‘ಹೆಚ್ಚು ತೆರಿಗೆ ಕೊಟ್ಟ ಮಾತ್ರಕ್ಕೆ ಹೆಚ್ಚು ಅನುದಾನ ಕೊಡಲಾಗದು’! ನಿರ್ಮಲಾ ದಾರ್ಷ್ಟ್ಯ – ಒಕ್ಕೂಟ ವ್ಯವಸ್ಥೆಗೆ ಕುತ್ತು

Date:

“ಹೆಚ್ಚು ತೆರಿಗೆ ಪಾಲು ಕೊಡುತ್ತಿದ್ದಾರೆ ಎಂದ ಮಾತ್ರಕ್ಕೆ ಆ ರಾಜ್ಯಕ್ಕೆ ಹೆಚ್ಚು ಅನುದಾನ ಅಥವಾ ಪಾಲು ಕೊಡಲು ಸಾಧ್ಯವಿಲ್ಲ” – ಇದು ಭಾನುವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದ ವಿಚಾರವಾಗಿ ನೀಡಿದ ಹೇಳಿಕೆ. ಅವರ ಈ ಮಾತುಗಳು ಕೇವಲ ಒಂದು ರಾಜಕೀಯ ಹೇಳಿಕೆಯಲ್ಲ; ಬದಲಾಗಿ ಒಕ್ಕೂಟ ವ್ಯವಸ್ಥೆಯ ತತ್ವಗಳನ್ನೇ ಅಣಕಿಸುವ ಉದ್ಧಟತನ. ದೇಶದ ಆರ್ಥಿಕತೆಗೆ ಅತಿ ದೊಡ್ಡ ಇಂಧನವಾಗಿ ಕೆಲಸ ಮಾಡುತ್ತಿರುವ ರಾಜ್ಯವೊಂದನ್ನು ಅತ್ಯಂತ ಲಘುವಾಗಿ ಕಾಣುವ ಈ ದಾರ್ಷ್ಟ್ಯದ ಧೋರಣೆ, ಕನ್ನಡಿಗರ ಸ್ವಾಭಿಮಾನ ಹಾಗೂ ಶ್ರಮಕ್ಕೆ ಮಾಡಿದ ದ್ರೋಹ.

- Advertisement -

ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ನಿರಂತರವಾಗಿ ಆಗುತ್ತಿರುವ ಅನ್ಯಾಯ, ಜಿಎಸ್‌ಟಿ ಪರಿಹಾರ ಸ್ಥಗಿತ ಹಾಗೂ ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯು ಇಂದು ಕೇವಲ ಆರ್ಥಿಕ ಬಿಕ್ಕಟ್ಟಾಗಿ ಮಾತ್ರವೇ ಉಳಿದಿಲ್ಲ. ಇದು ಒಕ್ಕೂಟ ವ್ಯವಸ್ಥೆಯ ಅಸ್ತಿತ್ವಕ್ಕೆ ಎದುರಾಗಿರುವ ದೊಡ್ಡ ಸವಾಲೂ ಆಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಚೀನಾದ ಅತಿಕ್ರಮಣಕ್ಕೆ ಅಡ್ಡ ಬಿದ್ದು, ಸಿಟ್ಟಿಗೆ ಅಣೆಕಟ್ಟು ಕಟ್ಟಲು...

ಕೇಂದ್ರದಲ್ಲಿ ಹಾಗೂ ಅರುಣಾಚಲ ಪ್ರದೇಶದಲ್ಲಿ- ಎರಡೂ ಕಡೆ ಬಿಜೆಪಿ ಸರ್ಕಾರವಿದೆ. ಡಬಲ್ ಎಂಜಿನ್ ಸರ್ಕಾರವಿದ್ದರೂ, ಅತ್ತ ಚೀನಾದ ಅತಿಕ್ರಮಣಕ್ಕೆ ಖಡಕ್ ಉತ್ತರವನ್ನೂ ನೀಡುತ್ತಿಲ್ಲ, ಇತ್ತ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿ ಸ್ಥಳೀಯ ಅಸ್ಮಿತೆಯನ್ನು ಗೌರವಿಸುತ್ತಲೂ...

