ಕರ್ನಾಟಕದ 2025-26ರ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಪರೀಕ್ಷೆ ಬರೆದ ಒಟ್ಟು ವಿದ್ಯಾರ್ಥಿಗಳಲ್ಲಿ 86.48% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಉತ್ತೀರ್ಣರಾದವರ ಪ್ರಮಾಣ ಕಳೆದ ವರ್ಷಕ್ಕಿಂತ 13.03%ರಷ್ಟು ಹೆಚ್ಚಳವಾಗಿದೆ. ಈ ಫಲಿತಾಂಶವು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಸಂಸತ ಹುಟ್ಟುಹಾಕಿದೆ. ಈ ಫಲಿತಾಂಶವು ವಿದ್ಯಾರ್ಥಿಗಳ ಸ್ವಂತ ಸಾಮರ್ಥ್ಯದಿಂದ ಬಂದಿದೆ. ಇದು, ಕರ್ನಾಟಕ ಸರ್ಕಾರದ ದೂರದೃಷ್ಟಿಯ ಹಲವು ಕ್ರಮಗಳು, ಶಿಕ್ಷಣ ಇಲಾಖೆಯ ನಿರಂತರ ಪ್ರಯತ್ನಗಳು ಹಾಗೂ ವಿದ್ಯಾರ್ಥಿಗಳ ಶ್ರಮದ ಫಲ. ರಾಜ್ಯದ ಶೈಕ್ಷಣಿಕ ಗುಣಮಟ್ಟವು ಹೆಚ್ಚುತ್ತಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಈ ವರ್ಷ 7,10,363 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ, 3,35,138 ಮಂದಿ ಬಾಲಕರು ಮತ್ತು 3,31,359 ಬಾಲಕಿಯರು. 6.10 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಬಾಲಕರು ಶೇ.83.65 ಮತ್ತು ಶೇ.88.70 ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಶೇ.72.86, ವಾಣಿಜ್ಯ ವಿಭಾಗದಲ್ಲಿ ಶೇ.88.04, ವಿಜ್ಞಾನ ವಿಭಾಗದಲ್ಲಿ ಶೇ.91.69 ಫಲಿತಾಂಶ ಬಂದಿದೆ.
ಇದನ್ನು ಓದಿದ್ದೀರಾ? ಚಿಕ್ಕಮಗಳೂರು l ದ್ವಿತೀಯ ಪಿಯುಸಿ ವಿದ್ಯಾರ್ಥಿ ಅಸಹಜ ಸಾವು
2024 ಮತ್ತು 2025ರ ಫಲಿತಾಂಶಕ್ಕೆ ಹೋಲಿಸಿದರೆ, ಇದು ಅತ್ಯುತ್ತಮ ಫಲಿತಾಂಶವೇ ಆಗಿದೆ. 2024ರಲ್ಲಿ ಒಟ್ಟು 6,98,478 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. 6,81,079 ವಿದ್ಯಾರ್ಥಿಗಳು ಪರೀಕ್ಷೆ ಪಡೆದಿದ್ದರು. 5,52,690 ಮಂದಿ ಉತ್ತೀರ್ಣರಾಗಿದ್ದರು. ಒಟ್ಟು ಫಲಿತಾಂಶವು 2023ಕ್ಕಿಂತ 6.48% ಹೆಚ್ಚಳದೊಂದಿಗೆ 81.15%ಗೆ ಏರಿಕೆಯಾಗಿತ್ತು.
ಆದರೆ, ಈ ಫಲಿತಾಂಶದ ಹಿಂದೆ ಪರೀಕ್ಷೆಗಳು ಪಾರದರ್ಶಕವಾಗಿ ಮತ್ತು ಕಟ್ಟುನಿಟ್ಟಾಗಿ ನಡೆಯದೇ ಇರುವುದು ಹಾಗೂ ಗ್ರೇಸ್ ಅಂಕಗಳು ಪಾತ್ರ ಹೆಚ್ಚಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ತಜ್ಞರು ಅಭಿಪ್ರಾಯ ಪಟ್ಟಿದ್ದರು.
