ಸ್ಕಾಂಡಿನೇವಿಯಾದ ಖ್ಯಾತ ಕತೆಗಾರ ಆ್ಯನ್ಸ್ ಕ್ರಿಶ್ಚಿಯನ್ ಆ್ಯಂಡರ್ಸನ್ ಅವರ ಆಯ್ದ ಕತೆಗಳನ್ನು ಕನ್ನಡಕ್ಕೆ ಅನುವಾದಿಸುವ ಮೂಲಕ ಡಾ. ಕರೀಗೌಡ ಬೀಚನಹಳ್ಳಿ ಅವರು ಕನ್ನಡ ಅನುವಾದ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಇಂಗ್ಲಿಷ್ ಪ್ರಾಧ್ಯಾಪಕ ಹಾಗೂ ಲೇಖಕ ಡಾ.ಸಿ.ನಾಗಣ್ಣ ಅಭಿಪ್ರಾಯಪಟ್ಟರು.
ಬೆಂಗಳೂರಿನ ಮಲ್ಲತ್ತಹಳ್ಳಿಯಲ್ಲಿರುವ ಕೇಂದ್ರ ಸಾಹಿತ್ಯ ಅಕಾಡೆಮಿ ಸಭಾಂಗಣದಲ್ಲಿ ಶುಕ್ರವಾರ ಕಿ.ರಂ. ಪ್ರಕಾಶನ ಪ್ರಕಟಿಸಿರುವ ಡಾ.ಕರೀಗೌಡ ಬೀಚನಹಳ್ಳಿ ಅವರ ಅನುವಾದಿತ ಕತೆಗಳ ಸಂಕಲನ ‘ತೆರೆದ ಗಾಳಿ’ ಪುಸ್ತಕವನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಆ್ಯಂಡರ್ಸನ್ ಅವರ ಕತೆಗಳು ಜನಪದ ಕಥನ ಶೈಲಿಯಲ್ಲಿದ್ದು, ಪ್ರಕೃತಿಯ ಪ್ರತಿಯೊಂದು ವಸ್ತುವಿಗೂ ಜೀವ ತುಂಬಿ ಮಾತನಾಡಿಸುವ ವಿಶೇಷತೆಯನ್ನು ಹೊಂದಿವೆ. ಮೂಲ ಕತೆಗಳ ಆಶಯಕ್ಕೆ ಧಕ್ಕೆಯಾಗದಂತೆ ಕರೀಗೌಡ ಅವರು ಅವುಗಳನ್ನು ಕನ್ನಡಕ್ಕೆ ಅನುವಾದಿಸಿರುವುದು ಮೆಚ್ಚುವಂತಹದ್ದು ಎಂದರು.
ಡೆನ್ಮಾರ್ಕ್‌ನ ಒಡೆನ್ಸಿಯಲ್ಲಿ ಬಡ ಚಮ್ಮಾರನ ಮಗನಾಗಿ ಜನಿಸಿದ ಆ್ಯಂಡರ್ಸನ್, ಕಡುಬಡತನದಲ್ಲಿ ಬೆಳೆದರೂ ಸ್ಕಾಂಡಿನೇವಿಯಾದ ಶ್ರೇಷ್ಠ ಕತೆಗಾರರಾಗಿ ಹೊರಹೊಮ್ಮಿದರು. ಬಡತನದ ಬದುಕಿನಲ್ಲಿ ತಾವು ಕಂಡುಂಡ ನೋವುಗಳನ್ನೇ ತಮ್ಮ ಕತೆಗಳಲ್ಲಿ ಅಭಿವ್ಯಕ್ತಿಸಿದವರು. ನೊಂದವರ ಬದುಕಿನ ಸಂಕಷ್ಟಗಳನ್ನು ತಮ್ಮ ಸಾಹಿತ್ಯದಲ್ಲಿ ನಿರಂತರವಾಗಿ ಚಿತ್ರಿಸುತ್ತ ಬಂದಿರುವ ಕರೀಗೌಡ ಅವರು ಆ್ಯಂಡರ್ಸನ್ ಕತೆಗಳಿಗೆ ಮನಸೋತಿರುವುದು ಸಹಜವಾಗಿದೆ ಎಂದು ಹೇಳಿದರು.
