡಿಸಬೇಕು. ಕೆಲಸಗಳ ಸುಪರ್‌ವೈಸರ್‌ಗಳು ಜಿಯೋ ಟ್ಯಾಗ್ ಮಾಡಬೇಕೆಂದು ಕೇಂದ್ರ ಸರ್ಕಾರವು ಹೇಳುತ್ತದೆ. ಅದಕ್ಕೆ ರಾಜ್ಯ ಸರ್ಕಾರಗಳು – ಎಲ್ಲ ಕಾಯಕಬಂಧುಗಳೂ ಸ್ಮಾರ್ಟ್ ಫೋನ್ ಹೊಂದಿರಬೇಕು, ಎಂಟನೇ ಇಯತ್ತೆ ಪಾಸಾಗಿರಬೇಕು ಎಂದು ಆದೇಶ ಹೊರಡಿಸಿವೆ. ಜವಾಬ್ದಾರಿಯನ್ನು ಒಬ್ಬರಿಂದ ಒಬ್ಬರಿಗೆ ದಾಟಿಸುವ ಪ್ರವೃತ್ತಿ ಇದು. ರಾಜ್ಯ ಸರ್ಕಾರಗಳ ಮಂದಿಗೆ ತರಬೇತಿಗಳನ್ನು ಕೊಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತದೆ. ಆದರೆ ಸ್ಮಾರ್ಟ್ ಫೋನ್‌ಗಳನ್ನು ಕೊಳ್ಳಬೇಕಾದ ಅಥವಾ ಬಳಸಬೇಕಾದ ವ್ಯಕ್ತಿಗೆ ಕೊಳ್ಳಲು ಸಹಾಯ, ಬಳಸಲು ತರಬೇತಿ ಬಗ್ಗೆ ಪ್ರಸ್ತಾಪವೇ ಇಲ್ಲ. ತಿರುಗಿ ಕಾರ್ಮಿಕರ ಪ್ರತಿಕ್ರಿಯೆಯ ಬಗ್ಗೆ, ಅವರ ದೂರುಗಳ ಬಗ್ಗೆಯೂ ಮಾತಿಲ್ಲ!

ತೀರಾ ಅನ್ಯಾಯ ಮತ್ತು ವಂಚನೆಯ ಪ್ರಕರಣವಿದು. “ನೀವು ದೂರ ನಿಂತು ಕೂಗಿದರೂ ನಮಗೆ ಕೇಳಿಸುವುದಿಲ್ಲ, ಹತ್ತಿರ ಬಂದು ಕೇಳಿದರೂ ನಮಗೆ ಕೇಳಿಸುವುದಿಲ್ಲ, ಕಾಣುವುದೂ ಇಲ್ಲ,” ಎಂದು ಹೇಳಿಕೆ ನೀಡಿದಂತಾಯಿತು. ಹಾಗಾದರೆ ಬಡಜನರು, ಕಾರ್ಮಿಕರು ತಮ್ಮ ಅಹವಾಲುಗಳನ್ನು ಹೇಳಲು ಎಲ್ಲಿ ಹೋಗಬೇಕು? ಅಹವಾಲುಗಳನ್ನು ಕೇಳುವ ವ್ಯವಸ್ಥೆಯೇ ಮಾಯವಾಯಿತೇ? “ನಿಮ್ಮ ಬಳಿ ಬಂದ ದೂರುಗಳನ್ನು ನಮಗೆ ಕಳಿಸಬೇಡಿ,” ಎಂದು ರಾಜ್ಯ ಮಟ್ಟದ ಅಧಿಕಾರಿಗಳಿಗೆ ಕೇಂದ್ರ ಸರ್ಕಾರದಿಂದ ಸೂಚನೆಯೇನಾದರೂ ಬಂದಿದೆಯೇ?

ಪೋಸ್ಟ್ ಹಂಚಿಕೊಳ್ಳಿ:

ಶಾರದಾ ಗೋಪಾಲ
ಶಾರದಾ ಗೋಪಾಲ
ಸಿದ್ದಾಪುರ ತಾಲೂಕಿನ ಬಕ್ಕೆಮನೆಯವರು. ಸದ್ಯ ಧಾರವಾಡ ನಿವಾಸಿ. ಗ್ರಾಮೀಣರ ಬದುಕುಗಳ ಬಗ್ಗೆ ಅಪಾರ ಕಾಳಜಿ ಹೊಂದಿರುವ ಇವರು, ಗ್ರಾಮೀಣ ಅಭಿವೃದ್ಧಿಯ ವಾಸ್ತವ ಸಂಗತಿಗಳ ಕುರಿತು ನಿಖರವಾಗಿ ಬರೆಯಬಲ್ಲವರು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೊಸಿಲ ಒಳಗೆ-ಹೊರಗೆ | ಬ್ರಾ… ಪ್ರತಿಭಟನೆ ಮತ್ತು ಬಿಡುಗಡೆಯ ಭಾವ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಮೈಕ್ರೋಸ್ಕೋಪು | ಅಯೋಧ್ಯೆ ರಾಮ ಮಂದಿರದಲ್ಲಿ ‘ವಿಜ್ಞಾನ’ ಬಳಕೆ; ನಿಜಕ್ಕೂ ದೇಶದಲ್ಲಿ ಇದೇ ಮೊದಲಾ?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಹೊಸಿಲ ಒಳಗೆ-ಹೊರಗೆ | ನೀವು ಕೊಕ್ಕರೆಯಾದರೂ ಸರಿಯಲ್ಲ, ನರಿಯಾದರೂ ಸರಿಯಲ್ಲ; ಯಾಕೆಂದರೆ…

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...