ನಿಜಕ್ಕೂ ಭಾರತದ ಬಡತನ 16%ಗೆ ಇಳಿದಿದೆಯೇ? ವಾಸ್ತವ ಹೇಳುವುದೇನು?

Date:

ವಿಶ್ವಬ್ಯಾಂಕ್ ವರದಿ ಪ್ರಕಾರ, ಭಾರತದಲ್ಲಿ ಬಡತನ 16.1%ಗೆ ಮತ್ತು ತೀವ್ರ ಬಡತನ 2.6%ಗೆ ಇಳಿದಿದೆ. ಇದೇ ಅಂಕಿಅಂಶವನ್ನು ಬಳಸಿಕೊಂಡು ತಮ್ಮ ಸಾಧನೆ ಎಂಬಂತೆ ಕೇಂದ್ರ ಸರ್ಕಾರ ಸಂಭ್ರಮಿಸುತ್ತಿದೆ. ಆದರೆ, ದೇಶದ ಸುಮಾರು 80 ಕೋಟಿ ಜನರು ಇನ್ನೂ ಪಡಿತರ ವ್ಯವಸ್ಥೆಯನ್ನೇ ಅವಲಂಬಿಸಿದ್ದಾರೆ. ಹೀಗಿರುವಾಗ, ಬಡತನದ ರೇಖೆಯನ್ನು ದಾಟಿರುವ ಭಾರತೀಯರು ನಿಜವಾಗಿಯೂ ಆರ್ಥಿಕವಾಗಿ ಸ್ವಾವಲಂಬಿಗಳಾಗಿದ್ದಾರೆಯೇ?

- Advertisement -

ವಿಶ್ವಬ್ಯಾಂಕ್‌ ತನ್ನ 2026ರ ಅಕ್ಟೋಬರ್ ತಿಂಗಳ ‘ಬಡತನ ಮತ್ತು ಸಮಾನತೆ ಕಿರುಟಿಪ್ಪಣಿ’ (Poverty and Equity Brief – ಪಿಇಬಿ) ವರದಿಯನ್ನು ಬಿಡುಗಡೆ ಮಾಡಿದೆ. ವರದಿ ಹೇಳುವಂತೆ; 2011-12ರಲ್ಲಿ 57.7%ರಷ್ಟಿದ್ದ ಭಾರತದ ಬಡತನ ಪ್ರಮಾಣ 2023-24ರಲ್ಲಿ 16.1%ಗೆ ಇಳಿದಿದೆ. ಇದೇ ಅವಧಿಯಲ್ಲಿ ತೀವ್ರ ಬಡತನವು 27.1%ನಿಂದ 2.6%ಗೆ ಕಡಿಮೆಯಾಗಿದೆ. ಈ ವರದಿಯು ಕೇಂದ್ರ ಸರ್ಕಾರಕ್ಕೆ ಸಾಧನೆಯ ಪ್ರಮಾಣಪತ್ರದಂತೆ ಕಾಣುತ್ತಿದೆ. ಮೋದಿ ಸರ್ಕಾರವು ವರದಿಯನ್ನು ಉತ್ಸಾಹದಿಂದ ಹಂಚಿಕೊಳ್ಳುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಾಂಘೈ ಕೌಶಲ್ಯ ಶೃಂಗಸಭೆಯಲ್ಲಿ ಮಿಂಚಿದ ಕರ್ನಾಟಕದ ಪ್ರತಿಭೆಗಳು…ಪದಕಗಳ ಸೂರೆ

ಚೀನಾದ ಶಾಂಘೈನಲ್ಲಿ ನಡೆದ ಜಾಗತಿಕ 'ಕೌಶಲ್ಯ ಒಲಿಂಪಿಕ್ಸ್' ವೇದಿಕೆಯಲ್ಲಿ ನಮ್ಮ ಕರುನಾಡಿನ ಯುವಪ್ರತಿಭೆಗಳು ಹೊಸ ಇತಿಹಾಸ ಬರೆದಿದ್ದಾರೆ. ಕೇವಲ ಕನಸುಗಳನ್ನಷ್ಟೇ ಹೊತ್ತೊಯ್ದಿದ್ದ ನಮ್ಮ ನಾಡಿನ ಪ್ರತಿಭೆಗಳು, ತಮ್ಮ ಬೆವರು, ಕಠಿಣ ಪರಿಶ್ರಮ ಹಾಗೂ...

