ಸತ್ಯನಿಷ್ಠೆ, ಮಹೋದಾರತೆ ಮತ್ತು ಶ್ರಮಸಂಸ್ಕೃತಿಯ ಫಲವಂತಿಕೆಯಾಗಿ ಸಾವನ್ನು ಗೆದ್ದು ಜನಮಾನಸದಲ್ಲಿ ನೆಲೆಗೊಂಡಿರುವ ಬಲಿ ಕೇವಲ ಸೋಲಿನ ಸಂಕೇತವಲ್ಲ; ಆತ ಚಾರಿತ್ರಿಕವಾಗಿ ಪ್ರಭುತ್ವದ ವಂಚನೆಯನ್ನು ಬಯಲು ಮಾಡುವ ಜೀವಂತ ಪ್ರತಿರೋಧ.
ಊರಿಗೆಲ್ಲ ದೀಪಾವಳಿಯು ಬೆಳಕಿನ ಸಂಭ್ರಮವಾದರೆ, ನಮ್ಮ ಕುಟುಂಬದ ರುದ್ರಜ್ಜಿಗೆ ಮಾತ್ರ ಅಂದು ಕತ್ತಲೆಯ ಸೂತಕ! ಮನೆಗಳಲ್ಲಿ ದೀಪ ಹಚ್ಚದೆ, ಹೊಸಬಟ್ಟೆ ತೊಡದೆ, ಹಬ್ಬದೂಟವನ್ನೂ ಮಾಡದೆ ದೀಪಾವಳಿಯನ್ನು ಸೂತಕವೆಂದು ಆಚರಿಸುವ ನಮ್ಮಜ್ಜಿಯ ಮೌಖಿಕ ಕಥನವು ಬಲೀಂದ್ರನ ಕುರಿತ ಚಿಂತನೆಗೆ ಹೊಸದೊಂದು ಆಯಾಮವನ್ನು ತೆರೆದಿಡುತ್ತದೆ. ಅಜ್ಜಿಯ ಪ್ರಕಾರ, ದೀಪಾವಳಿಯ ದಿನವೇ ಅವರ ಮನೆತನದ ದನಕರುಗಳೆಲ್ಲ ಕಾಡಿನಲ್ಲಿ ಕಳೆದುಹೋದವು; ಅವುಗಳನ್ನು ಹುಡುಕಲು ಹೋದ ಗಂಡಸರು ಮರಳಿ ಬರಲೇ ಇಲ್ಲ; ಹೊಲಗಳಿಗೆ ಯಾರೋ ಬೆಂಕಿ ಹಚ್ಚಿ ಫಸಲನ್ನು ಸುಟ್ಟುಹಾಕಿದರು; ಹಬ್ಬದ ಸಂತೆಗೆ ಹೋದ ಯಜಮಾನ ಕೊಲೆಯಾದನು. ಆದ್ದರಿಂದಲೇ ಅಂದು ಮನೆಯಲ್ಲಿ ಕಸ ಗುಡಿಸುವುದಿಲ್ಲ, ದೀಪ ಹಚ್ಚುವುದಿಲ್ಲ ಮತ್ತು ಸ್ನಾನವನ್ನೂ ಮಾಡುವುದಿಲ್ಲ. ಈ ಕಥೆಯು ಕೇವಲ ಒಂದು ಕುಟುಂಬದ ಖಾಸಗಿ ದುರಂತವಲ್ಲ; ಜಾನಪದೀಯ ಸ್ಮೃತಿಯಲ್ಲಿ ತಲೆಮಾರುಗಳಿಂದ ಹರಿದುಬಂದಿರುವ ಸಾಮೂಹಿಕ ಆಘಾತದ ಸಂಕೇತ. ಇತಿಹಾಸದಲ್ಲಿ ಘಟಿಸಿದ ಯಾವುದೋ ಒಂದು ಹಿಂಸಾತ್ಮಕ ಆಕ್ರಮಣ, ಸುಲಿಗೆ ಮತ್ತು ಸಾಂಸ್ಕೃತಿಕ ವಿನಾಶದ ಕರಾಳ ನೆನಪು, ಕಾಲಕ್ರಮೇಣ ಅಜ್ಜಿಯ ಕಥೆಯಾಗಿ ರೂಪಾಂತರಗೊಂಡು, ವೈದಿಕ ಹಬ್ಬದ ಸಂಭ್ರಮವನ್ನು ಧಿಕ್ಕರಿಸುವ ಪ್ರತಿರೋಧದ ಸೂತಕವಾಗಿ ನೆಲೆಯೂರಿರುವುದನ್ನು ಈ ಆಚರಣೆ ನಿಸ್ಸಂದಿಗ್ಧವಾಗಿ ದೃಢೀಕರಿಸುತ್ತದೆ.
ಹಬ್ಬದೊಳಗಿನ ಸೂತಕ ಮತ್ತು ಪ್ರತಿ-ಇತಿಹಾಸದ ಪ್ರಶ್ನೆಗಳು
ರುದ್ರಜ್ಜಿಯ ಈ ಕತ್ತಲೆಯ ನೆನಪು ಮತ್ತು ನೆಲಮೂಲದ ಜನರ ಜೀವಂತ ಸ್ಮೃತಿಗಳು ನಮ್ಮೊಳಗೆ ಹಲವು ಮೂಲಭೂತ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ದೀಪಾವಳಿಯ ಹಬ್ಬವು ಬೆಳಕಿನ ಸಂಭ್ರಮವೋ ಅಥವಾ ಮೂಲನಿವಾಸಿ ಅರಸನೊಬ್ಬನ ಕಗ್ಗೊಲೆಯ ನೆನಪಿನಲ್ಲಿ ಆಚರಿಸುವ ಸೂತಕವೋ? ಒಂದು ಪುರಾಣದ ಕಥೆಯು ಶತಮಾನಗಳ ಕಾಲ ಸಮಾಜದ ವಿವಿಧ ಸ್ತರಗಳಲ್ಲಿ ಸಂಚರಿಸುವಾಗ ಯಾವ ಬಗೆಯ ಪಲ್ಲಟಗಳನ್ನು ಪಡೆಯುತ್ತದೆ? ವಿಜಯಿಯೊಬ್ಬನ ಆಖ್ಯಾನವು ಪರಾಜಿತನ ನೆಲದಲ್ಲಿ ಹೇಗೆ ಮರುಹುಟ್ಟು ಪಡೆಯುತ್ತದೆ? ಆರ್ಯ-ವೈದಿಕ ಕಲ್ಪನೆಯ ‘ವಾಮನಾವತಾರ’ ಎಂಬ ಪಾವಿತ್ರ್ಯದ ಚೌಕಟ್ಟಿನಲ್ಲಿ ‘ಅಧರ್ಮದ ಸಂಹಾರ’ವೆಂದು ಬಿಂಬಿತವಾದ ಬಲಿಯ ಪತನವು, ನೆಲಮೂಲದ ಜನರ ಎದೆಯಾಳದಲ್ಲಿ ಅನ್ಯಾಯದ ದುರಂತವಾಗಿ ದಾಖಲಾದದ್ದು ಹೇಗೆ? ಚಂಪೂ ಕವಿಗಳಿಗೆ ರಾಜಪ್ರಶಸ್ತಿಯ ರೂಪಕವಾದ, ವಚನಕಾರರಿಗೆ ದೈವಿಕ ವಿಡಂಬನೆ ಹಾಗೂ ಅಶಾಶ್ವತತೆಯ ಕನ್ನಡಿಯಾದ, ಶತಕಕಾರರು