ಬೆಳಕಿನ ಹಬ್ಬಕ್ಕೆ ಮಾಲಿನ್ಯದ ಕತ್ತಲು; ದೆಹಲಿ ಜನ ಪಾಠ ಕಲಿಯುವುದು ಯಾವಾಗ?

Date:

ವರ್ಷಕ್ಕೊಮ್ಮೆ ಬರುವ ದೀಪಾವಳಿ ಹಬ್ಬವನ್ನು ಕೇವಲ ದೀಪಗಳ ಹಬ್ಬವೆಂದು ನೋಡದೆ, ಬೆಳಕಿನ ಸಂಭ್ರಮದ ಪ್ರತೀಕವಾಗಿಯೂ ಪರಿಗಣಿಸಲಾಗಿದೆ. ಆದರೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಹಬ್ಬ ಪ್ರತಿವರ್ಷವೂ ‘ಉಸಿರುಗಟ್ಟಿಸುವ ನರಕಯಾತನೆ’ಯಾಗಿ ಬದಲಾಗುತ್ತಿರುವುದು ಕಟು ಸತ್ಯ. ದೀಪಾವಳಿಯ ಸಂಭ್ರಮ ಮುಗಿದ ಮರುದಿನವೇ ದೆಹಲಿಯ ಆಕಾಶವು ದಟ್ಟ ಹೊಗೆಯ ಕಂಬಳಿಯಿಂದ ಆವೃತವಾಗುತ್ತದೆ. ಗಾಳಿಯ ಗುಣಮಟ್ಟ ಸೂಚ್ಯಂಕ (AQI) 400ರ ಗಡಿ ದಾಟಿ ‘ಅಪಾಯಕಾರಿ’ ಮಟ್ಟಕ್ಕೆ ಕುಸಿಯುತ್ತದೆ. ಸೋನಿಯಾ ವಿಹಾರ್, ಬುರಾರಿ, ವಿವೇಕ್ ವಿಹಾರ್‌ನಂತಹ ಪ್ರದೇಶಗಳಲ್ಲಿ AQI ಬರೋಬ್ಬರಿ 450ರ ಗಡಿ ದಾಟುತ್ತದೆ. ವಿಶ್ವ ಆರೋಗ್ಯ ಸಂಸ್ಥೆ  ನಿಗದಿಪಡಿಸಿದ ಸುರಕ್ಷಿತ ಮಿತಿಯ ಕನಿಷ್ಠ 50 ಪಟ್ಟು ಹೆಚ್ಚು ಹಾನಿಕಾರಕ PM 2.5 ಸೂಕ್ಷ್ಮ ಕಣಗಳು ದೆಹಲಿಯ ಮಕ್ಕಳ ಹಾಗೂ ವೃದ್ಧರ ಶ್ವಾಸಕೋಶವನ್ನು ಸೇರುತ್ತಿವೆ. ಅಕ್ಷರ್‌ಧಾಮ ಹಾಗೂ ಆನಂದ್ ವಿಹಾರ್‌ನಲ್ಲಿ ಮಾಲಿನ್ಯದ ಪ್ರಮಾಣ 760 ಮೈಕ್ರೋಗ್ರಾಂಗಳಿಗೂ ಅಧಿಕವಾಗಿ ದಾಖಲಾಗಿರುವುದು ಪರಿಸ್ಥಿತಿಯ ಗಂಭೀರತೆಗೆ ಹಿಡಿದ ಕನ್ನಡಿಯಾಗಿದೆ.

- Advertisement -

ಮನುಷ್ಯನ ಪ್ರಾಣಕ್ಕಿಂತ ಅಥವಾ ಆರೋಗ್ಯಕ್ಕಿಂತ ಹಬ್ಬದ ಆಚರಣೆ ದೊಡ್ಡದಾ ಎಂಬ ಪ್ರಶ್ನೆ ಈಗ ಪ್ರತಿಯೊಬ್ಬರ ಮುಂದೆಯೂ ಗಂಭೀರವಾಗಿ ನಿಂತಿದೆ. ಆದರೆ, ಈ ವಾಯುಮಾಲಿನ್ಯದ ಹಾವಳಿಗೆ ಕೇವಲ ಪಟಾಕಿ ಮಾತ್ರವೇ ಕಾರಣವೇ? ಅಥವಾ ಇದರ ಹಿಂದೆ ದೊಡ್ಡ ರಾಜಕೀಯ ಮತ್ತು ವ್ಯವಸ್ಥೆಯ ವೈಫಲ್ಯವಿದೆಯೇ? ಎಂಬ ಪ್ರಶ್ನೆಯನ್ನೂ ಇದೇ ಸಂದರ್ಭದಲ್ಲಿ ಕೇಳಬೇಕಿದೆ. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

