ನೈರುತ್ಯ ರೈಲ್ವೆ ಇಲಾಖೆಯು ತನ್ನ ಉದ್ಯೋಗಿಗಳ ಪದೋನ್ನತಿ ಪರೀಕ್ಷೆಗಳಲ್ಲಿ ಮತ್ತೊಮ್ಮೆ ಕನ್ನಡ ಭಾಷೆಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಇಲಾಖೆಯ ಈ ಧೋರಣೆಯನ್ನು ‘ಕನ್ನಡಿಗರ ಮೇಲೆ ಹೂಡಲಾಗಿರುವ ಮೋಸದ ಯುದ್ಧ’ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಹೇಳಿದ್ದಾರೆ. “ರೈಲ್ವೆ ಆಡಳಿತ ಮಂಡಳಿ ತಕ್ಷಣವೇ ತನ್ನ ತಪ್ಪು ತಿದ್ದಿಕೊಳ್ಳದಿದ್ದರೆ ಹಿಂದೆಂದೂ ಕಾಣದ ಉಗ್ರ ಸ್ವರೂಪದ ಹೋರಾಟ ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.
ನೈರುತ್ಯ ರೈಲ್ವೆಯ ಮೈಸೂರು ವಿಭಾಗವು 2026ರ ಜೂನ್ 4ರಂದು ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅದರ ಪ್ರಕಾರ, ಲೆವೆಲ್-5ರ ಅಡಿಯಲ್ಲಿ ‘ಗುಡ್ಸ್ ಟ್ರೇನ್ ಮ್ಯಾನೇಜರ್’ ಹುದ್ದೆಗಳನ್ನು ಭರ್ತಿ ಮಾಡಲು 2026ರ ಜೂನ್ 25 ರಂದು ಕಂಪ್ಯೂಟರ್ ಆಧಾರಿತ (CBT) ಪದೋನ್ನತಿ ಪರೀಕ್ಷೆಯನ್ನು ಆಯೋಜಿಸಿದೆ. ಮೈಸೂರು ಮಾತ್ರವಲ್ಲದೆ ಹುಬ್ಬಳ್ಳಿ ಮತ್ತು ಬೆಂಗಳೂರು ವಿಭಾಗಗಳಲ್ಲೂ ಈ ಪರೀಕ್ಷೆಗಳು ನಡೆಯುತ್ತಿವೆ.
“ಈ ಕಠಿಣ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಮಾತ್ರ ಸಿದ್ಧಪಡಿಸಲಾಗುತ್ತಿದೆ. ಕನ್ನಡದಲ್ಲಿ ಪರೀಕ್ಷೆ ಬರೆಯುವ ಅವಕಾಶವನ್ನು ನಿರಾಕರಿಸಲಾಗಿದೆ. 110 ಪ್ರಶ್ನೆಗಳನ್ನು ಒಳಗೊಂಡಿರುವ ಮತ್ತು ತಪ್ಪು ಉತ್ತರಗಳಿಗೆ ಮೈನಸ್ ಮಾರ್ಕಿಂಗ್ (ಋಣಾತ್ಮಕ ಅಂಕ) ಇರುವ ಇಂತಹ ಕಠಿಣ ಪರೀಕ್ಷೆಯಲ್ಲಿ ಮಾತೃಭಾಷೆಗೆ ಅವಕಾಶ ನೀಡದಿರುವುದು ಕನ್ನಡಿಗ ಉದ್ಯೋಗಿಗಳನ್ನು ಉದ್ದೇಶಪೂರ್ವಕವಾಗಿ ತುಳಿಯುವ ಸಂಚಾಗಿದೆ” ಎಂದು ಕರವೇ ಆರೋಪಿಸಿದೆ.
