ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.
ಅದೆಷ್ಟೋ ಕಾಲದಿಂದ ತೂಗು ಹಾಕಿದ ಸ್ತಬ್ಧ ಚಿತ್ರಗಳಂತೆ ಅವರಿಬ್ಬರೂ ಆ ಕೋಣೆಯೊಳಗೆ ಜಡಗೊಂಡು ಪರಸ್ಪರ ಮುಖ ತಿರುವಿ ಕೂತಿರುವರು. ಕಳೆದ ಎರಡು ಮೂರು ತಿಂಗಳಿಂದ ತನ್ನನ್ನು ಪರೋಕ್ಷ ವಾಗಿ ಸನ್ನದ್ಧಗೊಳಿಸುತ್ತಾ ಬಂದ ಪ್ರತೀಕಾರದ ಮನೋಭಾವಕ್ಕೆ ಅರೆ ತಾಸು ಮುಂಚೆ, ತನ್ನ ಆತ್ಮವಂಚನೆಗಳ ಪೋಷಣೆಗೇ ಅಡ್ಡಿಯಾಗುವ ಹಾಗೆ ಕಂಡ ಯಾಮಿನಿಯ ದೇಹದ ವಿಲಕ್ಷಣ ಉಲ್ಲಾಸಗಳೇ ಇದೀಗ ನಡೆದ ಈ ಆಕ್ರಮಣಕ್ಕೆ ನಿಮಿತ್ತವಾಯಿತೇ ಎಂದು ಯಶವಂತ ಹಲುಬತೊಡಗುವನು! ಯಾಮಿನಿಯ ಜೊತೆಗೆ ಪಡೆಯಲಾಗದ, ಪಡೆದರೂ ಕಿತ್ತು ಪಡೆದವನಂತೆ ದಣಿಯುವ ತನ್ನ ಮೂಲಭೂತ ನ್ಯೂನತೆಯನ್ನು ಇದೀಗ ಸ್ಪಷ್ಟಗೊಳಿಸುವ ಈ ಪ್ರತೀಕಾರದ ಬೀಜಕ್ಕೆ ಹನ್ನೆರಡು ವರುಷಗಳಷ್ಟು ಕಾಲದ ಹಳೆಯ ಚರಿತ್ರೆಗಳಿರಬಹುದೇ ಎಂದು ಅವನು ಚಿಂತಿಸುವನು. ಯಾಮಿನಿ ತನ್ನಿಂದ ಪಡೆಯಲಾರದವುಗಳಿಗೆ ಪರ್ಯಾಯ ನೆಲೆಗಳನ್ನು ಒದಗಿಸಬೇಕಾದುದು ತನ್ನ ಕರ್ತವ್ಯಗಳಲ್ಲಿ ಒಳಗೊಂಡಿಲ್ಲವೇ ಎಂಬ ಆತ್ಮನ್ಯೂನತೆ ಅವನನ್ನು ಒಂದೇ ಸಮನೆ ಬಾಧಿಸತೊಡಗುವುದು.
ಇದೀಗ ಅರೆತಾಸು ಮುಂಚೆ ಹಿಂದೆಂದೂ ತಾನು ಕಂಡಿರದ ಉಲ್ಲಾಸದಲ್ಲಿ ತನ್ನ ಕಣ್ಣಮುಂದೆ ಅವಳ ಅಂಗೈಗಳನ್ನು ಬಿಡಿಸಿ “ಯಶೂ, ಇದನ್ನು ನೋಡು… ಯಕ್ಷ ಏನು ಮಾಡಿದ್ದಾನೆ ಇಲ್ಲಿ ನೋಡು” ಎಂದು ಆ ಹುಡುಗ ಬಿಡಿಸಿಟ್ಟ ಗೋರಂಟಿ ಚಿತ್ತಾರಗಳನ್ನು ಹರಡಿ ನಲಿದು, ಆ ಹುಡುಗ ಅವಳ ತಲೆ ಬಾಚಿ ಕೆಂಡ ಸಂಪಿಗೆ ಮುಡಿಸಿಟ್ಟ ಕಥೆಗಳನ್ನು ಉಲಿದು ತೊನೆದಾಡಿದ ಯಾಮಿನಿಯನ್ನು ಅವಳು ನಿರಾಕರಿಸಿದರೂ ಪಶುವಿನಂತೆ ಆಕ್ರಮಿಸುವ ತನ್ನ ಆಕ್ರಮಣದಲ್ಲಿ ತನ್ನ ಅಧಿಕಾರಗಳನ್ನು ನೆನಪಿಸಿಕೊಡುವ ಹವಣಿಕೆಗಳಿತ್ತೆಂದು ಅನಿಸಿ ಅವನು ಖೇದಪಡುವನು. ನಲುಗಿ ಅಸ್ತವ್ಯಸ್ತಗೊಂಡು ಕುಸಿದಿದ್ದ ಅವಳ ಕಡೆ ನೋಡುವುದಕ್ಕೆ ಅವನಿಗೆ ಭಯವಾಗುವುದು. ತಾನವಳನ್ನು ಕಳೆದುಕೊಳ್ಳುತ್ತಿರುವೆನೇನೋ ಎಂಬ ತನ್ನ ಇತ್ತೀಚಿನ ಭ್ರಮೆಗಳನ್ನು ತನ್ನಾತ್ಮಕ್ಕೆ ಸ್ಪಷ್ಟಗೊಳಿಸಿಕೊಡುವುದೇ ಆ ಸಂಭವದ ಹಿಂದಿನ ಸಂಚಾಗಿತ್ತು ಎಂಬುದು ಅವನಿಗೆ ಅರಿವಾಗಿ ಇದು ತಮ್ಮಿಬ್ಬರ ನಡುವಿನ ವಿಭಾಜಕ ಗೆರೆಗಳನ್ನು ಸ್ಪಷ್ಟಗೊಳಿಸುತ್ತಾ ಹೋದರೇನು ಗತಿ ಎಂಬ ವಿಷಾದ ಕಾಡುವುದು.
ಇದನ್ನು ಓದಿದ್ದೀರಾ?: ಚಂದ್ರಶೇಖರ ಕಂಬಾರ ಅವರ ಕತೆ | ನಾರ್ಸಿಸಸ್
ಅವಳ ಕಾಲ ಬುಡಕ್ಕೆ ಬಾಗಿ ‘ಯಾಮಿ…’ ಎಂದುಸುರುತ್ತಾ ಅವಳ ವಾದಗಳನ್ನು ತನ್ನ ಹಣೆಗೆ ಒತ್ತಿಕೊಳ್ಳುತ್ತಾ ತನ್ನಿಂದ ಸ್ವಲ್ಪ ಮೊದಲು ಘಟಿಸಿದ ಪಾಪದಿಂದ ಕಳಚಿಕೊಳ್ಳುವ ಹವಣಿಕೆಯಲ್ಲಿರುವವನನ್ನು ಯಾಮಿನಿ ಕಣ್ಣೀರಿನಡಿಯಿಂದ ನೋಡುವಳು. ಅವನ ಮೇಲಿನ ತನ್ನ ನಿರಪೇಕ್ಷತೆಯನ್ನು ನೆನೆದು ಅವನೆದೆ ನಡುಗಿ, ತನಗಾಗಿ ದುಡ್ಡಿನ ಮುಖ ನೋಡದೇ ಏನೆಲ್ಲವನ್ನೂ ಕೊಂಡುತಂದು ‘ಯಾಮೀ, ನಿನಗೇನು ತಂದಿರುವೆ ನೋಡು…’ ಎಂದು ತನ್ನ ಕಾಲಬುಡದಲ್ಲಿ ಸುರಿದು ಅವಳ ಎದೆ ಭಾರವಾಗಿಸಬೇಕು, ಅವಳು ತನ್ನ ನಿರಪೇಕ್ಷತೆಯ ಮೂಲಕ ಪಡೆದ ಆತ್ಮಶಕ್ತಿಯನ್ನೇ ನಾಶಗೊಳಿಸಬೇಕೆಂಬ ಹುನ್ನಾರಗಳಿಗೆ ಹೊರಟು ನಿರಂತರ ವಿಫಲವಾಗುವ ನಿಷ್ಪಾಪಿ ಯಶವಂತ! ಮದುವೆಯಾದ ಈ ಹನ್ನೆರಡು ವರುಷಗಳ ಬಳಿಕವೂ ಮತ್ತೆ ಹೊಸದಾಗಿ ಕೇಳುವ ‘ನಿಜ ಹೇಳು ಯಾಮಿ, ನೀನು ನನ್ನನ್ನು ಪ್ರೀತಿಸುವುದಕ್ಕೆ ಯಾವಾಗ ಆರಂಭಿಸ್ತೀಯಾ…?’ ಎಂದು ತಮಾಷೆ ಮಾಡುತ್ತಲೇ ಅವನು ತನ್ನ ಮನಸ್ಸನ್ನು ಮುಟ್ಟಲಾಗದ ವೈಫಲ್ಯವನ್ನ ಒಪ್ಪಿಕೊಳ್ಳುವ ಮುಗ್ಧ ಯಶವಂತ! ದೇಹದ ಮೂಲಕ ತನ್ನ ಆತ್ಮವನ್ನು ತಲುಪಲಾರದ ಅವನ ಅಸಾಮರ್ಥ್ಯವನ್ನ ಅವಳು ಬಿಟ್ಟು ಕೊಡುವವಳಲ್ಲವಾದರೂ ತನ್ನ ಆಳದೊಳಗೆ ಅಗ್ನಿಪರ್ವತದಂತೆ ಕುದಿವ ತಾನು ಯಶವಂತನ ತೆಕ್ಕೆಯಡಿಯಲ್ಲಿ ಮನಸ್ಸು ತೆರೆದುಕೊಳ್ಳಲಾಗದೇ ಸದಾ ಮಂಜಿನಂತೆ ಕೊರೆಯುತ್ತಾ ಬಂದ ಸತ್ಯವನ್ನು ಮುಚ್ಚಿಡುವುದಕ್ಕೆ ತಾನು ಹೇಗೆ ಸಮರ್ಥಳು? ಎಂದು ಯಾತನೆಗೊಂಡು ಯೋಚಿಸುವಳು.