ಗಾಂಧೀಜಿ ತತ್ವಗಳ ಪ್ರಸ್ತುತತೆ: ಸಮಾನತೆಯ ಸಮಾಜಕ್ಕೆ ಶ್ರಮದ ಘನತೆಯೇ...

ಸರ್ವಜನರ ಹಿತ, ಎಲ್ಲ ಕೆಲಸಗಳಿಗೂ ಸಮಾನ ಗೌರವ ಮತ್ತು ಶಾರೀರಿಕ ಶ್ರಮದ ಘನತೆ-ಗಾಂಧೀಜಿ ಪ್ರತಿಪಾದಿಸಿದ ಈ ಮೂರು ಮೌಲ್ಯಗಳು ಇಂದಿನ ಅಸಮಾನತೆಯ ಸಮಾಜದಲ್ಲಿ ಹೆಚ್ಚು ಪ್ರಸ್ತುತವಾಗಿವೆ. ಆದರೆ ಅವುಗಳನ್ನು ವೈಯಕ್ತಿಕ ಬದುಕು, ಸಾಮಾಜಿಕ...

ಜಿಡಿಪಿ ಅಂಕಿಅಂಶಗಳ ಆಚೆಗಿನ ವಾಸ್ತವ: ಭಾರತದ ಆರ್ಥಿಕ ಸವಾಲುಗಳ...

ಜಾಗತಿಕ ಆರ್ಥಿಕತೆಯು ಭೌಗೋಳಿಕ-ರಾಜಕೀಯ ಸಂಘರ್ಷಗಳು ಮತ್ತು ತಂತ್ರಜ್ಞಾನದ ಕ್ಷಿಪ್ರ ಬದಲಾವಣೆಗಳ ನಡುವೆ ತೊಳಲಾಡುತ್ತಿರುವ ಹೊತ್ತಿನಲ್ಲಿ, ಭಾರತದ ಆರ್ಥಿಕತೆಯ ನಿಜವಾದ ಸ್ಥಿತಿಗತಿ ಏನು? ನಾವು ಸಾಗುತ್ತಿರುವ ಹಾದಿ ನಮ್ಮನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸಬಲ್ಲದೇ? ಈ...

ಆದರೆ, ಕೇಂದ್ರ ಸರ್ಕಾರವು ತನ್ನದೇ ವರದಿ ಮತ್ತು ಅಂಕಿಅಂಶಗಳನ್ನು ಮರೆತಿದೆ. ಮೋದಿ ಸರ್ಕಾರವೇ ಹೇಳಿಕೊಂಡಿರುವಂತೆ, 2026ರ ಫೆಬ್ರವರಿ ವೇಳೆಗೆ ‘ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ’ಯಡಿ ದೇಶದ 81.35 ಕೋಟಿ ಜನರನ್ನು ಪಡಿತರ ಫಲಾನುಭವಿಗಳಾಗಿ ಗುರಿತಿಸಲಾಗಿದೆ. ಈ ಎಲ್ಲರಿಗೂ ಆಹಾರಧಾನ್ಯಗಳನ್ನು ಪಡಿತರ ವ್ಯವಸ್ಥೆಯಡಿ ಒದಗಿಸಲಾಗುತ್ತದೆ. ಅಂದರೆ, ದೇಶದ ಜನಸಂಖ್ಯೆಯ ಸುಮಾರು 55%ರಷ್ಟು ಜನರು ತಮ್ಮ ಬದುಕಿಗೆ ಉಚಿತ ಆಹಾರಧಾನ್ಯ ಯೋಜನೆಯನ್ನೂ ಅವಲಂಬಿಸಿದ್ದಾರೆ.

