ಉತ್ತರ ಪ್ರದೇಶದ ಕುಂದಾದಲ್ಲಿ ನಡೆದ ರಾಮಕಥಾ ಕಾರ್ಯಕ್ರಮದಲ್ಲಿ ಒಂದೇ ವೇದಿಕೆ ಹಂಚಿಕೊಂಡು ಆತ್ಮೀಯತೆ ಮೆರೆದಿದ್ದ ಯೋಗ ಗುರು ಬಾಬಾ ರಾಮ್‌ದೇವ್ ಮತ್ತು ಬಾಗೇಶ್ವರ ಧಾಮದ ಪೀಠಾಧಿಪತಿ ಧೀರೇಂದ್ರ ಕೃಷ್ಣ ಶಾಸ್ತ್ರಿ ನಡುವೆ ಕೆಲವೇ ದಿನಗಳಲ್ಲಿ ತೀವ್ರ ವಾಕ್ಸಮರ ಭುಗಿಲೆದ್ದಿದೆ. ಧಾರ್ಮಿಕ ವಲಯದಲ್ಲಿ ಆರಂಭವಾದ ಈ ವಿವಾದ ಇದೀಗ ರಾಜಕೀಯ ತಿರುವು ಪಡೆದುಕೊಂಡು ಚರ್ಚೆಗೆ ಗ್ರಾಸವಾಗಿದೆ.
ಕಥಾ ಪ್ರವಚನವೊಂದರಲ್ಲಿ ಧೀರೇಂದ್ರ ಶಾಸ್ತ್ರಿ ಶ್ರೀರಾಮ ಮತ್ತು ಶ್ರೀಕೃಷ್ಣನ ನಡುವೆ ಹೋಲಿಕೆ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಅವರು ಶ್ರೀರಾಮನನ್ನು ನೇರ ಸ್ವಭಾವದವನು ಎಂದು ಮತ್ತು ಶ್ರೀಕೃಷ್ಣನನ್ನು ಕೃಷ್ಣನ ಸಾಂಪ್ರದಾಯಿಕ ತ್ರಿಭಂಗಿ ಭಂಗಿಯನ್ನು ಉಲ್ಲೇಖಿಸಿ ‘ಡೊಂಕು’ ಎಂದು ಬಣ್ಣಿಸಿದ್ದರು. ಈ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿ, ಕ್ಷಮೆಯಾಚಿಸುವಂತೆ ಒತ್ತಾಯ ಕೇಳಿಬಂದಿತ್ತು. ಬಳಿಕ ತಾವು ಕೃಷ್ಣನ ಪರಮ ಭಕ್ತನೆಂದು ಸ್ಪಷ್ಟಪಡಿಸಿದ್ದ ಶಾಸ್ತ್ರಿ, ‘ಆ ಮಾತುಗಳು ಭಾವನಾತ್ಮಕ ಆವೇಶದಲ್ಲಿ ಹೊರಬಂದಿದ್ದವು’ ಎಂದು ಕ್ಷಮೆಯಾಚಿಸಿದ್ದರು.
ಕುಂದಾದ ರಾಮಕಥಾದಲ್ಲಿ ಶಾಸ್ತ್ರಿ ಅವರನ್ನು ಅಪ್ಪಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದ ರಾಮ್‌ದೇವ್, ಕೆಲವೇ ದಿನಗಳ ಅಂತರದಲ್ಲಿ ಜಮ್ಶೆಡ್‌ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶಾಸ್ತ್ರಿ ವಿರುದ್ಧ ವಾಗ್ದಾಳಿ ನಡೆಸಿದರು. “ದೇವರು ಮತ್ತು ದೇವತೆಗಳ ನಡುವೆ ಹೋಲಿಕೆ ಮಾಡಿ ‘ರಾಮ ಮಹಾನ್, ಕೃಷ್ಣ ವಕ್ರ’ ಎಂದು ಹೇಳುವವರು, ಬಳಿಕ ಬಾಂಕೆ ಬಿಹಾರಿ ಮುಂದೆ ತಲೆಬಾಗಿ ಕ್ಷಮೆ ಕೇಳುತ್ತಾರೆ. ಆದರೂ ಮತ್ತೆ ‘ಕೃಷ್ಣ ವಕ್ರವಾಗಿಯೇ ಇದ್ದಾನೆ’ ಎನ್ನುತ್ತಾರೆ. ಇವರಿಗೆ ಬುದ್ಧಿ ಭ್ರಮಣೆಯಾಗಿದೆ. ಇವರು ಡೋಂಗಿಗಳು” ಎಂದು ರಾಮ್‌ದೇವ್ ಕಟುವಾಗಿ ಟೀಕಿಸಿದರು. ದೇವರ ಬಗ್ಗೆ ಹಗುರವಾಗಿ ಮಾತನಾಡುವ ಹಕ್ಕು ಯಾರಿಗೂ ಇಲ್ಲ, ಪ್ರತಿಯೊಂದಕ್ಕೂ ಘನತೆ ಮತ್ತು ಶಿಷ್ಟಾಚಾರವಿದೆ ಎಂದು ಅವರು ಗುಡುಗಿದ್ದರು.