NCPಯನ್ನು ಒಡೆದಿದ್ದ ಬಿಜೆಪಿಯೇ ಅದನ್ನು ಕೂಡಿಸಲು ಹೊರಟಿದೆ; ರಾಜಕೀಯ...

ವಿರೋಧ ಪಕ್ಷಗಳ ಸಾಲಿನಲ್ಲಿದ್ದರೂ ಪ್ರಧಾನಿ ನರೇಂದ್ರ ಮೋದಿ ಮತ್ತು ಶರದ್ ಪವಾರ್ ನಡುವಿನ ಸೌಹಾರ್ದ ಸಂಬಂಧ ಮುಂದುವರಿದಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪವಾರ್ ಅವರ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ ಮತ್ತು ದೆಹಲಿಯಲ್ಲಿ...

ಇಸ್ರೇಲ್ ಚುಕ್ಕಾಣಿ ಹಿಡಿಯಲು ಮುಂದಾದ ‘ಗಾಡಿ ಐಸೆನ್‌ಕೋಟ್’; ಗಾಜಾ...

ಇಡೀ ಜಗತ್ತು ಕಾತರದಿಂದ ಕೇಳುತ್ತಿರುವ ಅತಿದೊಡ್ಡ ಪ್ರಶ್ನೆಯೆಂದರೆ, ಐಸೆನ್‌ಕೋಟ್‌ ಆಡಳಿತದಲ್ಲಿ ಗಾಜಾ ಬಿಕ್ಕಟ್ಟು ಶಾಶ್ವತವಾಗಿ ಪರಿಹಾರವಾಗುತ್ತದೆಯೇ ಎಂಬುದು. ಆದರೆ, ಇದು ವಾಸ್ತವಕ್ಕೆ ತೀರಾ ದೂರವಾದ ನಿರೀಕ್ಷೆಯಾಗಿದೆ. ಐಸೆನ್‌ಕೋಟ್‌ ಅವರು ವಾಸ್ತವಿಕವಾದಿ ನಾಯಕನೇ ಹೊರತು,...

50ನೇ ವರ್ಷಕ್ಕೆ ದಾಪುಗಾಲು | ಜನಮಾನಸ ಗೆದ್ದ ‘ಜನತಾ...

ಹಾಸನದ ಸಮಾನಾಸಕ್ತ ಗೆಳೆಯರು 1977ರಲ್ಲಿ ಹುಟ್ಟುಹಾಕಿದ ಜನತಾ ಮಾಧ್ಯಮ ಪತ್ರಿಕೆ, ತನ್ನ ನಿಲುವಿನಲ್ಲಿ ಎಂದೂ ರಾಜಿ ಮಾಡಿಕೊಳ್ಳದೆ, ಜನಪರ ಧೋರಣೆಯನ್ನು ಉಳಿಸಿಕೊಂಡು ಬಂದಿದೆ. ಸಾರ್ಥಕ 49 ವರ್ಷಗಳನ್ನು ಪೂರೈಸಿ, ಈಗ 50ನೇ ವರ್ಷಕ್ಕೆ...

