ಕರ್ನಾಟಕದಲ್ಲಿ ಪ್ರತಿ ಐದು ಮಕ್ಕಳಲ್ಲಿ ಒಂದು ಮಗು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದೆ. ಆದರೆ, ರಾಜ್ಯ ಸರ್ಕಾರವು ಮಕ್ಕಳ ಆರೋಗ್ಯದ ಕಡೆಗೆ ಗಮನಹರಿಸುವ ಬದಲು ಶಿಕ್ಷಣ ಕ್ಷೇತ್ರಕ್ಕೆ ಅಗತ್ಯಕ್ಕಿಂತ ಹೆಚ್ಚು ಹಣವನ್ನು ವ್ಯಯಿಸುತ್ತಿದೆ ಎಂದು ಸರ್ಕಾರದ ಬೆಂಬಲಿತ ಅಧ್ಯಯನ ವರದಿಯೊಂದು ಕಳವಳ ವ್ಯಕ್ತಪಡಿಸಿದೆ. ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಮಾತ್ರ ಹೆಚ್ಚಿನ ಪ್ರಾಶಸ್ತ್ಯ ನೀಡಿ, ಮಗುವಿನ ಮೂಲಭೂತ ಪೌಷ್ಟಿಕಾಂಶವನ್ನು ನಿರ್ಲಕ್ಷಿಸುವುದು ಒಂದು ತಂತ್ರಗಾರಿಕೆಯ ದೋಷವಾಗಿದೆ ಎಂದು ಆರ್ಥಿಕ ನೀತಿ ಸಂಸ್ಥೆ (FPI) ಸಿದ್ಧಪಡಿಸಿರುವ ಮಕ್ಕಳ ಬಜೆಟ್ ಕುರಿತ ಸಂಶೋಧನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಎಫ್‌ಪಿಐ ಸಂಶೋಧಕ ಅಬೂಬಕರ್ ತಚಪರಂಬನ್ ಅವರ ಅಧ್ಯಯನದ ಪ್ರಕಾರ, 2020-21ರಿಂದ 2026-27ರ ಅವಧಿಯಲ್ಲಿ ಕರ್ನಾಟಕವು ಮಕ್ಕಳ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಬರೋಬ್ಬರಿ 3.45 ಲಕ್ಷ ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. ಇದು ಪ್ರತಿ ಮಗುವಿಗೆ 34,186 ರೂ.ಗಳ ಹೂಡಿಕೆಯಾಗಿದ್ದು, ಬಿಹಾರ ಮತ್ತು ಕೇರಳದಂತಹ ರಾಜ್ಯಗಳಿಗಿಂತ ಮುಂದಿದೆ. ಈ ಒಟ್ಟು ಅನುದಾನದಲ್ಲಿ ಶೇಕಡಾ 85ರಷ್ಟು ಪಾಲು ಕೇವಲ ಶಿಕ್ಷಣ ಕ್ಷೇತ್ರಕ್ಕೇ ಹೋಗಿದೆ. ರಾಷ್ಟ್ರೀಯ ಸರಾಸರಿ 11.8 ವರ್ಷಗಳಿಗೆ ಹೋಲಿಸಿದರೆ, ರಾಜ್ಯದ ಮಕ್ಕಳು 12.4 ವರ್ಷಗಳ ಶಾಲಾ ಶಿಕ್ಷಣ ಪಡೆಯುತ್ತಿದ್ದಾರೆ. ಇದು ಸುಸ್ಥಿರ ಅಭಿವೃದ್ಧಿ ಗುರಿಯ (SDG) 14 ವರ್ಷಗಳ ಗುರಿಯತ್ತ ಸಾಗುತ್ತಿರುವ ಆಶಾದಾಯಕ ಬೆಳವಣಿಗೆಯಾಗಿದೆ.
ಹೀಗಿದ್ದರೂ, ‘ಪೌಷ್ಟಿಕತೆ’ ಎಂಬುದು ರಾಜ್ಯದ ಪಾಲಿಗೆ ಅತ್ಯಂತ ಸವಾಲಿನ ಕ್ಷೇತ್ರ ಮತ್ತು ಪ್ರಾಥಮಿಕ ದೌರ್ಬಲ್ಯವಾಗಿ ಪರಿಣಮಿಸಿದೆ. ರಾಜ್ಯದಲ್ಲಿ ಐದು ವರ್ಷದೊಳಗಿನ ಮಕ್ಕಳ ಪೈಕಿ ಶೇ. 35.4ರಷ್ಟು ಮಕ್ಕಳು ವಯಸ್ಸಿಗೆ ತಕ್ಕ ಎತ್ತರದ ಬೆಳವಣಿಗೆ (Stunting) ಹೊಂದಿಲ್ಲ. ಇದರ ಗುರಿ ಕೇವಲ ಶೇ. 6ರಷ್ಟಿರಬೇಕಿತ್ತು. ಅದೇ ರೀತಿ, ಶೇ. 19.5ರಷ್ಟು ಮಕ್ಕಳು ಎತ್ತರಕ್ಕೆ ತಕ್ಕ ತೂಕ (Wasting) ಹೊಂದಿಲ್ಲ. ಇನ್ನು, ಶೇ. 32.9ರಷ್ಟು ಮಕ್ಕಳು ವಯಸ್ಸಿಗೆ ತಕ್ಕ ತೂಕವಿಲ್ಲದೆ (Underweight) ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇವುಗಳ ಎಸ್‌ಡಿಜಿ ಗುರಿ ಕ್ರಮವಾಗಿ ಶೇ. 5 ಮತ್ತು ಶೇ. 1ರಷ್ಟಿದೆ ಎಂದು ವರದಿ ಬೆಟ್ಟು ಮಾಡಿದೆ.