ಮತ್ತು ಸರ್ವಜ್ಞನಿಗೆ ಲೋಕನೀತಿಯ ದೃಷ್ಟಾಂತವಾದ, ಹರಿದಾಸರಿಗೆ ಭಕ್ತಿ-ನಿಂದಾಸ್ತುತಿಗಳ ಮಾಧ್ಯಮವಾದ ಹಾಗೂ ಜನಪದರಿಗೆ ಕೃಷಿ ಸಮೃದ್ಧಿಯ ಆರಾಧ್ಯ ದೈವವಾದ ಬಲಿಚಕ್ರವರ್ತಿಯ ವ್ಯಕ್ತಿತ್ವವು, ಆಧುನಿಕ ಕಾಲದ ಕುವೆಂಪು ಅವರ ಬಂಡಾಯ ಪ್ರಜ್ಞೆಗೆ ತಲುಪಿದಾಗ ಯಾವ ಸ್ವರೂಪವನ್ನು ಧರಿಸುತ್ತದೆ? ಈ ಪ್ರಶ್ನೆಗಳು ಕನ್ನಡ ಸಾಂಸ್ಕೃತಿಕ ಪರಂಪರೆಯಲ್ಲಿ ‘ಬಲಿ’ ಎಂಬ ಪರಿಕಲ್ಪನೆಯನ್ನು ಕೇವಲ ಒಂದು ಪೌರಾಣಿಕ ಪಾತ್ರವಾಗಿ ನೋಡದೆ, ಅದೊಂದು ಸೈದ್ಧಾಂತಿಕ ಮುಖಾಮುಖಿಯಾಗಿ, ಸಾಮಾಜಿಕ ಚಲನೆಯಾಗಿ ಪರಿಭಾವಿಸಲು ಪ್ರೇರೇಪಿಸುತ್ತವೆ. ಹೀಗಾಗಿ ಬಲೀಂದ್ರನ ಕಥನವು ತಳಸಮುದಾಯಗಳ ಮೌಖಿಕ ಇತಿಹಾಸ, ಜೈನ ಪ್ರಣೀತ ಲೌಕಿಕ ಕಾವ್ಯ, ಶರಣರ ವೈಚಾರಿಕತೆ, ದಾಸ ಸಾಹಿತ್ಯದ ದ್ವೈತ-ತಾತ್ವಿಕತೆ, ಬುಡಕಟ್ಟು-ಜನಪದರ ಬೇಸಾಯ ಸಂಸ್ಕೃತಿ ಹಾಗೂ ಆಧುನಿಕ ಕಾವ್ಯದ ಮಾನವತಾವಾದಿ ನೆಲೆಗಳಲ್ಲಿ ಬಹುಮುಖಿಯಾಗಿ ಮೈದಾಳಿದೆ.
‘ಜೀಯ’ ಎಂದ ವಾಮನ ಮತ್ತು ಪಂಪನ ಕ್ಷಾತ್ರ ವಿವೇಕ
ಮೌಖಿಕ ಸೂತಕದ ನೆಲೆಯಿಂದ ಕನ್ನಡದ ಲಿಖಿತ ಕಾವ್ಯ ಪರಂಪರೆಗೆ ಪ್ರವೇಶಿಸಿದರೆ, ಅಲ್ಲಿ ಬಲಿಯ ಉಲ್ಲೇಖವು ರಾಜಕೀಯ ಪ್ರಭುತ್ವದ ವೈಭವೀಕರಣಕ್ಕೆ ವಿಶಿಷ್ಟವಾಗಿ ಬಳಕೆಯಾಗಿರುವುದು ಕಾಣುತ್ತದೆ. ಹತ್ತನೆಯ ಶತಮಾನದ ಆದಿಕವಿ ಪಂಪನು ತನ್ನ ‘ವಿಕ್ರಮಾರ್ಜುನ ವಿಜಯ’ ಕಾವ್ಯದ ಮೊದಲ ಆಶ್ವಾಸದಲ್ಲಿ, ತನ್ನ ಆಶ್ರಯದಾತ ಚಾಳುಕ್ಯ ಅರಿಕೇಸರಿಯನ್ನು ನಾರಾಯಣನಿಗೆ ಹೋಲಿಸುತ್ತಾ ರಚಿಸಿದ ಉತ್ಪಲಮಾಲಾ ವೃತ್ತದಲ್ಲಿ ಬಲಿಯ ಪ್ರಸಂಗವನ್ನು ತರುತ್ತಾನೆ:
ಶ್ರೀಯನರಾತಿ ಸಾಧನ ಪಯೋನಿಧಿಯೊಳ್ ಪಡೆದುಂ ಧರಿತ್ರಿಯಂ
ಜೀಯೆನೆ ಬೇಡಿಕೊಳ್ಳದೆ ವಿರೋಧಿ ನರೇಂದ್ರರನೊತ್ತಿಕೊಂಡುಮಾ
ತ್ಮೀಯ ಸುಪುಷ್ಪ ವೃಷ್ಟಿಯನೊಡಂಬಡೆ ತಾಳ್ದಿಯುಮಿಂತುದಾತ್ತನಾ
ರಾಯಣನಾದ ದೇವನೆಮಗೀಗರಿಕೇಸರಿ ಸೌಖ್ಯ ಕೋಟಿಯಂ
ಪಂಪನಿಲ್ಲಿ ಪುರಾಣದ ನಾರಾಯಣನಿಗಿಂತ ತನ್ನ ರಾಜ ಅರಿಕೇಸರಿಯನ್ನು ಹಿರಿದಾಗಿ ನಿಲ್ಲಿಸುತ್ತಾನೆ. ಪುರಾಣದ ವಿಷ್ಣುವು ಶ್ರಮವಿಲ್ಲದೆ ಲಕ್ಷ್ಮಿಯನ್ನು ಪಡೆದು, ವಾಮನನಾಗಿ ಬಲಿಯ ಮುಂದೆ ‘ಜೀಯ’ ಎಂದು ಕೈಯೊಡ್ಡಿ ಭೂಮಿಯನ್ನು ಯಾಚಿಸಿದರೆ, ಅರಿಕೇಸರಿಯು ಶತ್ರುಸೈನ್ಯವೆಂಬ ಸಮುದ್ರವನ್ನು ಬಾಹುಬಲದಿಂದ ಕಡೆದು ಜಯಲಕ್ಷ್ಮಿಯನ್ನು ಪಡೆದನು; ಯಾರ ಮುಂದೆಯೂ ಕೈಯೊಡ್ಡದೆ ವಿರೋಧಿ ರಾಜರನ್ನು ಮೆಟ್ಟಿ ಧರಿತ್ರಿಯನ್ನು ವಶಪಡಿಸಿಕೊಂಡು ‘ಉದಾತ್ತ ನಾರಾಯಣ’ನೆನಿಸಿದನು. ಇಲ್ಲಿ ಬಲಿಯ ಪ್ರಸಂಗವು ನಾರಾಯಣನ ಯಾಚಕತನವನ್ನು ಬಯಲುಮಾಡಲು ಹಾಗೂ ಅರಿಕೇಸರಿಯ ಅಯಾಚಕ ಕ್ಷಾತ್ರಗಾಂಭೀರ್ಯವನ್ನು ಸ್ಥಾಪಿಸಲು ಬಳಕೆಯಾಗಿದೆ. ಜೈನ ಕವಿಯಾದ ಪಂಪನಿಗೆ ತ್ರಿವಿಕ್ರಮನ ಕೃತ್ಯವು ದೈವಿಕ ಲೀಲೆಯಾಗಿ ಕಾಣದೆ, ‘ಬೇಡುವಿಕೆ’ ಎಂಬ ಕ್ಷಾತ್ರಧರ್ಮದ ನೈತಿಕ ದೋಷವಾಗಿ ಗೋಚರಿಸಿದೆ.