ಅದ್ಯಾವುದೋ ಅಮೂರ್ತ ಸಾಕ್ಷಾತ್ಕಾರವನ್ನೊಳಗೊಂಡ ಮುಂಜಾವಿಗೆ ಕಾಯುತ್ತಿರುವವಳಂತೆ ಯಶವಂತನ ಜೊತೆ ಪ್ರತಿರಾತ್ರಿಗಳನ್ನು ಕಳೆವ ಅವಳ ಜಾಗರೂಕ ಆತ್ಮ ಅವಳನ್ನು ಸ್ಫುಟಗೊಳಿಸುತ್ತಾ, ಬದುಕನ್ನು ಬದುಕುವಂತೆ ಮಾಡುತ್ತಿದ್ದಾಗ ತನ್ನ ಗರ್ಭದಿಂದಲೇ ಹುಟ್ಟಿಕೊಂಡವನೋ ಎನ್ನುವಂತೆ ಉದ್ಭವಿಸಿ ತನ್ನ ಆಳದಲ್ಲಿ ಜಡಗೊಂಡು ಮಲಗಿದ್ದ ಪರಮಾನಂದ ಲಹರಿಗಳನ್ನು ಮೀಟಿ ಚಿಮ್ಮಿಸುವ ಹುಡುಗನನ್ನು ಮತ್ತೀಗ ನಿಶ್ಯಬ್ದವಾಗಿ ಜೊತೆಗೆ ನೆನೆಯುವಳು.
ಶಾಪಗ್ರಸ್ತ ಗಂಧರ್ವನಂತೆ ನೈಟ್ ಕ್ಲಬ್ಗಳಲ್ಲಿ ಹಾಡುವ ಅಲೆಮಾರಿ ಹುಡುಗ… ಮೂರು ತಿಂಗಳ ಹಿಂದೆ ಅದ್ಯಾವುದೋ ಮದುವೆಯಲ್ಲಿ ಜಗತ್ತನ್ನು ಮರೆತು ಹಾಡುತ್ತಿದ್ದವನು… ನೇರವಾಗಿ ಯಾಮಿನಿಯ ಹೃದಯಕ್ಕೇ ಇಳಿದು ಬಂದಿದ್ದವನು…ಯಕ್ಷ!
ಇದನ್ನು ಓದಿದ್ದೀರಾ?: ಗೀತಾ ಕುಲಕರ್ಣಿ ಅವರ ಕತೆ | ಸೇರಾ
ತನ್ನ ಪಾದಗಳೆರಡನ್ನು ಎದೆಗವಚಿ ಅಲ್ಲೇ ನಿದ್ದೆ ಹೋಗಿದ್ದ ಯಶವಂತನನ್ನ ನೋಡಿ ಕನಿಕರಿಸುತ್ತಾ ಯಾಮಿನಿ ಮೆಲ್ಲಗೆ ಪಕ್ಕಕ್ಕೆ ಹೊರಳಿ ತನ್ನ ಕಣ್ಣೀರ ಕುಡಿದು ತೆಪ್ಪಗಿದ್ದ ತಲೆದಿಂಬಿನ ಮೇಲೆ ರೇಖಾಗಣಿತ ಬಿಡುಸುತ್ತಾ, ಯಶವಂತನ ಕೈಗಳನ್ನು ಬೊಗಸೆಯಲ್ಲಿ ಬೆಸೆದು ಆರ್ದ್ರಳಾಗಿ ಮೊರೆಯಿಟ್ಟ ಈ ಮೂರು ತಿಂಗಳುಗಳೀಚಿನ ರಾತ್ರಿಗಳನ್ನು ಅವಳು ಮನಸ್ಸಿನೊಳಗೆ ತಂದುಕೊಳ್ಳುವಳು.
“ಯಶೂ, ಅವನು ನನಗೆ ಬೇಕು! ಅವನಿಂದ ನಾನು ಪಡೆಯಬಹುದಾದುದೆಲ್ಲವೂ ನನಗೆ ಬೇಕು…”
“ಇದು ಹುಚ್ಚು ಯಾಮೀ…”
”ಅಲ್ಲ, ಯಶೂ, ಇದು ನನ್ನ ಮೂಲಭೂತ ಅವಶ್ಯಕತೆ….”
“ಯೋಚಿಸುವಾಗ ಯಾಕೆ ತಡಮಾಡಿದೆ…”
“ಆಗ ಈ ಕೊರತೆಯನ್ನು ಸ್ಪಷ್ಟಪಡಿಸಿಕೊಳ್ಳುವುದಕ್ಕೆ ನನ್ನ ಬಳಿ ನೀನಿರಲಿಲ್ಲ”
“ನಮ್ಮ ಈ ಹನ್ನೆರಡು ವರುಷಗಳ ಬದುಕನ್ನು ಹೇಗೆ ತಳ್ಳಿ ಹಾಕುವೆ ಯಾಮಿ…”
”ನಾನು ನಿನ್ನ ಮೂಲಕಾನೇ ಅವನನ್ನು ಬಯಸುತ್ತಿರುವುದು ಯಶೂ…”
“ಬಿಂದುವಿನ ಬಗ್ಗೆ ಯೋಚಿಸುವುದಿಲ್ಲವೇ ನೀನು…”
“ನೀನು ಬಿಂದುವಿನಷ್ಟೇ ನನಗೆ ಮುಖ್ಯವಾದವನು ಅವನು”
“ಯಾಮೀ, ಇದನ್ನು ಸಮಾಜ ಅನೀತಿ ಎಂದು ಕರೆಯುತ್ತದೆ…” ಯಶವಂತ ಕಟ್ಟಕಡೆಯ ಮಾತೆಂಬಂತೇ ಹೇಳುವನು.
ಇದನ್ನು ಓದಿದ್ದೀರಾ?: ಎಸ್. ನಟರಾಜ ಬೂದಾಳು ಅವರ ಕತೆ | ಆಸಾದಿ
”ಪರಸ್ಪರರಿಗೆ ವಂಚಿಸುತ್ತಾ ಬಂದ ನಮ್ಮ ಈ ಹನ್ನೆರಡು ವರುಷಗಳ ಸಂಬಂಧಕ್ಕೆ ಸಮಾಜ ಏನೆಂದು ಕರೆಯುತ್ತದೆ ಯಶೂ…” ಯಾಮಿನಿ ಅದಕ್ಕೂ ಉತ್ತರಿಸುವಳು.
”ಯಾಮೀ… ಯಾಮೀ… ಇದನ್ನೆಲ್ಲಾ ಸಹಿಸುವ ಶಕ್ತಿ ನನಗಿಲ್ಲ, ಸುಮ್ಮ ನಿರು” ತಮ್ಮಿಬ್ಬರ ಬದುಕಿನ ಇತ್ತೀಚಿನ ರಾತ್ರಿಗಳು ಹೀಗೆ ಮುಗಿದು ನಿಟ್ಟುಸಿರುಗಳಲ್ಲೇ ಬೆಳಗಾಗತೊಡಗಿದ ದುರ್ವಿಧಿಗಳ ಕುರಿತು ದುಗುಡಗೊಳ್ಳುವಳು. ಇದೀಗ ತುಸು ಹೊತ್ತಿಗೆ ಮೊದಲು ಯಶವಂತನೊಂದಿಗೆ ನಡೆದ ತಿಕ್ಕಾಟದಲ್ಲಿ ಕಂಡ ಬದುಕು ನೆಲೆ ಕಳಚಿಕೊಳ್ಳುವ ಇರಾದೆಗಳು ವಿವಿಧ ರೂಪಗಳಲ್ಲಿ ಅವಳ ಚಿತ್ತ ಭಿತ್ತಿಯಲ್ಲಿ ಪ್ರತ್ಯಕ್ಷವಾಗುತ್ತಾ ಭೀತಗೊಳಿಸಿ ಹೋದಂತೆ, ಎಷ್ಟೋ ಕಾಲದಿಂದ ಮೂಲೆಗೊಗೆದಿಟ್ಟ ಧೂಳು ತುಂಬಿದ ವೀಣೆಯನ್ನು ಮೀಟುವಂತೆ ಜೀವ ತಂತುವನ್ನೇ ಮೀಟತೊಡಗಿರುವ ಯಕ್ಷನನ್ನು ನೆನೆಯುತ್ತಾ ‘ತಾನು ಹೋರಾಡಿ ಅವನನ್ನು ಪಡೆವೆನೋ, ಬಿಡುವೆನೋ? ಕೊನೆಗೆ ತನ್ನ ಅವಶ್ಯಕತೆಗಾಗಿ ಹೋರಾಡಿರುವೆ ಎಂಬುದಾದರೂ ತನ್ನ ಮುಂದಿನ ಬದುಕಿಗೆ ತೃಪ್ತಿ ಕೊಡುವ ಅಂಶವಾಗಿ ಬಿಡಲಿ’ ಎಂದು ನೆಮ್ಮ ದಿಗೊಳ್ಳುತ್ತಾ ತನ್ನ ಅಂಗೈಗಳನ್ನು ಕಣ್ಣ ಮುಂದೆ ಹರಡಿಕೊಳ್ಳುವಳು. ಬದುಕಿನ ಇರವನ್ನೇ ಮರೆತು ಸಂಮೋಹಿತನಂತೆ ತನ್ನ ಕೈಗಳಿಗೆ ಗೋರಂಟಿ ಚಿತ್ತಾರಗಳನ್ನು ಬಿಡಿಸುವುದರಲ್ಲಿ ನೆಟ್ಟು ಹೋದ ಅವನನ್ನು ನೆನೆದಂತೇ ಯಾಮಿನಿ ಬದುಕಿನ ಕಡು ವ್ಯಾಮೋಹದ ಬೆಳಕಿಗೆ ಮನಸ್ಸು ತೆರೆಯುತ್ತಾ ಸ್ವಪ್ನಧಾರೆಯಲ್ಲಿ ಕೊಚ್ಚಿ ಹೋಗುವಳು.
*
ಯಾಮಿನಿ ಕಣ್ಣು ತುಂಬಾ ಆ ಹುಡುಗನನ್ನು ತುಂಬಿಕೊಳ್ಳುತ್ತಾ ಕೇಳುವಳು, “ಯಾವತ್ತು ಬಂದೆ?”
