ದೇಶಾದ್ಯಂತ ಈ ವರ್ಷ ಭೀಕರ ಬರಗಾಲ ಎದುರಾಗುವ ಮುನ್ಸೂಚನೆ ಇದ್ದು, ರಾಜ್ಯದ ಬಹುತೇಕ ಅಣೆಕಟ್ಟುಗಳಲ್ಲಿ ನೀರಿನ ಒಳಹರಿವು ಸಂಪೂರ್ಣ ಕುಸಿದಿದೆ. ಹೀಗಾಗಿ ಕೃಷಿಕರು ಅಣೆಕಟ್ಟು ನೀರನ್ನು ನೆಚ್ಚಿಕೊಂಡು ಬೆಳೆ ಬೆಳೆಯದೆ, ಮುಂಬರುವ ದಿನಗಳಲ್ಲಿ ಮಳೆಯ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು ಬಿತ್ತನೆ ಮಾಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಜ್ಯದ ರೈತರಿಗೆ ಮನವಿ ಮಾಡಿದ್ದಾರೆ. ಗುರುವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯದ ಜಲಾಶಯಗಳ ಪ್ರಸ್ತುತ ಸ್ಥಿತಿಗತಿ, ಸಚಿವ ಸಂಪುಟದ ಪ್ರಮುಖ ನಿರ್ಣಯಗಳು ಹಾಗೂ ತಾವು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ 30 ದಿನಗಳಲ್ಲಿ ಕೈಗೊಂಡ ಮಹತ್ವದ ಜನಪರ ತೀರ್ಮಾನಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
ರಾಜ್ಯದಲ್ಲಿ ಬರ ಪರಿಸ್ಥಿತಿ ಅತ್ಯಂತ ಗಂಭೀರವಾಗುತ್ತಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ತುಂಗಭದ್ರಾ, ಘಟಪ್ರಭಾ, ಮಲಪ್ರಭಾ, ನಾರಾಯಣಪುರ ಹಾಗೂ ವಾಣಿವಿಲಾಸ ಜಲಾಶಯಗಳಿಗೆ ನೀರಿನ ಒಳಹರಿವು ಶೂನ್ಯಕ್ಕೆ ತಲುಪಿದೆ. ಕಾವೇರಿ ಕೊಳ್ಳದಲ್ಲೂ ಮಳೆ ಪ್ರಮಾಣ ತೀವ್ರವಾಗಿ ಕುಸಿದಿದ್ದು, ಕೆಆರ್‌ಎಸ್‌ನಲ್ಲಿ ಕಳೆದ ವರ್ಷದ 100 ಅಡಿ ಬದಲು ಪ್ರಸ್ತುತ 22 ಅಡಿ, ಕಬಿನಿಯಲ್ಲಿ 79 ಅಡಿಯಿಂದ 26 ಅಡಿಗೆ ಹಾಗೂ ಹೇಮಾವತಿಯಲ್ಲಿ 80 ಅಡಿಯಿಂದ 40 ಅಡಿಗೆ ನೀರಿನ ಮಟ್ಟ ಕುಸಿದಿದೆ. ಒಟ್ಟಾರೆಯಾಗಿ ಅಣೆಕಟ್ಟುಗಳ ಒಳಹರಿವಿನ ಪ್ರಮಾಣ ಶೇ. 20ರಷ್ಟು ಮಾತ್ರ ಉಳಿದಿದ್ದು, ಸಮಸ್ಯೆ ಉಲ್ಬಣಿಸುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರ ಹಾಗೂ ಪ್ರಧಾನಮಂತ್ರಿಗಳು ಕೂಡ ಜಲ ಮತ್ತು ವಿದ್ಯುತ್ ಅಭಾವದ ಕುರಿತು ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಳೆಯಾದರೆ ಮಾತ್ರ ನೀರು ಒದಗಿಸಲಾಗುವುದು; ರೈತರು ನೀರು ಬಿಡುವಂತೆ ಒತ್ತಡ ಹೇರಬಾರದು ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ. ಮೇವು ಮತ್ತು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸಚಿವರುಗಳಿಗೆ 2-3 ಜಿಲ್ಲೆಗಳ ಉಸ್ತುವಾರಿ ವಹಿಸಲಾಗಿದ್ದು, ಖುದ್ದಾಗಿ ತಾವೇ 4 ಕಂದಾಯ ವಿಭಾಗಗಳಿಗೆ ಪ್ರವಾಸ ಕೈಗೊಂಡು ಪರಿಶೀಲನೆ ನಡೆಸುವುದಾಗಿ ಹಾಗೂ ತುರ್ತಾಗಿ ಕೊಳವೆ ಬಾವಿಗಳನ್ನು ಕೊರೆಯಲು ಸೂಚಿಸಿರುವುದಾಗಿ ಅವರು ತಿಳಿಸಿದರು.