ಬಾಗಲಕೋಟೆ | ಓದುಗರಿಲ್ಲದೆ ಧೂಳು ಹಿಡಿಯುತ್ತಿರುವ ಪುಸ್ತಕಗಳು; ಡಿಜಿಟಲ್...

ಸಾರ್ವಜನಿಕರ ತೆರಿಗೆ ಹಣದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಲಾದ ಆಧುನಿಕ ಡಿಜಿಟಲ್ ಗ್ರಂಥಾಲಯವೊಂದು ಸಾರ್ವಜನಿಕರ ಬಳಕೆಗೆ ಸಿಗದೆ ಮೂಲೆಗುಂಪಾಗಿರುವ ಘಟನೆ ಬಾಗಲಕೋಟೆಯಲ್ಲಿ ಬೆಳಕಿಗೆ ಬಂದಿದೆ. ಓದುಗರ ಹಾಗೂ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ನೆರವಾಗಬೇಕಿದ್ದ...

ಖಾಲಿ ಜೇಬಿನ ಸರ್ಕಾರ, ಪಟ್ಟು ಬಿಡದ ಕಬ್ಬು ಬೆಳೆಗಾರರು;...

ಚೂನಪ್ಪ ಪೂಜೇರಿ ಹಾಗೂ ಶಶಿಕಾಂತ ಗುರೂಜಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಕಬ್ಬಿಗೆ ಪ್ರತಿ ಟನ್‌ಗೆ ₹5,500 ಬೆಲೆ ನೀಡಬೇಕೆಂದು ಆಗ್ರಹಿಸಿ ಆರಂಭವಾದ ಹೋರಾಟ...

ಭಾರತದ ಜಿಡಿಪಿಗೆ (GDP) ಕರ್ನಾಟಕ ನೀಡುತ್ತಿರುವ ಕೊಡುಗೆ ಅಸಾಧಾರಣವಾದದ್ದು. ದೇಶದ ಒಟ್ಟು ಜನಸಂಖ್ಯೆಯಲ್ಲಿ ಕೇವಲ 5% ರಷ್ಟಿರುವ ಕರ್ನಾಟಕ, ಇಡೀ ದೇಶದ ಆರ್ಥಿಕತೆಗೆ ನೀಡುತ್ತಿರುವ ಕೊಡುಗೆ 8.2%ಕ್ಕಿಂತ ಹೆಚ್ಚು. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ನವೋದ್ಯಮ, ಉತ್ಪಾದನಾ ವಲಯ ಹಾಗೂ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಕರ್ನಾಟಕ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿದೆ. ದೇಶದ ಒಟ್ಟು ಸ್ಟಾರ್ಟ್‌ಅಪ್‌ಗಳ ಪೈಕಿ ಸಿಂಹಪಾಲು ಬೆಂಗಳೂರಿನಲ್ಲಿದೆ.

ಪ್ರತಿ ವರ್ಷ ಕರ್ನಾಟಕವು ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆಗಳ ಮೂಲಕ ಲಕ್ಷಾಂತರ ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಜಮೆ ಮಾಡುತ್ತದೆ. ದೇಶದಲ್ಲೇ ಅತಿ ಹೆಚ್ಚು ಜಿಎಸ್‌ಟಿ ಮತ್ತು ಆದಾಯ ತೆರಿಗೆ ಸಂಗ್ರಹಿಸುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಕನ್ನಡಿಗರ ಬೆವರು, ಬುದ್ಧಿವಂತಿಕೆ ಹಾಗೂ ಉದ್ಯಮಶೀಲತೆಯಿಂದಾಗಿ ಕೇಂದ್ರ ಸರ್ಕಾರಕ್ಕೆ ಬೃಹತ್ ಪ್ರಮಾಣದ ರಾಜಸ್ವ ಹರಿದು ಹೋಗುತ್ತಿದೆ. ಆದರೆ, ಈ ಪ್ರಗತಿಪರ ಆರ್ಥಿಕತೆಯ ಹಿಂದಿರುವ ಶ್ರಮಕ್ಕೆ ಕೇಂದ್ರ ಸರ್ಕಾರ ನೀಡುತ್ತಿರುವ ಪ್ರತಿಫಲ ಮಾತ್ರ ಶೂನ್ಯ.

ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಜಾರಿಗೆ ಬಂದ ನಂತರ ರಾಜ್ಯಗಳ ಆರ್ಥಿಕ ಸ್ವಾಯತ್ತತೆಗೆ ಭಾರಿ ಪೆಟ್ಟು ಬಿದ್ದಿದೆ. ರಾಜ್ಯಗಳು ತಮ್ಮದೇ ಆದ ರೀತಿಯಲ್ಲಿ ತೆರಿಗೆ ವಿಧಿಸುವ ಹಕ್ಕನ್ನು ಕಳೆದುಕೊಂಡಿವೆ. ಜಿಎಸ್‌ಟಿಯಿಂದ ರಾಜ್ಯಗಳಿಗೆ ಆಗುವ ನಷ್ಟವನ್ನು ಭರಿಸುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿತ್ತು. ಆದರೆ, ಆ ಪರಿಹಾರದ ಅವಧಿ ಮುಗಿದ ನಂತರ ಕರ್ನಾಟಕದ ಆರ್ಥಿಕತೆಗೆ ಭಾರಿ ಹೊಡೆತ ಬಿದ್ದಿದೆ.

ಕರ್ನಾಟಕವು ಕೇಂದ್ರಕ್ಕೆ ನೀಡುವ ಪ್ರತಿ 100 ರೂಪಾಯಿ ತೆರಿಗೆಗೆ ಪ್ರತಿಯಾಗಿ ಮರಳಿ ಪಡೆಯುತ್ತಿರುವುದು ಕೇವಲ 13 ರಿಂದ 15 ರೂಪಾಯಿ ಮಾತ್ರ! ಅಂದರೆ, ಕನ್ನಡಿಗರು ಕಟ್ಟುವ ತೆರಿಗೆಯ 85%ರಷ್ಟು ಹಣ ಉತ್ತರ ಭಾರತದ ಮತ್ತು ಹಿಂದುಳಿದ ರಾಜ್ಯಗಳ ಅಭಿವೃದ್ಧಿಗೆ ಬಳಕೆಯಾಗುತ್ತಿದೆ. ಆದಾಗ್ಯೂ, ಇದಕ್ಕೆ ವ್ಯತಿರಿಕ್ತವಾಗಿ, ಉತ್ತರ ಪ್ರದೇಶ ಅಥವಾ ಬಿಹಾರದಂತಹ ರಾಜ್ಯಗಳು ಕೇಂದ್ರಕ್ಕೆ ಕೊಡುವ ಪ್ರತಿ 100 ರೂಪಾಯಿಗೆ ಪ್ರತಿಯಾಗಿ 200 ರಿಂದ 300 ರೂಪಾಯಿಗಳನ್ನು ಮರಳಿ ಪಡೆಯುತ್ತಿವೆ. ಗುಜರಾತ್ ಮತ್ತು ಮಹಾರಾಷ್ಟ್ರದಂತಹ ಮುಂದುವರೆದ ರಾಜ್ಯಗಳೂ ತೆರಿಗೆ ಹಂಚಿಕೆಯಲ್ಲಿ ಸಿಂಹಪಾಲು ಪಡೆಯುತ್ತಿವೆ.