ಅಂದಹಾಗೆ, ವಿಶ್ವಬ್ಯಾಂಕ್‌ನ ಬಡತನದ ಲೆಕ್ಕಾಚಾರವು ಕುಟುಂಬಗಳ ಬಳಕೆ ವೆಚ್ಚವನ್ನು ಆಧರಿಸಿದೆ. ಕೆಳಮಧ್ಯಮ ವರ್ಗದ ಆದಾಯ ದಿನಕ್ಕೆ 4.20 ಡಾಲರ್ (ಸುಮಾರು 400 ರೂ.) ಮತ್ತು ತೀವ್ರ ಬಡತನಕ್ಕೆ 3 ಡಾಲರ್ (275 ರೂ.) ಮಾನದಂಡ ಮತ್ತು ‘ಕೊಳ್ಳುವ ಸಾಮರ್ಥ್ಯದ ಸಮಾನತೆ’ಯ ಆಧಾರದಲ್ಲಿ ಭಾರತದ ಬಡತನವನ್ನು ಅಳೆಯಲಾಗಿದೆ. ಈ ಲೆಕ್ಕಾಚಾರದ ಪ್ರಕಾರ ಸುಮಾರು 49.6 ಕೋಟಿ ಜನರು ಬಡತನ ರೇಖೆಯಿಂದ ಮೇಲೇರಿದ್ದಾರೆ. ವರದಿ ಹೇಳುವಂತೆ, ಹಲವಾರು ಕುಟುಂಬಗಳ ಗಳಿಕೆಯು ದಿನಕ್ಕೆ 400 ರೂ. ಇರಬೇಕು ಎನ್ನುವ ಅಂತಾರಾಷ್ಟ್ರೀಯ ಅನುಭೋಗದ ಮಿತಿಯನ್ನು (Consumption threshold) ದಾಟಿದೆ ಎಂಬುದನ್ನು ವಾಸ್ತವ. ಆದರೆ, ಆ ಮಾತ್ರಕ್ಕೆ ಒಂದು ಕುಟುಂಬವು ಆರ್ಥಿಕವಾಗಿ ಸಂಪೂರ್ಣ ಸುರಕ್ಷಿತವಾಗಿದೆ ಎನ್ನಲು ಸಾಧ್ಯವೇ?

ಬಡತನ ರೇಖೆಯನ್ನು ದಾಟಿದ್ದಾರೆಂದು ಗುರುತಿಸಲಾದ ಕುಟುಂಬದ ಸದಸ್ಯರಲ್ಲಿ ಒಬ್ಬರಿಗಾದರೂ ಸ್ಥಿರ ಉದ್ಯೋಗವಿದೆಯೇ? ಕುಟುಂಬದ ಆದಾಯದಿಂದ ಮನೆಬಾಡಿಗೆ, ಶಿಕ್ಷಣ, ಆರೋಗ್ಯ ಹಾಗೂ ಆಹಾರದ ವೆಚ್ಚಗಳನ್ನು ನಿಭಾಯಿಸಲು ಸಾಧ್ಯವಾಗುತ್ತಿದೆಯೇ? ಅನಾರೋಗ್ಯ ಅಥವಾ ಉದ್ಯೋಗ ನಷ್ಟ ಎದುರಾದರೆ ಸಾಲ ಮಾಡದೆ ಬದುಕಬಹುದೇ? – ಈ ಪ್ರಶ್ನೆಗಳಿಗೆ ವಿಶ್ವಬ್ಯಾಂಕ್‌ನ ವರದಿ ಮತ್ತು ಬಡತನದ ಶೇಕಡಾವಾರು ಅಂಕಿಅಂಶ ಉತ್ತರಿಸುವುದಿಲ್ಲ.