ಅವನು ಕಣ್ಣು ಮಿನುಗಿಸಿ, ತುಟಿಯ ಕೊನೆಯಲ್ಲಿ ಸೂಕ್ಷ್ಮವಾಗಿ ನಗುತ್ತಾ ಒಗಟಿನಂತೆ ಉತ್ತರಿಸುವನು: “ಇಪ್ಪತ್ತಾರು ವರುಷಗಳಾಯ್ತು…”
ಯಾಮಿನಿ ಅವನ ತೋಳು ಹಿಂಡಿ ಜಗ್ಗಿ ಆ ಹವಾನಿಯಂತ್ರಿತ ಕೋಣೆಯೊಂದರ ಮೂಲೆಯ ಕುರ್ಚಿಗೆ ಕೂರಿಸುತ್ತಾ ಅವನ ಪಕ್ಕವೇ ಕೂತು ಧಾರಾಕಾರ ಬೆವರುವಳು. ಆ ಮೂಳೆ ಕೊರೆವ ತಂಡಿಯಲ್ಲೂ ಅವಳು ತನ್ನ ಪಕ್ಕ ಮೇಣದಂತೆ ತೊಟ್ಟಿಕ್ಕುವ ದೈನಂದಿನ ಕೌತುಕವನ್ನು ತನ್ನ ಕಣ್ಣುಗಳಿಂದಲೇ ಅವಳೆಡೆಗೆ ಉಗ್ಗುವನು. ಯಾಮಿನಿ ಅವನ ಕುತ್ತಿಗೆ ಬಳಸಿ ತನ್ನೆಡೆಗೆ ಅದುಮಿಕೊಳ್ಳುತ್ತಾ, ಉಸಿರುಕಟ್ಟೆ ಚಡಪಡಿಸುತ್ತಾ ಅವನ ಕಿವಿಗೆ ತುಟಿ ಕಚ್ಚಿ ಸುಯ್ಯಲಿಟ್ಟು ಉಸುರುವಳು: “ನೀನು ಬೆಂಕಿ ಕಣೋ ಯಕ್ಷಾ…”
ತನ್ನ ಆತ್ಮಪ್ರತ್ಯಯದ ಮೇಲೆ ಸುಖವಾಗಿ ಬೆರಳಾಡಿಸಿ ಉದ್ದೀಪಿಸುವ ಅವಳ ಕುಲುಮೆಯಂತಹ ದೇಹ ಸನ್ನಿಧಿಗೆ ತನ್ನ ದೇಹ-ಆತ್ಮಗಳೆರಡನ್ನೂ ಒಪ್ಪಿಸಿ ಅವನು ಹಗುರಾಗಿ, ಸಡಿಲಗೊಳ್ಳುವ ಹೊತ್ತಿಗೆ ಸರಿಯಾಗಿ ಯಾಮಿನಿಯ ಪ್ರೀತಿಯ ಐಸ್ ಕ್ರೀಂ ಬರುತ್ತದೆ. ಆದರೆ ಅವನೋ ಅದರೆಡೆಗೆ ನೋಡಿ ಮುಖ ಸಿಂಡರಿಸುತ್ತಾ ಹೇಳುವನು: “ನನಗೊಂದು ಕಪ್ ಟೀ ಬೇಕಾಗಿತ್ತು ಯಾಮೀ, ಬರೀ ಒಂದು ಕಪ್ ಟೀ”
ಇದನ್ನು ಓದಿದ್ದೀರಾ?: ಗಿರೀಶ್ ಕಾರ್ನಾಡ್ ಅವರ ಕತೆ | ಅಳಿದ ಮೇಲೆ
ಆವನ ಬೇಡಿಕೆಗಳೇನೇ ಇದ್ದರೂ ಆ ಕ್ಷಣಕ್ಕೆ ಬೊಗಸೆ ಮುಂಜಾಚಿ ‘ತಗೋ ನನ್ನ ಮಗುವೇ’ ಎಂದು ಸಾಕ್ಷಾತ್ ಗೊಳಿಸಬೇಕೆಂಬ ಹಂಬಲಗಳುಳ್ಳವಳಲ್ಲವೇ ಯಾಮಿನಿ! ಅವಳು ಸುತ್ತಲೂ ಅಸಹಾಯಕಳಾಗಿ ನೋಡುತ್ತಾ, ಕೈ ಹೊಸಕುತ್ತಾ “ಇಲ್ಲಿ ಟೀ ಸಿಗಲಾರದೋ ಯಕ್ಷಾ… ಮತ್ತೆ ಟೀ ಸಿಗುವ ಕಡೆ ಇಷ್ಟು ಚೆನ್ನಾಗಿರುವುದಿಲ್ಲ ಗೊತ್ತಾ…?” ಎಂದು ಹೇಳುವಾಗ, ಆಕಾರಣವಾಗಿ ಆ ಹೇಳಿಕೆ ಪಡೆವ ಕ್ಷಮಾಪಣೆಯ ಬಣ್ಣಗಳನ್ನೂ ಅವನ ಮನಸ್ಸು ಕೆರೆದಾಡುತ್ತಾ ಸುಮ್ಮನೇ ನಿರುದ್ದೇಶಿತನಾಗಿ ಐಸ್ಕ್ರೀಂ ತಟ್ಟೆಯನ್ನು ಮುಂದಕ್ಕೆಳೆದು ತಿನ್ನುವಂತಹ ಪ್ರಯತ್ನದಲ್ಲಿ ತುಟಿ, ಬಾಯಿ ತುಂಬಾ ಹಚ್ಚಿಕೊಳ್ಳುವನು. ಅವನ ಪರದಾಟಗಳನ್ನೇ ತುದಿಗಣ್ಣಿನಲ್ಲಿ ಗಮನಿಸುವ ಯಾಮಿನಿ ಇದ್ದಕ್ಕಿದ್ದಂತೇ ಅಪ್ರಚೋದಿತಳಾಗಿ ನಕ್ಕು ಬಿಡುವಳು. ಅವನು ಅಂತಹ ನಗುವೊಂದಕ್ಕೆ ಕಾದಿದ್ದವನೋ ಎಂಬಂತೇ ‘ತನಗಿದು ಬೇಡವೇ ಬೇಡ’ ಎಂಬ ಮುನಿಸಿನಿಂದ ತಟ್ಟೆಯನ್ನು ದೂರವೇ ತಳ್ಳುವನು.
ಯಾಮಿನಿಗೆ ಆ ಬಳಿಕ ತನ್ನ ಮುಂದಿನದೊಂದೂ ಕಾಣುವುದಿಲ್ಲ. ತನ್ನ ಪಕ್ಕ ಕುಳಿತಿರುವುದು ಏನೆಂದು ನಿಖರವಾಗದೇ ಉದ್ವೇಗ ಭರ ತುಂಬಿ ತುಯ್ಯುವ ಅವಳೆದೆ ಅವಳ ಕಣ್ಣುಗಳನ್ನು ಒದ್ದೆಯಾಗಿಸುವುದು! ಇದೊಂದು ಮಗುವಲ್ಲ… ಇದೊಂದು ಹುಡುಗನಲ್ಲ… ಬೇಕಿದ್ದರೆ ಇದೊಂದು ಮನುಷ್ಯ ಜೀವಿಯೂ ಅಲ್ಲ… ಇದು ತನಗೆ, ತಾನೊಬ್ಬಳಿಗೆ, ಆ ಹುಡುಗನಿಗೂ ಅಲ್ಲ, ತನಗೊಬ್ಬಳೇ ಒಬ್ಬಳಿಗೆ ಅರ್ಥವಾಗುವ ಬ್ರಹ್ಮಾನಂದ ಸ್ವರೂಪದಂತೆ ತನ್ನ ಜೀವಬಿಂದುವನ್ನೇ ಆವರಿಸುವ ಮೋಹದ ತುಣುಕಲ್ಲವೇ… ಎಂದು ಜಪಿಸುತ್ತಾ ಯಾಮಿನಿ ಅನಾಮತ್ತಾಗಿ ಅವನ ಮುಖಕ್ಕೆ ಮುಖ ಕೊಟ್ಟು, ತುಟಿಗೆ ತುಟಿ ಕೊಟ್ಟು, ನಾಲಗೆಗೆ ನಾಲಗೆ ಕೊಟ್ಟು, ತನ್ನೊಳಗೇ ಥರಥರ ಕಂಪಿಸುತ್ತಾಳೆ! ಅವನ ಮುಖವನ್ನಿಡೀ ತನ್ನ ಬೊಗಸೆಯಲ್ಲಿ ಪಡೆದು ನಾಲಗೆಯಿಂದ ನೆಕ್ಕುತ್ತಾ ಮುಖದ ಮಲಿನ ಕಳೆಯುತ್ತಾಳೆ! ಐಸ್ಕ್ರೀಂ ಚೂರುಗಳನ್ನು ತನ್ನ ನಾಲಗೆಯಲ್ಲಿ ತೆಗೆದು ಅವನ ನಾಲಗೆಯೊಳಗೆ ನಿಧಾನವಾಗಿ ತಲುಪಿಸುತ್ತಾಳೆ!
ಪರಸ್ಪರ ಒಬ್ಬರಿಂದೊಬ್ಬರಿಗೆ ಸಂವಹಿಸುವ ಕಾವು ಅವರಿಬ್ಬರನ್ನೂ ಅಸ್ತವ್ಯಸ್ತಗೊಳಿಸುತ್ತಾ ಕಾಲ. ನೀತಿ, ಪ್ರಜ್ಞೆಗಳ ನಡುವೆಯೆಲ್ಲೋ ಕ್ಷಣಕಾಲ ಅವರು ಕಳೆದುಹೋಗುವರು.
*
ಗಂಡನ ಮನೆಗೆ ಹೊರಟ ನವವಧುವಿನಂತೆ ಸಡಗರದಿಂದ ಚಲಿಸುವಳು ಆ ಯಕ್ಷನ ಪಕ್ಕ ಯಾಮಿನಿ! ಅವನ ಕಣ್ಣು ತುಂಬಿದ ದುಗುಡಗಳೆಲ್ಲಾ ಚೆಲ್ಲಿ ಚೆದುರುವಂತೆ ‘ನಿನ್ನ ನಾನು ಕಣ್ಣ ರೆಪ್ಪೆಯಡಿಯಲ್ಲಿಟ್ಟು ಜೋಪಾನ ಮಾಡುವೆ ನನ್ನ ಮಗುವೇ’ ಅವನ ಕಿವಿಗೆ ಪಿಸುಮಾತಿನಲ್ಲುಸುರುತ್ತಾ ಅವನ ಬೆರಳಿಗೆ ಬೆರಳ ಹೊಸೆದು, ಕೈಗೆ ಕೈಯ ಹೊಸೆದು, ಮನಸ್ಸಿಗೆ ಮನಸ್ಸು ಹೊಸೆದು ತನ್ನ ಕಾಲಿನ ಪುಟ್ಟ ಬೆಳ್ಳಿ ಗೆಜ್ಜೆಗಳಲ್ಲಿ ಹೆಜ್ಜೆಯಿಡುತ್ತಾ ಸಂಗೀತದಂತೆ ಅವನ ಮನಸ್ಸು ತುಂಬುವಳು.