ಅಭಿವೃದ್ಧಿ ಹೊಂದದ ರಾಜ್ಯಗಳಿಗೆ ಹೆಚ್ಚಿನ ನೆರವು ನೀಡುವುದನ್ನು ಒಕ್ಕೂಟ ಧರ್ಮದ ಆಧಾರದಲ್ಲಿ ಒಪ್ಪಿಕೊಳ್ಳಬಹುದು. ಗುಜರಾತ್ ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳಿಗೆ ಹೆಚ್ಚು ಅನುದಾನ ನೀಡುವುದು ರಾಜಕೀಯ ಪಕ್ಷಪಾತಿ ಧೋರಣೆ. ಈ ಧೋರಣೆಯು ಕೊಡುಗೈ ರಾಜ್ಯವನ್ನೇ ಭಿಕ್ಷುಕರನ್ನಾಗಿ ಮಾಡುವ ಮಟ್ಟಿಗೆ ಇಳಿದಿದೆ.

ಆದ್ದರಿಂದಲೇ, ಕೇಂದ್ರ ಮತ್ತು ರಾಜ್ಯಗಳ ನಡುವೆ ತೆರಿಗೆ ಹಂಚಿಕೆಯನ್ನು ನಿರ್ಧರಿಸುವ 15ನೇ ಹಣಕಾಸು ಆಯೋಗವು ಕರ್ನಾಟಕದ ಪಾಲಿಗೆ ಮರಣಶಾಸನವಾಗಿ ಪರಿಣಮಿಸಿತು. ಆಯೋಗವು ತೆರಿಗೆ ಹಂಚಿಕೆಯ ಮಾನದಂಡವನ್ನು ಬದಲಾಯಿಸಿತು. ಜನಸಂಖ್ಯೆಯನ್ನು ನಿಯಂತ್ರಿಸಿದ ಮತ್ತು ಆರ್ಥಿಕವಾಗಿ ಪ್ರಗತಿ ಸಾಧಿಸಿದ ರಾಜ್ಯಗಳಿಗೆ ಬಹುಮಾನ ನೀಡುವ ಬದಲು ಶಿಕ್ಷೆ ವಿಧಿಸಲಾಯಿತು.

ಜನಸಂಖ್ಯೆ ನಿಯಂತ್ರಣದಲ್ಲಿ ಯಶಸ್ವಿಯಾದ ಕರ್ನಾಟಕದ ತೆರಿಗೆ ಹಂಚಿಕೆಯ ಪಾಲನ್ನು 4.71%ನಿಂದ3.64%ಗೆ ಇಳಿಸಲಾಯಿತು. ಈ ಒಂದೇ ಒಂದು ನಿರ್ಧಾರದಿಂದಾಗಿ ಕರ್ನಾಟಕವು ಕಳೆದ ಕೆಲವು ವರ್ಷಗಳಲ್ಲಿ ಸುಮಾರು 60,000 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಕಳೆದುಕೊಂಡಿದೆ. 15ನೇ ಹಣಕಾಸು ಆಯೋಗವು ಕರ್ನಾಟಕಕ್ಕೆ ನೀಡಬೇಕೆಂದು ಶಿಫಾರಸು ಮಾಡಿದ್ದ 5,495 ಕೋಟಿ ರೂಪಾಯಿಗಳ ವಿಶೇಷ ಅನುದಾನವನ್ನೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಏಕಪಕ್ಷೀಯವಾಗಿ ತಿರಸ್ಕರಿಸಿದ್ದಾರೆ. ಇದು ಕರ್ನಾಟಕದ ಹಕ್ಕನ್ನು ಕಸಿದುಕೊಂಡ ನೇರ ಉದಾಹರಣೆಗಳಲ್ಲಿ ಒಂದು.

