ಬಿಡದಿ ಟೌನ್‌ಶಿಪ್ ಯೋಜನೆಗೆ ಭೂಮಿ ಕೊಡಲು ಉದ್ದೇಶಿತ ಪ್ರದೇಶದ 80% ರೈತರು ಒಪ್ಪಿದ್ದಾರೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ. ಸರ್ಕಾರ ತನ್ನ ಈ ವಾದವನ್ನು ಬಹಿರಂಗವಾಗಿ ಸಾಬೀತುಪಡಿಸಲಿ ಎಂದು ಸಂಯುಕ್ತ ಹೋರಾಟ – ಕರ್ನಾಟಕ ಆಗ್ರಹಿಸಿದೆ. ಎಷ್ಟು ರೈತರು ಯೋಜನೆಗೆ ವಿರುದ್ಧವಿದ್ದಾರೆ ಎಂಬುದನ್ನು ಅರಿಯಲು ಸರ್ಕಾರವು ಬಹಿರಂಗ ಜನಸಾಕ್ಷಿ ವಿಚಾರಣೆಯಲ್ಲಿ (ಪಬ್ಲಿಕ್ ಹಿಯರಿಂಗ್) ಸರ್ಕಾರ ಖುದ್ದು ಭಾಗಿಯಾಗಬೇಕು ಎಂದು ಸಂಘಟನೆಯು ಪಂಥಾಹ್ವಾನ ನೀಡಿದೆ.
ಸಂಯುಕ್ತ ಹೋರಾಟ ಕರ್ನಾಟಕ ವೇದಿಕೆಯು ಜುಲೈ 23ರಂದು ಬೆಳಿಗ್ಗೆ 10.30ಕ್ಕೆ ಬಿಡದಿ ಹೋಬಳಿಯ ಬಾಗಮಂಗಲದಲ್ಲಿ ಬಹಿರಂಗ ಪಬ್ಲಿಕ್ ಹಿಯರಿಂಗ್ ಆಯೋಜಿಸಿದೆ. ಈ ಕಾರ್ಯಕ್ರಮಕ್ಕೆ ನಿವೃತ್ತ ನ್ಯಾಯಮೂರ್ತಿ ಎ. ಗೋಪಾಲಗೌಡ ನೇತೃತ್ವ ವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಹಲವಾರು ರೈತರು ತಮ್ಮ ಅಭಿಪ್ರಾಯ, ಅಳಲುಗಳನ್ನು ತೋಡಿಕೊಳ್ಳಲಿದ್ದಾರೆ. ರೈತರನ್ನು ಆಲಿಸುವ ಈ ಪಬ್ಲಿಕ್ ಹಿಯರಿಂಗ್‌ಗೆ ಸರ್ಕಾರ, ಜಿ-ಬಿಡಿ ಅಧಿಕಾರಿಗಳು ಹಾಗೂ ಯೋಜನೆಗೆ ಬೆಂಬಲ ನೀಡುವವರು ಮುಕ್ತವಾಗಿ ಭಾಗವಹಿಸಬೇಕು ಎಂದು ವೇದಿಕೆ ಆಗ್ರಹಿಸಿದೆ.
ಗುರುವಾರ ನಡೆಯಲಿರುವ ಪಬ್ಲಿಕ್ ಹಿಯರಿಂಗ್ ಕುರಿತು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ವೇದಿಕೆಯ ಮುಖಂಡರು, “ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ಮಾಡುತ್ತಿರುವ ಪ್ರತಿಯೊಂದು ಹೇಳಿಕೆಯನ್ನು ಜನರ ಮುಂದೆಯೇ ಪರಿಶೀಲಿಸುವ ಸಮಯ ಬಂದಿದೆ. ರೈತರ ಒಪ್ಪಿಗೆಯೊಂದಿಗೆ ಯೋಜನೆ ಜಾರಿಯಾಗುತ್ತಿದೆ ಎಂಬ ಸರ್ಕಾರದ ವಾದಕ್ಕೆ ಯಾವುದೇ ವಾಸ್ತವಿಕ ಆಧಾರವಿಲ್ಲ. ಜನಸಾಕ್ಷಿ ವಿಚಾರಣೆಯಲ್ಲಿ ಎರಡೂ ಕಡೆಯವರು ತಮ್ಮ ದಾಖಲೆಗಳನ್ನು ಮಂಡಿಸಲಿ, ಬಳಿಕ ಸತ್ಯ ಜನರ ಮುಂದೆಯೇ ಬಹಿರಂಗವಾಗುತ್ತದೆ” ಎಂದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ನಾಯಕ ನೂರ್ ಶ್ರೀಧರ್, “ನಾವು ಸರ್ಕಾರಕ್ಕೂ, ಅಧಿಕಾರಿಗಳಿಗೂ ಮುಕ್ತ ಆಹ್ವಾನ ನೀಡುತ್ತಿದ್ದೇವೆ. ರೈತರು ಒಪ್ಪಿಗೆ ನೀಡಿದ್ದಾರೆ ಎನ್ನುವ ದಾಖಲೆಗಳು ನಿಮ್ಮ ಬಳಿ ಇದ್ದರೆ ಅವುಗಳನ್ನು ಜನರ ಮುಂದೆ ಮಂಡಿಸಿ. ಅಗತ್ಯವಿದ್ದರೆ ಜ್ಯೂರಿಯ ಮುಂದೆ ನಿಮ್ಮ ಅಭಿಪ್ರಾಯಗಳನ್ನೂ ಹೇಳಿ. ನಮಗೆ ಕದ್ದುಮುಚ್ಚಿ ಏನನ್ನೂ ಮಾಡುವ ಅಗತ್ಯವಿಲ್ಲ. ಸತ್ಯ ಏನು ಎಂಬುದು ನಮಗೆ ಗೊತ್ತಿದೆ. 80%ಗೂ ಹೆಚ್ಚು ರೈತರು ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅದು ನಾಳೆಯೇ ಸಾಬೀತಾಗುತ್ತದೆ” ಎಂದು ಹೇಳಿದರು.
ಯೋಜನೆಗೆ ಬೆಂಬಲ ವ್ಯಕ್ತಪಡಿಸುತ್ತಿರುವವರಲ್ಲಿ ಬಹುತೇಕರು ನಿಜವಾದ ರೈತರಲ್ಲ ಎಂದು ಆರೋಪಿಸಿದ ಅವರು, “ಯೋಜನೆ ಪರವಾಗಿ ಮಾತನಾಡುತ್ತಿರುವವರಲ್ಲಿ ಅನೇಕರು ರಿಯಲ್ ಎಸ್ಟೇಟ್ ಹೂಡಿಕೆದಾರರು ಮತ್ತು ಇನ್ವೆಸ್ಟರ್‌ಗಳು. ಲಾಭದ ದೃಷ್ಟಿಯಿಂದ ಯೋಜನೆಗೆ ಬೆಂಬಲಿಸುತ್ತಿದ್ದಾರೆ. ಆದರೆ ನಿಜವಾದ ರೈತರು ಮೂರು ಪಕ್ಷಗಳ ಸರ್ಕಾರಗಳ ಅವಧಿಯಲ್ಲೂ ಇದೇ ಯೋಜನೆಯನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಕುಮಾರಸ್ವಾಮಿ ಸರ್ಕಾರದಲ್ಲೂ ವಿರೋಧಿಸಿದ್ದರು, ಬಿಜೆಪಿ ಮುಂದುವರಿಸಿದಾಗಲೂ ವಿರೋಧಿಸಿದರು, ಈಗ ಕಾಂಗ್ರೆಸ್ ಸರ್ಕಾರದಲ್ಲೂ ವಿರೋಧಿಸುತ್ತಿದ್ದಾರೆ. ಹೀಗಾಗಿ ಇದು ರಾಜಕೀಯ ಪಕ್ಷಗಳ ನಡುವಿನ ಹೋರಾಟವಲ್ಲ; ಸರ್ಕಾರ ಮತ್ತು ರೈತರ ನಡುವಿನ ಹೋರಾಟ” ಎಂದು ಹೇಳಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಉದ್ದೇಶಿಸಿ ಮಾತನಾಡಿದ ನೂರ್ ಶ್ರೀಧರ್, “ನೀವು ಯಾಕೆ ಮತ್ತೆ ಮತ್ತೆ ಕುಮಾರಸ್ವಾಮಿ ಅವರನ್ನೇ ಚರ್ಚೆಗೆ ಆಹ್ವಾನಿಸುತ್ತಿದ್ದೀರಿ? ರೈತರನ್ನೇ ಕರೆದು ಮುಖಾಮುಖಿಯಾಗಿ ಮಾತನಾಡಿ. ರೈತರ ಜೊತೆ ಮಾತನಾಡಲು ಏನು ಭಯ? ನೀವು ಒಂದು ಕಡೆ ರೈತರ ಒಪ್ಪಿಗೆ ಇಲ್ಲದೆ ಭೂಮಿ ಪಡೆಯುವುದಿಲ್ಲ ಎಂದು ಹೇಳುತ್ತೀರಿ. ಇನ್ನೊಂದು ಕಡೆ ಭೂಸ್ವಾಧೀನಕ್ಕೆ ಅಂತಿಮ ನೋಟಿಸ್ ಕಳುಹಿಸುತ್ತೀರಿ. ರೈತರು ಯಾವುದನ್ನು ನಂಬಬೇಕು” ಎಂದು ಪ್ರಶ್ನಿಸಿದರು.