ಇದನ್ನು ಓದಿದ್ದೀರಾ?: ಅಗ್ರಹಾರ ಕೃಷ್ಣಮೂರ್ತಿ ಅವರ ಕತೆ | ಮನೋರಥ
ಇದು ಎಲ್ಲಿಂದ ತೊಡಗಿತೆಂದು ಹೇಳಲಾಗುವುದಿಲ್ಲ… ಎಲ್ಲಿ ಮುಟ್ಟಬಹುದೆಂದು ಹೇಳಲಾಗುವುದಿಲ್ಲ… ತೊಡಗದಿದ್ದರೂ ಆಗುತ್ತಿತ್ತು… ಕೊನೆ ಮುಟ್ಟದಿದ್ದರೂ ಆಗುತ್ತಿತ್ತು… ಎಲ್ಲಾ ಅಂತ್ಯಗಳು ಪಡೆದ ಶುಭಾರಂಭಗಳ ಹಾಗೆ ಈ ಆರಂಭ ಅಷ್ಟೇ ಸಲೀಸಾದ ಅಂತ್ಯಗಳನ್ನು ಪಡೆಯದೇ ಉಳಿದೀತು! ಇವನಿಂದ ಮೊಗೆ ಮೊಗೆದು ಪಡೆದ ವರ್ತಮಾನದ ಬದುಕು, ನನಗೆ ಈ ಹಿಂದೆ ಏನಿತ್ತೆಂದು, ಈ ಮುಂದೆ ಏನಿರಬಹುದೆಂದು ಯೋಚಿಸದಂತೆ ಮಾಡಿದರೆ ಅದು ಮಾತ್ರ ಸಾಕು… ಎಂದು ಹಾರೈಸುತ್ತಾ ಯಾಮಿನಿ, ಹಾಗೇ ಉದ್ದಕ್ಕೆ ಬಿದ್ದು ಕೊಂಡ ಆ ರಸ್ತೆಯ ಪಕ್ಕ ಸುರಿವ ಬಿಸಿಲಿಗೆ ಮೈಯೊಡ್ಡಿ, ಅವನ ಪಕ್ಕ ನಡೆಯುವುದೊಂದೇ ಏಕೈಕ ಜೀವನ ಲಕ್ಷ್ಯವೆಂಬಂತೇ, ತನ್ನ ಹೆಜ್ಜೆಗಳಲ್ಲಿ ಸೂಕ್ಷ್ಮವಾಗಿ ನರ್ತಿಸುತ್ತಾ ಅವಳು ನಡೆಯುವಳು. ಹಾಗೊಮ್ಮೆ ಹೀಗೊಮ್ಮೆ ಅವನ ಮನಸ್ಸಿನ ಮೂಲೆಯಲ್ಲಿ ಭೀತಗೊಳಿಸುವ ಪ್ರಜ್ಞೆಯ ತುಣುಕು ಇದೀಗ ಯಾಮಿನಿಯ ಸಲಹುವಂತಹ ಸಾನಿಧ್ಯದಲ್ಲಿ ಬಾಲ ಮಡಚಿ ಕೂತ ಪವಾಡಕ್ಕೆ ‘ಭೇಷ್’ ಎಂದು ಅಭಿನಂದಿಸುತ್ತಾ ಅವನು ಅವಳ ಭುಜಕ್ಕೆ ಭುಜ ಸವರಿ, ಅವಳ ಒಟ್ಟು ವ್ಯಕ್ತಿತ್ವಕ್ಕೆ ಎಟಕುವ ಪ್ರಯತ್ನದಲ್ಲಿರುವವನಂತೆ ಅವಳ ಪಕ್ಕ ನಡೆಯುವನು.
ದಾರಿಯುದ್ದಕ್ಕೂ ಕಂಡ ಅಂಗಡಿಗಳಿಗೆ ನುಗ್ಗಿ ತನಗೆ ಸರಿಕಂಡದ್ದನ್ನು ಕೊಡಿಸಿ ಅವನ ಮಡಿಲು ತುಂಬುವಳು. ಅವನ ತುಟಿಗೆ ಸಿಗರೇಟು ಅಂಟಿಸಿ ಜಾಗರೂಕತೆಯಿಂದ ಬೆಂಕಿ ಸೋಂಕಿಸಿ ತಾನೂ ಒಂದು ‘ದಂ’ ಹೊಡೆದು ಮತ್ತೆ ಅವನ ತುಟಿಗೇ ಇಡುತ್ತಾ ‘ಸಿಗರೇಟು ಕಡಿಮೆ ಸೇದೋ ಯಕ್ಷಾ…’ ಎಂದು ಎಚ್ಚರಿಸಲು ಮರೆಯಲಾರಳು!
ಹೀಗೆ ಬಿಸಿಲಿಗೆ ಕರಗಿ, ನೆರಳಿಗೆ ತಂಪಾಗಿ ಮೈಮನಸ್ಸಿನವರೆಗೆ ದಣಿವ ಆ ಹುಡುಗನನ್ನು ಜೋಪಾನವಾಗಿ ತನ್ನ ಅಂಗೈಯಲ್ಲಿ ಅವನ ಕೈ ಅಮುಕುತ್ತಾ ತಾಯಿಯ ಹೊಟ್ಟೆಯ ಬಿಸಿಯನ್ನು ಅವನ ಆತ್ಮಕ್ಕುಣಿಸುತ್ತಾ ಯಾಮಿನಿ ತನ್ನ ಕೂಡೆ ಕರೆತರುವಳು ತನ್ನ ಮನೆಗೆ! ಯಾಮಿನಿಯ ಚಂದದ ಪುಟ್ಟ ಮನೆ, ಮನೆಯ ಮುಂದಿನ ಪುಟ್ಟ ತೋಟ, ತೋಟದಲ್ಲಿ ಹಸಿರಿನಿಂದ ತೊನೆಯುವ ಗಿಡಗಳು, ಮನೆಯೊಳಗೆ ಯಾಮಿನಿಯ ಹೃದಯಸ್ಪರ್ಶ ಪಡೆದ ಕಲಾವಂತಿಕೆಗಳನ್ನು ಮನಸ್ಸಿಗೆ ತಂದುಕೊಳ್ಳುತ್ತಾ, ಇಲ್ಲಿ ಈ ಪುಟ್ಟ ಮನೆಯಲ್ಲಿ, ಅಲ್ಲಿ ಆ ಪುಟ್ಟ ಹಸಿರು ಮುಕ್ಕಳಿಸುವ ತೋಟದಲ್ಲಿ ನನ್ನ ಯಾಮಿನಿ ಹೀಗೆಲ್ಲಾ ಬಳುಕಿ ತೇಲಾಡಿರಬಹುದೋ, ತನ್ನ ಹಾತೊರೆವ ಸುಖದ ಚಿಲುಮೆಗಳಲ್ಲಿ ಕಣ್ಣೀರ ಕೋಡಿ ಹರಿಸಿದ ಎಡೆಗಳಾವುದೋ ಎಂದು ಅವನು ತಡಕಲು ತೊಡಗುವನು. ‘ಇದೀಗ ಬಂದೆ ಪುಟ್ಟಾ’ ಎಂದು ಅಡಿಗೆ ಕೋಣೆಯವರೆಗೂ ನುಗ್ಗಿದವಳ ಸೆರಗು ಹಿಡಿದೇ ಧಾವಿಸಿದವನ ಹಿಂಸೆಗಳಿಂದ ಸುಖಪಡುತ್ತಲೇ ಟೀಗೆ ನೀರಿಟ್ಟು ಅವನನ್ನು ಮಡಿಲಿಗೆಳೆದು ಅವನ ಮುಡಿಯಲ್ಲಾಡುವ ಅವಳ ಬೆರಳುಗಳು ಸಂಭಾಷಿಸತೊಡಗಿದವು. ‘ಯಕ್ಷಾ, ನನ್ನ ಇನ್ನುಳಿದ ಬದುಕಿನ ಕೊಟ್ಟ ಕೊನೆಯ ಭಾಗ್ಯವೇ, ಕಣ್ಣ ತುದಿಯಲ್ಲಿ ನನ್ನ ಹೃದಯವನ್ನಿಟ್ಟು ಕಾದು ನಾನು ಪಡೆದ ನನ್ನ ಮಗುವೇ, ನಿನಗೆಷ್ಟು ಕಾಣಿಸಲಿದೆ. ನನ್ನ ಹೃದಯವನ್ನು ಬಗೆದು ನಿನಗೆಷ್ಟು ಕಾಣಿಸಲಿದೆ, ಪರಸ್ಪರ ಮೋಹಿಸಲ್ಪಟ್ಟ ಹೆಮ್ಮೆ ನನಗೆ ದೃಢವಾದಂತೆ ನಾನು ನಿರ್ಭಯಳಾಗುತ್ತಾ ಹೋದ ವಿಸ್ಮಯದ ಬಗ್ಗೆ ನಿನಗೆಷ್ಟು ಹೇಳಲಿದೆ…’ ಅಂದುಕೊಳ್ಳುತ್ತಾ ಹಿಂದೊಮ್ಮೆ ತಾನು ಪುಟ್ಟ ಷೋಡಶಿಯಾಗಿದ್ದಾಗ ವೀಣೆಯ ಮೇಲೆ ಪಳಗಿದ್ದ ತನ್ನ ನವಿಲು ಬೆರಳುಗಳ ಪರಿಣತಿಯನ್ನು ಅವನ ದೇಹದುದ್ದಕ್ಕೂ ಕಾಣಿಸುವಳು. ‘ಏಯ್…’ ಎಂದು ಒದ್ದಾಡುತ್ತಲೇ ಆ ಸುಖಗಳಿಗೆ ತನ್ನನ್ನು ಒಡ್ಡಿಕೊಳ್ಳುವನು. ಒಲೆಯ ಮೇಲೆ ಕುದಿಗೆ ಬಂದ ನೀರಿಗೆ ಯಾಮಿನಿ ಟೀ ಪುಡಿ ಹಾಕಿ ವಿಶೇಷ ಅಕ್ಕರಾಸ್ಥೆಯಿಂದ ಟೀ ತಯಾರಿಸುವಳು. ಅವನೊಳಗೆ ಪರಾಕಾಯ ಪ್ರವೇಶವನ್ನು ಹೊಂದಿರುವವಳಂತೆ, ಅವನ ರುಚಿಯ ಆಳ, ವಿಸ್ತಾರಗಳೆಲ್ಲಾ ಮನೋಗತವಾಗಿ ಅದ್ಭುತವಾಗಿ ಟೀ ಬೆರೆಸುತ್ತಾ ಅವನ ಕೈಗಿಡುವಳು.