ಬೇಡುವ ದೇವರು, ನೀಡುವ ಬಲಿ
ಹನ್ನೆರಡನೆಯ ಶತಮಾನದ ವಚನ ಚಳವಳಿಯು ಪುರಾಣಗಳನ್ನು ಕಟು ನೈತಿಕತೆಯ ಒರೆಗಲ್ಲಿಗೆ ಹಚ್ಚಿ ನೋಡಿತು. ವಚನಕಾರರ ಪಾಲಿಗೆ ಬಲಿಚಕ್ರವರ್ತಿಯು ಕೇವಲ ಒಬ್ಬ ಅಸುರನಲ್ಲ; ಆತ ವೈದಿಕ ದೇವರುಗಳ ದೌರ್ಬಲ್ಯವನ್ನು ಮತ್ತು ಭೌತಿಕ ಸಂಪತ್ತಿನ ನಶ್ವರತೆಯನ್ನು ಕಣ್ಣಿಗೆ ಕಟ್ಟುವ ಸಾಧನ. ಬಸವಣ್ಣನವರು ವಚನವೊಂದರಲ್ಲಿ ಅನ್ಯದೈವಗಳ ಅಸಹಾಯಕತೆಯನ್ನು ಪಟ್ಟಿ ಮಾಡುತ್ತಾ, “ಹರಿಯ ಬೇಡುವಡೆ ಅವಗೆ ಬಲೀಂದ್ರ ದಾನವನಿಕ್ಕಿದನು…” ಎನ್ನುತ್ತಾರೆ. ಜಗತ್ತಿಗೇ ಅನ್ನದಾತನಾಗಬೇಕಾದ ಪರದೈವವು ಒಬ್ಬ ಮರ್ತ್ಯನ ಮುಂದೆ, ಅದೂ ಅಸುರನೆಂದು ಹೀಗಳೆಯಲ್ಪಟ್ಟ ಬಲಿಯ ಮುಂದೆ ಯಾಚಕನಾಗಿ ನಿಂತದ್ದು ಹರಿಯ ಅಪೂರ್ಣತೆಯ ಸಂಕೇತ; ಆದ್ದರಿಂದ ಸ್ವಯಂಪೂರ್ಣನಾದ ಕೂಡಲಸಂಗಮದೇವನನ್ನಷ್ಟೇ ಬೇಡಬೇಕೆಂಬುದು ಬಸವಣ್ಣನವರ ನಿಲುವು. ಇಲ್ಲಿ ವಚನಕಾರರ ಕಣ್ಣಿಗೆ ಬಲಿಯು ದೇವರಿಗಿಂತಲೂ ಹಿರಿದಾದ ದಾತೃವಾಗಿ ನಿಲ್ಲುತ್ತಾನೆ.
ಮತ್ತೊಬ್ಬ ಶರಣ ಸಕಳೇಶ ಮಾದರಸರು ಲೌಕಿಕ ಸಂಪತ್ತಿನ ಕ್ಷಣಿಕತೆಯನ್ನು ವಿವರಿಸುತ್ತಾ, “ಬಲೀಂದ್ರನ ಸಿರಿಗಿಂದ ಅಧಿಕರನಾರನೂ ಕಾಣೆನಯ್ಯಾ/ಅಂಥಾ ಸಂಪತ್ತು ಮೂರಡಿಗೆಯ್ದದು” ಎನ್ನುತ್ತಾರೆ. ಜಗತ್ತನ್ನೇ ಆಳಿದ ಅಖಂಡ ಐಶ್ವರ್ಯವೂ ವಾಮನನ ಮೂರು ಹೆಜ್ಜೆಗಳಿಗೆ ಮುಗಿದುಹೋಯಿತು ಎಂದಮೇಲೆ ಭೌತಿಕ ಸಂಪತ್ತು ಯಾರಿಗೆ ತಾನೇ ಶಾಶ್ವತ? ಈ ವೈರಾಗ್ಯದ ನಿಲುವಿಗೆ ಬಲಿಯ ದುರಂತವೇ ಮಾದರಿಯಾಗುತ್ತದೆ.

ಮೂರಡಿಯ ಸಾಲದ ಶೂಲೆ ಮತ್ತು ದಾಸರ ದ್ವಂದ್ವ
ಹದಿನಾರನೆಯ ಶತಮಾನದ ಪುಲಿಗೆರೆ ಸೋಮನಾಥನು ತನ್ನ ‘ಸೋಮೇಶ್ವರ ಶತಕ’ದಲ್ಲಿ ಬಲಿಯ ಪ್ರಸಂಗವನ್ನು ತಂದು ಲೌಕಿಕ ಜಗತ್ತಿನ ಕಟುಸತ್ಯವಾದ ‘ಸಾಲದ ಭಾರ’ಕ್ಕೆ ಸಮೀಕರಿಸುತ್ತಾನೆ:
ರಣದೊಳ್ ಶಕ್ರನ ತೇರನೇರಿದ ಮಹಾಶೈಲಾಳಿ ಬೆಂಬತ್ತ ಮಾ
ರ್ಗಣದಿಂ ಚಿಮ್ಮಿದ ಸಪ್ತಸಾಗರಗಳಂ ದಿಕ್ಕೆಂಟು ಮೂಲೋಕಮಂ
ಕ್ಷಣದೊಳ್ ವೆಚ್ಚವಮಾಡಿ ಬೇಡೆ ಬಲಿ ಸಾಲಕ್ಕಂಜಿ ಬಿಟ್ಟೋಡಿದಂ
ಋಣಭಾರಕ್ಕೆಣೆಯಾವುದೈ ಹರಹರಾ ಶ್ರೀಚೆನ್ನಸೋಮೇಶ್ವರಾ
ಇಂದ್ರನನ್ನೇ ಯುದ್ಧದಲ್ಲಿ ಸೋಲಿಸಿದ ಅಪ್ರತಿಮ ಪರಾಕ್ರಮಿ ಬಲಿ, ವಾಮನನಿಗೆ ಸಪ್ತ ಸಾಗರಗಳನ್ನೂ ಅಷ್ಟದಿಕ್ಕುಗಳನ್ನೂ ದಾನವಾಗಿತ್ತರೂ, ಮೂರನೆಯ ಹೆಜ್ಜೆಯ ಸಾಲವನ್ನು ತೀರಿಸಲಾಗದೆ ಹೆದರಿ ಪಾತಾಳಕ್ಕೆ ಓಡಿಹೋದನು ಎನ್ನುತ್ತಾನೆ ಕವಿ. ಪುರಾಣದಲ್ಲಿ ಬಲಿಯು ತಲೆಯೊಡ್ಡಿ ನಿಲ್ಲುವ ದಾನಶೂರ; ಆದರೆ ಸೋಮನಾಥನು ಸಾಂಸಾರಿಕ ನೆಲೆಯ ‘ಸಾಲದ ಸಂಕಟ’ದ ತೀವ್ರತೆಯನ್ನು ಬಿಂಬಿಸಲು, ಬಲಿಯೇ ಸಾಲಕ್ಕೆ ಬೆದರಿ ಪಾತಾಳಕ್ಕೆ ಓಡಿದನೆಂಬ ಕಾವ್ಯಾತ್ಮಕ ಪಲ್ಲಟವನ್ನು ತರುತ್ತಾನೆ. ಈ ಮೂಲಕ ಅಲೌಕಿಕ ಪೌರಾಣಿಕ ಘಟನೆಯು ಕಟು ಲೌಕಿಕ ಸಂಕಷ್ಟಕ್ಕೆ ರೂಪಕವಾಗುತ್ತದೆ.
