ದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳಲ್ಲಿ ತೀವ್ರ ರಕ್ತಹೀನತೆ (Anaemia) ಮತ್ತು ಅಪೌಷ್ಟಿಕತೆ ಆತಂಕಕಾರಿಯಾಗಿ ಹೆಚ್ಚಳವಾಗಿದೆ. ಈ ವಿಚಾರದಲ್ಲಿ ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ICMR) ಇತ್ತೀಚಿನ ‘ಸಂಪದ’ (SAMPADA) ಸಮೀಕ್ಷಾ ವರದಿಯನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ಖರ್ಗೆ ಈ ಸಂಬಂಧ ಪೋಸ್ಟ್ ಮಾಡಿದ್ದಾರೆ.
“ಕಳೆದ 12 ವರ್ಷಗಳ ಮೋದಿ ಸರ್ಕಾರದ ಆಡಳಿತದಲ್ಲಿ ಹಲವು ಪೌಷ್ಟಿಕಾಂಶ ಯೋಜನೆಗಳು, ಸಾರವರ್ಧಿತ ಅಕ್ಕಿ ಮತ್ತು ಕಬ್ಬಿಣಾಂಶ ಪೂರಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಆದರೆ ಇಂದಿಗೂ ಕೋಟ್ಯಂತರ ಮಹಿಳೆಯರು ಮತ್ತು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಹೊಣೆ ಯಾರು” ಎಂದು ಖರ್ಗೆ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ರಾಜ್ಯ ಬಜೆಟ್ | ಮಾಜಿ ದೇವದಾಸಿಯರಿಗೆ ಪ್ರೋತ್ಸಾಹಧನ ಹೆಚ್ಚಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ದಕ್ಕಿದ್ದಿಷ್ಟು
ಇನ್ನು ಕೇಂದ್ರ ಸರ್ಕಾರದ ಸ್ವಂತ ಐಸಿಎಂಆರ್-ಸಂಪದ ವರದಿಯ ಅಂಕಿಅಂಶಗಳನ್ನು ಬಿಚ್ಚಿಟ್ಟಿರುವ ಖರ್ಗೆ, ದೇಶದಲ್ಲಿ ಸಂತಾನೋತ್ಪತ್ತಿ ವಯಸ್ಸಿನ ಶೇ. 55.9 ರಷ್ಟು ಮಹಿಳೆಯರು ಮತ್ತು 1 ರಿಂದ 4 ವರ್ಷದೊಳಗಿನ ಶೇ. 42 ರಷ್ಟು ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂದು ಎಕ್ಸ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.
“ಅಲ್ಲದೆ, ಸುಮಾರು ಮೂರನೇ ಎರಡರಷ್ಟು ಹದಿಹರೆಯದ ಬಾಲಕ-ಬಾಲಕಿಯರಲ್ಲಿ ವಿಟಮಿನ್ ಬಿ12 ಕೊರತೆಯಿದೆ. ವಿಶೇಷವಾಗಿ ಬಿಜೆಪಿ ಆಡಳಿತ ಇರುವ ಗುಜರಾತ್ ರಾಜ್ಯದಲ್ಲಿ ಸಂತಾನೋತ್ಪತ್ತಿ ವಯಸ್ಸಿನ ಶೇ. 66 ರಷ್ಟು ಮಹಿಳೆಯರು ಮತ್ತು ಶೇ. 57 ರಷ್ಟು ಚಿಕ್ಕ ಮಕ್ಕಳು ರಕ್ತಹೀನತೆ ಹೊಂದಿದ್ದಾರೆ” ಎಂದು ಉಲ್ಲೇಖಿಸಿದ್ದಾರೆ.
“ಸರ್ಕಾರವು ‘ಸೌಮ್ಯ’ (Mild) ರಕ್ತಹೀನತೆಯ ಬಗ್ಗೆ ಹೆಚ್ಚು ಒತ್ತು ನೀಡುವ ಮೂಲಕ, ಸುಮಾರು ಶೇ. 30 ರಷ್ಟು ಮಹಿಳೆಯರು ಮಧ್ಯಮ ಅಥವಾ ತೀವ್ರ ಸ್ವರೂಪದ ರಕ್ತಹೀನತೆಯಿಂದ ಬಳಲುತ್ತಿರುವ ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ” ಎಂದೂ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ಆರನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (NFHS-6) ಪ್ರಕಾರ ದೇಶದ ಮೂರನೇ ಒಂದು ಭಾಗದಷ್ಟು ಮಕ್ಕಳು ಕಡಿಮೆ ತೂಕ ಹೊಂದಿದ್ದು, ಐದರಲ್ಲಿ ಒಂದು ಮಗು ತೀವ್ರ ಅಪೌಷ್ಟಿಕತೆಯಿಂದ ನರಳುತ್ತಿದೆ ಎಂದು ಖರ್ಗೆ ಗಮನಸೆಳೆದಿದ್ದಾರೆ.