ಬಡತನದ ರೇಖೆಗಿಂತ ಸ್ವಲ್ಪ ಮೇಲಿರುವ ಕುಟುಂಬಕ್ಕೆ ಒಂದೇ ಒಂದು ಬಾರಿ ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಾದರೆ, ಆ ಕುಟುಂಬ ಮತ್ತೆ ಬಡತನ ರೇಖೆಗಿಂತ ಕೆಳಕ್ಕೆ ಕುಸಿಯಬಹುದು. ಹೀಗಿದ್ದರೂ, ವಿಶ್ವಬ್ಯಾಂಕ್‌ನ ವರದಿ ಭಾರತದಲ್ಲಿ ಬಡತನ ಮತ್ತು ತೀವ್ರ ಬಡತನ ತೀರಾ ಕಡಿಮೆಯಾಗಿದೆ ಎಂದು ಬಣ್ಣಿಸಿದೆ.

ಯಾಕೆಂದರೆ, ವಿಶ್ವಬ್ಯಾಂಕ್‌ನ ಈ ಅಂದಾಜುಗಳು ಭಾರತದ ‘ಕುಟುಂಬ ಅನುಭೋಗ ವೆಚ್ಚ ಸಮೀಕ್ಷೆ’ಯನ್ನು (HCES) ಆಧರಿಸಿವೆ. 2023-24ರ ಈ ಸಮೀಕ್ಷೆಯು, ಕಲ್ಯಾಣ ಕಾರ್ಯಕ್ರಮಗಳ ಮೂಲಕ ಉಚಿತವಾಗಿ ಪಡೆದ ಆಯ್ದ ವಸ್ತುಗಳ ಅಂದಾಜು ಮೌಲ್ಯವನ್ನು ‘ಸೇರಿಸಿ’ ಮತ್ತು ‘ಸೇರಿಸದೆ’ ಎಂಬ ಎರಡೂ ರೀತಿಯಲ್ಲಿ ಅನುಭೋಗದ ಅಂದಾಜುಗಳನ್ನು ಪ್ರಕಟಿಸಿತ್ತು. ಉಚಿತ ವಸ್ತುಗಳ ಮೌಲ್ಯವನ್ನು ಸೇರಿಸದೆ ಲೆಕ್ಕ ಹಾಕಿದಾಗ, ಗ್ರಾಮೀಣ ಭಾರತದಲ್ಲಿ ಮಾಸಿಕ ತಲಾ ಸರಾಸರಿ ಅನುಭೋಗ ವೆಚ್ಚ 4,122 ರೂ. ಮತ್ತು ನಗರ ಭಾರತದಲ್ಲಿ 6,996 ರೂ. ಆಗಿತ್ತು. ಆದರೆ ನಿರ್ದಿಷ್ಟ ಉಚಿತ ವಸ್ತುಗಳ ಅಂದಾಜು ಮೌಲ್ಯವನ್ನು ಸೇರಿಸಿದಾಗ ಈ ಮೊತ್ತಗಳು ಕ್ರಮವಾಗಿ 4,247 ರೂ. ಮತ್ತು 7,078 ರೂ.ಗೆ ಏರಿಕೆಯಾಗಿವೆ.