ಇದನ್ನು ಓದಿದ್ದೀರಾ?: ದೀಪಾವಳಿ ಸಂಭ್ರಮದ ಬೆನ್ನಲ್ಲೇ ದೆಹಲಿಯಲ್ಲಿ ‘ವಿಷಗಾಳಿ’: ಉಸಿರುಕಟ್ಟಿಸುವ ವಾತಾವರಣ, 1,331ಕ್ಕೆ ತಲುಪಿದ AQI!
ಶತಕಕಾರನ ಈ ಲೌಕಿಕ ಸಾಲದ ಶೂಲೆಯಿಂದ ಬಲಿಯು ಹರಿದಾಸರ ಭಕ್ತಿಯ ಅಂಗಳಕ್ಕೆ ಬರುವಾಗ, ಆತನ ಸುತ್ತ ಭಕ್ತಿ ಮತ್ತು ವಿಡಂಬನೆಯ ತಂತಿಗಳು ಏಕಕಾಲಕ್ಕೆ ಹೆಣೆದುಕೊಳ್ಳುತ್ತವೆ. ವಾದಿರಾಜ ತೀರ್ಥರು “ವಾಮನನಾಗಿ ಬಂದು ಬಲೀಂದ್ರನಿಗೆ ಸಂದ ಸೀಮೆಯನೆಲ್ಲವ ಸಲೆವಿಟ್ಟ ತ್ರಿವಿಕ್ರಮ ನಿನ್ನ ಸಾಮರ್ಥ್ಯವ ಶ್ರುತಿಗಳು ಪೇಳೆ…” ಎಂದೂ, ವೆಂಕಟವರದಾರ್ಯರು “ನೆಲನ ಈರಡಿ ಮಾಡಿ ಬಲಿಯ ಮೆಟ್ಟಿದ ಧೀರ” ಎಂದೂ ಹಾಡಿ ವಾಮನನ ಸಾಹಸವನ್ನು ಸ್ತುತಿಸುತ್ತಾರೆ. ಆದರೆ ರಣರಂಗದಲ್ಲಿ ನೇರವಾಗಿ ಎದುರಿಸಲಾಗದ ಪರಾಕ್ರಮಿಯನ್ನು ಯಾಚನೆಯ ನೆಪದಲ್ಲಿ ಬಂದು ಮೆಟ್ಟಿಹಾಕುವುದನ್ನು ‘ಸಾಹಸ’ವೆಂದು ವೈಭವೀಕರಿಸುವ ಮೂಲಕ, ವೈದಿಕ ಪೌರಾಣಿಕ ಪ್ರಜ್ಞೆಯು ಸಹಜ ಮಾನವೀಯ ನೈತಿಕತೆಯನ್ನೇ ತಲೆಕೆಳಗು ಮಾಡುತ್ತದೆ. ದಾನವಿತ್ತ ದಾತೃವನ್ನೇ ವಂಚಿಸುವುದನ್ನು ಭಗವಂತನ ‘ಲೀಲೆ’ಯೆಂದು ಸಮರ್ಥಿಸಿಕೊಳ್ಳುವಲ್ಲಿ, ಭಕ್ತಿಯ ಪರವಶತೆಯು ನೈತಿಕ ವಿವೇಕವನ್ನು ಮರೆಮಾಚುವ ವೈರುಧ್ಯ ಎದ್ದು ಕಾಣುತ್ತದೆ. ಆದರೆ ಪುರಂದರದಾಸರು ಇಂತಹ ದೈವಿಕ ದ್ವಂದ್ವವನ್ನು ನೇರ ವ್ಯಂಗ್ಯಕ್ಕೆ ಒಳಪಡಿಸುತ್ತಾರೆ:
ತಂದೆಯ ಕೊಂದು ಕಂದನ ಸಲಹಿದ ಚಂದವು ನಿನ್ನದೈ
ಕಂದನ ಕೊಂದು ತಂದೆಯ ಸಲಹಿದೆ ಏತರ ನ್ಯಾಯವಿದೈ
ವಂದಿಸಿ ದಾನವ ಕೊಟ್ಟ ಬಲೀಂದ್ರನ ಬಂಧಿಸಿದಹುದಹುದೈ
ಮಂದರಧರ ಶ್ರೀ ಪುರಂದರವಿಠಲ ಮಾಡಿದ್ದೇ ಮರ್ಯಾದೈ
ಪ್ರಹ್ಲಾದ-ಹಿರಣ್ಯಕಶಿಪು ಹಾಗೂ ಬಾಣಾಸುರನ ಪ್ರಸಂಗಗಳ ವಿರೋಧಾಭಾಸವನ್ನು ಎತ್ತಿಹಿಡಿಯುತ್ತಲೇ, ನಮಸ್ಕರಿಸಿ ದಾನವಿತ್ತ ಬಲೀಂದ್ರನನ್ನು ಬಂಧಿಸಿದ್ದು ಯಾವ ನ್ಯಾಯವೆಂದು ದಾಸರು ದೇವರಿಗೇ ಚಾಟಿ ಬೀಸುತ್ತಾರೆ. “ಪುರಂದರವಿಠಲ ಮಾಡಿದ್ದೇ ಮರ್ಯಾದೆ” ಎಂಬಲ್ಲಿ ಅಸಹಾಯಕ ಭಕ್ತನ ನಿಷ್ಠುರ ವ್ಯಂಗ್ಯವಿದೆ. ಜಗನ್ನಾಥದಾಸರಲ್ಲೂ ಈ ದ್ವಂದ್ವ ಮುಂದುವರಿದು, ಒಂದೆಡೆ “ಬಲಿಯ ಮನೆಗೆ ಪೋಗಿ ದಾನ ಬೇಡಿ ತುಳಿದೆ ಪಾತಾಳಕ್ಕೆ” ಎಂದು ಅವತಾರದ ಮಹಿಮೆಯನ್ನು ವರ್ಣಿಸಿದರೆ, ಮತ್ತೊಂದೆಡೆ “ಬಲಿಯ ಬಾಗಿಲ ಕಾಯ್ದ ಜಗನ್ನಾಥ ವಿಠಲ” ಎಂದು ಭಕ್ತಪರಾಧೀನತೆಯನ್ನು ಕೊಂಡಾಡುತ್ತಾರೆ.