ಪ್ರತಿವರ್ಷ ದೀಪಾವಳಿ ಸಮೀಪಿಸುತ್ತಿದ್ದಂತೆ ಸುಪ್ರೀಂ ಕೋರ್ಟ್, ವ್ಯಾಪಾರಿಗಳು ಮತ್ತು ದೆಹಲಿ-ಎನ್‌ಸಿಆರ್ ನಿವಾಸಿಗಳ ನಡುವೆ ಹಗ್ಗಜಗ್ಗಾಟ ನಡೆಸುವುದು ಸಾಮಾನ್ಯವಾಗಿದೆ. ಪರಿಸರ ಪ್ರೇಮಿಗಳು ಮತ್ತು ನ್ಯಾಯಾಲಯವು ಕಳೆದ ಕೆಲವು ವರ್ಷಗಳಿಂದ ಪಟಾಕಿ ಮಾರಾಟ ಮತ್ತು ಸಿಡಿಸುವುದರ ಮೇಲೆ ನಿಯಂತ್ರಣ ಹೇರಲು ಯತ್ನಿಸುತ್ತಿವೆ. 2018ರಲ್ಲಿ ಸುಪ್ರೀಂ ಕೋರ್ಟ್ ಬೇರಿಯಮ್ ಅಂಶವಿರುವ ಪಟಾಕಿಗಳ ಮೇಲೆ ನಿಷೇಧ ಹೇರಿತ್ತು. ತದನಂತರ ಕೇವಲ ಸಿಎಸ್‌ಐಆರ್‌-ನೀರಿ (CSIR-NEERI) ಅಭಿವೃದ್ಧಿಪಡಿಸಿದ ‘ಹಸಿರು ಪಟಾಕಿಗಳಿಗೆ’ =ಮಾತ್ರ ನಿರ್ದಿಷ್ಟ ಸಮಯದಲ್ಲಿ (ರಾತ್ರಿ 8ರಿಂದ 10ರವರೆಗೆ) ಅನುಮತಿ ನೀಡುತ್ತಾ ಬಂದಿದೆ.

ಆದರೆ, ವಾಸ್ತವದಲ್ಲಿ ಈ ‘ಹಸಿರು ಪಟಾಕಿ’ ಎಂಬ ಪರಿಕಲ್ಪನೆಯೇ ಒಂದು ದೊಡ್ಡ ಹಗರಣವಾಗಿ ಮಾರ್ಪಟ್ಟಿದೆ. ಮಾರುಕಟ್ಟೆಯಲ್ಲಿ ಸಿಗುವ ಶೇಕಡಾವಾರು ಪಟಾಕಿಗಳ ಡಬ್ಬಿಗಳ ಮೇಲೆ ‘ಗ್ರೀನ್’ ಅಥವಾ ‘ಪರಿಸರ ಸ್ನೇಹಿ’ ಎಂಬ ಸುಳ್ಳು ಕ್ಯೂಆರ್ ಕೋಡ್ ಸ್ಟಿಕ್ಕರ್‌ಗಳನ್ನು ಅಂಟಿಸಿ ಮಾರಾಟ ಮಾಡಲಾಗುತ್ತದೆ. ದೆಹಲಿಯಲ್ಲಿ ಪಟಾಕಿಗಳ ಮೇಲಿನ ಕನಿಷ್ಠ ಪರೀಕ್ಷಾ ಸೌಲಭ್ಯಗಳೂ ಇಲ್ಲದಿರುವುದರಿಂದ, ನಿಷೇಧಿತ ಸಾಮಾನ್ಯ ಪಟಾಕಿಗಳೇ ಹಸಿರು ಪಟಾಕಿಗಳೆಂಬ ನಾಮಫಲಕದೊಂದಿಗೆ ಯದ್ವಾತದ್ವಾ ಮಾರಾಟವಾಗುತ್ತವೆ. ಇನ್ನು ರಾತ್ರಿ 10ರ ನಂತರವೂ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿ ಎಗ್ಗಿಲ್ಲದೆ ಪಟಾಕಿಗಳನ್ನು ಸಿಡಿಸಲಾಗುತ್ತದೆ. ಪೋಲಿಸರು ಮತ್ತು ಆಡಳಿತ ವ್ಯವಸ್ಥೆಯು ಕಣ್ಣುಮುಚ್ಚಿ ಕುಳಿತಿರುವುದರಿಂದ ಕಾಗದದ ಮೇಲಿನ ನಿಷೇಧಗಳು ನೆಲಮಟ್ಟದಲ್ಲಿ ಸಂಪೂರ್ಣ ವಿಫಲವಾಗುತ್ತಿವೆ.