ಪೌಷ್ಟಿಕಾಂಶ ಯೋಜನೆಗಳಿಗೆ ಬಿಡುಗಡೆಯಾದ ಅನುದಾನ ಎಲ್ಲಿ ಹೋಯ್ತು?
ಪೌಷ್ಟಿಕಾಂಶ ಯೋಜನೆಗಳಿಗೆ ಬಿಡುಗಡೆಯಾದ ಅನುದಾನದ ಬಳಕೆಯ ಬಗ್ಗೆಯೂ ಖರ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ಆರು ಆರ್ಥಿಕ ವರ್ಷಗಳಲ್ಲಿ ಸಕ್ಷಮ್ ಅಂಗನವಾಡಿ, ಪೋಷಣ್ 2.0 ಮತ್ತು ಹಿಂದಿನ ಯೋಜನೆಗಳಿಗಾಗಿ ಕೇಂದ್ರವು ₹1.13 ಲಕ್ಷ ಕೋಟಿಗೂ ಹೆಚ್ಚು ಹಣ ಬಿಡುಗಡೆ ಮಾಡಿದೆ. ಆದರೆ, ಕೇವಲ ನಾಲ್ಕು ವರ್ಷಗಳಲ್ಲಿ ಪೋಷಣ್ 2.0 ಅಡಿಯಲ್ಲಿ ಬಿಡುಗಡೆಯಾದ ಮತ್ತು ಖರ್ಚಾದ ನಿಧಿಯ ನಡುವೆ ₹2,500 ಕೋಟಿಗೂ ಅಧಿಕ ವ್ಯತ್ಯಾಸವಿದೆ. ಅಂದರೆ ಮೂಲ ‘ಪೋಷಣ್ ಅಭಿಯಾನ’ದಡಿ ಬಿಡುಗಡೆಯಾದ ಸುಮಾರು ಶೇ. 44 ರಷ್ಟು ಹಣ ಬಳಕೆಯಾಗದೆ ಉಳಿದಿದೆ. ಅಷ್ಟೇ ಅಲ್ಲದೆ, ಕೇಂದ್ರ ಬಜೆಟ್‌ನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಪಾಲು 2015-16 ರಲ್ಲಿ ಶೇ. 0.96 ರಷ್ಟಿದ್ದದ್ದು, 2025-26 ರ ವೇಳೆಗೆ ಶೇ. 0.50 ಕ್ಕೆ ಅಂದರೆ ಅರ್ಧದಷ್ಟು ಕುಸಿದಿದೆ ಎಂದು ಖರ್ಗೆ ಟೀಕಿಸಿದ್ದಾರೆ.
ಮತ್ತೊಂದೆಡೆ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಕೂಡ ಈ ವರದಿ ವಿಚಾರದಲ್ಲಿ ಗುಜರಾತ್ ಬಿಜೆಪಿ ಸರ್ಕಾರವನ್ನು ಟೀಕಿಸಿದ್ದಾರೆ. “ಪ್ರಧಾನಿ ಮತ್ತು ಅವರ ಬೆಂಬಲಿಗರು ಮಾದರಿ ರಾಜ್ಯವೆಂದು ಬಿಂಬಿಸುವ ಗುಜರಾತ್‌ನ ಪರಿಸ್ಥಿತಿ ಹೀಗಿದೆ. ಈ ಆಘಾತಕಾರಿ ವರದಿಯ ಬಿಡುಗಡೆಯ ನಂತರ ಕೇಂದ್ರ ಆರೋಗ್ಯ ಸಚಿವರು ತಮ್ಮ ಸ್ಥಾನದಲ್ಲಿ ಉಳಿಯುತ್ತಾರೆಯೇ” ಎಂದು ರಮೇಶ್ ಪ್ರಶ್ನಿಸಿದ್ದಾರೆ.