ಈ ಸಮೀಕ್ಷೆಯ ಅಂದಾಜಿನಂತೆ, ಉಚಿತ ಧಾನ್ಯಗಳನ್ನು ಪಡೆಯುವುದರಿಂದ ಒಂದು ಕುಟುಂಬದ ಅನುಭೋಗದ ಮಟ್ಟ ಸುಧಾರಿಸಿದ್ದರೆ, ಅದು ಆ ಕುಟುಂಬಕ್ಕೆ ಸಿಕ್ಕ ನೈಜ ಕಲ್ಯಾಣ ಲಾಭ. ಆದರೆ, ಅದು ಅವರ ಹೆಚ್ಚಿನ ಗಳಿಕೆ, ಉತ್ಪಾದಕತೆ ಅಥವಾ ಸುರಕ್ಷಿತ ಜೀವನೋಪಾಯಕ್ಕೆ ಪುರಾವೆಯಲ್ಲ. ಆದ್ದರಿಂದಲೇ, ದೇಶದ 55%ಗೂ ಹೆಚ್ಚಿನ ಜನರು ಪಡಿತರ ವ್ಯವಸ್ಥೆಯನ್ನು ಅವಲಂಬಿಸಿದ್ದಾರೆ. ವಿಶ್ವಬ್ಯಾಂಕ್‌ನ ಲೆಕ್ಕಾಚಾರದಂತೆ ಬಡತನದಿಂದ ಹೊರಬಂದಿರುವ ಲಕ್ಷಾಂತರ ಕುಟುಂಬಗಳಿಗೂ ಇಂದಿಗೂ ಸರ್ಕಾರಿ ಆಹಾರಧಾನ್ಯ ನೆರವು ಅತ್ಯಗತ್ಯ ಎಂಬುದೇ ವಾಸ್ತವ.  

ವಿಶ್ವಬ್ಯಾಂಕ್‌ನ ವರದಿಯು ಭಾರತದಲ್ಲಿ ಉದ್ಯೋಗ ಮತ್ತು ದುಡಿಮೆಯಲ್ಲಿ ಭಾಗವಹಿಸುವವರ ಪ್ರಮಾಣ ಹೆಚ್ಚಾಗಿರುವುದನ್ನು ಗುರುತಿಸಿದೆ. ಆದರೆ, ಇಲ್ಲಿ ಉದ್ಯೋಗದ ಪ್ರಮಾಣಕ್ಕಿಂತ ಗುಣಮಟ್ಟವನ್ನು ಪರಿಶೀಲಿಸುವುದು ಮುಖ್ಯ ಸಣ್ಣ ರೈತರು, ದಿನಗೂಲಿ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು ಹಾಗೂ ಅಸಂಘಟಿತ ವಲಯದ ನೌಕರರಿಗೆ ಪ್ರತಿದಿನವೂ ಕೆಲಸ ಮತ್ತು ನಿರ್ದಿಷ್ಟ ಆದಾಯ ಸಿಗುತ್ತದೆ ಎಂಬ ಖಾತರಿಯಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಉಚಿತ ಆಹಾರಧಾನ್ಯ ದೊರೆಯುವುದು ಕುಟುಂಬದ ಜೀವನ ನಿರ್ವಹಣೆಗೆ ನೆರವಾಗುತ್ತದೆ. ಆದರೆ, ಈ ನೆರವಿನ ಅಗತ್ಯ ಮುಂದುವರಿಯುತ್ತಿರುವುದಕ್ಕೆ ಕಾರಣವೇನು? ಕೇವಲ ಆಹಾರಧಾನ್ಯದ ಬೆಲೆಯೇ ಸಮಸ್ಯೆಯೇ? ಅಥವಾ ಲಕ್ಷಾಂತರ ಕುಟುಂಬಗಳ ಆದಾಯವೇ ಜೀವನ ನಿರ್ವಹಣೆಗೆ ಸಾಕಾಗದಿರುವುದು ಮೂಲ ಸಮಸ್ಯೆಯೇ? – ಈ ಪ್ರಶ್ನೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಜೊತೆಗೆ, ಉದ್ಯೋಗ ಸಂಖ್ಯೆಯ ಬಗ್ಗೆ ಮಾತನಾಡುವಷ್ಟೇ ಗಂಭೀರವಾಗಿ, ಉದ್ಯೋಗದ ಅವಧಿ, ನೈಜ ವೇತನ, ಸಾಮಾಜಿಕ ಭದ್ರತೆ ಹಾಗೂ ಕಾರ್ಮಿಕರ ಜೀವನಮಟ್ಟದ ಬಗ್ಗೆಯೂ ಗಮನಹರಿಸಬೇಕು.

