ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಪ್ರಮುಖ ಸಚಿವರು ಮತ್ತು ಉನ್ನತ ಅಧಿಕಾರಿಗಳಿಗೆ ಈಗ ತಮ್ಮದೇ ದೇಶದ ರಾಜಧಾನಿ ವಾಷಿಂಗ್ಟನ್ ಡಿ.ಸಿ.ಯಲ್ಲಿ ವಾಸಿಸುವುದು ಅಸುರಕ್ಷಿತ ಎನಿಸತೊಡಗಿದೆ. ಇರಾನ್‌ನಿಂದ ಎದುರಾಗಿರುವ ಜೀವ ಬೆದರಿಕೆ ಹಾಗೂ ದೇಶದೊಳಗಿನ ರಾಜಕೀಯ ಹಿಂಸಾಚಾರ, ಪ್ರತಿಭಟನೆಗಳಿಗೆ ಹೆದರಿ ಸುಮಾರು ಅರ್ಧ ಡಜನ್‌ಗೂ ಹೆಚ್ಚು ಅಗ್ರ ನಾಯಕರು ತಮ್ಮ ಐಷಾರಾಮಿ ಖಾಸಗಿ ಬಂಗಲೆಗಳನ್ನು ತೊರೆದು, ಬಿಗಿ ಸೇನಾ ಪಹರೆಯಿರುವ ಮಿಲಿಟರಿ ನೆಲೆಗಳಿಗೆ ಸ್ಥಳಾಂತರಗೊಂಡಿದ್ದಾರೆ ಎಂದು ಸಿಎನ್‌ಎನ್ ವರದಿ ಮಾಡಿದೆ.
ಸಾಂಪ್ರದಾಯಿಕವಾಗಿ ಸೇನೆಯ ಉನ್ನತ ಅಧಿಕಾರಿಗಳಿಗೆ ಮಾತ್ರ ಮೀಸಲಿರುವ, ಸುಮಾರು ನೂರು ವರ್ಷಗಳಿಗೂ ಹಳೆಯದಾದ ಈ ಮಿಲಿಟರಿ ವಸತಿ ಗೃಹಗಳಲ್ಲಿ ರಾಜಕೀಯ ನಾಯಕರು ಇಷ್ಟು ದೊಡ್ಡ ಸಂಖ್ಯೆಯಲ್ಲಿ ವಾಸಿಸುತ್ತಿರುವುದು ಅಮೆರಿಕದ ಇತಿಹಾಸದಲ್ಲೇ ಮೊದಲು ಎನ್ನಲಾಗಿದೆ.
ಇರಾನ್‌ನಿಂದ ಎದುರಾಗಿರುವ ನೇರ ಜೀವ ಬೆದರಿಕೆಯ ಹಿನ್ನೆಲೆಯಲ್ಲಿ ವಿತ್ತ ಮಂತ್ರಿ ಸ್ಕಾಟ್ ಬೆಸೆಂಟ್ ಜಾರ್ಜ್‌ಟೌನ್‌ನಲ್ಲಿದ್ದ ತಮ್ಮ ಐಷಾರಾಮಿ ಬಂಗಲೆಯನ್ನು ತೊರೆದು ಮಿಲಿಟರಿ ನೆಲೆಗೆ ಸ್ಥಳಾಂತರಗೊಂಡಿದ್ದಾರೆ. ಇವರೊಂದಿಗೆ ವಿದೇಶಾಂಗ ಮಂತ್ರಿ ಮಾರ್ಕೋ ರೂಬಿಯೋ ಇರಾನಿನ ಉಗ್ರಗಾಮಿ ಹಾಗೂ ರಹಸ್ಯ ದಾಳಿಗಳ ಭೀತಿಯಿಂದ ಸೇನಾ ಪಹರೆಯಲ್ಲಿ ವಾಸಿಸುತ್ತಿದ್ದರೆ, ರಕ್ಷಣಾ ಮಂತ್ರಿ ಪೀಟ್ ಹೆಗಸೆಥ್ ಭದ್ರತಾ ಕಾರಣಗಳಿಗಾಗಿ ಫೋರ್ಟ್ ಮೆಕ್‌ನೈರ್ ಸೇನಾ ನೆಲೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಮತ್ತೊಂದೆಡೆ, ಶ್ವೇತಭವನದ ಸಿಬ್ಬಂದಿ ಮುಖ್ಯಸ್ಥ ಸ್ಟೀಫನ್ ಮಿಲರ್ ಅವರ ವರ್ಜೀನಿಯಾ ನಿವಾಸದ ಮುಂದೆ ಪ್ರತಿಭಟನೆ ನಡೆದು, ಅವರ ಮನೆಯ ವಿಳಾಸವಿರುವ ಕರಪತ್ರಗಳನ್ನು ಹಂಚುವ ಮೂಲಕ ಹಿಂಬಾಲಿಸುವ ಬೆದರಿಕೆ ಒಡ್ಡಿದ ಕಾರಣ ಅವರು ತಮ್ಮ ಕುಟುಂಬದೊಂದಿಗೆ ಮಿಲಿಟರಿ ನೆಲೆಗೆ ಶಿಫ್ಟ್ ಆಗಿದ್ದಾರೆ. ಅಂತೆಯೇ, ವೈಯಕ್ತಿಕ ಸುರಕ್ಷತೆ ಮತ್ತು ಭದ್ರತಾ ಆತಂಕದಿಂದಾಗಿ ಅಟಾರ್ನಿ ಜನರಲ್ ಟಾಡ್ ಬ್ಲಾಂಶ್ ಕೂಡ ಸೇನಾ ನೆಲೆಯಲ್ಲಿ ಆಶ್ರಯ ಪಡೆದಿದ್ದು, ಇವರ ಹಿಂದಿನವರಾದ ಪ್ಯಾಮ್ ಬೋಂಡಿ ಸಹ ಕಳೆದ ವರ್ಷ ಸೇನಾ ನೆಲೆಯಲ್ಲೇ ವಾಸವಿದ್ದರು.