ವಾಮನನ ಕಪಟ ನಾಟಕಕ್ಕೆ ಕನಕ-ಸರ್ವಜ್ಞರ ಪಾಟೀಸವಾಲು!
ಹರಿದಾಸ ಪರಂಪರೆಯಲ್ಲಿ ಬಲಿಚಕ್ರವರ್ತಿಯ ವ್ಯಕ್ತಿತ್ವವನ್ನು ಅತ್ಯಂತ ಸಮಗ್ರವಾಗಿ ಮತ್ತು ತಾತ್ವಿಕ ಗಹನತೆಯೊಂದಿಗೆ ಮರುಚಿಂತನೆಗೆ ಒಳಪಡಿಸಿದವರು ಕನಕದಾಸರು. ಅವರ ಕೃತಿಗಳಲ್ಲಿ ಬಲಿಯು ಕೇವಲ ಪುರಾಣದ ಅಸುರನಲ್ಲ; ಆತ ಸತ್ಯನಿಷ್ಠ, ದಾನಶೂರ ಮತ್ತು ‘ಆತ್ಮನಿವೇದನೆ’ಯ ಸಾಕಾರಮೂರ್ತಿ. ಗುರು ಶುಕ್ರಾಚಾರ್ಯರ ಎಚ್ಚರಿಕೆಯನ್ನೂ ಮೀರಿ ಸತ್ಯಕ್ಕೆ ಕಟ್ಟುಬಿದ್ದ ಬಲಿಯ ನಿಷ್ಠೆಯನ್ನು “ಆಡಿದ ಮಾತಿಗೆ ಬಲಿ ನೀಡಲಾಗಿ ಕೆಟ್ಟ, ಮಾಡುವ ದಾನ ತಡೆದು ಶುಕ್ರನು ಕೆಟ್ಟ” ಎಂದು ದಾಖಲಿಸುವ ಕನಕರು, ಮನುಕುಲದ ಔದಾರ್ಯಕ್ಕೆ ಬಲಿಯನ್ನೇ ಮಾನದಂಡವಾಗಿಸುತ್ತಾರೆ. ಕುಲಕ್ಕಿಂತ ಭಕ್ತಿಯೇ ಶ್ರೇಷ್ಠವೆಂಬ ತತ್ವದಡಿ ಬಲಿಯನ್ನು ಪ್ರಹ್ಲಾದ, ಧ್ರುವ, ವಿದುರರ ಸಾಲಿನಲ್ಲಿ ನಿಲ್ಲಿಸಿ, “ಬಲಿ ನಂಬಿ ಪಾತಾಳಲೋಕಕರಸಾದನದೆ” ಎಂದೂ, ಬ್ರಹ್ಮತತ್ವವನ್ನು ಬಲ್ಲ ಜ್ಞಾನಿಗಳ ಸಾಲಿನಲ್ಲಿ “ಭಕುತ ಪ್ರಹ್ಲಾದ ಬಲ್ಲ ಬಲಿಯು ಬಲ್ಲ” ಎಂದೂ ಅಗ್ರಸ್ಥಾನ ನೀಡುತ್ತಾರೆ.
ಬಲಿಯ ಭಕ್ತಿಗೆ ಸೋತು ಜಗದೊಡೆಯನೇ ಆತನ ದ್ವಾರಪಾಲಕನಾದ ಅನುಭಾವಿಕ ಸೋಜಿಗ ಕನಕದಾಸರ ನೆಚ್ಚಿನ ವಸ್ತುವಾಗಿದೆ. “ತಲೆ ಮೇಲೆ ಇರಿಸೆನಲು ತಳತಳಿಸಿ ಅವನ ಬಾಗಿಲ ಕಾಯ್ದ ವಾಮನನೆ ಶರಣೆಂಬೆನು” ಎಂದು ಭಗವಂತನು ಭಕ್ತನಿಗೆ ಶರಣಾಗುವ ಪಾರಮ್ಯವನ್ನು ಅವರು ನಿರೂಪಿಸುತ್ತಾರೆ. ‘ಹರಿಭಕ್ತಿಸಾರ’ದಲ್ಲಿ ಬಲಿಯ ಬಂಧನವು ಶಿಕ್ಷೆಯಾಗಿರದೆ, ಅಹಂಕಾರವನ್ನಳಿಸಿ ಸುತಳಲೋಕದ ಅಧಿಪತ್ಯ ಕರುಣಿಸಿದ ಪರಮಾನುಗ್ರಹವಾಗಿ ದಕ್ಕುತ್ತದೆ.
ಇಷ್ಟಾಗಿಯೂ, ಕನಕದಾಸರ ಅಂತರಂಗದ ಸಾಮಾಜಿಕ ಪ್ರಜ್ಞೆಯು ನಿಂದಾಸ್ತುತಿಯ ನೆಪದಲ್ಲಿ ವಾಮನನ ವಂಚನೆಯನ್ನು ಪ್ರಶ್ನಿಸದೇ ಬಿಡುವುದಿಲ್ಲ. ಡೊಳ್ಳಿನ ಹಾಡಿನ ಧಾಟಿಯಲ್ಲಿ “ಹುಡುಗ ಹಾರುವನಾಗಿ ನಮ ರಂಗ ಬೆಡಗಲಿ ಮುಗಿಲಿಗೆ ಬೆಳೆದಾನ್ಮ್ಯಾ / ಬೆಡಗಲಿ ಮುಗಿಲಿಗೆ ಬೆಳೆದು ಬಲಿಯನ್ನ ಅಡಿಯಿಂದ ಪಾತಾಳಕೊತ್ತ್ಯಾನ್ಮ್ಯಾ” ಎಂದು ಚಿತ್ರಿಸುವ ಕನಕರು, “ಪುಟನೆಗೆದ ಪಾದದಲಿ ಬಲಿಯ ತಲೆಯನು ಮೆಟ್ಟಿ ನಟನೆಯಾಡುವ ವಿದ್ಯೆಯನೆಲ್ಲಿ ಕಲಿತೆಯೊ ಕಪಟ” ಎಂದು ದೇವರನ್ನು ನೇರವಾಗಿ ಕಟಕಟೆಯಲ್ಲಿ ನಿಲ್ಲಿಸುತ್ತಾರೆ. “ನೆಲನ ಬೇಡಲು ಪೋಗಿ ಬಲಿಯ ಭೂಮಿಗೆ ತುಳಿದೆ”, “ಮೋಸದಿ ಬಲಿಯ ದಾನವ ಬೇಡಿ ಅನುದಿನ ಬೇಸರಿಸಿದ ಕಳ್ಳ ಕೊಕೊಕೋ ಎನ್ನಿರೊ” ಎಂದು ಹರಿಯನ್ನು ‘ಕಳ್ಳ’ನೆಂದೇ ಜರಿಯುವಲ್ಲಿ, ದಮನಿತ ಬಲಿಯ ಪರವಾದ ಜನಪದ ಅಂತಃಕರಣ ತೀವ್ರವಾಗಿ ಮಿಡಿಯುತ್ತದೆ. ದಾಸರ ಭಕ್ತಿಯ ಚೌಕಟ್ಟನ್ನು ಮೀರಿ, ಅಪ್ಪಟ ಲೋಕವ್ಯವಹಾರದ ನೆಲೆಯಲ್ಲಿ ನಿಲ್ಲುವ ಸರ್ವಜ್ಞ ಕವಿಯು ದೇವರ ವಿಶ್ವಾಸಾರ್ಹತೆಯನ್ನೇ ಸಾರಾಸಗಟಾಗಿ ತಳ್ಳಿಹಾಕುತ್ತಾನೆ:
