2023ರ ಚುನಾವಣೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆಯ ವೀಡಿಯೋ ರೆಕಾರ್ಡಿಂಗ್ ನಾಪತ್ತೆಯಾಗಿದೆ. ವಿಡಿಯೋ ಸಿಗುತ್ತಿಲ್ಲ ಎಂದು ಹೇಳಿರುವ ಭಾರತೀಯ ಚುನಾವಣಾ ಆಯೋಗವನ್ನು ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. “ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ನ್ಯಾಯಸಮ್ಮತತೆಯನ್ನು ಖಚಿತಪಡಿಸಲು ಮತ ಎಣಿಕೆಯ ವಿಡಿಯೋ ಚಿತ್ರೀಕರಣವು ಕಡ್ಡಾಯವಾಗಿದೆ” ಎಂದು ಸ್ಪಷ್ಟಪಡಿಸಿದೆ.
ಶೃಂಗೇರಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಅವರ ಆಯ್ಕೆಯನ್ನು ಪ್ರಶ್ನಿಸಿ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು, “ಸಾಂವಿಧಾನಿಕ ಸಂಸ್ಥೆಯಾಗಿರುವ ಚುನಾವಣಾ ಆಯೋಗವು ಚುನಾವಣೆಗೆ ಸಂಬಂಧಿಸಿದ ದಾಖಲೆಗಳನ್ನು ಸುರಕ್ಷಿತವಾಗಿ ಸಂರಕ್ಷಿಸುವುದು ಅದರ ಮೂಲಭೂತ ಹೊಣೆಗಾರಿಕೆಯಾಗಿದೆ” ಎಂದು ನೆನಪಿಸಿದೆ.
ವಿಚಾರಣೆ ವೇಳೆ ಜೀವಿರಾಜ್ ಪಾ ವಾದ ಮಂಡಿಸಿದ ವಕೀಲರು, “ಜೀವರಾಜ್ ಅವರು ಕೇವಲ 201 ಮತಗಳ ಅಂತರದಿಂದ ಸೋಲನುಭವಿಸಿದ್ದು, ಅಂಚೆ ಮತಗಳ ಎಣಿಕೆಯಲ್ಲಿ ಅಕ್ರಮಗಳು ನಡೆದಿವೆ ಮತ್ತು ಮತ ಎಣಿಕೆಯ ಸರಿಯಾದ ವಿಡಿಯೋ ಚಿತ್ರೀಕರಣ ಮಾಡಲಾಗಿಲ್ಲ” ಎಂದು ಆರೋಪಿಸಿದರು.
ಪ್ರತಿವಾದ ಮಂಡಿಸಿರುವ ಆಯೋಗವು, “ಚುನಾವಣೆ ನಡೆದು ಎರಡು ವರ್ಷಗಳಿಗೂ ಹೆಚ್ಚು ಕಾಲ ಕಳೆದಿರುವ ಹಿನ್ನೆಲೆಯಲ್ಲಿ ವಿಡಿಯೋ ರೆಕಾರ್ಡಿಂಗ್ ಲಭ್ಯವಿಲ್ಲ” ಎಂದು ಹೇಳಿದೆ.
ಆಯೋಗದ ಈ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠವು, “ಪ್ರಕರಣ ನ್ಯಾಯಾಲಯದ ವಿಚಾರಣೆಯಲ್ಲಿರುವಾಗ ದಾಖಲೆಗಳು ಪತ್ತೆಯಾಗುತ್ತಿಲ್ಲ ಎಂದು ಹೇಳುವುದು ಸರಿಯಲ್ಲ. ಚುನಾವಣಾ ಅರ್ಜಿಗಳ ವಿಚಾರಣೆ ಪೂರ್ಣಗೊಳ್ಳುವವರೆಗೆ ಮತ ಎಣಿಕೆಯ ವಿಡಿಯೊಇಗಳನ್ನು ಸಂರಕ್ಷಿಸಬೇಕು ಎಂಬುದು ಸ್ವತಃ ಆಯೋಗದ ಮಾರ್ಗಸೂಚಿಗಳಲ್ಲೇ ಇದೆ” ಎಂದು ಹೇಳಿದೆ.
“ಕೇವಲ 201 ಮತಗಳ ಸಣ್ಣ ಅಂತರವಿರುವ ಕ್ಷೇತ್ರದಲ್ಲಿ 1,247 ಅಂಚೆ ಮತಗಳಿದ್ದ ಕಾರಣ, ಅಕ್ರಮಗಳು ಫಲಿತಾಂಶದ ಮೇಲೆ ಪರಿಣಾಮ ಬೀರಿರಬಹುದು. ಈ ಹಿನ್ನೆಲೆಯಲ್ಲಿ ದಾಖಲೆಗಳನ್ನು ಎಷ್ಟು ಕಾಲ ಸಂರಕ್ಷಿಸಲಾಗುತ್ತದೆ, ವಿಡಿಯೋವನ್ನು ಯಾವಾಗ ಅಳಿಸಲಾಗಿದೆ, ಅದಕ್ಕೆ ಯಾರು ಅನುಮತಿ ನೀಡಿದ್ದಾರೆ ಹಾಗೂ ಬ್ಯಾಕಪ್ ಲಭ್ಯವಿದೆಯೇ ಎಂಬ ಕುರಿತು ಎರಡು ವಾರಗಳೊಳಗೆ ಹೊಸ ಪ್ರಮಾಣಪತ್ರ ಸಲ್ಲಿಸಬೇಕು” ಎಂದು ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.