ಟ್ರಂಪ್ ಆಡಳಿತದ ಅಧಿಕಾರಿಗಳ ಈ ದಿಢೀರ್ ಸ್ಥಳಾಂತರದ ಹಿಂದೆ ಗಂಭೀರವಾದ ಅಂತಾರಾಷ್ಟ್ರೀಯ ಭದ್ರತಾ ಆತಂಕವಿದೆ. ಟ್ರಂಪ್ ಸಂಪುಟದ ಹಿರಿಯ ಸದಸ್ಯರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಇರಾನ್ ಸಂಚು ರೂಪಿಸಿದೆ ಎಂಬ ಗುಪ್ತಚರ ಮಾಹಿತಿಯಿದೆ. ವಾಷಿಂಗ್ಟನ್‌ನಲ್ಲಿ ರಾಸಾಯನಿಕ ಅಸ್ತ್ರ ಅಥವಾ ವಿಕಿರಣಶೀಲ ವಸ್ತುಗಳನ್ನು ಹರಡುವ ‘ಡರ್ಟಿ ಬಾಂಬ್’ ಸ್ಫೋಟಿಸಲು ಇರಾನ್ ಯೋಜಿಸಿತ್ತು ಎಂಬ ಸ್ಫೋಟಕ ವರದಿಗಳು ಇತ್ತೀಚೆಗೆ ಹೊರಬಿದ್ದಿವೆ. ಈ ಕುರಿತು ಮಾತನಾಡಿರುವ ವಿತ್ತ ಮಂತ್ರಿ ಸ್ಕಾಟ್ ಬೆಸೆಂಟ್, “ಇರಾನ್ ನಾಯಕತ್ವವು ನನ್ನ ಮತ್ತು ಸಂಪುಟದ ಇತರ ಸದಸ್ಯರ ವಿರುದ್ಧ ಕೊಲೆ ಬೆದರಿಕೆ ಹಾಕಿದೆ. ಆದರೆ ನಾವು ಇದಕ್ಕೆ ಹೆದರುವುದಿಲ್ಲ” ಎಂದಿದ್ದಾರೆ.
ಶ್ವೇತಭವನದ ಸಿಬ್ಬಂದಿ ಮುಖ್ಯಸ್ಥ ಸ್ಟೀಫನ್ ಮಿಲರ್ ಅವರ ವರ್ಜೀನಿಯಾ ನಿವಾಸದ ಎದುರು ಪ್ರತಿಭಟನೆ ನಡೆದಿದ್ದು, ಅವರ ಖಾಸಗಿ ಮನೆಯ ವಿಳಾಸವನ್ನು ಸಾರ್ವಜನಿಕವಾಗಿ ಕರಪತ್ರಗಳ ಮೂಲಕ ಹಂಚಲಾಗಿತ್ತು. ಇದರಿಂದ ಬೆದರಿದ ಮಿಲರ್, ತಮ್ಮ ಪತ್ನಿ ಕೇಟಿ ಹಾಗೂ ನಾಲ್ವರು ಮಕ್ಕಳೊಂದಿಗೆ ಸೇನಾ ಕಾಂಪೌಂಡ್‌ಗೆ ಸ್ಥಳಾಂತರಗೊಂಡಿದ್ದಾರೆ. ಈ ನಾಯಕರು ಸೇನಾ ನೆಲೆಗಳಲ್ಲಿ ಉಚಿತವಾಗಿ ವಾಸಿಸುತ್ತಿಲ್ಲ. ಪೆಂಟಗನ್ ನಿಯಮಗಳ ಪ್ರಕಾರ, ಇಲ್ಲಿ ವಾಸಿಸುವ ನಾಗರಿಕ ಅಧಿಕಾರಿಗಳು ಪ್ರತಿ ತಿಂಗಳು 4,500 ಅಮೆರಿಕನ್ ಡಾಲರ್‌ಗಿಂತ (ಸುಮಾರು 3.8 ಲಕ್ಷ ರೂಪಾಯಿ) ಹೆಚ್ಚು ಬಾಡಿಗೆ ಪಾವತಿಸಬೇಕಾಗುತ್ತದೆ.