ಬಡತನದ ಅಂಕಿಅಂಶಗಳಲ್ಲಿ ಹೆಚ್ಚಾಗಿ ನಿರ್ಲಕ್ಷ್ಯಕ್ಕೆ ಒಳಗಾಗುವ ಸಂಗತಿಯೆಂದರೆ ಆರ್ಥಿಕ ಅಭದ್ರತೆ. ಬಡತನದ ರೇಖೆಯಿಂದ ಸ್ವಲ್ಪ ಮೇಲೇರಿದ ಕುಟುಂಬಕ್ಕೆ ಅನಾರೋಗ್ಯ, ಅಪಘಾತ, ಉದ್ಯೋಗ ನಷ್ಟ, ಬೆಳೆಹಾನಿ ಅಥವಾ ಸಾಲದ ಹೊರೆಯಂತಹ ಒಂದೇ ಒಂದು ಅನಿರೀಕ್ಷಿತ ಘಟನೆಯು ದೊಡ್ಡ ಸಂಕಷ್ಟ ಉಂಟುಮಾಡಿಬಿಡುತ್ತದೆ. ಆ ಕುಟುಂಬವನ್ನು ಮತ್ತೆ ಬಡತನಕ್ಕೆ ತಳ್ಳುತ್ತದೆ. ವಿಶ್ವಬ್ಯಾಂಕ್‌ನ ಬಡತನದ ಅಂಕಿಅಂಶಗಳು ಕುಟುಂಬಗಳ ಒಂದು ಅವಧಿಯ ಬಳಕೆ ಮಟ್ಟವನ್ನು ಅಂದಾಜಿಸುತ್ತವೆಯೇ ಹೊರತು, ಆರ್ಥಿಕ ಆಘಾತಗಳನ್ನು ಎದುರಿಸುವ ಕುಟುಂಬಗಳ ಸಾಮರ್ಥ್ಯದ ಸಂಪೂರ್ಣ ಚಿತ್ರಣವನ್ನು ನೀಡುವುದಿಲ್ಲ.

ಈ ಹಿನ್ನೆಲೆಯಲ್ಲಿ ಬಡತನದ ರೇಖೆಯನ್ನು ದಾಟಿರುವವರ ಸಂಖ್ಯೆ ಎಷ್ಟಿದೆ ಎಂಬುದರ ಜೊತೆಗೆ, ಆರ್ಥಿಕ ಅಭದ್ರತೆ ಹಾಗೂ ಬಡತನಕ್ಕೆ ಮರಳುವ ಅಪಾಯದಲ್ಲಿರುವವರ ಸಂಖ್ಯೆ ಎಷ್ಟಿದೆ ಎಂಬುದನ್ನೂ ಸರ್ಕಾರ ಪರಿಗಣಿಸಬೇಕಾಗುತ್ತದೆ.

ಈ ಲೇಖನ ಓದಿದ್ದೀರಾ?: ಸಮಾನತೆಯ ಮರೆಯಲ್ಲಿ ಅಸಮಾನತೆಯ ನೆರಳು: ಹಸಿರು ಕನಸುಗಳ ಕಾಲಡಿಯಲ್ಲಿ ಸಿಲುಕಿದ ಸತ್ಯಾನ್ವೇಷಣೆ!