ದಸಂಸ ನಾಯಕ ಗುರುಪ್ರಸಾದ್ ಕೆರಗೋಡು ಮಾತನಾಡಿ, “ಬಿಡದಿ ಟೌನ್‌ಶಿಪ್‌ಗೆ ಗುರುತಿಸಲಾಗಿರುವ ಪ್ರದೇಶವನ್ನು ಬರಡುಭೂಮಿ ಎಂದು ಸರ್ಕಾರ ಹೇಳುತ್ತಿರುವುದು. ಅದು ಅತ್ಯಂತ ಫಲವತ್ತಾದ ಕೃಷಿಭೂಮಿ. ರೈತರ ಹಿತ ಕಾಪಾಡುವುದು ನಮ್ಮ ಜವಾಬ್ದಾರಿ. ದಲಿತರು ಸೇರಿದಂತೆ ನೂರಾರು ಕುಟುಂಬಗಳು ಅಲ್ಲಿ ಕೃಷಿಯನ್ನೇ ನಂಬಿಕೊಂಡು ಬದುಕುತ್ತಿವೆ. ಆ ಭೂಮಿಯನ್ನು ಉಳಿಸಿಕೊಳ್ಳುವ ಹೋರಾಟವನ್ನು ನಾವು ಮುಂದುವರಿಸುತ್ತೇವೆ” ಎಂದರು.
ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, “ದೇಶದಾದ್ಯಂತ ರೈತರ ಮತ್ತು ಕಾರ್ಪೊರೇಟ್ ವಿರೋಧಿ ಹೋರಾಟಗಳು ಒಂದಕ್ಕೊಂದು ಸಂಬಂಧ ಹೊಂದಿವೆ. ದೆಹಲಿ ರೈತ ಹೋರಾಟ ಐತಿಹಾಸಿಕವಾಗಿತ್ತು. ಬಿಡದಿಯಲ್ಲಿ ಮಹಿಳೆಯರು ಭೂಮಿ ಕಿತ್ತುಕೊಳ್ಳಲು ಬರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಕ್ರೋಶವನ್ನು ನಾವು ಅರ್ಥ ಮಾಡಿಕೊಳ್ಳಬೇಕು; ಆದರೆ ಹಿಂಸೆಗೆ ನಾವು ಬೆಂಬಲ ಕೊಡುವುದಿಲ್ಲ. ಇದು ಕಾರ್ಪೊರೇಟ್ ಮತ್ತು ಬಂಡವಾಳಶಾಹಿ ಮಾದರಿಯ ವಿರುದ್ಧದ ಜನರ ಪ್ರತಿರೋಧ” ಎಂದರು.
ಕೊಪ್ಪಳದಲ್ಲಿ ಬಾಂಡೋಟ ಕಂಪನಿ ವಿರುದ್ಧ ನಡೆದ ಚಳುವಳಿಯನ್ನು ಉಲ್ಲೇಖಿಸಿದ ಅವರು, “ರೈತರ ಭೂಮಿ, ಸಾರ್ವಜನಿಕ ಕೆರೆ ಮತ್ತು ರಸ್ತೆಗಳನ್ನು ಅತಿಕ್ರಮಿಸುವ ಪ್ರಯತ್ನಗಳಿಗೆ ಜನರು ತಿರುಗೇಟು ನೀಡುತ್ತಿದ್ದಾರೆ. ಸರ್ಕಾರ ಸ್ಪಂದಿಸದಿದ್ದರೆ ಜನರೇ ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕಾರ್ಪೊರೇಟ್ ಕಂಪನಿಗಳಿಗೆ ಹಣವಿದೆ ಎಂಬ ಕಾರಣಕ್ಕೆ ರೈತರ ಭೂಮಿಯನ್ನು ಕಬಳಿಸಲು ಅವಕಾಶ ನೀಡಬಾರದು. ಇದು ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ” ಎಂದು ಹೇಳಿದರು.