ಆರಾರ ನಂಬುವಡೆ । ಆರಯ್ದು ನಂಬುವದು ।
ನಾರಾಯಣನಿಂದ ಬಲಿಕೆಟ್ಟ ।
ಮಿಕ್ಕವರ ನಾರು ನಂಬುವರು ಸರ್ವಜ್ಞ||
ಸಾಕ್ಷಾತ್ ನಾರಾಯಣನನ್ನೇ ನಂಬಿ ಬಲಿ ಸರ್ವಸ್ವವನ್ನೂ ಕಳೆದುಕೊಂಡ ಮೇಲೆ, ಇನ್ನುಳಿದ ಸಾಮಾನ್ಯ ಮನುಷ್ಯರನ್ನು ನಂಬುವುದಾದರೂ ಹೇಗೆ? ಎಂಬ ಸರ್ವಜ್ಞನ ಪ್ರಶ್ನೆಯು, ವಾಮನಾವತಾರದ ‘ದೈವಿಕ ಲೀಲೆ’ಯ ಮುಖವಾಡವನ್ನು ಕಳಚಿ, ಅದನ್ನು ಲೋಕನೀತಿಯ ದೃಷ್ಟಿಯಲ್ಲಿ ಅಕ್ಷಮ್ಯ ನಂಬಿಕೆದ್ರೋಹವೆಂದು ದಾಖಲಿಸುತ್ತದೆ.
ಪಾತಾಳ ಸೀಳಿ ಹಾಲನೊರೆಯಂತೆ ಉಕ್ಕಿದ ಮಣ್ಣಿನ ದೈವ!
ಮಾರ್ಗ ಮತ್ತು ಭಕ್ತಿ ಕಾವ್ಯಗಳ ತಾತ್ವಿಕ ಚರ್ಚೆಗಳೆಲ್ಲ ಮುಗಿದು, ಮಲೆನಾಡು ಮತ್ತು ಕರಾವಳಿಯ ಮಣ್ಣಿನ ಹಾದಿಗೆ ಬಂದರೆ, ಇಲ್ಲಿ ಬಲಿಯು ಪಾತಾಳದ ಕೈದಿಯಲ್ಲ; ಕೃಷಿ ಸಂಸ್ಕೃತಿಯ ಬಾಯ್ದೆರೆಯ ಹಾಡುಗಳಲ್ಲಿ ಫಲವಂತಿಕೆಯ ಅಧಿದೇವತೆಯಾಗಿ ಆರಾಧಿಸಲ್ಪಡುವ ಭೂಮಿತಾಯಿಯ ಮಡಿಲ ಮಗ! ಹಸಲರ ‘ಬಲಿವೀಂದ್ರನ ಪದ’ಗಳಲ್ಲಿ ಬಲಿಯು ಮರ್ತ್ಯಕ್ಕೆ ಬಂದು ತನ್ನ ಪ್ರಜೆಗಳ ಬೆಳೆಗಳನ್ನು ಹರಸುವ ಚಿತ್ರಣವಿದೆ:
ಅಲ್ಲಾಡಿ ಇಲ್ಲಾಡಿ ಬಂದಿಳಿದ ಬಲಿವೀಂದ್ರ ಅಡಿಕೆ ಪೈರಾಗೇ ನಡುದಾನೇ…
ಅಡಿಕೆ ಪೈರೆಲ್ಲಾ ಹಾಯನಾಗಿ…
ಭತ್ತದ ಪೈರಾಗೇ ಹೋದಾನೇ ಬಲಿವೀಂದ್ರ ಭತ್ತದ ಪೈರೆಲ್ಲಾ ಹಾಯನಾಗಿ…
ಮೆಣಸಿನ ಪೈರಾಗೇ ಹೋದಾನೇ ಬಲಿವೀಂದ್ರ ಮೆಣಸಿನ ಪೈರೆಲ್ಲಾ ಹಾಯನಾಗಿ…
ಹೀಗೆ ಪೈರುಗಳ ನಡುವೆ ಸಂಚರಿಸಿ ಸಮೃದ್ಧಿ ತುಂಬುವ ಬಲೀಂದ್ರನು, “ಬಲೀಂದ್ರರಾಯ ತಾನೆದ್ದು ಬರುವಾಗ ಜಡ್ಡು ಜಬರೆಲ್ಲ ಚಿಗುರ್ಯಾವೋ… ಬತ್ತು ಬರಡೆಲ್ಲ ಹೈನಾದೊ” ಎಂಬ ಜನಪದರ ನಂಬಿಕೆಯಂತೆ ಬರಡಾದ ನೆಲವನ್ನೂ ಚಿಗುರಿಸುವ ಸಂಜೀವಿನಿ ಶಕ್ತಿಯಾಗಿದ್ದಾನೆ. ದೀವರ ಜನಪದ ಸಾಹಿತ್ಯದಲ್ಲೂ ಆತ ಭೂಮಿಗೆ ಹೆಜ್ಜೆಯಿಟ್ಟರೆ “ಕಲ್ಲಂತ ಮಳೆಯು ಸುರಿದಾವೆ, ನಮ್ಮೂರ ಹುಲ್ಲುಗರಿಕೆಲ್ಲಾ ಚಿಗುರ್ಯಾವೆ, ಕೆರೆಕಟ್ಟೆಲ್ಲಾ ತುಂಬಿದವೆ” ಎಂಬ ಸಂತಸದ ಉದ್ಗಾರವಿದೆ. ಸಮೃದ್ಧಿಯ ಈ ದೈವಕ್ಕೆ ಹಣ್ಣಡಿಕೆ, ಹಿಂಗಾರ, ಗೇರುಕಾಯಿಗಳಿಂದ ಪೂಜೆ ಸಲ್ಲಿಸಿ, ಹಂಡೆ ತುಂಬಾ ಪಾಯಸದ ಎಡೆಯಿಡುವ ಆಚರಣೆಯು ಕೃಷಿಕರ ಕೃತಜ್ಞತೆಯ ಪ್ರತೀಕವಾಗಿದೆ. ಇನ್ನು ಹವ್ಯಕರ ಹಾಡುಗಳಲ್ಲಿ ಬರುವ “ಅರ್ಧ ಪಾತಾಳದಡಿಯಿಂದ ಉಬ್ಬಿದನೆ ಹಾಲನೊರೆಯಂತೆ… ಸವತೆಹಣ್ಣನ್ನೆ ಮೆಟ್ಟಿ ಏರಿಬಂದನೆ ಬಲಿವೇಂದ್ರ” ಎಂಬ ಸಾಲುಗಳು, ಪಾತಾಳದ ಬಂಧನವನ್ನು ಸೀಳಿ ಹಾಲನೊರೆಯಂತೆ ಭೂಮಿಗೆ ಉಕ್ಕಿಬರುವ ಬಲೀಂದ್ರನ ಜೀವಚೈತನ್ಯವನ್ನು ಕಾವ್ಯಾತ್ಮಕವಾಗಿ ಕಟ್ಟಿಕೊಡುತ್ತವೆ.