ಕರ್ನಾಟಕಕ್ಕೆ ಈ ರೀತಿ ನಿರಂತರ ಅನ್ಯಾಯವಾಗುತ್ತಿರುವಾಗ, “ಹೆಚ್ಚು ತೆರಿಗೆ ಕೊಟ್ಟ ಕಾರಣಕ್ಕೆ ಹೆಚ್ಚು ಹಣ ಕೇಳಲು ಬರುವುದಿಲ್ಲ” ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇದು, ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದ ಧೋರಣೆ. ಕರ್ನಾಟಕವು ತನಗೆ ಬರಬೇಕಾದ ಹಕ್ಕಿನ ಪಾಲನ್ನು ಕೇಳುತ್ತಿದೆಯೇ ಹೊರತು ಯಾರ ಬಳಿಯೂ ಭಿಕ್ಷೆ ಬೇಡುತ್ತಿಲ್ಲ ಎಂಬುದನ್ನು ವಿತ್ತ ಸಚಿವೆ ನೆನಪಿನಲ್ಲಿಟ್ಟುಕೊಳ್ಳಬೇಕು.

ಈ ಲೇಖನ ಓದಿದ್ದೀರಾ?: ರಾಮಮಂದಿರ ದೇಣಿಗೆ ದುರುಪಯೋಗ: ಬಿಜೆಪಿಯ ಬ್ರಿಜ್ ಭೂಷಣ್ ಆರೋಪಗಳ ಸುತ್ತ

ಬೆಂಗಳೂರಿನಂತಹ ಅಭಿವೃದ್ಧಿ ಹೊಂದುತ್ತಿರುವ ನಗರಗಳಿಗೆ ಹೆಚ್ಚಿನ ಅನುದಾನ ನೀಡಿದರೆ, ಹಿಂದುಳಿದ ನಗರ, ಗ್ರಾಮೀಣ ಪ್ರದೇಶಗಳ ವಿಚಾರವನ್ನೂ ನಿರ್ಮಲಾ ಸೀತಾರಾಮನ್ ಉಲ್ಲೇಖಿಸಿದ್ದಾರೆ. ಆದರೆ, ಕರ್ನಾಟಕದಲ್ಲಿ ಬೆಂಗಳೂರು ಮಾತ್ರವೇ ಇಲ್ಲ. ಇಂದಿಗೂ ಕಲ್ಯಾಣ ಕರ್ನಾಟಕ ಪ್ರದೇಶ ತೀರಾ ಹಿಂದುಳಿದಿದೆ. ಒಟ್ಟಾರೆ ಭಾರತವನ್ನು ನೋಡಿದಾಗ ಕರ್ನಾಟಕ ಮತ್ತು ಬಿಹಾರ-ಉತ್ತರ ಪ್ರದೇಶದಂತಹ ಮುಂದುವರಿದ ಮತ್ತು ಹಿಂದುಳಿದ ರಾಜ್ಯಗಳು ಹೇಗೆ ಕಾಣುತ್ತವೆಯೋ, ಅದೇ ರೀತಿ, ಕರ್ನಾಟಕದಲ್ಲಿಯೂ ಉತ್ತರ ಪ್ರದೇಶ-ಬಿಹಾರದಂತೆಯೇ ಹಿಂದುಳಿದ ಯಾದಗಿರಿ, ರಾಯಚೂರು, ಕಲಬುರಗಿಯಂತಹ ಜಿಲ್ಲಾ ಪ್ರದೇಶಗಳಿವೆ. ಆ ಜಿಲ್ಲೆಗಳು ಮತ್ತು ಗ್ರಾಮೀಣ ಪ್ರದೇಶಗಳನ್ನು ಅಭಿವೃದ್ಧಿ ಪಡಿಸುವ ಮತ್ತು ಮೂಲ ಸೌಕರ್ಯಗಳನ್ನು ಒಸಗಿಸುವ ಅಗತ್ಯವಿದೆ.