ಬಿಡದಿಯ ರೈತ ಪ್ರಕಾಶ್ ಮಾತನಾಡಿ, “ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೀಡಿರುವ ಭರವಸೆ ಮತ್ತು ಜಿ-ಬಿಡಿ ಅಧಿಕಾರಿಗಳ ನಡೆ ನಡುವೆ ಸಂಪೂರ್ಣ ವಿರೋಧಾಭಾಸವಿದೆ. ಮುಖ್ಯಮಂತ್ರಿಗಳು ಬಲವಂತದ ಭೂಸ್ವಾಧೀನ ಮಾಡುವುದಿಲ್ಲ ಎನ್ನುತ್ತಾರೆ. ಆದರೆ ಜಿ-ಬಿಡಿ ಅಧಿಕಾರಿಗಳು ನೋಟಿಸ್ ಮೇಲೆ ನೋಟಿಸ್ ಕಳುಹಿಸುತ್ತಿದ್ದಾರೆ. ಮುಖ್ಯಮಂತ್ರಿಗಳ ಮಾತಿಗೆ ಬೆಲೆ ಇಲ್ಲವೇ? ಅಧಿಕಾರಿಗಳು ಮುಖ್ಯಮಂತ್ರಿಗಿಂತ ದೊಡ್ಡವರೇ” ಎಂದು ಪ್ರಶ್ನಿಸಿದರು.
“ಭೂಮಿಯ ವಿಸ್ತೀರ್ಣವನ್ನು ಕಡಿಮೆ ತೋರಿಸಿ ಕಡಿಮೆ ಪರಿಹಾರ ನೀಡುವ ಪ್ರಯತ್ನಗಳು ನಡೆಯುತ್ತಿವೆ. ಕುಟುಂಬಗಳ ಮೇಲೆ ಒತ್ತಡ, ಪ್ರಕರಣ ದಾಖಲಿಸುವ ಬೆದರಿಕೆ, ವೈಯಕ್ತಿಕ ದೌರ್ಬಲ್ಯಗಳನ್ನು ಬಳಸಿಕೊಂಡು ರೈತರನ್ನು ಮಣಿಸುವ ಕೆಲಸ ನಡೆಯುತ್ತಿದೆ. ಪೊಲೀಸ್ ಇಲಾಖೆಯನ್ನೂ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ” ಎಂದರು.
ಸಲಹಾ ಸಮಿತಿ ವರದಿ ಬರುವವರೆಗೆ ಯಾವುದೇ ಭೂಸ್ವಾಧೀನ ಪ್ರಕ್ರಿಯೆ ಮುಂದುವರಿಸದಂತೆ ಸರ್ಕಾರ ತಕ್ಷಣ ಜಿ-ಬಿಡಿಗೆ ನಿರ್ದೇಶನ ನೀಡಬೇಕು ಎಂದು ರೈತರ ಪರವಾಗಿ ಅವರು ಆಗ್ರಹಿಸಿದರು.
ಸಂಯುಕ್ತ ಹೋರಾಟ ಕರ್ನಾಟಕ ಸಂಘರ್ಷ ಸಮಿತಿ ಪ್ರಕಟಿಸಿರುವ ಆಹ್ವಾನದ ಪ್ರಕಾರ, ಜುಲೈ 23ರಂದು ನಡೆಯಲಿರುವ ಜನಸಾಕ್ಷಿ ವಿಚಾರಣೆಯಲ್ಲಿ ರೈತರು, ಜನಪ್ರತಿನಿಧಿಗಳು, ಅಧಿಕಾರಿಗಳು, ಸರ್ಕಾರದ ಪ್ರತಿನಿಧಿಗಳು, ಯೋಜನೆ ಪರ ಹಾಗೂ ವಿರೋಧ ಪಕ್ಷದವರು ಸೇರಿದಂತೆ ಎಲ್ಲರಿಗೂ ಭಾಗವಹಿಸುವ ಅವಕಾಶ ನೀಡಲಾಗಿದೆ. ಜನರ ಮುಂದೆ ದಾಖಲೆಗಳನ್ನು ಇಟ್ಟು ಸತ್ಯಾಸತ್ಯತೆ ನಿರ್ಧರಿಸಿಕೊಳ್ಳುವ ಈ ಪ್ರಕ್ರಿಯೆಗೆ ಸರ್ಕಾರವೂ ಹಾಜರಾಗಬೇಕು ಎಂದು ಹೋರಾಟಗಾರರು ಒತ್ತಾಯಿಸಿದರು.