“ರೈಲ್ವೆ ಇಲಾಖೆಯ ಪರೀಕ್ಷೆಗಳಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಸೇರಿಸಬೇಕು ಎಂದು ಕರವೇ ನಿರಂತರವಾಗಿ ಪ್ರತಿಭಟನೆಗಳ ಮೂಲಕ ಒತ್ತಾಯಿಸುತ್ತಾ ಬಂದಿದೆ. ರೈಲ್ವೆ ಬೋರ್ಡ್ ಮತ್ತು ಕೇಂದ್ರ ಸರ್ಕಾರಕ್ಕೆ ಹತ್ತಾರು ಬಾರಿ ಮನವಿ ಸಲ್ಲಿಸಿದರೂ ನಮ್ಮ ಹಕ್ಕುಗಳನ್ನು ನಿರ್ಲಕ್ಷಿಸಲಾಗುತ್ತಿದೆ” ಎಂದು ಟಿ.ಎ. ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ರೈಲ್ವೆಯಲ್ಲಿ ಉನ್ನತ ಹುದ್ದೆಗೇರಲು ನೂರಾರು ಕನ್ನಡಿಗ ಉದ್ಯೋಗಿಗಳು ಅರ್ಹರಿದ್ದರೂ, ಅವರಿಗೆ ಮಾತೃಭಾಷೆಯಲ್ಲಿ ಪರೀಕ್ಷೆ ಬರೆಯುವ ಸಮಾನ ಅವಕಾಶವನ್ನು ಕಿತ್ತುಕೊಳ್ಳಲಾಗಿದೆ. ಭಾರತದ ಇತರ ರಾಜ್ಯಗಳಲ್ಲಿ ಅಲ್ಲಿನ ಪ್ರಾದೇಶಿಕ ಭಾಷೆಗಳಿಗೆ ಗೌರವ ನೀಡುವ ರೈಲ್ವೆ ಇಲಾಖೆ, ಕರ್ನಾಟಕದಲ್ಲಿ ಮಾತ್ರ ಕನ್ನಡವನ್ನು ನಿರಾಕರಿಸುತ್ತಿರುವುದು ಸ್ಪಷ್ಟ ತಾರತಮ್ಯ ನೀತಿಯಾಗಿದೆ” ಎಂದು ಅವರು ಹೇಳಿದ್ದಾರೆ.
ರೈಲ್ವೆ ಮಂಡಳಿಗೆ ನೇರ ಸಂದೇಶ ರವಾನಿಸಿರುವ ಕರವೇ ರಾಜ್ಯಾಧ್ಯಕ್ಷರು, “ಪರೀಕ್ಷೆಯನ್ನು ಕನ್ನಡದಲ್ಲಿಯೂ ನಡೆಸದ ಹೊರತು, ಜೂನ್ 25 ರಂದು ಯಾವುದೇ ಕಾರಣಕ್ಕೂ ಈ ಪರೀಕ್ಷೆಯನ್ನು ರಾಜ್ಯದಲ್ಲಿ ನಡೆಸಲು ಬಿಡುವುದಿಲ್ಲ. ಮೈಸೂರು, ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ದೊಡ್ಡ ಪ್ರಮಾಣದ ಪ್ರತಿಭಟನೆಗಳು ತಾರಕಕ್ಕೇರಿ ಅನಾಹುತಗಳು ಅಥವಾ ಗಲಭೆಗಳು ಸಂಭವಿಸಿದರೆ ಅದಕ್ಕೆ ರೈಲ್ವೆ ಇಲಾಖೆಯೇ ಸಂಪೂರ್ಣ ಹೊಣೆಯಾಗಬೇಕಿರುತ್ತದೆ. ಈ ಅನಾಹುತಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ಯಾವುದೇ ರೀತಿಯಲ್ಲಿ ಜವಾಬ್ದಾರಿಯಾಗುವುದಿಲ್ಲ” ಎಂದು ಗಂಭೀರ ಎಚ್ಚರಿಕೆ ನೀಡಿದ್ದಾರೆ.
ಕರವೇಯ ಪ್ರಮುಖ ಬೇಡಿಕೆಗಳು:
- ಜೂನ್ 25ರಂದು ನಿಗದಿಯಾಗಿರುವ ತಾರತಮ್ಯದ ಪದೋನ್ನತಿ ಪರೀಕ್ಷೆಯನ್ನು ತಕ್ಷಣವೇ ರದ್ದುಗೊಳಿಸಬೇಕು.
- ಪ್ರಶ್ನೆಪತ್ರಿಕೆಯಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಸೇರಿಸುವ ಮೂಲಕ ಪರೀಕ್ಷೆಯನ್ನು ಮುಂದೂಡಬೇಕು.
- ರೈಲ್ವೆ ಇಲಾಖೆಯ ಎಲ್ಲ ನೇಮಕಾತಿ ಮತ್ತು ಪದೋನ್ನತಿ ಪರೀಕ್ಷೆಗಳು ಕಡ್ಡಾಯವಾಗಿ ಕನ್ನಡದಲ್ಲೇ ನಡೆಯಬೇಕು.