ದೆಹಲಿಯ ವಾಯುಮಾಲಿನ್ಯಕ್ಕೆ ಕೇವಲ ಪಟಾಕಿ ಮಾತ್ರವೇ ಏಕೈಕ ಕಾರಣವಲ್ಲ. ಇಲ್ಲಿ ಪ್ರಕೃತಿಯೂ ಒಂದು ರೀತಿಯಲ್ಲಿ ಪ್ರತಿಕೂಲ ಪರಿಸ್ಥಿತಿಯಲ್ಲಿದೆ. ದೆಹಲಿಯ ಉತ್ತರದಲ್ಲಿ ಹಿಮಾಲಯ ಪರ್ವತಗಳಿದ್ದರೆ, ಪಶ್ಚಿಮ ಹಾಗೂ ದಕ್ಷಿಣದಲ್ಲಿ ಅರವಲ್ಲಿ ಬೆಟ್ಟಗಳಿವೆ. ಚಳಿಗಾಲ ಆರಂಭವಾಗುತ್ತಿದ್ದಂತೆ ತಾಪಮಾನ ಕುಸಿಯುತ್ತದೆ, ಗಾಳಿಯ ವೇಗ ತೀರಾ ಕಡಿಮೆಯಾಗುತ್ತದೆ. ಇದರಿಂದಾಗಿ ಗಾಳಿಯ ಸಂಚಾರ ಸೂಚ್ಯಂಕ ದಿನದಿಂದ ದಿನಕ್ಕೆ ಕುಸಿದು, ಹೊಗೆ ಹಾಗೂ ದೂಳು ಮೇಲಕ್ಕೆ ಹೋಗದೆ ಕೆಳಸ್ತರದಲ್ಲೇ ಸಿಕ್ಕಿಹಾಕಿಕೊಳ್ಳುತ್ತದೆ.

ಇದರ ಜೊತೆಗೆ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ರೈತರು ಅಕ್ಟೋಬರ್-ನವೆಂಬರ್ ತಿಂಗಳುಗಳಲ್ಲಿ ಭತ್ತದ ಗದ್ದೆಗಳನ್ನ ಸುಡುವುದು ಮಾಲಿನ್ಯದ ಪ್ರಮಾಣವನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆ. ಆದರೆ ಡಿಸೆಂಬರ್ ಮತ್ತು ಜನವರಿಯಲ್ಲಿ ಗದ್ದೆಗಳನ್ನ ಸುಡುವುದು ನಿಂತರೂ ದೆಹಲಿಯಲ್ಲಿ ಮಾಲಿನ್ಯ ಮುಂದುವರಿಯುತ್ತದೆ. ಇದಕ್ಕೆ ಪ್ರಮುಖ ಕಾರಣಗಳೂ ಇವೆ. 

ವಾಹನಗಳ ಹೊಗೆ, ಕೈಗಾರಿಕಾ ತ್ಯಾಜ್ಯ ಮತ್ತು ಕಸ ಕೊಳೆಯುವಿಕೆಯಿಂದ ಬಿಡುಗಡೆಯಾಗುವ ಅನಿಲಗಳು ಪರಸ್ಪರ ವರ್ತಿಸಿ ವಾತಾವರಣದಲ್ಲೇ ಹೊಸ ವಿಷಕಾರಿ ಕಣಗಳನ್ನು ಸೃಷ್ಟಿಸುತ್ತವೆ. ಇದೆಲ್ಲದರ ನಡುವೆ ದೀಪಾವಳಿಯ ಪಟಾಕಿ ಹೊಗೆಯೂ ಸೇರಿ, ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುತ್ತವೆ.