ವಿವಾದ ತಾರಕಕ್ಕೇರುತ್ತಿದ್ದಂತೆ ಎರಡೂ ಕಡೆಯಿಂದ ತಕ್ಷಣವೇ ಶಮನದ ಪ್ರಯತ್ನಗಳು ನಡೆದವು. ನವೆಂಬರ್ 24ರಂದು ಹರಿದ್ವಾರದಲ್ಲಿ ಸುದ್ದಿಗೋಷ್ಠಿ ನಡೆಸಿದ ಬಾಬಾ ರಾಮ್‌ದೇವ್, ತಾವು ಶಾಸ್ತ್ರಿ ಅವರೊಂದಿಗೆ ಮಾತನಾಡಿದ್ದು, ಪ್ರೀತಿಯಿಂದ ಗದರಿಸಿರುವುದಾಗಿ ತಿಳಿಸಿದರು. “ಬಾಗೇಶ್ವರ ಬಾಬಾ ನನ್ನ ಮುಂದೆ ಮಗುವಿನಂತೆ, ನನ್ನ ತಮ್ಮ ಮತ್ತು ಶಿಷ್ಯನಂತೆ. ಅನುಚಿತ ಎನಿಸಿದ ವಿಷಯಕ್ಕೆ ನನ್ನ ಅಧಿಕಾರದಿಂದ ಬುದ್ಧಿ ಹೇಳಿದ್ದೇನೆ. ಅವರೂ ಅದನ್ನು ಪ್ರೀತಿಯಿಂದ ಸ್ವೀಕರಿಸಿದ್ದಾರೆ. ಸನಾತನ ಧರ್ಮ ವೈಜ್ಞಾನಿಕ ಮತ್ತು ದೈವಿಕವಾದದ್ದು, ಇಲ್ಲಿ ಮೂಢನಂಬಿಕೆಗೆ ಜಾಗವಿಲ್ಲ” ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಧೀರೇಂದ್ರ ಶಾಸ್ತ್ರಿ, ಪಠಾಣ್‌ಕೋಟ್‌ನ ಪ್ರವಚನವೊಂದರಲ್ಲಿ ರಾಮ್‌ದೇವ್ ಅವರನ್ನು ‘ಮಹಾಪುರುಷ’ ಮತ್ತು ‘ಪೋಷಕ’ ಎಂದು ಕರೆದರು. “ರಾಮ್‌ದೇವ್ ಜೀ ಬಹಳ ಸರಳ ವ್ಯಕ್ತಿ. ಕೆಲ ದಿನಗಳ ಹಿಂದೆ ನನ್ನನ್ನು ಹೊಗಳಿದ್ದರು, ಈಗ ಬೈದಿದ್ದಾರೆ. ನನಗೆ ಎರಡೂ ಖುಷಿಯೇ. ಅವರು ಗುರುಗಳು, ಪ್ರೀತಿಯಿಂದ ಏನು ಬೇಕಾದರೂ ಹೇಳಬಹುದು. ಅವರ ಟೀಕೆಯೂ ನನಗೆ ದೊಡ್ಡ ಆಶೀರ್ವಾದ. ನಾವು ಹಿಂದೂ ಸಮಾಜವನ್ನು ಒಗ್ಗೂಡಿಸಲು ಇದ್ದೇವೆಯೇ ಹೊರತು ಒಡೆಯಲು ಅಲ್ಲ” ಎಂದು ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದರು.