ಆದರೆ, ಈ ವ್ಯವಸ್ಥೆಯು ಈಗ ಅಮೆರಿಕದ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಮತ್ತು ವಿವಾದಕ್ಕೆ ಕಾರಣವಾಗಿದೆ. ನಾಗರಿಕ ರಾಜಕಾರಣಿಗಳು ಸೇನಾ ನೆಲೆಗಳನ್ನು ಆಕ್ರಮಿಸಿಕೊಳ್ಳುವುದರಿಂದ, ನಿಜವಾಗಿಯೂ ಅರ್ಹರಾದ ಹಿರಿಯ ಸೇನಾಧಿಕಾರಿಗಳಿಗೆ ವಸತಿ ಕೊರತೆ ಉಂಟಾಗುತ್ತಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ. 2018ರಲ್ಲಿ ಅಂದಿನ ವಿದೇಶಾಂಗ ಸಚಿವ ಮೈಕ್ ಪೊಂಪಿಯೋ ಸೇನಾ ವಸತಿ ಕೇಳಿದಾಗ ನೌಕಾಪಡೆಯು ಇದನ್ನು “ನೈತಿಕ ಮತ್ತು ಕಾನೂನುಬದ್ಧವಾಗಿ ಸಮಸ್ಯಾತ್ಮಕ” ಎಂದು ಆಕ್ಷೇಪಿಸಿತ್ತು.
ರಕ್ಷಣಾ ಸಚಿವ ಪೀಟ್ ಹೆಗಸೆಥ್ ವಾಸವಿರುವ ಫೋರ್ಟ್ ಮೆಕ್‌ನೈರ್ ನಿವಾಸದ ಹೆಚ್ಚುವರಿ ಕಾಮಗಾರಿಗಳಿಗೆ ಅಮೆರಿಕ ಸೇನೆಯು 1,37,297 ಡಾಲರ್ (ಸುಮಾರು 1.15 ಕೋಟಿ ರೂ.) ವೆಚ್ಚ ಮಾಡಲು ಮುಂದಾಗಿದ್ದು ಕಳೆದ ವರ್ಷ ಟೀಕೆಗೆ ಗುರಿಯಾಗಿತ್ತು.
ಡೆಮಾಕ್ರಟಿಕ್ ಪಕ್ಷದ ಸಂಸದ ಜಾರ್ಜ್ ವೈಟ್‌ಸೈಡ್ಸ್ ಈ ಬಗ್ಗೆ ತನಿಖೆಗೆ ಒತ್ತಾಯಿಸಿದ್ದಾರೆ. ಸೇನಾ ವಸತಿ ಗೃಹಗಳಲ್ಲಿ ಎಷ್ಟು ರಾಜಕೀಯ ನಾಯಕರಿದ್ದಾರೆ, ಅವರಿಗೆ ಇರುವ ಬೆದರಿಕೆಯ ಸ್ವರೂಪವೇನು ಮತ್ತು ಅವರು ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಸರಿಯಾದ ಬಾಡಿಗೆ ಪಾವತಿಸುತ್ತಿದ್ದಾರೆಯೇ ಎಂಬ ಬಗ್ಗೆ 2027ರ ಬೇಸಿಗೆಯೊಳಗೆ ವರದಿ ನೀಡುವಂತೆ ಪೆಂಟಗನ್‌ಗೆ ಸೂಚಿಸಲಾಗಿದೆ.
ಅಮೆರಿಕನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಥಾಮಸ್ ಕಾನ್ ಈ ಬೆಳವಣಿಗೆಯನ್ನು “ಅತ್ಯಂತ ವಿಷಾದನೀಯ” ಎಂದು ಬಣ್ಣಿಸಿದ್ದಾರೆ. “ಈ ನಾಯಕರು ಈಗಾಗಲೇ ಬಿಗಿ ಭದ್ರತೆಯ ಗುಳ್ಳೆಯೊಳಗೆ ಬದುಕುತ್ತಿದ್ದಾರೆ. ಈಗ ಸಾಮಾನ್ಯ ಜನರು ವಾಸಿಸುವ ಬಡಾವಣೆಗಳನ್ನೂ ತೊರೆದು ಸೇನಾ ಕೋಟೆಯೊಳಗೆ ಸೇರಿಕೊಳ್ಳುವುದರಿಂದ, ಜನಪ್ರತಿನಿಧಿಗಳು ಮತ್ತು ಜನಸಾಮಾನ್ಯರ ನಡುವಿನ ಅಂತರ ಮತ್ತಷ್ಟು ಹೆಚ್ಚಾಗಲಿದೆ” ಎಂದು ವಿಶ್ಲೇಷಿಸಿದ್ದಾರೆ.