ಆದ್ದರಿಂದ, ರಾಜ್ಯ ಸರ್ಕಾರವು ಪರೀಕ್ಷೆಯ ಪವಿತ್ರತೆಯನ್ನು ಕಾಪಾಡಲು, ಮಾಲ್ಪ್ರಾಕ್ಟಿಸ್ ತಡೆಯಲು ಹಾಗೂ ವಿದ್ಯಾರ್ಥಿಗಳ ನಿಜವಾದ ಕಲಿಕೆಯನ್ನು ಪ್ರೋತ್ಸಾಹಿಸಲು ಹಲವು ಕ್ರಮಗಳು ಮತ್ತು ಸುಧಾರಣೆಗಳನ್ನು ತಂದಿತು. ಶಿಕ್ಷಣ ಕ್ಷೇತ್ರದಲ್ಲಿ ಅದರಲ್ಲೂ ಶಾಲಾ ಮತ್ತು ಕಾಲೇಜುಗಳ ಶೈಕ್ಷಣಿಕ ಪರೀಕ್ಷೆಗಳಲ್ಲಿ ನಾನಾ ಬದಲಾವಣೆಗಳನ್ನು ಮಾಡಿತು.
2025ರ ಪರೀಕ್ಷೆಗಳ ವೇಳೆ, ಪರೀಕ್ಷಾ ಹಾಲ್‌ಗಳ ಮೇಲೆ ಕಟ್ಟೆಚ್ಚರ ವಹಿಸಲಾಗಿತ್ತು. ಪ್ರತಿ ಮೂಲೆಯನ್ನು ವೆಬ್ಕ್ಯಾಮ್ ಮೂಲಕ ನೇರ ಪ್ರಸಾರ ಮಾಡಲಾಗಿತ್ತು. ಈ ಕ್ರಮ ಯಾವ ಮಟ್ಟಿಗಿತ್ತೆಂದರೆ, ಪ್ರಾಯೋಗಿಕ ಪರೀಕ್ಷೆಗಳನ್ನೂ ವೆಬ್-ಸ್ಟ್ರೀಮಿಂಗ್ ಮಾಡಲಾಗಿತ್ತು. ಪರಿಣಾಮ, ಮಾಲ್ಪ್ರಾಕ್ಟಿಸ್ (ಕಾಪಿ, ಅಕ್ರಮ) ಸಂಪೂರ್ಣವಾಗಿ ತಡೆಯಲಾಯಿತು.
ಜತೆಗೆ, ಹಿಂದಿನ ವರ್ಷಗಳಲ್ಲಿ ನೀಡಲಾಗಿದ್ದ ಗ್ರೇಸ್ ಮಾರ್ಕ್ಸ್ ಅಥವಾ ಸಡಿಲತೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಯಿತು. 2025ರಲ್ಲಿ, ಕೆಲವು ಬಾರ್ಡರ್ಲೈನ್ ವಿದ್ಯಾರ್ಥಿಗಳಿಗೆ ನೀಡಲಾದ ಸಣ್ಣ ಸಡಿಲಿಕೆಗಳ ಹೊರತಾಗಿ, ಯಾವುದೇ ಗ್ರೇಸ್ ಮಾರ್ಕ್ಸ್ ನೀಡಲಿಲ್ಲ. ಮೌಲ್ಯಮಾಪನವನ್ನೂ ಹೆಚ್ಚು ನಿಖರತೆ ಮತ್ತು ಕಟ್ಟುನಿಟ್ಟಾಗಿ ನಡೆಸಲಾಯಿತು. ಆನ್ಲೈನ್ ಮಾರ್ಕ್ ಎಂಟ್ರಿ ವ್ಯವಸ್ಥೆ ಬಲಪಡಿಸಲಾಯಿತು.