ಈ ಇಬ್ಬರೂ ಧಾರ್ಮಿಕ ನಾಯಕರು ಬಿಜೆಪಿಯ ಸೈದ್ಧಾಂತಿಕ ಮತ್ತು ರಾಜಕೀಯ ವಲಯಕ್ಕೆ ಹತ್ತಿರವಾಗಿರುವುದರಿಂದ ಈ ಬೆಳವಣಿಗೆ ರಾಜಕೀಯ ಮಹತ್ವ ಪಡೆದುಕೊಂಡಿದೆ. 2014ರ ಲೋಕಸಭಾ ಚುನಾವಣೆಯಿಂದಲೂ ರಾಮ್‌ದೇವ್ ಬಿಜೆಪಿ ಹಾಗೂ ಪ್ರಧಾನಿ ಮೋದಿ ಅವರನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಇತ್ತ ಧೀರೇಂದ್ರ ಶಾಸ್ತ್ರಿ ಅವರನ್ನು ಖುದ್ದು ಪ್ರಧಾನಿ ಮೋದಿ ಅವರೇ ‘ಸಹೋದರ’ ಎಂದು ಸಂಬೋಧಿಸಿದ್ದು, ಅವರ ಹಿಂದುತ್ವದ ಪ್ರತಿಪಾದನೆ ಬಿಜೆಪಿಯ ರಾಜಕೀಯ ಸಂದೇಶಗಳಿಗೆ ಪೂರಕವಾಗಿದೆ.
अनुलोम-विलोम pic.twitter.com/O0pQMRu1yc— Akhilesh Yadav (@yadavakhilesh) November 23, 2026
ಈ ನಡುವೆ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಈ ವಾಕ್ಸಮರವನ್ನು ಮುಂದಿಟ್ಟುಕೊಂಡು ಬಿಜೆಪಿ ಮತ್ತು ಈ ಧಾರ್ಮಿಕ ಮುಖಂಡರ ವಿರುದ್ಧ ವ್ಯಂಗ್ಯವಾಡಿದ್ದಾರೆ. ಶ್ರೀಕೃಷ್ಣನ ವಂಶಸ್ಥರೆಂದು ಗುರುತಿಸಿಕೊಳ್ಳುವ ಯಾದವ ಸಮುದಾಯದ ಬೆಂಬಲ ಹೊಂದಿರುವ ಸಮಾಜವಾದಿ ಪಕ್ಷವು, ಈ ಹಿಂದೆಯೂ ಶಾಸ್ತ್ರಿ ಅವರ ಕೃಷ್ಣನ ಕುರಿತ ಹೇಳಿಕೆಯನ್ನು ವಿರೋಧಿಸಿ ಉತ್ತರ ಪ್ರದೇಶದಲ್ಲಿ ಅವರ ಕಾರ್ಯಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು. 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಥುರಾದ ಶ್ರೀಕೃಷ್ಣ ಜನ್ಮಭೂಮಿಯಲ್ಲಿ ಭವ್ಯ ಮಂದಿರ ನಿರ್ಮಾಣದ ವಿಚಾರವನ್ನು ಬಿಜೆಪಿ ಮುನ್ನೆಲೆಗೆ ತರುತ್ತಿರುವ ಈ ಹೊತ್ತಿನಲ್ಲಿ, ಕೃಷ್ಣನ ಕುರಿತಾದ ಈ ವಿವಾದ ಬಿಜೆಪಿಗೆ ಇರುಸುಮುರುಸು ತಂದಿದೆ.
ಸದ್ಯಕ್ಕೆ ರಾಮ್‌ದೇವ್ ಮತ್ತು ಶಾಸ್ತ್ರಿ ‘ಗುರು-ಶಿಷ್ಯ’ ಬಾಂಧವ್ಯದ ಹೆಸರಿನಲ್ಲಿ ವಿವಾದಕ್ಕೆ ಅಂತ್ಯ ಹಾಡಿದ್ದಾರೆ. ಆದರೆ, ಒಂದೇ ಸೈದ್ಧಾಂತಿಕ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮತ್ತು ಹಿಂದೂ ಸಮಾಜದ ಮೇಲೆ ಪ್ರಭಾವ ಹೊಂದಿರುವ ಇಬ್ಬರು ಪ್ರಮುಖ ವ್ಯಕ್ತಿಗಳ ನಡುವಿನ ಈ ಬಹಿರಂಗ ಭಿನ್ನಾಭಿಪ್ರಾಯ ರಾಜಕೀಯ ವಲಯದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.