ಇದನ್ನು ಓದಿದ್ದೀರಾ?: ಡಿ.ಆರ್. ನಾಗರಾಜ್ ಅವರ ಕತೆ | ನಗರದೇವಿಯ ದರ್ಶನ
“ಬಿಂದು ಸ್ಕೂಲಿಂದ ಬರುವ ಮುನ್ನ ಈ ಸೀರೆಯನ್ನು ಬಿಚ್ಚಿ ಕಿತ್ತೊಗೆಯಬೇಕು ಯಕ್ಷಾ… ನಿನಗಾಗಿ ಮುಡಿದ ಈ ಅಲಂಕಾರಗಳನ್ನೆಲ್ಲಾ ಆ ಮಗುವಿನಿಂದ ಮರೆ ಮಾಚಬೇಕು…”
ಅವನು ಕೌತುಕಗೊಂಡು “ಯಾಕೆ?” ಎಂದು ಕೇಳುವನು.
“ರೆಕ್ಕೆಗಳುಳ್ಳ ಹೊಳೆವ ಬಿಳಿ ಕುದುರೆಯಲ್ಲಿ ಬರುವ ಗಂಧರ್ವ ಕುಮಾರ ಅಮ್ಮನನ್ನು ಎತ್ತಿಕೊಂಡು ಹೋದಂತೆ ಅವಳಿಗೆ ನಿದ್ದೆಯಲ್ಲಿ ಕನಸುಗಳು. ಅದಕ್ಕೆ ಅಮ್ಮ ಸುಂದರಿಯಂತೆ ಕಾಣುವುದನ್ನು ಅವಳು ಇಷ್ಟಪಡಲಾರಳು… ಅವಳ ಕಣ್ಣಿಗೆ ಸದಾ ಆ ಗಂಧರ್ವನ ಹಿಂದೆ ಮಾಯವಾಗುವುದಕ್ಕೆ ಸಿದ್ಧಳಾಗಿರುವಂತೆ ಕಾಣುತ್ತಿರುವೆನೋ ಏನೋ, ನಾನು”
ನಿರಾತಂಕವಾಗಿ ಒಂದೊಂದೇ ಕಳಚಿ ಬಟಾಬಯಲಾಗಿ ಬೆಂಕಿಯಂತೆ ಪ್ರಕಾಶಮಯವಾಗಿ ಜ್ವಲಿಸತೊಡಗಿ ತನ್ನೆದುರು ಶಾಪಗ್ರಸ್ಥ ಕಿನ್ನರಿಯಂತೆ ಸಾಕ್ಷಾತ್ಗೊಂಡ ಅವಳನ್ನು, ತುಟಿಕಚ್ಚಿ ‘ಏಯ್, ಬೋಸುಡಿ…’ ಎಂದು ತನ್ನ ಬಳಿ ಎಳೆದಿಟ್ಟು ಚಳಿ ಹಿಡಿದವನಂತೆ ನಡುಗ ತೊಡಗುವನು. ಪ್ರಜ್ಞೆಯನ್ನೇ ಕುರುಡಾಗಿಸುವ ಅವಳ ದೇಹದ ಪ್ರಖರ ಕಾವಿಗೆ ಅವನು ಜ್ವರ ಹಿಡಿದವನಂತೆ ತಲ್ಲಣಿಸತೊಡಗಿದರೆ ಯಾಮಿನಿ ತನ್ನ ಮೈಯ ಬೆಂಕಿಯನ್ನು ಅವನ ಮೈಗೆ ಉಜ್ಜುತ್ತಾ ಸೆಟೆದುಕೊಂಡಿದ್ದ ಅವನನ್ನು ತೆರೆಯತೊಡಗುವಳು. ಕಗ್ಗತ್ತಲ ಸೆರಗಿನಂತಿದ್ದ ತನ್ನ ತಲೆಗೂದಲ ಸಾಗರದಲ್ಲಿ ಅವನ ಮುಖವನ್ನು ಅದ್ದುವಳು. ಘ್ರಾಣೇಂದ್ರಿಯವನ್ನೇ ಒಡೆದು ಆತ್ಮವನ್ನು ತಲುಪುವಂತಿದ್ದ ಆ ಮತ್ತಿನ ಪರಿಮಳ ಅವನ ಇಡೀ ವ್ಯಕ್ತಿತ್ವವನ್ನೇ ಹೊಸ ಆಯಾಮದೆಡೆಗಳಿಗೆ ತೆರೆದುಕೊಳ್ಳುವುದು. ಅವಳ ಕೂದಲಲ್ಲಿ ಆಲಿಸುವನು; ಘ್ರಾಣಿಸುವನು; ದಾಹಗೊಂಡು ಕುಡಿಯುವನು; ಆ ಕೂದಲೆಳೆಗಳನ್ನು ಹಲ್ಲ ನಡುವೆ ಸಿಕ್ಕಿಸಿ ವೀಣೆ ತಂತಿಯನ್ನು ಮೀಟುವಂತೆ ಮೀಟಿ ಸಂಗೀತ ನುಡಿಸುವುದರಲ್ಲೇ ಕಳೆದುಹೋಗುವನು.
ತನ್ನ ಮತ್ತು ಯಾಮಿನಿಯ ನಡುವಿನ ಸಂಬಂಧವನ್ನು ‘….’ ಆಗಿ ವ್ಯಾಖ್ಯಾನಿಸುವುದಕ್ಕೆ ಎಷ್ಟು ತವಕಿಸಿದರೂ ಬೆಂಕಿಯಂತೆ ಜ್ವಲಿಸುವ ಅವಳ ವ್ಯಕ್ತಿತ್ವ ಮಾತ್ರ ಅವಳ ದೇಹದ ಮೂಲಕ ಅವಳ ಪ್ರೀತಿಯನ್ನು ತಲುಪುವಂತೆ ಪ್ರೇರೇಪಿಸುವ ತಲ್ಲಣ ಮೊತ್ತಮೊದಲನೆಯದು ಎಂದು ಅವನಿಗನಿಸುತ್ತದೆ. ‘ಯಾಮೀ, ನಿನ್ನ ನಗು, ನಿನ್ನ ಕಣ್ಣೀರಿನುಪ್ಪು, ನಿನ್ನ ಮುಂಗುರುಳ ಉಲ್ಲಾಸ, ನಿನ್ನ ಕೆನ್ನೆಯಲ್ಲಿ ಮಡುಗಟ್ಟಿ ನಿಂತ ವಿಷಾದ, ನಿನ್ನ ಮುಡಿಯ ಮತ್ತೇರಿಸುವ ಸಂಗೀತ, ನಿನ್ನ ತೊಡೆಗಳ ನಡುವೆ ಜಿನುಗುವ ಈ ಅಸಹ್ಯ ಸುಗಂಧ, ನಿನ್ನ ಕಂಕುಳ ಸಂಧಿಯಲ್ಲಿ ಒಸರಿದ ಬೆವರ ಹನಿಯ ನಾಲಗೆ ಕೊರೆವ ರುಚಿ… ಓ ಯಾಮಿ, ಈ ಜಗತ್ತಿನಲ್ಲಿ ನಿನ್ನದೆಂಬುದೇನಿದೆಯೋ ಅವನ್ನೆಲ್ಲಾ ನನ್ನ ಪಂಚೇಂದ್ರಿಯಗಳ ಸಾಕ್ಷಿಯಾಗಿ ಅನುಭವಿಸಿ ನನ್ನ ಪ್ರೀತಿಗೆ ರುಜುತ್ವವನ್ನು ತಂದುಕೊಡುವೆ ನನ್ನ ಪ್ರಿಯ ಯಾಮಿ…’ ಎಂದು ಉತ್ಕಟಿತನಾಗಿ ಮೊರೆಯುತ್ತಾ, ಅವಳ ಬೆಂಕಿ ಹಚ್ಚುವ ಸ್ಪರ್ಶದಲ್ಲೇ ತಾಯಿ ಸಾಂತ್ವನವನ್ನು ಪಡೆಯುತ್ತಾ ಧನ್ಯತೆಯಲ್ಲಿ ಕರಗುವನು.
ಇದನ್ನು ಓದಿದ್ದೀರಾ?: ಸೇಡಿಯಾಪು ಕೃಷ್ಣಭಟ್ಟರ ಕತೆ | ನಾಗರ ಬೆತ್ತ
ಆದರೆ ಇದ್ದಕ್ಕಿದ್ದ ಹಾಗೆ ಮನಸ್ಸಿನ ಯಾವ ಮೂಲೆಯಿಂದ ಪ್ರೇರಣೆಯಾಗುವುದೋ? ಅವನು ಇರುವ ಈ ಎಲ್ಲಾ ಸುಖಗಳನ್ನು ತಳ್ಳಿ ಹಾಕುವಂತೆ ತನ್ನ ತುಟಿಗಳಿಂದ ‘ಪ್ಚ್…’ ಎನ್ನುವನು. ಯಾಮಿನಿ ದುಗುಡದಿಂದ ನಡುಗುವಳು. ಬದುಕಿನ ಬಗೆಗಿನ ಕಡು ವ್ಯಾಮೋಹಿ ಯಾಮಿನಿ ತನ್ನ ಇಡೀ ಮೂವತ್ತೆರಡು ವರ್ಷಗಳ ಬದುಕನ್ನೇ ರುಜುಗೊಳಿಸುವಂತಹ ಈ ಪರವಶತೆಯ ಪರಮಸೂಕ್ಷ್ಮ ಗಳಿಗೆಯಲ್ಲಿ ತನ್ನ ಆಳದ ಲಹರಿಗಳನ್ನು ‘ತನ್ನದೇ’ ಭ್ರಮೆಯ ನಡುವೆ ಜೋಪಾನಗೊಳಿಸುವಾಗ ತನ್ನ ಜೀವ ಬಿಂದು ಯಕ್ಷ ಹೊರಡಿಸಿದ ಆ ನೋವಿನಂತಹ ಸದ್ದಿನಿಂದ ದುಗುಡಗೊಳ್ಳಲಾರಳೇ ಯಾಮಿನಿ…?!