ಹಳ್ಳಿಗಾಡಿನ ಜನರ ಸಂಕಷ್ಟಗಳನ್ನು ತಮ್ಮ ಬರಹಗಳಲ್ಲಿ ಅನನ್ಯವಾಗಿ ಕಟ್ಟಿಕೊಟ್ಟಿರುವ ಕರೀಗೌಡ ಅವರು, ಆ್ಯಂಡರ್ಸನ್ ಅವರ ಸಾಹಿತ್ಯ ಲೋಕವನ್ನು ಸರಾಗವಾಗಿ ಪ್ರವೇಶಿಸಿ, ಅದರಲ್ಲಿನ ಅಮೂಲ್ಯ ಕಥನಗಳನ್ನು ಆಯ್ದು ಕನ್ನಡ ಓದುಗರಿಗೆ ನೀಡಿದ್ದಾರೆ. ಸಾಹಿತ್ಯದಿಂದ ನಾವು ನಿರೀಕ್ಷಿಸುವ ಮಹತ್ವದ ಜವಾಬ್ದಾರಿಯನ್ನು ಈ ಕತೆಗಳು ನಿಭಾಯಿಸಿವೆ. ಆ್ಯಂಡರ್ಸನ್ ಬದುಕಿದ ನೆಲದಲ್ಲಿ ನಡೆದಾಡಿ, ಅವರ ಚೇತನವನ್ನು ಆವಾಹಿಸಿಕೊಂಡು ಕತೆಗಳನ್ನು ಕನ್ನಡದಲ್ಲಿ ಮರುಸೃಷ್ಟಿಸಿರುವ ಡಾ.ಕರೀಗೌಡ ಅವರು ಅಭಿನಂದನಾರ್ಹರು ಎಂದು ಶ್ಲಾಘಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಮಾತನಾಡಿ, ವಿಭಿನ್ನ ಸಂಸ್ಕೃತಿಗಳ ನಡುವಿನ ಕೊಡುಕೊಳ್ಳುವಿಕೆಯಲ್ಲಿ ಅನುವಾದ ಸಾಹಿತ್ಯದ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ವಿಶೇಷ ಲೇಖನ ಓದಿದ್ದೀರಾ? ಏಳು ಕೊಲೆಗಳು ಮತ್ತು ಮನುಷ್ಯ ಮೃಗ!: ಕ್ರೋಧ, ಕ್ರೌರ್ಯ, ವಿವೇಕದ ಕಾವಲು ಕಳಚಿದಾಗ…
ಲೇಖಕಿ ಕುಸುಮ ಅಬ್ಬೂರು ಹಾಗೂ ಕಿ.ರಂ. ಪ್ರಕಾಶನದ ಧನಂಜಯ ಸೇರಿದಂತೆ ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ವಿಶೇಷ ವರದಿ ಓದಿದ್ದೀರಾ? ಅಕ್ಕಿ ಬೆಲೆ ಏರಿಕೆಯ ಹಿಂದಿನ ಆಟ ಯಾರದ್ದು?: ಕಾರ್ಪೋರೇಟ್ ಮಾರುಕಟ್ಟೆಯ ಕರಾಮತ್ತು!
ಕಿ.ರಂ. ಪ್ರಕಾಶನವು ‘ತೆರೆದ ಗಾಳಿ’ ಪುಸ್ತಕವನ್ನು ಪ್ರಕಟಿಸಿದ್ದು, ಬಿಡುಗಡೆ ಸಮಾರಂಭವನ್ನೂ ಆಯೋಜಿಸಿತ್ತು.