ದೆಹಲಿಯಲ್ಲಿ ವಾಯುಮಾಲಿನ್ಯ ತೀವ್ರಗೊಂಡಾಗಲೆಲ್ಲ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ನಡೆಯುವುದು ರಾಜಕೀಯ ಕೆಸರೆರೆಚಾಟವೇ ಹೊರತು ಶಾಶ್ವತ ಪರಿಹಾರ ಸಿಗುವುದಿಲ್ಲ. ಮಾಲಿನ್ಯ ನಿಯಂತ್ರಣಕ್ಕೆ ‘ಜಿಆರ್‌ಎಪಿ’ ನಿಯಮಗಳನ್ನು ಜಾರಿಗೆ ತರಲಾಗುತ್ತದೆ, ವಾಹನಗಳಿಗೆ ಪಿಯುಸಿ (PUC) ಕಡ್ಡಾಯಗೊಳಿಸುವುದು, ಪಾರ್ಕಿಂಗ್ ಶುಲ್ಕ ದ್ವಿಗುಣಗೊಳಿಸುವುದು, ಕಚೇರಿ ಸಮಯ ಬದಲಾವಣೆ ಮತ್ತು ನಿರ್ಮಾಣ ಕಾರ್ಯಗಳಿಗೆ ತಡೆ ನೀಡುವುದನ್ನು ತಾತ್ಕಾಲಿಕವಾಗಿ ಮಾಡಲಾಗುತ್ತದೆ. ಆದರೆ ಇವುಗಳ ಸರಿಯಾದ ಅನುಷ್ಠಾನ ಮಾತ್ರ ಕಾಗದದಲ್ಲೇ ಉಳಿಯುತ್ತದೆ.

ಈ ನಿಟ್ಟಿನಲ್ಲಿ ಭಾರತವು ಚೀನಾ ದೇಶದ ಹಿಂದಿನ ಪರಿಸರ ಹೋರಾಟದ ಮಾದರಿಯಿಂದ ಪಾಠ ಕಲಿಯಬೇಕಿದೆ. ಒಂದು ಕಾಲದಲ್ಲಿ ಬೀಜಿಂಗ್ ನಗರವೂ ವಿಶ್ವದ ಅತ್ಯಂತ ಕಲುಷಿತ ನಗರಗಳಲ್ಲಿ ಒಂದಾಗಿತ್ತು. ಆದರೆ ಚೀನಾ ಸರ್ಕಾರವು ಕಲ್ಲಿದ್ದಲು ಬಳಕೆಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಿ, ಸಾರಿಗೆಯನ್ನು ವಿದ್ಯುದೀಕರಿಸಿ, ಕಟ್ಟುನಿಟ್ಟಾದ ಡಿಜಿಟಲ್ ಮತ್ತು ಜಂಟಿ ಪ್ರಾದೇಶಿಕ ನಿಯಂತ್ರಣ ಕ್ರಮಗಳನ್ನು ಜಾರಿಗೆ ತರುವ ಮೂಲಕ ಗಾಳಿಯನ್ನು ಶುದ್ಧಗೊಳಿಸಿತು. ಭಾರತದಲ್ಲೂ ರಾಜಕೀಯ ಇಚ್ಛಾಶಕ್ತಿ ಮತ್ತು ಕಠಿಣ ಕಾನೂನು ಅನುಷ್ಠಾನವಿಲ್ಲದೆ ಕೇವಲ ದೋಷಾರೋಪಣೆಗಳಿಂದ ಮಾತ್ರ ಮಾಲಿನ್ಯವನ್ನು ತಡೆಯಲು ಸಾಧ್ಯವಿಲ್ಲ.

ಹಬ್ಬದ ಆಚರಣೆಯ ಹೆಸರಿನಲ್ಲಿ ಕೋಟ್ಯಂತರ ರೂ.ಗಳನ್ನು ಸುಟ್ಟು, ಕೇವಲ ಮೂರು ಗಂಟೆಗಳ ಕಾಲ ಪಟಾಕಿ ಸಿಡಿಸಿ ಆನಂದಿಸುವುದರಿಂದ ನಮಗೆ ನಾವೇ ವಿಷವನ್ನು ಸೇವಿಸಿದಂತೆ. ಕೋವಿಡ್ ಕಾಲದಲ್ಲಿ ಜನರು ಮಾಸ್ಕ್ ಧರಿಸಿ ಬದುಕುವುದನ್ನು ಕಲಿತಿದ್ದರು. ಆದರೆ ಇಂದು ಚಳಿಗಾಲ ಬಂದರೆ ಸಾಕು, ದೆಹಲಿವಾಸಿಗಳು ಉಸಿರಾಡಲು ‘ಏರ್ ಪ್ಯೂರಿಫೈರ್‌’ಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆ ಇದೆ. ಸರ್ಕಾರದ ಕ್ರಮಗಳಷ್ಟೇ ಅಲ್ಲ, ಪ್ರತಿಯೊಬ್ಬ ನಾಗರಿಕನೂ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಮಯವಿದು.