ಆಡಳಿತಾತ್ಮಕ ನಿರ್ಣಯಗಳ ಕುರಿತು ಮಾಹಿತಿ ನೀಡಿದ ಸಿಎಂ, ವಸತಿ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಒಸಿ (OC) ಮತ್ತು ಸಿಸಿ (CC) ಕಡ್ಡಾಯ ನಿಯಮದಿಂದ ವಿನಾಯಿತಿ ನೀಡಲಾಗಿದ್ದು, ಅಗತ್ಯ ದಾಖಲೆಗಳೊಂದಿಗೆ ಆಗಸ್ಟ್ 15ರವರೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ವಿಸ್ತರಿಸಲಾಗಿದೆ. ಆದರೆ, ಸುಪ್ರೀಂ ಕೋರ್ಟ್ ಆದೇಶವಿರುವುದರಿಂದ ವಾಣಿಜ್ಯ ಕಟ್ಟಡಗಳಿಗೆ ಈ ವಿನಾಯಿತಿ ಅನ್ವಯಿಸುವುದಿಲ್ಲ ಎಂದರು. ಸದ್ಯ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ನಡೆಯುತ್ತಿರುವುದರಿಂದ ಮುಂಗಾರು ಅಧಿವೇಶನವನ್ನು ಮುಂದೂಡಲಾಗಿದ್ದು, ಆಗಸ್ಟ್ 5ರಂದು ಕರಡು ಪಟ್ಟಿ ಬಿಡುಗಡೆಯಾದ ಬಳಿಕ ಅಧಿವೇಶನ ನಿಗದಿಪಡಿಸಲಾಗುವುದು. ಜನಗಣತಿ ನಮೂನೆಯನ್ನು ಕಲ್ಯಾಣ ಮಂಟಪಗಳ ಬದಲು ಬಿಎಲ್‌ಒಗಳು ಖುದ್ದಾಗಿ ಮನೆಮನೆಗೆ ತೆರಳಿ ವಿತರಿಸುವಂತೆ ಜುಲೈ 29ರವರೆಗೆ ಕಾಲಾವಕಾಶ ನೀಡಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಸಾರ್ವಜನಿಕರ ಅಹವಾಲು ಮತ್ತು ಸಮಸ್ಯೆಗಳನ್ನು ಆಲಿಸಲು ಐಎಎಸ್ ಅಧಿಕಾರಿಯ ನೇತೃತ್ವದಲ್ಲಿ ‘ಪ್ರಜಾಸೇವೆ’ ಎಂಬ ಹೊಸ ಸಚಿವಾಲಯವನ್ನು ಸ್ಥಾಪಿಸಲಾಗುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿ ತಿಂಗಳ 1ನೇ ಮತ್ತು 3ನೇ ಶನಿವಾರ ಕಡ್ಡಾಯವಾಗಿ 2 ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ ಜನಸ್ಪಂದನ ಸಭೆ ನಡೆಸಬೇಕು ಎಂದು ನಿರ್ದೇಶಿಸಲಾಗಿದೆ. ಇದೇ ವೇಳೆ, ವಿದ್ಯುತ್ ವಿತರಣೆಯನ್ನು ಖಾಸಗೀಕರಣಗೊಳಿಸುವ ಕೇಂದ್ರದ ‘ಗ್ರಾಮ್ ಜಿ’ ಯೋಜನೆಗೆ ರಾಜ್ಯದ ಎಲ್ಲ ಎಸ್ಕಾಂಗಳು ಆಕ್ಷೇಪಣೆ ಸಲ್ಲಿಸಲು ಸೂಚಿಸಲಾಗಿದೆ; ಈ ಯೋಜನೆಯಿಂದ 40% ವೆಚ್ಚ ಭರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದು, ರಾಜ್ಯಕ್ಕೆ ವಾರ್ಷಿಕ 3,806 ಕೋಟಿ ರೂ.ಗಳ ಹೊರೆಯಾಗಲಿದೆ ಎಂದು ಅವರು ವಿವರಿಸಿದರು. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಪಾದಚಾರಿ ಮಾರ್ಗ ಒತ್ತುವರಿ ತೆರವಿಗೆ ಎಲ್ಲ ಪಕ್ಷದ ಶಾಸಕರು ಒಪ್ಪಿಗೆ ಸೂಚಿಸಿದ್ದು, ಸಮೀಕ್ಷೆ ಮೂಲಕ ಗುರುತಿಸಲಾದ 60,000 ಬೀದಿಬದಿ ವ್ಯಾಪಾರಿಗಳಲ್ಲಿ 37,000 ಜನರಿಗೆ ಪರ್ಯಾಯ ಸ್ಥಳಾವಕಾಶ ಹಾಗೂ ವಾಹನ ವಿತರಣೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಸಣ್ಣ ಮಕ್ಕಳಲ್ಲಿ ದೃಷ್ಟಿ ದೋಷ ತಡೆಗಟ್ಟಲು 26 ಕೋಟಿ ರೂ., ಬಾಗಲಕೋಟೆ ಜಿಲ್ಲೆ ಬಿಳಗಿ ತಾಲೂಕಿನ 7,000 ಎಕರೆ ಕೃಷಿ ಭೂಮಿಗೆ ನೀರಾವರಿ ಒದಗಿಸುವ 98.50 ಕೋಟಿ ರೂ. ವೆಚ್ಚದ ಏತ ನೀರಾವರಿ ಯೋಜನೆಗೆ ಒಪ್ಪಿಗೆ ನೀಡಲಾಗಿದೆ. ಕಲಬುರಗಿಯಲ್ಲಿ 700 ಕೋಟಿ ರೂ. ವೆಚ್ಚದ ಜವಳಿ ಪಾರ್ಕ್ ನಿರ್ಮಾಣದ ಮೊದಲ ಹಂತದ ಕಾಮಗಾರಿಗೆ 320 ಕೋಟಿ ರೂ., ಬೆಂಗಳೂರಿನ ಎನ್‌ಜಿಎಫ್ ಆವರಣದ 60 ಎಕರೆ ಜಾಗದಲ್ಲಿ ಟ್ರೀ-ಪಾರ್ಕ್ ನಿರ್ಮಾಣಕ್ಕೆ 26 ಕೋಟಿ ರೂ., ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಕ್ರೀಡಾ ಮತ್ತು ಅಧ್ಯಯನ ಸಾಮಗ್ರಿ ವಿತರಣೆಗೆ 33 ಕೋಟಿ ರೂ. ಹಾಗೂ ದೇವನಹಳ್ಳಿಯ ಏರೋಸ್ಪೇಸ್ ಪಾರ್ಕ್‌ನಲ್ಲಿ ಸೌಲಭ್ಯ ಕೇಂದ್ರ ಸ್ಥಾಪನೆಗೆ 30 ಕೋಟಿ ರೂ. ಮಂಜೂರು ಮಾಡಲಾಗಿದೆ. ಅಲ್ಲದೆ, ವಿಕಲಚೇತನರಿಗೆ ಕೆಐಎಡಿಬಿಯಲ್ಲಿ ಶೇ. 5ರಷ್ಟು ಭೂಮಿ ಮೀಸಲಾತಿ ಜತೆಗೆ, ಭೂಮಿಯ ಮೌಲ್ಯದ 10% ಅಥವಾ ಗರಿಷ್ಠ 20 ಲಕ್ಷದವರೆಗೆ ರಿಯಾಯಿತಿ ನೀಡಲು ತೀರ್ಮಾನಿಸಲಾಗಿದೆ.
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ 1 ತಿಂಗಳ ಅವಧಿಯಲ್ಲಿ ಕೈಗೊಂಡ ಮಹತ್ವದ ತೀರ್ಮಾನಗಳನ್ನು ಪಟ್ಟಿ ಮಾಡಿದ ಅವರು, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಪ್ರತಿ ಪಂಚಾಯಿತಿಯಲ್ಲಿ 10 ಲಕ್ಷ ರೂ. ಅನುದಾನದೊಂದಿಗೆ ‘ಭಾರತ ಜೋಡೋ ಯುವಕರ ಸಂಘ’ ಸ್ಥಾಪನೆ, 2500 ಚದರ ಅಡಿವರೆಗಿನ ಕಟ್ಟಡಗಳಿಗೆ ಒಸಿ ವಿನಾಯಿತಿ, ‘ಬಿ’ ಖಾತಾದಿಂದ ‘ಎ’ ಖಾತಾಗೆ ಪರಿವರ್ತನೆ, ಬೆಂಗಳೂರಿನ ರಸ್ತೆಗಳ ಅಭಿವೃದ್ಧಿಗೆ 2,000 