ಆದಾಗ್ಯೂ, ಮುಖ್ಯ ಪರೀಕ್ಷೆಯಲ್ಲಿ ನಪಾಸು ಆದವರಿಗೆ ಮೂರು ಹಂತಗಳಲ್ಲಿ ಪೂರಕ ಪರೀಕ್ಷೆಗಳನ್ನು ನಡೆಸಲು ಅವಕಾಶ ನೀಡಲಾಯಿತು. ಅದೂ, ಯಾವುದೇ ಪರೀಕ್ಷಾ ಶುಲ್ಕವಿಲ್ಲದೆಯೇ, ಅನುತ್ತೀರ್ಣರಾಗಿದ್ದ ವಿದ್ಯಾರ್ಥಿಗಳು ಪೂರಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಸರ್ಕಾರವು ಅವಕಾಶ ಮಾಡಿಕೊಟ್ಟಿತು.
ಇದನ್ನು ಓದಿದ್ದೀರಾ? ಸುಧಾರಿಸಿದ ದ್ವಿತೀಯ ಪಿಯುಸಿ ಫಲಿತಾಂಶ : 24 ರಿಂದ 18ನೇ ಸ್ಥಾನಕ್ಕೇರಿದ ತುಮಕೂರು
ಕಟ್ಟುನಿಟ್ಟಿನ ನಿಗಾ ಮತ್ತು ಕ್ರಮಗಳ ಫಲವಾಗಿ, 2025ರ ಫಲಿತಾಂಶವು ಗಮನಾರ್ಹವಾಗಿ ಕುಸಿಯಿತು. 2025ರಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದ ಒಟ್ಟು 6,37,805 ವಿದ್ಯಾರ್ಥಿಗಳಲ್ಲಿ 4,68,439 ಮಂದಿ ಮಾತ್ರವೇ ಉತ್ತೀರ್ಣರಾದರು. ಫಲಿತಾಂಶವು 73.45%ಗೆ ಕುಸಿಯಿತು. 2024ರ 81.15%ಗೆ ಹೋಲಿಸಿದರೆ, ಬರೋಬ್ಬರಿ 8% ಕುಸಿತ ಕಂಡಿತು.
ಆದರೂ, ಸರ್ಕಾರ ಮತ್ತು ಶಿಕ್ಷಣ ಇಲಾಖೆ ತಮ್ಮ ಕ್ರಮಗಳು ಮತ್ತು ಪಾರದರ್ಶಕತೆಯಲ್ಲಿ ರಾಜಿ ಇಲ್ಲವೆಂದು ಹೇಳಿತು. “ಫಲಿತಾಂಶ ಕಡಿಮೆಯಾದರೂ ಪರೀಕ್ಷೆಯ ಪವಿತ್ರತೆ ಕಾಪಾಡಲಾಗಿದೆ. ಇದು ವಿದ್ಯಾರ್ಥಿಗಳ ನಿಜವಾದ ಕಾರ್ಯಕ್ಷಮತೆಯನ್ನು ಪ್ರತಿಬಿಂಬಿಸುತ್ತದೆ. ಪರೀಕ್ಷೆಗಳನ್ನು ಸಡಿಲತೆಯಿಲ್ಲದೆ, ಪಾರದರ್ಶಕತೆಯೊಂದಿಗೆ ನಡೆಸಿದಾಗ ವಿದ್ಯಾರ್ಥಿಗಳ ನಿಜವಾದ ಪ್ರಗತಿ ಕಾಣುತ್ತದೆ” ಎಂದು ಶಿಕ್ಷಣ ಸಚಿವರು ಹೇಳಿದ್ದರು.
ಇಲಾಖೆಯ ಕ್ರಮಗಳು ಮತ್ತು ಬದಲಾವಣೆಗಳು ದೀರ್ಘಕಾಲೀನವಾಗಿ ಗುಣಮಟ್ಟ ಸುಧಾರಿಸಲು ಸಹಾಯಕವಾಗುತ್ತವೆ ಎಂದ ಸರ್ಕಾರವು, ಈ ಕ್ರಮಗಳ ಜೊತೆಗೆ, ಶಿಕ್ಷಣಿಕ ಕ್ಷೇತ್ರಗಳಲ್ಲಿನ ಸೌಲಭ್ಯಗಳ ಸುಧಾರಣೆ ಅಗತ್ಯವಿದೆ ಎಂಬುದನ್ನು ಒಪ್ಪಿಕೊಂಡಿತು. ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಗಳನ್ನು ಬರೆಯಲು ಅವಕಾಶಗಳನ್ನು ನೀಡಿತು.