ದೀಪಾವಳಿಯೆಂದರೆ ಬರೀ ಪಟಾಕಿಗಳನ್ನ ಸಿಡಿಸಿ ಶಬ್ದ ಮಾಲಿನ್ಯ ಮಾಡುವುದಲ್ಲ, ಬದಲಾಗಿ ದೀಪಗಳನ್ನು ಬೆಳಗಿ, ಕತ್ತಲನ್ನು ಹೋಗಲಾಡಿಸುವುದು. ಹಬ್ಬದ ಮೂಲ ಆಶಯಕ್ಕೆ ಚ್ಯುತಿ ಬಾರದಂತೆ, ಪರಿಸರ ಸ್ನೇಹಿಯಾಗಿ ಹಬ್ಬವನ್ನು ಆಚರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನಮ್ಮ ಮುಂದಿನ ಪೀಳಿಗೆಗೆ ವಿಷಪೂರಿತ ಗಾಳಿಯನ್ನು ಬಿಟ್ಟುಹೋಗುವ ಬದಲು, ಶುದ್ಧ ಗಾಳಿಯನ್ನು ಉಸಿರಾಡುವ ಹಕ್ಕನ್ನು ಕಲ್ಪಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಇಂದಿನ ತುರ್ತು ಅವಶ್ಯಕತೆಯಾಗಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಮೋದಿಯ ಸುಳ್ಳುಗಳನ್ನು ಯೋಧರು ನಂಬಲಿಲ್ಲ’: ‘ದಿಮಾಗಿ ನಕ್ಸಲರು’ ಹೇಳಿಕೆಗೆ ರಾಹುಲ್ ತಿರುಗೇಟು

ಪ್ರಧಾನಿ ನರೇಂದ್ರ ಮೋದಿ ಅವರ ‘ದಿಮಾಗಿ ನಕ್ಸಲರು’ ಹೇಳಿಕೆಗೆ ಲೋಕಸಭೆಯ ವಿರೋಧ...

ದಕ್ಷಿಣ ಕನ್ನಡ | ಅಂಗನವಾಡಿ ನೌಕರರ ಬಾಕಿ ವೇತನಕ್ಕೆ ಆಗ್ರಹ; ಹೋರಾಟದ ಎಚ್ಚರಿಕೆ

ಅಂಗನವಾಡಿ ನೌಕರರ ದ.ಕ. ಜಿಲ್ಲಾ ಸಮಿತಿ ಸಭೆಯು ಬಿಸಿರೋಡ್ ರಿಕ್ಷಾ ಭವನದಲ್ಲಿ...

ಹಾಸನ ಡಿಸಿ ಕಚೇರಿಯಲ್ಲಿ ಲಂಚಾವತಾರ ಆರೋಪ: ಎಚ್‌ಡಿಕೆ ಕೈಯಲ್ಲಿ 15 ಪುಟಗಳ ವಾಟ್ಸ್‌ಆ್ಯಪ್‌ ಚಾಟ್; ಸಿಕ್ಕಿದ್ದು ಹೇಗೆ?

ಕರ್ನಾಟಕದ ರಾಜಕೀಯ ವಲಯದಲ್ಲಿ ಮತ್ತೊಮ್ಮೆ ಭ್ರಷ್ಟಾಚಾರದ ಗಂಭೀರ ಆರೋಪಗಳು ಮುನ್ನೆಲೆಗೆ ಬಂದಿವೆ....

50ನೇ ವರ್ಷಕ್ಕೆ ದಾಪುಗಾಲು | ಜನಮಾನಸ ಗೆದ್ದ ‘ಜನತಾ ಮಾಧ್ಯಮ’

ಹಾಸನದ ಸಮಾನಾಸಕ್ತ ಗೆಳೆಯರು 1977ರಲ್ಲಿ ಹುಟ್ಟುಹಾಕಿದ ಜನತಾ ಮಾಧ್ಯಮ ಪತ್ರಿಕೆ, ತನ್ನ...