ಇದನ್ನು ಓದಿದ್ದೀರಾ?: ದೀಪಾವಳಿ ಬೆಂಕಿ ಅವಾಂತರ: ಮುಂಬೈನಲ್ಲಿ ನ. 25ರವರೆಗೆ ರಾಕೆಟ್, ಆಕಾಶಕ್ಕೆ ಚಿಮ್ಮುವ ಪಟಾಕಿ ಬ್ಯಾನ್!
ವಿಶೇಷವಾಗಿ ಗೊಂಡರ ಬುಡಕಟ್ಟು ಪರಂಪರೆಯಲ್ಲಿ ಬರುವ ‘ಬಲೀಂದ್ರಜ್ಜ-ಕಲೀಂದ್ರಜ್ಜ’ರ ಕಥನವು ಸಂಸ್ಕೃತ ಪುರಾಣವನ್ನು ಬುಡಮೇಲು ಮಾಡುತ್ತದೆ. ಇಲ್ಲಿ ಬಲೀಂದ್ರಜ್ಜನು ಸಕಲ ಜೀವಿಗಳಿಗೂ ಪಡಿ ಅಳೆದು ಅನ್ನ ನೀಡುವ ಸತ್ಯವಂತ ಕೃಷಿಕ. ಆತನ ತಪ್ಪು ಹುಡುಕಲು ಬರುವ ಕಲೀಂದ್ರಜ್ಜನು, ಎಂಬತ್ತು ಕೋಟಿ ಇರುವೆಗಳಲ್ಲಿ ಒಂದನ್ನು ಬಚ್ಚಿಟ್ಟರೂ ಅದರ ಬಾಯಲ್ಲೂ ಅಕ್ಕಿಕಾಳು ಇರುವುದನ್ನು ಕಂಡು ಪರಾಜಿತನಾಗುತ್ತಾನೆ. ಅಂತಿಮವಾಗಿ ಕುತಂತ್ರದಿಂದ ಮೂರು ಗುಡ್ಡೆ ನೆಲವನ್ನು ಅಳೆಯಲು ಬಂದು, ಮುಕ್ಕಾಲು ಹೆಜ್ಜೆ ನೆಲ ಸಾಲದೆಂಬ ನೆಪವೊಡ್ಡಿ ಬಲೀಂದ್ರಜ್ಜನ ಎದೆಯನ್ನೇ ಮೆಟ್ಟಲು ಮುಂದಾಗುತ್ತಾನೆ. ಆಗ ಬಲೀಂದ್ರಜ್ಜನು ಈ ವಂಚಕ ಲೋಕವನ್ನು ಧಿಕ್ಕರಿಸಿ ಹೊರಡುವಾಗ, “ಮಕ್ಕಳೇ, ಸುಗ್ಗಿ ಬೆಳೆಯ ಮುಂದೆ ನನ್ನನ್ನು ನೆನಪಿಸಿಕೊಳ್ಳಿ, ವರ್ಷಕ್ಕೊಮ್ಮೆ ಬರುತ್ತೇನೆ” ಎಂದು ತಾನೇ ಸ್ವತಂತ್ರ ಸಂಕಲ್ಪ ಮಾಡಿ ದೇವಲೋಕಕ್ಕೆ ತೆರಳುತ್ತಾನೆ. ಇಲ್ಲಿ ವಾಮನನ ಪಾರಮ್ಯವಾಗಲಿ, ಬಲಿಯ ದೈನ್ಯತೆಯಾಗಲಿ ಇಲ್ಲ; ಬದಲಾಗಿ ಶ್ರಮಜೀವಿಯೊಬ್ಬ ಭೂಮಾಲೀಕನ ಕುತಂತ್ರಕ್ಕೆ ಬೇಸತ್ತು ನಿರ್ಗಮಿಸುವ ಸ್ವಾಭಿಮಾನವಿದೆ. ಗೊಂಡರ ‘ಬೂರೆ ಹಬ್ಬ’ದ ಧಾನ್ಯಕಲಶ ‘ಬೂರಜ್ಜಿ’ ಹಾಗೂ ತುಳುನಾಡಿನ ಪಾಡ್ದನಗಳ ‘ಭೂಮಿಪುತ್ರ’ ಬಲೀಂದ್ರ ಇವರಿಬ್ಬರೂ ನೆಲಮೂಲದ ತಾಯಿ-ಮಕ್ಕಳ ಕೃಷಿ ಫಲವಂತಿಕೆಯ ಸಂಕೇತಗಳಾಗಿದ್ದಾರೆ.
ವಿಸ್ಮೃತಿಯ ಪಾತಾಳದಲ್ಲಿ ಇಂದ್ರ, ಜನಮನದ ಗದ್ದುಗೆಯಲ್ಲಿ ಬಲೀಂದ್ರ!
ಜನಪದರ ಈ ಮಣ್ಣಿನ ದೈವವು ಆಧುನಿಕ ಕಾಲದ ಕುವೆಂಪು ಅವರ ‘ಬಲಿಪಾಡ್ಯಮಿ’ ಕವಿತೆಗೆ ಬರುವಾಗ, ಈ ಪೌರಾಣಿಕ ಸಂಘರ್ಷಕ್ಕೆ ಅತ್ಯಂತ ಪ್ರಖರವಾದ ಮಾನವತಾವಾದಿ ತಿರುವು ದೊರೆಯುತ್ತದೆ:
ಕರುಬುವಿಂದ್ರನನುಳುಪೆ ಹರಿಯು ವಾಮನನಾಗಿ
ಮೂರಡಿ ನೆಲನ ಬೇಡೆ ಧಾರೆಯೆರೆದೊಲಿದಿತ್ತೆ;
ಕೈತವದೊಳವನೋ ತ್ರಿವಿಕ್ರಮನೆ ತಾನಾಗಿ
ಸರ್ವಸ್ವವನು ಸುಲಿದು ಪಾತಾಳದಡಿಗೊತ್ತೆ,
ದೇವನನ್ಯಾಯವನು, ಹೇ ಮಹೋದಾರ ಬಲಿ
ಕೃಪೆಯೆಂದು ಸಹಿಸಿದಾತನು ನೀನಸುರನಲ್ಲ!
ದೇವತೆಗಳಾಚರಿಸೆ ರಾಕ್ಷಸರ ರೀತಿಯಲಿ
ದೇವತ್ವವನು ಹೊರೆದ ನೀಂ ದೇವನೆಮಗೆಲ್ಲ!
ಹರಿ ತುಳಿದರೇನಂದು? ನರನು ಪೂಜಿಪನಿಂದು!
