ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಒಡೆತನದ ‘ಬ್ರಾಹ್ಮಣಿ ಸ್ಟೀಲ್ಸ್’ ಕಂಪನಿಗೆ ಮಂಜೂರು ಮಾಡಲಾಗಿದ್ದ ಬರೋಬ್ಬರಿ 14 ಸಾವಿರ ಎಕರೆ ಭೂಮಿಯನ್ನು ಆಂಧ್ರಪ್ರದೇಶ ಸರ್ಕಾರವು ಕೊನೆಗೂ ತನ್ನ ವಶಕ್ಕೆ ಪಡೆದುಕೊಂಡಿದೆ. ಸತತ 18 ವರ್ಷಗಳ ಸುದೀರ್ಘ ಕಾನೂನು ಸಮರದ ಬಳಿಕ ಕಂದಾಯ ಅಧಿಕಾರಿಗಳು ಈ ಬೃಹತ್ ಭೂಮಿಯನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಂಡಿದ್ದಾರೆ. ಈ ಜಾಗದ ಪ್ರಸ್ತುತ ಮಾರುಕಟ್ಟೆ ಮೌಲ್ಯ ಅಂದಾಜು 5,000 ಕೋಟಿ ರೂಪಾಯಿಗಳು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗುರುವಾರ ರಾತ್ರಿ ಜಿಲ್ಲಾಧಿಕಾರಿ ಚೆರುಕುರಿ ಶ್ರೀಧರ್ ಅವರು ಹೊರಡಿಸಿದ ಅಂತಿಮ ಆದೇಶದೊಂದಿಗೆ ಈ ಭೂಸ್ವಾಧೀನ ಪ್ರಕ್ರಿಯೆ ಅಧಿಕೃತವಾಗಿ ಮುಕ್ತಾಯಗೊಂಡಿದೆ.
ವೈಎಸ್‌ಆರ್ ಕಡಪ ಜಿಲ್ಲೆಯ ಜಮ್ಮಲಮಡುಗು ಮಂಡಲದ ಅಂಬಾವರಂ ಬಳಿ ಮೆಗಾ ಸ್ಟೀಲ್ ಘಟಕವನ್ನು ಸ್ಥಾಪಿಸುವ ಉದ್ದೇಶದಿಂದ 2007ರಲ್ಲಿ ಆಂಧ್ರದ ಅಂದಿನ ಸರ್ಕಾರ ಬ್ರಾಹ್ಮಣಿ ಸ್ಟೀಲ್ಸ್‌ಗೆ 10,700 ಎಕರೆ ಜಾಗವನ್ನು ಮಂಜೂರು ಮಾಡಿತ್ತು. ತದನಂತರ 2008ರಲ್ಲಿ ವಾಣಿಜ್ಯ ವಿಮಾನ ನಿಲ್ದಾಣ, ಫ್ಲೈಯಿಂಗ್ ಅಕಾಡೆಮಿ ಹಾಗೂ ವಾಯುಯಾನ ಸಂಬಂಧಿತ ಕೈಗಾರಿಕೆಗಳ ಸ್ಥಾಪನೆಗಾಗಿ ಎಕರೆಗೆ ಕೇವಲ 25 ಸಾವಿರ ರೂಪಾಯಿ ದರದಂತೆ ಮತ್ತೊಂದು 3,115.64 ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿತ್ತು. ಆದರೆ, ವರ್ಷಗಳು ಕಳೆದರೂ ಕಂಪನಿಯು ಈ ಜಾಗದಲ್ಲಿ ಯಾವುದೇ ಕಾಮಗಾರಿಯನ್ನು ಆರಂಭಿಸದೆ, ಸಂಪೂರ್ಣ ಭೂಮಿ ಬಳಕೆಯಾಗದೆಯೇ ಉಳಿದುಕೊಂಡಿತ್ತು.