ರಾಜ್ಯವು ಶಾಲಾ ಶಿಕ್ಷಣ ವ್ಯವಸ್ಥೆಗೆ ಭಾರಿ ಹಣಕಾಸು ಒದಗಿಸುತ್ತಿದೆಯಾದರೂ, ಆ ವ್ಯವಸ್ಥೆಯೊಳಗೆ ಮಕ್ಕಳು ಬೆಳೆಯಲು ಅಗತ್ಯವಿರುವ ಪೌಷ್ಟಿಕಾಂಶ ಮತ್ತು ಆರೋಗ್ಯ ಭದ್ರತೆಯ ವಿಚಾರದಲ್ಲಿ ಕಡಿಮೆ ಹೂಡಿಕೆ ಮಾಡುತ್ತಿದೆ. ಶಾಲೆಯಲ್ಲಿ ಎಷ್ಟೇ ಹೂಡಿಕೆ ಮಾಡಿದರೂ ಸಾಮಾಜಿಕವಾಗಿರುವ ಮೂಲಭೂತ ಆರೋಗ್ಯದ ಅಪಾಯಗಳನ್ನು ತಗ್ಗಿಸದ ಕಾರಣ ಇದು ‘ಸೋರುವ ಬಕೆಟ್’ನಂತಹ (leaky bucket effect) ಪರಿಸ್ಥಿತಿಯನ್ನು ಸೃಷ್ಟಿಸುತ್ತಿದೆ. ಶಾಲೆಯ ತರಗತಿಗಳಿಗೆ ಹೋಗುವ ಮಕ್ಕಳು ಕಲಿಯಲು ದೈಹಿಕವಾಗಿ ಮತ್ತು ಮಾನಸಿಕವಾಗಿ ಶಕ್ತರಾಗಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ವರದಿ ಎಚ್ಚರಿಸಿದೆ.
ಮಕ್ಕಳ ಅಭಿವೃದ್ಧಿ ಸೂಚ್ಯಂಕದಲ್ಲಿ ರಾಜ್ಯವು ಭೌಗೋಳಿಕವಾಗಿ ಸ್ಪಷ್ಟ ವಿಭಜನೆಯನ್ನು ಹೊಂದಿದೆ. ಕಲ್ಯಾಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಶೇ. 70ಕ್ಕೂ ಹೆಚ್ಚು ಮಕ್ಕಳು ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿದ್ದು, ಇದು ಅವರ ಒಟ್ಟಾರೆ ಅಭಿವೃದ್ಧಿಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಆಶ್ಚರ್ಯಕರ ಸಂಗತಿಯೆಂದರೆ, ಆರ್ಥಿಕ ಶಕ್ತಿ ಕೇಂದ್ರವಾಗಿರುವ ‘ಬೆಂಗಳೂರು ನಗರ’ವು ಪೌಷ್ಟಿಕಾಂಶದ ವಿಚಾರದಲ್ಲಿ ಮಂಡ್ಯದಂತಹ ಗ್ರಾಮೀಣ ಕೃಷಿ ಜಿಲ್ಲೆಗಿಂತಲೂ ಹಿಂದೆ ಬಿದ್ದಿದೆ. ಕೊಳೆಗೇರಿಗಳ ಬಡತನ, ಉದ್ಯೋಗಸ್ಥ ತಾಯಂದಿರು ಎದೆಹಾಲು ಉಣಿಸಲು ಸಾಧ್ಯವಾಗದಿರುವುದು ಮತ್ತು ಅಪೌಷ್ಟಿಕತೆ-ಸ್ಥೂಲಕಾಯತೆಯ ಇಬ್ಬಗೆಯ ಸಮಸ್ಯೆಗಳೇ ನಗರ ಪ್ರದೇಶದ ಈ ದುಸ್ಥಿತಿಗೆ ಪ್ರಮುಖ ಕಾರಣಗಳಾಗಿವೆ.
ಮಕ್ಕಳು ಕೇವಲ ಶಾಲೆಗೆ ದಾಖಲಾಗುವುದಷ್ಟೇ ಅಲ್ಲ, ಅವರು ಜೈವಿಕವಾಗಿ ಕಲಿಯಲು ಮತ್ತು ಬೆಳೆಯಲು ಸಮರ್ಥರಾಗಿದ್ದಾರೆ ಎಂಬುದನ್ನು ಸರ್ಕಾರ ಖಚಿತಪಡಿಸಿಕೊಳ್ಳಬೇಕಿದೆ. ಇದಕ್ಕಾಗಿ ಪ್ರಸ್ತುತ ಶಿಕ್ಷಣಕ್ಕಾಗಿ ಮೀಸಲಿಟ್ಟಿರುವ ಅನುದಾನದ ಗಣನೀಯ ಭಾಗವನ್ನು ಪೌಷ್ಟಿಕಾಂಶದ ಭದ್ರತೆಯತ್ತ ಮರುಹೊಂದಿಸುವಂತೆ ವರದಿಯು ಒತ್ತಾಯಿಸಿದೆ. ಇದಲ್ಲದೆ, ರಾಜ್ಯದಲ್ಲಿ ಬಾಲ್ಯವಿವಾಹವೂ ಇನ್ನೂ ಕಳವಳಕಾರಿ ವಿಷಯವಾಗಿಯೇ ಉಳಿದಿದ್ದು, ಶೇ. 21.3ರಷ್ಟು ಮಹಿಳೆಯರು ಬಾಲ್ಯದಲ್ಲೇ ವಿವಾಹವಾಗುತ್ತಿರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.