ಹೆರರ ಮೇಲ್ಮೆಗೆ ಕರುಬಿ ಕುದಿದಿಂದ್ರನಿಂದೆಲ್ಲಿ?
ಪೂಜಿಸುವರಾರಾತನನು? ಪಾಳ್ಗುಡಿಯ ಹೋಲಿ
ಹೂವು ಗಂಟೆಗಳಿಲ್ಲದಾಗಿಹನು; ಎಂದೆಂದು
ನರರ ವಿಸ್ಮೃತಿಯ ಪಾತಾಳದಂಧತೆಯಲ್ಲಿ
ಬಿದ್ದಿಹನು ಅಃ ದೇವನೆಂತೂ ಕೃಪಾಶಾಲಿ!
ಕುವೆಂಪು ಇಲ್ಲಿ ದೇವಾಸುರ ಕಲ್ಪನೆಯನ್ನೇ ತಲೆಕೆಳಗು ಮಾಡುತ್ತಾರೆ. ದೇವತೆಗಳೇ ವಂಚಕರಾಗಿ ವರ್ತಿಸಿದಾಗ, ತ್ಯಾಗ ಮತ್ತು ಕ್ಷಮೆಯ ಮೂಲಕ ನಿಜವಾದ ‘ದೇವತ್ವ’ವನ್ನು ಮೆರೆದ ಬಲಿಯೇ ಮನುಕುಲದ ಆರಾಧ್ಯದೈವ. ಅಸೂಯಾಪರ ಇಂದ್ರನು ಇಂದು ಜನರ ವಿಸ್ಮೃತಿಯ ಪಾತಾಳಕ್ಕೆ ತಳ್ಳಲ್ಪಟ್ಟಿದ್ದರೆ, ಹರಿಯಿಂದ ತುಳಿಸಿಕೊಂಡ ಬಲಿಯು ಜನಮಾನಸದಲ್ಲಿ ಪೂಜಿತನಾಗಿದ್ದಾನೆ ಎನ್ನುವ ಮೂಲಕ ಕುವೆಂಪು ಆತನಿಗೆ ಚಾರಿತ್ರಿಕ ಕಾವ್ಯನ್ಯಾಯವನ್ನು ಒದಗಿಸಿದ್ದಾರೆ.

ಬಲಿಯೆಂಬ ಜೀವಂತ ಪ್ರತಿರೋಧ
ಬಲಿಚಕ್ರವರ್ತಿಯು ಪಾತಾಳಕ್ಕೆ ತಳ್ಳಲ್ಪಟ್ಟ ಒಬ್ಬ ಪೌರಾಣಿಕ ಅಸುರ ಮಾತ್ರವಲ್ಲ; ಕನ್ನಡ ಸಾಂಸ್ಕೃತಿಕ ಸಂದರ್ಭದಲ್ಲಿ ಯಜಮಾನಿಕೆಯ ಹುನ್ನಾರಗಳನ್ನು ಸದಾ ಪ್ರಶ್ನಿಸುತ್ತಲೇ ಬಂದಿರುವ ಸೈದ್ಧಾಂತಿಕ ಪ್ರಜ್ಞೆ. ಮೌಖಿಕ ಇತಿಹಾಸದ ಸೂತಕದಿಂದ ಮೊದಲ್ಗೊಂಡು ಆಧುನಿಕ ಕಾವ್ಯದ ಮಾನವತಾವಾದದವರೆಗೆ ಬಲಿಯ ಕಥನವು ಪಡೆದುಕೊಂಡಿರುವ ಪಲ್ಲಟಗಳು, ಅಧಿಕಾರ ಕೇಂದ್ರಗಳು ಹೆಣೆದ ‘ಲೀಲೆ’ಯ ಮುಖವಾಡವನ್ನು ಕಳಚಿ, ಅಂಚಿಗೆ ತಳ್ಳಲ್ಪಟ್ಟವರ ನೈತಿಕ ವಿಜಯವನ್ನು ಸ್ಥಾಪಿಸುತ್ತಲೇ ಬಂದಿವೆ. ಸತ್ಯನಿಷ್ಠೆ, ಮಹೋದಾರತೆ ಮತ್ತು ಶ್ರಮಸಂಸ್ಕೃತಿಯ ಫಲವಂತಿಕೆಯಾಗಿ ಸಾವನ್ನು ಗೆದ್ದು ಜನಮಾನಸದಲ್ಲಿ ನೆಲೆಗೊಂಡಿರುವ ಬಲಿ ಕೇವಲ ಸೋಲಿನ ಸಂಕೇತವಲ್ಲ; ಆತ ಚಾರಿತ್ರಿಕವಾಗಿ ಪ್ರಭುತ್ವದ ವಂಚನೆಯನ್ನು ಬಯಲು ಮಾಡುವ ಜೀವಂತ ಪ್ರತಿರೋಧ. ಅಂದು ನಮ್ಮ ರುದ್ರಜ್ಜಿ ವಿಜಯಿಗಳ ಹಬ್ಬವನ್ನು ಧಿಕ್ಕರಿಸಿ ಆರಿಸಿದ ದೀಪವು, ಇಂದು ಜನಪದರ ಹೊಲಗಳಲ್ಲಿ ಬಲೀಂದ್ರನ ಹೆಸರಿನಲ್ಲಿ ಹಸಿರು ಪೈರಾಗಿ, ಕುವೆಂಪು ಅವರ ಕಾವ್ಯದಲ್ಲಿ ಮಾನವತೆಯ ಬೆಳಕಾಗಿ ಮತ್ತೆಲ್ಲೋ ಪ್ರಜ್ವಲಿಸುತ್ತಲೇ ಇದೆ!

ಡಾ. ರವಿ ಎಂ. ಸಿದ್ಲಿಪುರ
ಕುವೆಂಪು ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಕನ್ನಡ ಪತ್ರಿಕೋದ್ಯಮದಲ್ಲಿ ಡಿಪ್ಲೊಮೋ ಪದವಿ, 'ಕನ್ನಡ ಮಹಾಭಾರತ ಕಾವ್ಯಗಳಲ್ಲಿ ಪ್ರಭುತ್ವ, ಯುದ್ಧ ಮತ್ತು ಜನತೆ' ಎಂಬ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. 'ಪರ್ಯಾಯ' ಎಂಬ ವಿಮರ್ಶಾ ಲೇಖನಗಳ ಸಂಕಲನ, 'ಶಾಸನ ಓದು', 'ವಿಮರ್ಶೆ ಓದು' ಪುಸ್ತಕಗಳು ಪ್ರಕಟಗೊಂಡಿವೆ. ಯುದ್ಧ ಪರಿಕಲ್ಪನೆಯನ್ನು ಪ್ರಧಾನ ಆಶಯವನ್ನಾಗಿಟ್ಟುಕೊಂಡ 'ಸಮರ ವ್ಯಾಪಾರ' ಎಂಬ ಪುಸ್ತಕ ಮುದ್ರಣ ಹಂತದಲ್ಲಿದೆ. ಶಾಸ್ತ್ರೀಯ ಕನ್ನಡ ಸಾಹಿತ್ಯ ಇವರ ಆಸಕ್ತಿ ಕ್ಷೇತ್ರವಾಗಿದೆ.