“ಭಾರತೀಯ ಕುಟುಂಬ ವ್ಯವಸ್ಥೆಯು ಸದಸ್ಯರಿಗೆ ಆರ್ಥಿಕ ಭದ್ರತೆ ಒದಗಿಸುತ್ತದೆ” ಎಂಬ ವಾದವನ್ನು ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರ ಮುಂದಿಡುತ್ತಿದೆ. ಕುಟುಂಬದ ಸದಸ್ಯರು ಪರಸ್ಪರ ನೆರವಾಗುವುದು ನಿಜ. ನಿರುದ್ಯೋಗಿ ಯುವಕರನ್ನು ಪೋಷಕರು ಸಾಕುತ್ತಾರೆ. ವಯಸ್ಸಾದವರನ್ನು ಮಕ್ಕಳು ನೋಡಿಕೊಳ್ಳುತ್ತಾರೆ. ಚಿಕಿತ್ಸೆಗಾಗಿ ಕುಟುಂಬದ ಉಳಿತಾಯ ಅಥವಾ ಆಭರಣಗಳನ್ನು ಬಳಸಲಾಗುತ್ತದೆ. ಆದರೆ, ಇದು ಆರ್ಥಿಕ ಸಮೃದ್ಧಿಯ ಸಂಕೇತವೇ ಅಥವಾ ಸಮರ್ಪಕ ಸಾಮಾಜಿಕ ಭದ್ರತೆಯ ಕೊರತೆಯಿಂದ ಹುಟ್ಟಿದ ಅನಿವಾರ್ಯತೆಯೇ?

ಇದೇ ಸಂದರ್ಭದಲ್ಲಿ, ಶ್ರೀಮಂತ ಉದ್ಯಮ ಕುಟುಂಬಗಳ ಆಸ್ತಿ ಮತ್ತು ಸಂಪತ್ತನ್ನು ಭೂರಹಿತ ಕೃಷಿಕಾರ್ಮಿಕನ ಕುಟುಂಬದ ಆರ್ಥಿಕ ಸಾಮರ್ಥ್ಯದೊಂದಿಗೆ ಹೋಲಿಸಲಾಗುವುದಿಲ್ಲ. ಶ್ರೀಮಂತ ಕುಟುಂಬಗಳಿಗೆ ಪೀಳಿಗೆಯಿಂದ ಪೀಳಿಗೆಗೆ ಆಸ್ತಿ ವರ್ಗಾವಣೆಯಾಗುತ್ತದೆ. ಬಡ ಕುಟುಂಬಗಳಿಗೆ ಅನೇಕ ಸಂದರ್ಭಗಳಲ್ಲಿ ಸಾಲ ಮತ್ತು ಅಭದ್ರತೆಯೇ ವರ್ಗಾವಣೆಯಾಗುತ್ತದೆ.

ಕುಟುಂಬಗಳು ಒಗ್ಗಟ್ಟಿನಿಂದ ಸಂಕಷ್ಟಗಳನ್ನು ಎದುರಿಸುತ್ತಿವೆ ಎಂಬ ಕಾರಣಕ್ಕೆ ಸರ್ಕಾರವು ತನ್ನ ಸಾಮಾಜಿಕ ಜವಾಬ್ದಾರಿಯಿಂದ ಹಿಂದೆ ಸರಿಯಲಾಗುವುದಿಲ್ಲ.

ವಿಶ್ವಬ್ಯಾಂಕ್ ವರದಿ ಹೇಳುವಂತೆ ಭಾರತದಲ್ಲಿ ಬಡತನ ಗಣನೀಯವಾಗಿ ಕಡಿಮೆಯಾಗಿದೆ ಎಂದೇ ಭಾವಿಸಿದರೂ, ಬಡತನ ರೇಖೆಯಿಂದ ಮೇಲೇರಿರುವ ಕುಟುಂಬಗಳು ತಮ್ಮ ದುಡಿಮೆಯಿಂದಲೇ ಆಹಾರ, ಶಿಕ್ಷಣ, ಆರೋಗ್ಯ ಮತ್ತು ವಸತಿ ವೆಚ್ಚಗಳನ್ನು ನಿಭಾಯಿಸಲು ಸಾಧ್ಯವಾಗುತ್ತಿದೆಯೇ ಎಂಬುದು ಅತಿ ಮುಖ್ಯ. ಪಡಿತರ ವ್ಯವಸ್ಥೆಯಿಂದ ಕುಟುಂಬಗಳ ಆಹಾರದ ಚೀಲ ತುಂಬಿದೆ. ಆದರೆ, ಕುಟುಂಬದ ಜೇಬು ಖಾಲಿಯೇ ಉಳಿದಿದೆ.