“ಯಕ್ಷಾ, ಯಾಕೆ ಭಯವೇ…?”
”ಇಲ್ಲ ಯಾಮೀ, ನಿನ್ನ ಜೊತೆಯಲ್ಲಿ ಅದೆಂತಹ ಭಯ?”
”ಇದು ಅನೈತಿಕದ್ದು ಎಂಬ ಸಂಕಟವೇ?”
“ಇಲ್ಲ… ಅಪರಾಧಿ ಪ್ರಜ್ಞೆಗಳ ಮೂಲಕ ನಾವಿದನ್ನು ಪಡೆಯುತ್ತಿಲ್ಲವಾದುದರಿಂದ ಇದು ಅನೈತಿಕವಾದುದೆಂಬ ಭಯವೂ ಇಲ್ಲ”
“ಮತ್ತೆ ಯಾಕೆ ಯಕ್ಷ? ನಿನಗ್ಯಾಕೆ ಹಾಗನಿಸಿದ್ದು…?”
”ಯಾಮೀ… ಯಶವಂತ… ನಿನಗೆ ಬದುಕು ಕೊಟ್ಟವನು…”
”ನನ್ನ ಹುಡುಗಾ, ನಮ್ಮ ಅವಶ್ಯಕತೆಗಳ ಸಲುವಾಗಿ ಹೋರಾಡುವುದಲ್ಲವೇ ಬದುಕು! ನಿಜಕ್ಕೂ ನನ್ನ ಪಾಲಿಗೆ ದಕ್ಕಲಿರುವ ಬದುಕು ಇದೀಗ ತೊಡಗಿರುವ ನಿನ್ನ ಸಲುವಾದ ಹೋರಾಟದಲ್ಲಿ ಮಾತ್ರ ಇದೆ ಯಕ್ಷಾ…”
“ಅದೇನಿದ್ದರೂ ಯಶವಂತ ನಿನ್ನನ್ನು ಮದುವೆಯ ಮೂಲಕ ಪಡೆದವನು…”
ಇದನ್ನು ಓದಿದ್ದೀರಾ?: ದ.ರಾ. ಬೇಂದ್ರೆ ಕತೆ | ಮಗುವಿನ ಕರೆ
“ಅವನು ಪಡೆದದ್ದೇನಿದ್ದರೂ ಮದುವೆಯ ಮೂಲಕ ನನ್ನನ್ನು ಪಡೆದಿದ್ದೇನೆ ಎನ್ನುವ ಭ್ರಮೆಯನ್ನು ಮಾತ್ರ ಯಕ್ಷಾ…”
“ಯಶವಂತ ನಿನ್ನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾನೆ”
”’ನಾನವನನ್ನು ಪೂಜಿಸ್ತೀನಿ ಯಕ್ಷಾ, ಆದರೆ ನಿನ್ನನ್ನು ನಾನು ಆರಾಧಿಸ್ತೀನಿ”
”ಪೂಜೆಗೂ, ಆರಾಧನೆಗೂ ಏನಂತಹ ವ್ಯತ್ಯಾಸವಿದೆ ಯಾಮೀ…”
“ಆಕಾಶ-ಭೂಮಿಯಷ್ಟು ಇದೆ ಯಕ್ಷಾ, ಪೂಜಿಸಲ್ಪಡುವವನು ಆಳುವ ಅಹಂಕಾರವನ್ನು ಪಡೆಯುತ್ತಾನೆ… ಆರಾಧಿಸಲ್ಪಡುವವನು ದಾಸನಾಗುವ ವಿನಯವನ್ನು ಪಡೆಯುತ್ತಾನೆ”
“ನನಗರ್ಥವಾಗುವುದಿಲ್ಲ ಯಾಮಿ…”
“ಪ್ರೀತಿಯ ಮೂಲಕ ಮೂಲಭೂತ ಸಂಸ್ಕಾರವನ್ನು ಪಡೆಯಲಾರದಷ್ಟು ಬ್ರಾಹ್ಮಣತನ ಇರುವವರೆಲ್ಲಾ ಪೂಜಿಸಲ್ಪಟ್ಟವರು ಯಕ್ಷಾ… ಇಡೀ ಜಗತ್ತಿನ ಬಗೆಗೆ ಉದಾರಿಗಳಾಗುವಷ್ಟು ಸ್ವಚ್ಛಗೊಂಡವರು ಆರಾಧಿಸಲ್ಪಟ್ಟವರು ಮಾತ್ರ”
“ಆದರೆ ಅವನೊಟ್ಟಿಗೆ ಬದುಕಿದ ಈ ಹನ್ನೆರಡು ವರ್ಷಗಳ ಬದುಕನ್ನು ಏನು ಮಾಡುವೆ?”
ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ
”ನಾವು ಪಡೆದದ್ದಷ್ಟೇ ಬದುಕಲ್ಲವೆ ಯಕ್ಷಾ? ನನ್ನ ಮನಸ್ಸು ಮುಟ್ಟಲಾರದ, ನನ್ನ ಆತ್ಮವನ್ನು ತಲುಪಲಾರದ ಅವನಿಂದ ಈ ಹನ್ನೆರಡು ವರ್ಷಗಳಲ್ಲಿ ನಾನೇನು ಪಡೆದೆ? ಅವನಾದರೂ ಏನು ಪಡೆದ? ಅವನು ನನ್ನಿಂದ ಪಡೆಯುವಂತಹದೇನಿದ್ದರೂ ಅದು ಪ್ರಯಾಸಪಟ್ಟು ಕಿತ್ತುಕೊಳ್ಳುವಂತಹದು ಯಕ್ಷಾ… ನಾಟಕದ ಪಾತ್ರವನ್ನೊಂದು ಒಪ್ಪಿಕೊಂಡವಳಂತೆ ನಾನು ನನ್ನ ಕರ್ತವ್ಯದಡಿಯಲ್ಲಿ ನನ್ನ ಅಭಿನಯವನ್ನು ಅಚ್ಚುಕಟ್ಟಾಗಿ ಒಪ್ಪಿಸುತ್ತಿರುವವಳು…” ಯಾಮಿನಿ ಗಂಟಲು ಗದ್ಗದಗೊಳ್ಳುವುದು. ಇದುವರೆಗಿನ ಬದುಕಿನಲ್ಲಿ ದಾಹಗೊಂಡ ತನ್ನಾತ್ಮ ಕೊನೆಗೂ ಕಾತರಿಸಿ ಪಡೆದ ಈ ಹುಡುಗಾ ‘ಇವನು ನನ್ನವನೇ’ ಎಂಬ ಸುಖಗೊಳಿಸುವ ನಿರ್ಭೀತಿಯ ಮುಷ್ಠಿಯೊಳಗಿಂದೆಲ್ಲೋ ಜಾರಿಹೋಗುವ ಹವಣಿಕೆಗಳನ್ನು ತೋರುವ ಈ ನನ್ನ ಯಕ್ಷಾ ಒಮ್ಮೆ ಸುಮ್ಮನಿರಬಾರದೆ…? ಎಂದು ದುಗುಡಗೊಂಡು ಅಳತೊಡಗುವಳು. ಗಾಬರಿಗೊಳ್ಳುವ ಅವನು ಅವಳ ಮುಖವನ್ನು ಸೆಳೆದು ತನ್ನ ತುಟಿಗಳಿಂದ ಅವಳ ಕಣ್ಣೀರನ್ನು ತೊಡೆಯುವನು. ಆದರೆ ಯಾಮಿನಿಗೆ ಸಮಾಧಾನವಾಗಲಾರದು! ಅವನು ಪಕ್ಕನೇ ಅದ್ಯಾವುದೋ ಜಾಗವನ್ನು ಬೊಟ್ಟು ಮಾಡುತ್ತಾ ಮೆತ್ತಗೆ ಅಲ್ಲಿ ಅದುಮುತ್ತಾ “ಯಾಮಿ ನೋಡು, ಇಲ್ಲೇಕೆ ಇಷ್ಟೊಂದು ಮಿದುವಿದೆ; ನಿರಿಕಟ್ಟಿ ಮಿದುವಾಗಿದೆ” ಎಂದು ಮಗುವಿನಂತೆ ಕೇಳುವನು. ಯಾಮಿನಿ ಕೈಗಳಿಂದ ಕಣ್ಣೀರನ್ನು ಒರೆಸಿಕೊಳ್ಳುತ್ತಾ ಅವನು ತೋರಿಸಿದ ಜಾಗದತ್ತ ಇಣುಕಿ ನೋಡಿ ಸಂಕೋಚಪಟ್ಟು, ತುಸು ನಾಚುತ್ತಾ, “ಓ, ಅದು ಬಿಂದು ಹುಟ್ಟಿದ್ದಕ್ಕೆ…” ಎನ್ನುತ್ತಾ ಅವನ ನೆತ್ತಿಗೆ ಬೆರಳಿನಿಂದ ಬಾರಿಸುವಳು. ಕಣ್ಣೀರಿನಿಂದ ತೊಯ್ದ ಅವಳೆರಡು ತುಂಬು ಕಣ್ಣುಗಳನ್ನು ನೋಡುತ್ತಾ ಅವನು ಮತ್ತೆ ತಲ್ಲಣಗೊಳ್ಳತೊಡಗುವನು. ಅವಳೆಡೆಗೆ ಕಳ್ಳನಂತೆ ನಗುತ್ತಾ ಅದೇನೋ ಬೇಕು ಎಂಬಂತೇ ಕೇಳುವನು. ‘ಅದರಲ್ಲೇನೂ ಇಲ್ಲ’ ಎನ್ನುವಂತೆ ಸಂಜ್ಞೆ ಮಾಡುವಳು. ‘ಇದೆ’ ಎನ್ನುತ್ತಾ ಮೊಂಡನಂತೆ ಅವಳನ್ನು ಸೆಳೆದ ಅವನಿಗೆ ಯಾಮಿನಿ ತನ್ನ ಒಡಲಿನಿಂದ ಬೆಂಕಿಯಂತಹ ದಾಹವನ್ನು ಉಣಿಸತೊಡಗುವಳು.