ಯೋಜನೆಗೆ ಗ್ರಹಣ ಹಿಡಿಯಲು ಹಲವು ಕಾರಣಗಳಿದ್ದವು. ಅಂದಿನ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಅವರ ಅಕಾಲಿಕ ಮರಣ, ಕರ್ನಾಟಕದಲ್ಲಿ ಭಾರಿ ಸದ್ದು ಮಾಡಿದ್ದ ಅಕ್ರಮ ಗಣಿಗಾರಿಕೆ ಪ್ರಕರಣಗಳು, ನ್ಯಾಯಾಲಯದ ವ್ಯಾಜ್ಯಗಳು ಮತ್ತು ಸರ್ಕಾರಿ ಮಟ್ಟದ ನಿರ್ಧಾರಗಳಲ್ಲಿನ ಬದಲಾವಣೆಗಳಿಂದಾಗಿ ಬ್ರಾಹ್ಮಣಿ ಸ್ಟೀಲ್ಸ್ ಯೋಜನೆಯು ಸಂಪೂರ್ಣವಾಗಿ ನೆನೆಗುದಿಗೆ ಬಿದ್ದಿತ್ತು. ಯಾವ ಉದ್ದೇಶಕ್ಕಾಗಿ ಭೂಮಿಯನ್ನು ನೀಡಲಾಗಿತ್ತೋ ಆ ಕಾರ್ಯ ನಡೆಯದ ಕಾರಣ, ನಿಯಮಾವಳಿಗಳ ಅನ್ವಯ ಮಂಜೂರಾತಿಯನ್ನು ರದ್ದುಗೊಳಿಸಿ ಭೂಮಿಯನ್ನು ಮರಳಿ ಪಡೆಯಲು ಸರ್ಕಾರ ನಿರ್ಧರಿಸಿತು. ವಾಸ್ತವವಾಗಿ 2011ರಲ್ಲೇ ಈ ಭೂಮಿಯನ್ನು ವಶಪಡಿಸಿಕೊಳ್ಳಲು ಆದೇಶಿಸಲಾಗಿತ್ತಾದರೂ, ಕಾನೂನು ತೊಡಕುಗಳಿಂದಾಗಿ ಪ್ರಕ್ರಿಯೆ ವಿಳಂಬವಾಗಿತ್ತು.
ಇದೀಗ ಎಲ್ಲಾ ಕಾನೂನು ವಿವಾದಗಳನ್ನು ಯಶಸ್ವಿಯಾಗಿ ಬಗೆಹರಿಸಿರುವ ಜಿಲ್ಲಾಧಿಕಾರಿಗಳು, 48 ಗಂಟೆಗಳೊಳಗೆ ಭೂಮಿಯನ್ನು ವಶಪಡಿಸಿಕೊಳ್ಳುವಂತೆ ಜಮ್ಮಲಮಡುಗು ತಹಶೀಲ್ದಾರ್‌ಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಅದರಂತೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ವೆಬ್‌ಲ್ಯಾಂಡ್, ಅಡಂಗಲ್ ಮತ್ತು 1-ಬಿ ಸೇರಿದಂತೆ ಎಲ್ಲಾ ಕಂದಾಯ ದಾಖಲೆಗಳಲ್ಲಿ ಈ ಜಾಗವನ್ನು ಮರಳಿ ‘ಸರ್ಕಾರಿ ಭೂಮಿ’ ಎಂದು ನಮೂದಿಸಲಾಗಿದೆ. ಅಲ್ಲದೆ, ಮುಂದಿನ ಆದೇಶದವರೆಗೆ ಈ ಜಾಗದಲ್ಲಿ ಯಾವುದೇ ರೀತಿಯ ನೋಂದಣಿ ಅಥವಾ ಗುತ್ತಿಗೆ ಪ್ರಕ್ರಿಯೆಗಳನ್ನು ನಡೆಸದಂತೆ ಜಿಲ್ಲಾ ನೋಂದಣಾಧಿಕಾರಿಗೆ ನಿರ್ಬಂಧ ಹೇರಲಾಗಿದೆ.