ಆದ್ದರಿಂದ, ಸರ್ಕಾರವು ಎಷ್ಟು ಕೋಟಿ ಭಾರತೀಯರು ಬಡತನದ ರೇಖೆಯನ್ನು ದಾಟಿದ್ದಾರೆ ಎಂಬುದರ ಬಗ್ಗೆ ಹೆಚ್ಚು ಮಾತನಾಡುವುದಕ್ಕಿಂತ, ಬಡತನದ ರೇಖೆ ದಾಟಿದವರಲ್ಲಿ ಎಷ್ಟು ಮಂದಿ ಮತ್ತೆ ಬಡತನಕ್ಕೆ ಮರಳುವ ಭಯವಿಲ್ಲದೆ ಬದುಕುತ್ತಿದ್ದಾರೆ ಎಂಬುದರ ಕುರಿತು ಮಾತನಾಡಬೇಕು. ಅಂಕಿಅಂಶಗಳಲ್ಲಿ ಬಡತನ ಕಡಿಮೆಯಾಗಿರಬಹುದು. ಆದರೆ ಜನರ ಬದುಕಿನಿಂದ ಬಡತನದ ಭಯ ದೂರವಾಗುವವರೆಗೂ ಬಡತನ ನಿರ್ಮೂಲನೆಯ ಹೋರಾಟ ಪೂರ್ಣಗೊಂಡಿದೆ ಮತ್ತು ಅಭಿವೃದ್ಧಿಯ ನಿಜವಾದ ಗುರಿ ತಲುಪಲಾಗಿದೆ ಎಂದು ಹೇಳಲು ಸಾಧ್ಯವಿಲ್ಲ!

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣ: ಸುಪ್ರೀಂಗೆ ವರದಿ ನೀಡುವ ಹೊಸ ಎಸ್‌ಐಟಿ ತನಿಖೆಗೆ ಕಾಂಗ್ರೆಸ್ ಆಗ್ರಹ

ಅಯೋಧ್ಯೆಯ ರಾಮಮಂದಿರದ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಯ ಪಾರದರ್ಶಕತೆ...

ಗಾಂಧೀಜಿ ತತ್ವಗಳ ಪ್ರಸ್ತುತತೆ: ಸಮಾನತೆಯ ಸಮಾಜಕ್ಕೆ ಶ್ರಮದ ಘನತೆಯೇ ಅಡಿಪಾಯ

ಸರ್ವಜನರ ಹಿತ, ಎಲ್ಲ ಕೆಲಸಗಳಿಗೂ ಸಮಾನ ಗೌರವ ಮತ್ತು ಶಾರೀರಿಕ ಶ್ರಮದ...

ಇಂಧನ-ಆಹಾರ ದರ ಏರಿಕೆ: ಅಕ್ಟೋಬರ್ ಸಗಟು ಹಣದುಬ್ಬರ 12.29%ಗೆ ಜಿಗಿತ!

ದೇಶದ ಜನಸಾಮಾನ್ಯರು ಮತ್ತು ಉದ್ಯಮ ವಲಯಕ್ಕೆ ಬೆಲೆ ಏರಿಕೆಯ ಬಿಸಿ ಮತ್ತಷ್ಟು...

ವಿದ್ಯಾರ್ಥಿಗಳೆದರು ಹರೀಶ್ ಪೂಂಜಾ ದ್ವೇಷ ಭಾಷಣ; ಕ್ರಮಕ್ಕೆ ಸಚಿವ ಮಧು ಬಂಗಾರಪ್ಪ ಸೂಚನೆ

ಜನಪ್ರತಿನಿಧಿಯಾಗಿ ಹೇಗೆ ಮಾತನಾಡಬೇಕು ಎಂಬ ಕನಿಷ್ಠ ಪರಿಜ್ಞಾನವೂ ಇಲ್ಲದೆ ಶಾಲಾ ಮಕ್ಕಳ...