*
ಪ್ರತೀಕಾರದ ಪ್ರೇರಣೆಯಿಂದಲೇ ಎನ್ನುವಂತೆ ಯಶವಂತ ಯಾಮಿನಿಯ ಮೇಲೆ ಆಕ್ರಮಣ ನಡೆಸಿದ ಆ ರಾತ್ರಿಯ ಬಳಿಕ ‘ಇನ್ನೇನು ಬದುಕು ಮುಗಿದೇ ಹೋಯಿತು’ ಎಂದನಿಸುವ ಹಾಗೆ ಅವರಿಬ್ಬರ ನಡುವೆ ಗೋಡೆ ಕಟ್ಟಿಕೊಂಡಿದ್ದ ಮೌನದಲ್ಲೂ ಯಶವಂತ, ಯಾಮಿನಿಯನ್ನು ತಲುಪಬಹುದಾದ ಎಡೆಗಳನ್ನು ಹುಡುಕತೊಡಗುವನು. ಈ ಹಿಂದೆ ‘ಎಲ್ಲವೂ ಯಾಮಿನಿಗಾಗಿ’ ಎಂದು ಮನಸ್ಸಿನೊಳಗೆ ಕ್ಷಣಕ್ಕೊಮ್ಮೆ ಪ್ರತಿಧ್ವನಿಸಿ ಆತ್ಮದ ಹೆಮ್ಮೆಯನ್ನು ಪೋಷಿಸುವಂತಹ ಹಮ್ಮು ಈಗ ಕರಗಿ ಹೋಗಿದೆ. ತಾನವಳನ್ನು ಪ್ರಾಣಕ್ಕಿಂತಲೂ ಮಿಗಿಲಾಗಿ ಪ್ರೀತಿಸುತ್ತಿರುವೆನೆಂದು ಪ್ರತಿ ಕ್ಷಣವೂ ಕಾಡುತ್ತಿದ್ದ ತನ್ನ ಹೆಮ್ಮೆ ಅವಳನ್ನು ಸದಾ ಸಾಲಗಾರಳಂತಿರಿಸಬೇಕೆಂಬ ತನ್ನ ಮನಸ್ಸಿನ ತವಕ ಮಾತ್ರವಾಗಿತ್ತು ಎಂಬುದು ಅವನಿಗೆ ವೇದ್ಯವಾಗುತ್ತದೆ. ಯಕ್ಷನನ್ನು ನೆನೆದರೆ ಹಲ್ಲು ಕಡಿಯುವಂತೆ ಉಕ್ಕುವ ಕ್ರೋಧ ಈಗ ತಣ್ಣಗಾಗಿ ಹೋಗಿದೆ.
ಇದನ್ನು ಓದಿದ್ದೀರಾ?: ಅಮರೇಶ ನುಗಡೋಣಿ ಅವರ ಕತೆ | ತಮಂಧದ ಕೇಡು
ಸಾಮಾಜಿಕ ಘನತೆ ತಂದುಕೊಡುವ ದೊಡ್ಡ ಉದ್ಯೋಗ, ಆ ಘನತೆಯನ್ನು ಪೋಷಿಸುವುದಕ್ಕೆ ಸುಂದರಿ, ಜಾಣೆಯಾದ ಹೆಂಡತಿ ಎಂಬ ಲೆಕ್ಕಚಾರದಲ್ಲಿ ಹೊರಟ ತಾನು ಪಡೆಯಬೇಕಾಗಿದ್ದುದು ಕೇವಲ ಸಾಕುಪ್ರಾಣಿಯಂತಹ ಹೆಂಡತಿ! ‘ನಿನಗೇನು ತಂದಿರುವೆ ನೋಡು’ ಎನ್ನುತ್ತಾ ತಾನು ಬೆಲೆಬಾಳುವ ಸೀರೆ ತಂದಾಗ, ವಜ್ರದ ನೆಕ್ಸಸ್ ತಂದಾಗ, ಸಂಭ್ರಮದಿಂದ ಕಣ್ಣರಳಿಸಿ, ಉಟ್ಟು ತೊಟ್ಟು ಮುದ್ದಿನ ಬೆಕ್ಕಿನಂತೆ ತನ್ನನ್ನು ಉಲ್ಲಾಸಗೊಳಿಸಬೇಕಾದ, ಬೇಡವೆಂದಾಗ ತೆಪ್ಪಗಿರಬೇಕಾದ, ತನ್ನ ಆತ್ಮರತಿಗಳನ್ನು ಪೋಷಿಸಬೇಕಾದ ಒಂದು ಹೆಂಡತಿ! ಉತ್ಕಟ ವ್ಯಾಮೋಹದ, ಬದುಕಿನ ಕುರಿತು ತೀವ್ರ ಹಸಿವಿನ, ಪ್ರಚಂಡ ವೇಗದ ಯಾಮಿನಿಯನ್ನು ಮನೆಯ ಗೋಡೆಗೆ ತೂಗಿಟ್ಟ ಚಿತ್ರಪಟದಂತೆ ಹಿಡಿದಿಡಬೇಕೆಂಬ ತನ್ನ ಯೋಚನೆಗಳು ತನ್ನ ದೌರ್ಬಲ್ಯವಾಗಿ ದಾಖಲಾಗಿ ಬಿಡುತ್ತದೆಯಲ್ಲವೇ ಎಂಬ ವ್ಯಾಕುಲ ಅವನನ್ನು ಕಾಡುತ್ತದೆ. ಬದುಕುವವರ ತೀರ್ಮಾನಗಳೇ ನೀತಿಗಳಾಗಬೇಕೆ ವಿನಾಃ ಸಿದ್ಧನೀತಿಗಳ ಚೌಕಟ್ಟಿಗೆ ಬದುಕನ್ನು ಮಿತಗೊಳಿಸುವ ಯತ್ನ ಬದುಕಿನ ಆನಂದದ ಸೆಲೆಗಳನ್ನೇ ನಾಶಪಡಿಸಿಬಿಡಬಹುದಲ್ಲ ಎಂದು ಅವನು ತನ್ನ ಮನೆಯ ಆ ಕ್ಷಣದ ವಾತಾವರಣದಲ್ಲಿ ಕೂತು ತರ್ಕಿಸಬೇಕಾಗುತ್ತದೆ!
ಹಿಂದಿನ ತನ್ನ ಎಲ್ಲಾ ಗದ್ದಲಗಳನ್ನು ಕಳೆದುಕೊಂಡಿರುವ ಯಾಮಿನಿ ಈ ಮೂರು ದಿನಗಳಿಂದ ಅಂತರ್ಮುಖಳಾಗಿ ಹೋಗಿರುವುದು ಯಶವಂತನಿಗೆ ಸಮಸ್ಯೆಯಾಗಿದೆ. ಬೆಳಗ್ಗೆ ನಿತ್ಯವೂ ಬೆನ್ನಿಗೆ ಗುದ್ದಿ, ತಲೆದಿಂಬು ಎಳೆದಾಡಿ ‘ಎದ್ದೇಳೋ ಸೂರ್ಯ ವಂಶದವನೇ’ ಎಂದು ಕಿವಿ ಹಿಂಡಿ ಎಳೆದೊಯ್ದು, ಜಳಕ ಮಾಡಿಸಿ, ತಿಂಡಿ ತಿನ್ನಿಸಿ, ತನ್ನ ನಿತ್ಯದ ಕರ್ಮಾಚಾರಕ್ಕೆ ಹೊರಡಿಸುತ್ತಿದ್ದ ಯಾಮಿನಿಯ ಈ ಮೌನ ಜೀವ ಕೊಯ್ಯುವಂತಿದೆ. ಮೂರು ದಿನಗಳಿಂದ ತಾನು ಕಚೇರಿಗೂ ಹೋಗದೇ ಮನೆಯಲ್ಲಿದ್ದರೂ ‘ಆಫೀಸಿಗೆ ಹೋಗುವುದಿಲ್ಲವೇ?’ ಎಂದು ಅವಳೇಕೆ ಒಮ್ಮೆ ಕೇಳಬಾರದು ಎಂದು ತುಡಿಯುವನು. ಕೊನೆಯ ಪಕ್ಷ ತಾನು ಮಿಕ್ಕೆಲ್ಲದರಿಂದಲೂ ಪಡೆದ ನಿರರ್ಥಕತೆಯ ಪಾಠವನ್ನಾದರೂ ಯಾಮಿನಿಯ ಗಮನಕ್ಕೆ ತಂದುಬಿಡಬಹುದಿತ್ತು ಎಂದು ಹಂಬಲಿಸುವನು.
ಯಾಮಿನಿಗಾದರೂ ಇವೆಲ್ಲಾ ಗಮನಕ್ಕೆ ಬಂದರೂ ಯಾವುದನ್ನೂ ಈಗ ಹಿಡಿತಕ್ಕೆ ತೆಗೆದುಕೊಳ್ಳಬೇಕು ಎಂಬ ಧಾವಂತ ಅವಳಲ್ಲಿ ಉಕ್ಕುವುದಿಲ್ಲ. ಮಗಳನ್ನು ಸ್ಕೂಲಿಗೆ ಹೊರಡಿಸಿ ಯಶವಂತನ ಬೇಕು ಬೇಡಗಳನ್ನು ನೋಡಿಕೊಂಡೂ ತಾನು ಅದ್ಯಾವುದಕ್ಕೂ ಸಂಬಂಧಪಟ್ಟವಳಲ್ಲ ಎಂಬಂತೇ ಅವಳ ಹುಮ್ಮಸ್ಸು ಉಡುಗಿ ಹೋಗಿತ್ತು. ಸುಮ್ಮನೇ ದಿನವಿಡೀ ಹಾಸಿಗೆಯಲ್ಲಿ ಮಲಗಿ ಸೂರು ನೋಡುತ್ತಾ ಯಕ್ಷನ ಬೆಂಕಿಯಂತಹ ನೆನಪುಗಳನ್ನು ಧ್ಯಾನಿಸುತ್ತಾ ಕುದಿದು ಹಾಗೇ ಬೂದಿಯಾಗುವಳು. ರಾತ್ರಿಗಳಲ್ಲೆಲ್ಲಾ ನಿದ್ದೆಯ ಮಂಪರಿನಲ್ಲಿ ಹೊರಳಾಡುತ್ತಾ ‘ಯಕ್ಷಾ…’ ಎಂದು ಕನವರಿಸುತ್ತಾ ನರಳುವಳು. ದಿನಾ ಇದೇ ನಡೆದು ತನ್ನ ಬೆಡಗನ್ನೆಲ್ಲಾ ಕಳೆದು ಹೆಣದ ಕಳೆ ಸೂಸುವ ಅವಳ ಚರ್ಯೆಗಳು ಯಶವಂತನ ಪಾಪಪ್ರಜ್ಞೆಗಳನ್ನು ತೀವ್ರಗೊಳಿಸುವುದು.