ಕೋಟಿ ರೂ. ಮೀಸಲು, 72,000 ಸರ್ಕಾರಿ ಹುದ್ದೆಗಳ ಭರ್ತಿಗೆ 6 ತಿಂಗಳ ಗಡುವು ಹಾಗೂ ಖಾಸಗಿ ಉದ್ಯೋಗ ವಿನಿಮಯ ಕೇಂದ್ರ ಸ್ಥಾಪನೆಯಂತಹ ಜನಪರ ಹೆಜ್ಜೆಗಳನ್ನು ಇಟ್ಟಿರುವುದಾಗಿ ತಿಳಿಸಿದರು. ಗ್ಯಾರಂಟಿ ಯೋಜನೆಗಳು ಕನ್ನಡಿಗರಿಗೆ ಮಾತ್ರ ದಕ್ಕುವಂತೆ ನೋಡಿಕೊಳ್ಳಲು ಮತ್ತು ಭ್ರಷ್ಟಾಚಾರ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ರೌಡಿ ಚಟುವಟಿಕೆ, ಮೀಟರ್ ಬಡ್ಡಿ ದಂಧೆ ಹಾಗೂ ಡ್ರಗ್ಸ್ ಜಾಲವನ್ನು ಮಟ್ಟಹಾಕಲು ವಿಶೇಷ ಪಡೆಗಳನ್ನು ರಚಿಸಲಾಗಿದ್ದು, 2028ರ ವೇಳೆಗೆ ‘ನಶೆ ಮುಕ್ತ ಕರ್ನಾಟಕ’ ನಿರ್ಮಾಣದ ಗುರಿ ಹೊಂದಲಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಬೆಳಗ್ಗೆ 10 ಗಂಟೆಗೆ ಜಿಪಿಎಸ್ ಆಧಾರಿತ ಹಾಜರಾತಿ, ಹೊಸ ಸಿಎಸ್‌ಆರ್ ನೀತಿ ಹಾಗೂ ರೈತರಿಗೆ ಸಕಾಲದಲ್ಲಿ ಬಿತ್ತನೆ ಬೀಜ ಪೂರೈಕೆಗೆ ಆದ್ಯತೆ ನೀಡಲಾಗಿದೆ.
ರಾಜ್ಯದ ಅಭಿವೃದ್ಧಿ ಯೋಜನೆಗಳಿಗಾಗಿ ದೆಹಲಿಗೆ ತೆರಳಿ ಪ್ರಧಾನಿ ಹಾಗೂ ಕೇಂದ್ರ ಸಚಿವರನ್ನು ಭೇಟಿಯಾಗಿ ಮೆಟ್ರೋ, ಎಕ್ಸ್‌ಪ್ರೆಸ್ ರೈಲು (RRTS) ಮತ್ತು ನೀರಾವರಿ ಯೋಜನೆಗಳಿಗೆ ಅನುದಾನ ತರುವ ಯತ್ನ ನಡೆಸಲಾಗಿದೆ. ತುಂಗಭದ್ರಾ ಅಣೆಕಟ್ಟಿಗೆ ನೂತನ ಸ್ಪಿಲ್ ಗೇಟ್‌ಗಳ ಅಳವಡಿಕೆ, ಮೇಕೆದಾಟು ಯೋಜನೆಗೆ ಮಣ್ಣು ಪರೀಕ್ಷೆ ಹಾಗೂ ಹೂಳು ತೆಗೆಯಲು ನೆರೆರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಮನ್ವಯ ಸಾಧಿಸಲಾಗಿದೆ. ಬಡವರಿಗೆ ನಿವೇಶನದ ಬದಲಿಗೆ ನೇರವಾಗಿ ಮನೆ ಕಟ್ಟಿಕೊಡುವುದು, ಕೆಂಪೇಗೌಡ ಬಡಾವಣೆಯಲ್ಲಿ 10 ಪಥಗಳ ರಸ್ತೆ ಉದ್ಘಾಟನೆ, 15 ಲಕ್ಷ ಸಸಿ ನೆಡುವ ಅಭಿಯಾನ, ಹಾಸನ ಐಐಟಿ ಸಂತ್ರಸ್ತರಿಗೆ 2013ರ ಕೋರ್ಟ್ ಆದೇಶದನ್ವಯ ನ್ಯಾಯಯುತ ಪರಿಹಾರ ಹಾಗೂ ಪುಸ್ತಕ ಪ್ರೇಮಿ ಅಂಕೇಗೌಡರ ಪುಸ್ತಕ ಭಂಡಾರ ಸಂರಕ್ಷಣೆಗೆ 5 ಕೋಟಿ ರೂ. ಮತ್ತು 2 ಎಕರೆ ಜಮೀನು ಮಂಜೂರು ಮಾಡುವ ಮೂಲಕ ಸರ್ಕಾರವು ಸರ್ವಾಂಗೀಣ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.