ಜೊತೆಗೆ, ಕರ್ನಾಟಕವು ಸತತವಾಗಿ ಬರಗಾಲ ಮತ್ತು ಪ್ರವಾಹ ಪರಿಸ್ಥಿತಿಗಳನ್ನು ಎದುರಿಸುತ್ತಲೇ ಇದೆ. ಆದರೂ, ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ಮತ್ತು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ (NDRF) ನಮಗೆ ಸಿಗಬೇಕಾದ ನೆರವು ಸಕಾಲದಲ್ಲಿ ಸಿಗುತ್ತಿಲ್ಲ ಎಂಬುದು ವಾಸ್ತವ. ಕೊಡಗಿನ ಪ್ರವಾಹ ಅಥವಾ ಉತ್ತರ ಕರ್ನಾಟಕದ ಭೀಕರ ಬರಗಾಲದ ಸಂದರ್ಭಗಳಲ್ಲಿ ಕೇಂದ್ರದ ನೆರವಿಗಾಗಿ ಕರ್ನಾಟಕ ಕೈಚಾಚಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ, ಕೇಂದ್ರದಿಂದ ಯಾವುದೇ ಸ್ಪಂದನೆಯೂ ದೊರೆಯುತ್ತಿಲ್ಲ.

ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಯನ್ನು ಖಂಡಿಸಿ ಈ ದಿನ.ಕಾಮ್‌ ಜೊತೆ ಮಾತನಾಡಿದ ಆರ್ಥಿಕ ತಜ್ಞ ಡಾ ಟಿ ಆರ್ ಚಂದ್ರಶೇಖರ್, “ನಮ್ಮದು ಒಕ್ಕೂಟ ವ್ಯವಸ್ಥೆ. ಇಲ್ಲಿ ಯಾವ ರಾಜ್ಯ ಹೆಚ್ಚು ಅಥವಾ ಕಡಿಮೆ ತೆರಿಗೆ ಕಟ್ಟುತ್ತದೆ ಎಂಬುದು ವಿಷಯವಲ್ಲ. ಒಕ್ಕೂಟ ಸರ್ಕಾರ ರಾಜ್ಯಗಳ ಜರೂರತ್ತನ್ನು ಅರ್ಥ ಮಾಡಿಕೊಂಡು, ತೆರಿಗೆ ಹಂಚಿಕೆ ಮಾಡಬೇಕು ಎಂಬುದು ಮುಖ್ಯವಾದ ವಿಚಾರ. ಆದರೆ, ಕೇಂದ್ರ ಸರ್ಕಾರ ಒಕ್ಕೂಟ ತತ್ವವನ್ನು ಪಾಲಿಸುತ್ತಿಲ್ಲ. ಒಕ್ಕೂಟ ತತ್ವವನ್ನು ಉಲ್ಲಂಘನೆ ಮಾಡಿ, ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸದೆಯೇ ನೀಟ್, ಜಿಎಸ್‌ಟಿ, ಅಮೆರಿಕ ಜೊತೆಗಿನ ಒಪ್ಪಂದದಂತಹ ನೀತಿಗಳನ್ನು ಹೇರುತ್ತಿದೆ. ಜೊತೆಗೆ, ದೇಶದ ಜಿಡಿಪಿಗೆ ಹೆಚ್ಚು ಕೊಡುಗೆ ನೀಡುವ ರಾಜ್ಯಗಳಲ್ಲಿ ದಕ್ಷಿಣದ ರಾಜ್ಯಗಳ ಪಾಲು ಪ್ರಧಾನವಾಗಿದೆ. ಒಟ್ಟು ಜಿಡಿಪಿಯಲ್ಲಿ ಕರ್ನಾಟಕದ ಕೊಡುಗೆ 9%ರಷ್ಟಿದೆ. ಹೀಗಿರುವಾಗ, ಆರ್ಥಿಕತೆಗೆ ಹೆಚ್ಚು ಕೊಡುಗೆ ನೀಡುತ್ತಿರುವ ರಾಜ್ಯಗಳಿಗೆ ಹೆಚ್ಚು ಪ್ರೋತ್ಸಾಹ ನೀಡಿದರೆ, ದೇಶದ ಆರ್ಥಿಕ ಬೆಳವಣಿಗೆ ಮತ್ತಷ್ಟು ಹೆಚ್ಚುತ್ತದೆ. ಒಂದು ವೇಳೆ, ಹೆಚ್ಚು ಕೊಡುಗೆ ನೀಡುವ ರಾಜ್ಯಗಳಲ್ಲಿನ ಅಭಿವೃದ್ಧಿ ಕುಂಠಿತಕೊಂಡರೆ, ಇಡೀ ದೇಶದ ಅಭಿವೃದ್ಧಿ ಮತ್ತು ಜಿಡಿಪಿ ಬೆಳವಣಿಗೆಯೂ ಕುಂಠಿತವಾಗುತ್ತದೆ. ಈ ನೆಲೆಯಲ್ಲಿ ನಿರ್ಮಲಾ ಸೀತಾರಾಮನ್ ಅವರು ಯೋಚಿಸಬೇಕು” ಎಂದಿದ್ದಾರೆ.