2025-26ರಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಕಟ್ಟುನಿಟ್ಟಿನ ಕ್ರಮಗಳೊಂದಿಗೆ ಮತ್ತಷ್ಟು ಸುಧಾರಣೆಗಳನ್ನು ತಂದಿತು. ಈ ವರ್ಷ, ಉತ್ತೀರ್ಣರಾಗಲು ಅಗತ್ಯವಿರುವ ಕನಿಷ್ಠ ಅಂಕಗಳಲ್ಲಿ ಕೆಲವು ಬದಲಾವಣೆಗಳನ್ನು ತಂದಿತು. 2025-26ರ ಶೈಕ್ಷಣಿಕ ವರ್ಷದಿಂದ ಅನ್ವಯವಾಗುವಂತೆ ಉತ್ತೀರ್ಣತೆಯ ಕಟ್ಆಫ್ಅನ್ನು ಪ್ರತಿ ವಿಷಯದಲ್ಲಿ ಕನಿಷ್ಠ 30% ಅಂಕಗಳೊಂದಿಗೆ ಒಟ್ಟು 33% ಅಂಕಗಳಿಗೆ ಇಳಿಸಿತು.
ಇದೀಗ, 2026ರಲ್ಲಿ ಸರ್ಕಾರವು ತನ್ನ ಕಟ್ಟುನಿಟ್ಟಿನ ಕ್ರಮಗಳು ಮತ್ತು ಸುಧಾರಣೆಗಳೊಂದಿಗೆ ಅತ್ಯುತ್ತಮ ಫಲಿತಾಂಶ ಬರುವಂತೆ ಮಾಡಿದೆ. ಪರೀಕ್ಷೆ ಮತ್ತು ಮೌಲ್ಯಮಾನದಲ್ಲಿ ಪ್ರಮುಖ ಬದಲಾವಣೆಗಳಾದರೂ, ಎರಡೇ ವರ್ಷದಲ್ಲಿ ಸರ್ಕಾರದ ಕ್ರಮಗಳು ಫಲ ನೀಡಿವೆ. ಪ್ರಸ್ತುತ 86% ಫಲಿತಾಂಶ ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, 13%ರಷ್ಟು ಹೆಚ್ಚಾಗಿದೆ.
ಈ ಫಲಿತಾಂಶವು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರಲ್ಲಿ ಹೊಸ ಉತ್ಸಾಹವನ್ನು ಮೂಡಿಸಿದೆ. ಬಾಲಕಿಯರು ಈ ಬಾರಿಯೂ ಬಾಲಕರಿಗಿಂತ ಉತ್ತಮ ಪ್ರದರ್ಶನ ನೀಡಿ, ರಾಜ್ಯದ ಶೈಕ್ಷಣಿಕ ಪ್ರಗತಿಯಲ್ಲಿ ಮುಂಚೂಣಿಯಲ್ಲಿದ್ದಾರೆ.
ಫಲಿತಾಂಶದ ಹೆಚ್ಚಳವು ಕೇವಲ ಸಂಖ್ಯೆಯಲ್ಲಿನ ಏರಿಕೆ ಮಾತ್ರವಲ್ಲ, ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಗುಣಾತ್ಮಕ ಬದಲಾವಣೆಯ ಸಂಕೇತವೂ ಆಗಿದೆ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ. ಇನ್ನು ಈ ಸಾಲಿನಲ್ಲಿ 1,80,529 ವಿದ್ಯಾರ್ಥಿಗಳು ಡಿಸ್ಟಿಂಗ್ಸನ್ ಬಂದಿದ್ದಾರೆ. ತೇರ್ಗಡೆ ಆಗದ ಮಕ್ಕಳಿಗೆ ಮತ್ತೊಂದು ಅವಕಾಶವಿದೆ. ಮಕ್ಕಳು ಆತ್ಮ ವಿಶ್ವಾಸ ಇಟ್ಟುಕೊಳ್ಳಲಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.