ಇದನ್ನು ಓದಿದ್ದೀರಾ?: ಉಮಾ ರಾವ್ ಅವರ ಕತೆ | ಅಗಸ್ತ್ಯ
ಅಂದು ರಾತ್ರಿಯಿಡೀ ಕೂತು ಯೋಚನೆಗಳಲ್ಲಿ ಮುಳುಗಿದ ಯಶವಂತ ಕೊನೆಗೂ ಅದ್ಯಾವುದೋ ತೀರ್ಮಾನಕ್ಕೆ ಸಿದ್ಧನಾಗಿ ಉಲ್ಲಾಸಗೊಳ್ಳುವನು. ನಿದ್ದೆ ಹೋಗಿದ್ದ ಯಾಮಿನಿಯ ಅಂಗೈಗಳನ್ನು ಮೆಲ್ಲಗೆ ಬಿಡಿಸಿ, ಗೋರಂಟಿ ಚಿತ್ತಾರಗಳನ್ನು ಮೃದುವಾಗಿ ಸವರುವನು.
*
ಪುಟ್ಟಿ ಸ್ಕೂಲಿಗೆ ಹೋಗಿದೆ. ಮೂರು ದಿವಸಗಳ ನಂತರ ಹೊಸ ಸಡಗರದಿಂದ ಬೆಳಗ್ಗೆ ಎದ್ದು ಹೋಗಿರುವ ಯಶವಂತ ಆಫೀಸಿಗಲ್ಲ ಎಂದು ಅವಳಿಗನಿಸಿತ್ತು. ಎಲ್ಲಿಗೆಂದು ಕೇಳುವ ಚೈತನ್ಯವೂ ಇರಲಿಲ್ಲ. ಸರಿಯಾಗಿ ಆಹಾರಗಳನ್ನು ತೆಗೆದುಕೊಳ್ಳದೇ ವಿಪರೀತ ಸಂಕಟ, ಸುಸ್ತುಗಳಿಂದ ತುಂಬಿದ್ದಳು. ಆಹಾರದ ಮೇಲಿನ ಅವಳ ನಿರಾಸಕ್ತಿ, ಜೀವನಾಸಕ್ತಿಯನ್ನೇ ಕಳೆದುಕೊಳ್ಳುವ ಸೂಚಕದಂತಿತ್ತು. ತಾನು ಪರೋಕ್ಷ ವಿಧಾನಗಳ ಮೂಲಕ ಆತ್ಮಹತ್ಯೆಯತ್ತ ನಡೆಯುತ್ತಿದ್ದೇನೆ ಎಂದೆನಿಸಿ ಅವಳಿಗೆ ನಗು ಬಂತು. ಸಾಯುವುದು ತನ್ನಿಂದ ಸಾಧ್ಯವೆ? ತನ್ನ ಹೊರತಾದ ಜಗತ್ತನ್ನು ತನ್ನಿಂದ ಕಲ್ಪಿಸಿಕೊಳ್ಳುವುದು ಸಾಧ್ಯವೆ? ಎಂದು ಅವಳು ತಲೆಕೆಡಿಸಿಕೊಳ್ಳುವಳು.
ತನ್ನಿಂದ ಯಾವೊಂದು ಆಶ್ವಾಸನೆಗಳನ್ನು ಕೂಡ ಪಡೆಯದೇ ತನಗೆ ಬಲಿಬಿದ್ದ ಯಕ್ಷನನ್ನು ಕುರಿತು ನೆನೆಯುತ್ತಾ ಅವಳ ಕಣ್ಣಾಲಿಗಳು ತುಂಬಿ ಬರುವುದು. ಎಲ್ಲಿರುವನೋ… ಯಾವ ಗಲ್ಲಿಯಲ್ಲಿ ಸಿಗರೇಟು ಕುಡಿದುಕೊಂಡು, ಗಿಟಾರ್ ಬಾರಿಸುತ್ತಾ ತನಗಾಗಿ ಹಾಡುತ್ತಿರುವನೋ…
ಹೊರಗಡೆ ಯಶವಂತನ ಕಾರು ಬಂದು ನಿಲ್ಲುವ ಸದ್ದು! ಮಲಗಿದಲ್ಲಿಂದಲೇ ಯಾಮಿನಿ ಆಲಿಸುವಳು. ಅದರ ಬೆನ್ನಿಗೇ ಬಾಗಿಲು ತೆರೆದು ಬರುತ್ತಿರುವ ಯಶವಂತನ ಹೆಜ್ಜೆ ಸದ್ದು! ಸುಮ್ಮನೇ ಆಲಿಸುವಳು, ‘ಯಾಮೀ, ನಿನಗೇನು ತಂದಿರುವೆ ನೋಡು’ ಎಂದು ಒಳಬರುತ್ತಲೇ ಧ್ವನಿ ಎತ್ತರಿಸಿ ಸಂಭ್ರಮದಿಂದ ಕೂಗುತ್ತಿರುವ ಯಶವಂತ! ‘ಶವಪೆಟ್ಟಿಗೆ’ ಇರಬಹುದೇ ಎಂದು ಮನಸ್ಸಿನಲ್ಲೇ ಅಂದುಕೊಳ್ಳುವಳು. ”ಯಾಮಿ, ನಿನಗೇನು ತಂದಿರುವೆ ನಾನು… ನೋಡು, ಇಲ್ಲಿ ನೋಡು ಒಮ್ಮೆ…” ಅವಳ ಪಕ್ಕ ಬಂದು ಉದ್ವೇಗಗೊಂಡು ಮತ್ತೊಮ್ಮೆ ಯಶವಂತ ಉಸುರುವನು.
ಇದನ್ನು ಓದಿದ್ದೀರಾ?: ಗೀತಾ ನಾಗಭೂಷಣ ಅವರ ಕತೆ | ಕಿಚ್ಚಿಲ್ಲದ ಬೇಗೆಯಲ್ಲಿ ಬೆಂದೆನವ್ವಾ…
ಯಾಮಿನಿ ತಲೆ ಹೊರಳಿಸಿ ನೋಡುವಳು. ಅವಳ ಕಣ್ಣುಗಳು ಸೂರ್ಯ ಪ್ರಕಾಶದಂತೆ ಬೆಳಗುವುದು. ಧಿಗ್ಗನೆದ್ದುಕೊಂಡು ತನ್ನ ಮುಂದಿರುವುದನ್ನು ನೋಡುವಳು. ನೋಡುತ್ತಾ… ನೋಡುತ್ತಾ… ಅವಳಿಗೆ ಅಳು ಬರುವುದು.
ಯಾಮಿನಿ ಮುಖಮುಚ್ಚಿ ಅಳುವಳು!

ಬಿ.ಎಂ. ರಶೀದ್: ಜನಿಸಿದ್ದು ಉಪ್ಪಿನಂಗಡಿ ಸಮೀಪದ ಮಠ ಎಂಬ ಹಳ್ಳಿಯಲ್ಲಿ. ಉಪ್ಪಿನಂಗಡಿ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಪದವಿ. ‘ಅಶಾಂತಿ ಪರ್ವ’ ವಿದ್ಯಾರ್ಥಿಯಾಗಿರುವ ಸಂದರ್ಭದಲ್ಲಿ ಬರೆದ- ಮೊದಲ ಪ್ರಕಟಿತ- ಕವಿತೆ. ಕಾಲೇಜು ವಿದ್ಯಾರ್ಥಿಗಳಿಗಾಗಿ ಮಣಿಪಾಲ ಸಾಹಿತ್ಯ ಸಂಘ ರಾಜ್ಯ ಮಟ್ಟದಲ್ಲಿ ಹಮ್ಮಿಕೊಂಡ ಡಾ. ಟಿಎಂಎ ಪೈ ಸ್ಮಾರಕ ಕನ್ನಡ ಆಶುಕವಿತಾ ರಚನೆಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕವಿತೆಯಿದು. ಬಳಿತ ‘ತರಂಗ’ ವಾರಪತ್ರಿಕೆಯಲ್ಲಿ ಪ್ರಕಟಗೊಂಡಿತು. ‘ಗರ್ಭ’ ಮೊದಲ ಪ್ರಕಟಿತ ಕತೆ. ಲಂಕೇಶ್ ಪತ್ರಿಕೆಯಲ್ಲಿ ಬೆಳಕು ಕಂಡ ಈ ಸಣ್ಣ ಕತೆ ಓದುಗರ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು. ಬಳಿಕ, ಪತ್ರಿಕೆಗೆ ಕತೆ ಬರಿ ಎಂದು ಪಿ. ಲಂಕೇಶರಿಂದಲೇ ಪತ್ರ. ಲಂಕೇಶ್ ಪತ್ರಿಕೆ, ಹಾಯ್ ಬೆಂಗಳೂರು ಪತ್ರಿಕೆಗಳಲ್ಲಿ ವರದಿಗಾರನಾಗಿ ಕೆಲಸ. 2002 ನವೆಂಬರ್ 2ರಂದು ಅಕಾಲ ಮರಣ. ಬದುಕಿದ್ದು 33 ವರ್ಷ. 2005ರಲ್ಲಿ ಅವರ ಬರಹಗಳ ಸಂಕಲನ ‘ಪರುಷಮಣಿ’ ಪ್ರಕಟ.