ಕೇಂದ್ರ ಸರ್ಕಾರದ ಈ ಧೋರಣೆಯು “ನೀವು ದುಡಿಯುತ್ತಲೇ ಇರಬೇಕು. ಅದರ ಲಾಭವನ್ನು ನಾವು ನಮ್ಮ ರಾಜಕೀಯ ಹಿತಾಸಕ್ತಿಗೆ ತಕ್ಕಂತೆ ಬಳಸುತ್ತೇವೆ” ಎಂಬ ಆರ್ಥಿಕ ಶೋಷಣೆಯ ಸಂಕೇತವಾಗಿದೆ.

ಭಾರತವು ‘ರಾಜ್ಯಗಳ ಒಕ್ಕೂಟ’ ಎಂದು ನಮ್ಮ ಸಂವಿಧಾನದ ಮೊದಲ ವಿಧಿಯೇ ಹೇಳುತ್ತದೆ. ರಾಜ್ಯಗಳ ಅಸ್ತಿತ್ವವಿಲ್ಲದೆ ಕೇಂದ್ರ ಸರ್ಕಾರಕ್ಕೆ ಯಾವುದೇ ಅಸ್ತಿತ್ವವಿಲ್ಲ. ರಾಜ್ಯಗಳು ಗಳಿಸುವ ಹಣದಿಂದಲೇ ಕೇಂದ್ರ ಸರ್ಕಾರ ನಡೆಯುತ್ತಿರುವುದು. ಆದರೆ, ಇತ್ತೀಚಿನ ವರ್ಷಗಳಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸರ್ವಾಧಿಕಾರಿ ಧೋರಣೆಯನ್ನು ತಳೆಯುತ್ತಿದೆ. ಸೆಸ್ ಮತ್ತು ಸರ್‌ಚಾರ್ಜ್‌ಗಳ ಮೂಲಕ ಕೇಂದ್ರ ಸರ್ಕಾರವು ಭಾರೀ ಪ್ರಮಾಣದ ಹಣವನ್ನು ಸಂಗ್ರಹಿಸುತ್ತಿದೆ. ಆದರೆ, ಇದನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳತ್ತಲೇ ರಾಜ್ಯಗಳ ಆರ್ಥಿಕ ರಕ್ತವನ್ನು ಹೀರುವ ವ್ಯವಸ್ಥಿತ ಪಿತೂರಿ ನಡೆಸಿದೆ.

