ಕಬ್ಬು ಬೆಳೆಗಾರರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿರುವ ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಬಂಡೆಪ್ಪ ಖಾಶೆಂಪುರ್, ರೈತರಿಗೆ ಪ್ರತಿ ಟನ್ ಕಬ್ಬಿಗೆ ₹4,000 ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.
ಸೋಮವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬಿನ ತೂಕ ಮಾಡುವ ಯಂತ್ರಗಳ ಕುರಿತು ಸಾಕಷ್ಟು ಆರೋಪಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳು ಖುದ್ದಾಗಿ ತನಿಖೆ ನಡೆಸಿ, ರೈತರಲ್ಲಿರುವ ತೂಕದ ಕುರಿತಾದ ಅನುಮಾನಗಳನ್ನು ನಿವಾರಿಸಬೇಕು” ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಹೀಗಾಗಿಯೇ ಬಸ್ ಪ್ರಯಾಣ ದರ, ಹಾಲು, ಮೊಸರು, ಬೆಣ್ಣೆ ಹಾಗೂ ತುಪ್ಪದ ಬೆಲೆ ಹೆಚ್ಚಿಸುವ ಮೂಲಕ ಜನರ ಮೇಲೆ ಹೆಚ್ಚುವರಿ ಹೊರೆ ಹೊರಿಸಿದೆ. ಹಾಲಿನ ದರ ಹೆಚ್ಚಳದಿಂದ ರೈತರಿಗೆ ಅನುಕೂಲವಾಗಿದೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ. ಪ್ರತಿ ಲೀಟರ್ ಹಾಲಿಗೆ ₹8 ಹೆಚ್ಚಿಸಲಾಗಿದ್ದು, ಅದರಲ್ಲಿ ₹7 ರೈತರಿಗೆ ಹಾಗೂ ₹1 ಹಾಲು ಒಕ್ಕೂಟಕ್ಕೆ ಸಿಗುತ್ತಿದೆ. ಆದರೆ, ಈ ಹೆಚ್ಚುವರಿ ಹಣವನ್ನು ಜನರಿಂದಲೇ ವಸೂಲಿ ಮಾಡಲಾಗುತ್ತಿದೆ. ಇದರಲ್ಲಿ ಸರ್ಕಾರದ ಕೊಡುಗೆ ಏನಿದೆ? ಸರ್ಕಾರ ಬಿಡಿಗಾಸನ್ನೂ ನೀಡಿಲ್ಲ” ಎಂದು ಆರೋಪಿಸಿದರು.
ಎಲ್ಲ ವಸ್ತುಗಳ ಬೆಲೆ ಹೆಚ್ಚಿಸಿ ಜನರ ಮೇಲೆ ಹೊರೆ ಹಾಕುತ್ತಿರುವ ಕಾಂಗ್ರೆಸ್ ಸರ್ಕಾರ, ಇನ್ನೂ ಒಂದೂವರೆ ವರ್ಷದ ನಂತರ ಅಧಿಕಾರದಿಂದ ನಿರ್ಗಮಿಸಬೇಕಾಗುತ್ತದೆ. ಕರ್ನಾಟಕದ ಇತಿಹಾಸದಲ್ಲಿಯೇ ಈ ಪ್ರಮಾಣದಲ್ಲಿ ಬಸ್ ಪ್ರಯಾಣ ದರ ಹೆಚ್ಚಳವಾಗಿರಲಿಲ್ಲ ಎಂದು ಹೇಳಿದರು.

ಬೀದರ್-ಬೆಂಗಳೂರು ನಡುವಿನ ಅಂತರ ಸುಮಾರು 750 ಕಿ.ಮೀ. ಹಿಂದೆ ಕೆಂಪು ಬಸ್‌ನಲ್ಲಿ ಪ್ರಯಾಣಿಸಲು ₹949 ಟಿಕೆಟ್ ದರವಿತ್ತು. ಇದೀಗ ಅದನ್ನು ₹1,145ಕ್ಕೆ ಹೆಚ್ಚಿಸಲಾಗಿದ್ದು, ಪ್ರತಿ ಟಿಕೆಟ್‌ಗೆ ₹196 ಹೆಚ್ಚಳವಾಗಿದೆ. ಬೀದರ್-ಬೆಂಗಳೂರು ನಡುವೆ ಒಂದು ಟ್ರಿಪ್ ಸಂಚರಿಸಲು ಬಸ್‌ಗೆ ಸರಾಸರಿ 167 ಲೀಟರ್ ಡೀಸೆಲ್ ಅಗತ್ಯವಿದೆ. 2023ರಲ್ಲಿ ಪ್ರತಿ ಲೀಟರ್ ಡೀಸೆಲ್ ದರ ₹89 ಇದ್ದರೆ, ಈಗ ₹99.70 ಆಗಿದೆ. ಡೀಸೆಲ್ ದರ ಏರಿಕೆಗೆ ಅನುಗುಣವಾಗಿ ಒಂದು ಟ್ರಿಪ್‌ಗೆ ಸುಮಾರು ₹2 ಸಾವಿರ ಹೆಚ್ಚಳ ಮಾಡಬಹುದಿತ್ತು. ಆದರೆ, ಈಗ ₹6 ಸಾವಿರದಷ್ಟು ಹೆಚ್ಚಳ ಮಾಡಲಾಗಿದೆ ಎಂದು ವಿವರಿಸಿದರು.
“ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ವೆಚ್ಚವನ್ನು ಭರಿಸಲೂ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಸಾರಿಗೆ ಸಚಿವರಿಗೆ ಸರಿಯಾದ ಲೆಕ್ಕಾಚಾರವೇ ಗೊತ್ತಿಲ್ಲ. ಹಾಲು, ಮದ್ಯ ಹಾಗೂ ಮುದ್ರಾಂಕ ಶುಲ್ಕ ಸೇರಿದಂತೆ ವಿವಿಧ ವಲಯಗಳಲ್ಲಿ ದರ ಮತ್ತು ತೆರಿಗೆ ಹೆಚ್ಚಿಸಲಾಗಿದೆ. ಯುವನಿಧಿ ಯೋಜನೆಯೂ ಸ್ಥಗಿತಗೊಂಡಿದೆ. ಐದು ಗ್ಯಾರಂಟಿ ಯೋಜನೆಗಳು ಎಲ್ಲಿವೆ. ಐದು ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ ₹50 ಸಾವಿರ ಕೋಟಿ ಅಗತ್ಯವಿದೆ ಎಂದು ಹೇಳುವ ಸರ್ಕಾರ, ಮತ್ತೊಂದೆಡೆ ₹1 ಲಕ್ಷ ಕೋಟಿ ಸಾಲ ಮಾಡುತ್ತಿದೆ. ಗುತ್ತಿಗೆದಾರರ ಬಾಕಿ ಬಿಲ್‌ಗಳನ್ನು ಪಾವತಿಸಿಲ್ಲ. ರೈತರಿಗೂ ನೆಮ್ಮದಿಯಿಲ್ಲ. ಹೀಗಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತು ಸರ್ಕಾರ ಶ್ವೇತಪತ್ರ ಹೊರಡಿಸಬೇಕು” ಎಂದು ಒತ್ತಾಯಿಸಿದರು.
ರೈತರಿಗೆ ಬರ ಪರಿಹಾರ ವಿತರಿಸುವ ಬದಲು ರಾಜ್ಯ ಸರ್ಕಾರ ಕೇಂದ್ರದತ್ತ ಬೊಟ್ಟು ಮಾಡುತ್ತಿದೆ. ಯಾವುದೇ ವಿಚಾರ ಪ್ರಸ್ತಾಪಿಸಿದರೂ ಕೇಂದ್ರ ಸರ್ಕಾರ ಸಹಕರಿಸುತ್ತಿಲ್ಲ ಎಂದು ಹೇಳುತ್ತಿದೆ. ಆದರೆ, ಹಿಂದೆ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರದತ್ತ ನೋಡದೆ ರೈತರ ಸಾಲ ಮನ್ನಾ ಮಾಡಿದ್ದರು. ಹೀಗಾಗಿಯೇ ಅವರಿಗೆ ಮುಂದಿನ ಐದು ವರ್ಷಗಳ ಕಾಲ ಪೂರ್ಣಾವಧಿ ಅಧಿಕಾರ ನೀಡುವಂತೆ ಕೇಳುತ್ತಿದ್ದಾರೆ ಎಂದರು.
ಸ್ಥಗಿತಗೊಂಡಿರುವ ಬೀದರ್-ಬೆಂಗಳೂರು ವಿಮಾನಯಾನ ಸೇವೆಯನ್ನು ಪುನರಾರಂಭಿಸಬೇಕು. 2006ರಲ್ಲಿ ತಾವು ಸಚಿವರಾಗಿದ್ದಾಗ ಕೇಂದ್ರ ಸರ್ಕಾರದ ಸಹಕಾರದೊಂದಿಗೆ ವಿಮಾನಯಾನ ಸೇವೆ ಆರಂಭಿಸಲಾಗಿತ್ತು. ಇದೀಗ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿಯೋಗವನ್ನು ಕರೆದೊಯ್ದು ಮತ್ತೆ ವಿಮಾನಯಾನ ಸೇವೆ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬೀದರ್ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸುವೆ
ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಬೀದರ್ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಲು ತಾನು ಬಯಸಿದ್ದು, ಈ ಕ್ಷೇತ್ರವನ್ನು ಪಕ್ಷದ ವರಿಷ್ಠರಲ್ಲಿ ಕೇಳುವುದಾಗಿ ಖಾಶೆಂಪುರ್ ಸ್ಪಷ್ಟಪಡಿಸಿದರು.
ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿ ಇರುವುದರಿಂದ ಉಭಯ ಪಕ್ಷಗಳ ವರಿಷ್ಠರು ಚರ್ಚಿಸಿ ತೀರ್ಮಾನ ಕೈಗೊಳ್ಳಲಿದ್ದಾರೆ. ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ತಾವು ಬದ್ಧರಾಗಿರುವುದಾಗಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

“ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಮೈತ್ರಿ ಪಕ್ಷಗಳು ಒಟ್ಟಾಗಿ ಸ್ಪರ್ಧಿಸಬೇಕೇ ಅಥವಾ ಪ್ರತ್ಯೇಕವಾಗಿ ಕಣಕ್ಕಿಳಿಯಬೇಕೇ ಎಂಬುದನ್ನು ವರಿಷ್ಠರು ನಿರ್ಧರಿಸಲಿದ್ದಾರೆ. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಕರ್ನಾಟಕದಲ್ಲಿ ಪರಿಪೂರ್ಣವಾಗಿ ನಡೆದಿದೆ. ಎಲ್ಲಾದರೂ ಅಕ್ರಮಗಳು ನಡೆದಿರುವುದು ಕಂಡುಬಂದರೆ, ಅವುಗಳ ಕುರಿತು ತನಿಖೆ ನಡೆಸಬೇಕು” ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ ಪಾಟೀಲ ಸೋಲಪೂರ, ಪ್ರಧಾನ ಕಾರ್ಯದರ್ಶಿ ಅಶೋಕ ಕೋಡಗೆ, ಮುಖಂಡರಾದ ಶಾಂತಲಿಂಗ ಸಾವಳಗಿ, ರಾಜಶೇಖರ ಜವಳೆ, ರಾಜು ಕಡ್ಯಾಳ, ಬೊಮ್ಮಗೊಂಡ ಚಿಟ್ಟಾವಾಡಿ, ಅಭಿ ಕಾಳೆ ಹಾಗೂ ಜಾಫೆಟ್ ಕಡ್ಯಾಳ ಉಪಸ್ಥಿತರಿದ್ದರು.
ಇದನ್ನೂ ಓದಿ : ಬೀದರ್ | ಹುಬ್ಬಳಿಯಲ್ಲಿ ನ.17ರಂದು ಖಾಸಗಿ ಶಾಲೆಗಳ ಪ್ರತಿಭಟನೆ