ದಕ್ಷಿಣ ಭಾರತದ ರಾಜ್ಯಗಳು, ವಿಶೇಷವಾಗಿ ಕರ್ನಾಟಕ, ತಮಿಳುನಾಡು ಹಾಗೂ ಕೇರಳ ರಾಜ್ಯಗಳು ದೇಶದ ಒಟ್ಟು ತೆರಿಗೆಯಲ್ಲಿ ಸಿಂಹಪಾಲನ್ನು ನೀಡುತ್ತಿವೆ. ಆದರೆ, ರಾಜಕೀಯ ಪ್ರಾತಿನಿಧ್ಯ ಮತ್ತು ಆರ್ಥಿಕ ಹಂಚಿಕೆಯಲ್ಲಿ ದಕ್ಷಿಣದ ರಾಜ್ಯಗಳನ್ನು ಮೂಲೆಗುಂಪು ಮಾಡಲಾಗುತ್ತಿದೆ. ಈ ರಾಜ್ಯಗಳ ಹಣವನ್ನು ಉತ್ತರ ಪ್ರದೇಶ ಮತ್ತು ಬಿಹಾರದಂತಹ ಹಿಂದುಳಿದ ರಾಜ್ಯಗಳಿಗೆ ಮಾತ್ರವಲ್ಲ, ತಾವು ಅಧಿಕಾರದಲ್ಲಿರುವ ಗುಜರಾತ್ ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳಿಗೂ ಸಿಂಹಪಾಲು ನೀಡಲಾಗುತ್ತಿದೆ. ದಕ್ಷಿಣ ರಾಜ್ಯಗಳ ಹಣ ಹಿಂದಿ ರಾಜ್ಯಗಳ ಪಾಲಾಗುತ್ತಿದೆ. ಇದು ರಾಜಕೀಯ ಧೋರಣೆಯೇ ಹೊರತು, ಒಕ್ಕೂಟ ವ್ಯವಸ್ಥೆಯ ಹಂಚಿಕೆಯಲ್ಲ.

ಈ ಪ್ರಾದೇಶಿಕ ಅಸಮಾನತೆಯು ಹೀಗೆಯೇ ಮುಂದುವರಿದರೆ, ಅದು ದೇಶದ ಐಕ್ಯತೆಗೆ ಧಕ್ಕೆ ತರಬಲ್ಲ ‘ದಕ್ಷಿಣ ವರ್ಸಸ್ ಉತ್ತರ’ ಎಂಬ ಪ್ರತ್ಯೇಕತೆಯ ಭಾವನೆಯನ್ನು ಜನರಲ್ಲಿ ಬಿತ್ತುತ್ತದೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಾಯಕ ದಿಲ್ಜಿತ್ ಬಳಿ ಕ್ಷಮೆಯಾಚಿಸಿದ ಅಭಿಜೀತ್ ದೀಪ್ಕೆ!

NEET ಪ್ರಶ್ನೆಪತ್ರಿಕೆ ಸೋರಿಕೆ ಕುರಿತಾದ ವಿದ್ಯಾರ್ಥಿ ಪ್ರತಿಭಟನೆಗಳ ಸಂದರ್ಭದಲ್ಲಿ ಗಾಯಕ ದಿಲ್ಜಿತ್...

ಬಾಗಲಕೋಟೆ | ಓದುಗರಿಲ್ಲದೆ ಧೂಳು ಹಿಡಿಯುತ್ತಿರುವ ಪುಸ್ತಕಗಳು; ಡಿಜಿಟಲ್ ಗ್ರಂಥಾಲಯಕ್ಕೆ ʼಬೀಗ ಭಾಗ್ಯʼ!

ಸಾರ್ವಜನಿಕರ ತೆರಿಗೆ ಹಣದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಲಾದ ಆಧುನಿಕ...

ಭಾರತದಲ್ಲಿ ತೀವ್ರ ಬಡತನ ಶೇ 2.6ಕ್ಕೆ ಇಳಿಕೆ: ವಿಶ್ವಬ್ಯಾಂಕ್ ವರದಿ

ಕಳೆದ ಒಂದು ದಶಕದಲ್ಲಿ ಬಡತನ ನಿರ್ಮೂಲನೆಯಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿಯೇ ಅತಿ...

ಖಾಲಿ ಜೇಬಿನ ಸರ್ಕಾರ, ಪಟ್ಟು ಬಿಡದ ಕಬ್ಬು ಬೆಳೆಗಾರರು; ಹೋರಾಟದ ನಡುವೆ ಒಣಗುತ್ತಿದೆ ಕಬ್ಬು

ಚೂನಪ್ಪ ಪೂಜೇರಿ ಹಾಗೂ ಶಶಿಕಾಂತ ಗುರೂಜಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ...