ಕುಟುಂಬದ ಮಹಿಳೆಯೊಬ್ಬರಿಗೆ ಸರ್ಕಾರಿ ಶಿಕ್ಷಕಿ ಹುದ್ದೆ ದೊರೆತ ಸಂಭ್ರಮದಲ್ಲಿ ದೇವರಿಗೆ ಹರಕೆ ತೀರಿಸಲು ತೆರಳುತ್ತಿದ್ದ ಒಂದೇ ಕುಟುಂಬದ 13 ಮಂದಿ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಜಾರ್ಖಂಡ್‌ನ ರಾಮಗಢ ಜಿಲ್ಲೆಯಲ್ಲಿ ಭಾನುವಾರ ಮುಂಜಾನೆ ನಡೆದಿದೆ. ಮೃತರಲ್ಲಿ ನಾಲ್ವರು ಮಹಿಳೆಯರು, ಐವರು ಪುರುಷರು ಹಾಗೂ ನಾಲ್ವರು ಮಕ್ಕಳು ಸೇರಿದ್ದಾರೆ. ಅಪಘಾತದಲ್ಲಿ ಒಬ್ಬರು ಮಾತ್ರ ಬದುಕುಳಿಸಿದ್ದು, ಗಂಭೀರವಾಗಿ ಗಾಯಗೊಂಡಿರುವ ಅವರಿಗೆ ರಾಮಗಢದ ಸದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತಪಟ್ಟವರೆಲ್ಲರೂ ಬಿಹಾರದ ನಳಂದಾ ಜಿಲ್ಲೆಯ ಜಂಘಾರೊ ಗ್ರಾಮದ ನಿವಾಸಿಗಳಾಗಿದ್ದಾರೆ. ಅವರೆಲ್ಲರೂ ಸ್ಕಾರ್ಪಿಯೋ ವಾಹನದಲ್ಲಿ ಜಾರ್ಖಂಡ್‌ನ ರಾಜರಪ್ಪದಲ್ಲಿರುವ ಪ್ರಸಿದ್ಧ ಚಿನ್ನಮಸ್ತಾ ದೇವಸ್ಥಾನಕ್ಕೆ ವಿಶೇಷ ಪೂಜೆ ಸಲ್ಲಿಸಲು ಪ್ರಯಾಣಿಸುತ್ತಿದ್ದರು. ಭಾನುವಾರ ಮುಂಜಾನೆ ಸುಮಾರು 1.30ರ ವೇಳೆಗೆ ಕುಜ್ಜು ಹೊರಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-33ರ (ಹಜಾರಿಬಾಗ್-ರಾಂಚಿ ಮಾರ್ಗ) ಪಾಂಕಿ ಗ್ರಾಮದ ಬಳಿ ಅಪಘಾತ ಸಂಭವಿಸಿದೆ ಎಂದುಪೊಲೀಸರು ತಿಳಿಸಿದ್ದಾರೆ.
ಅತಿ ವೇಗದಲ್ಲಿದ್ದ ಸ್ಕಾರ್ಪಿಯೋ ವಾಹನವು ಮುಂದೆ ಸಾಗುತ್ತಿದ್ದ ಅಪರಿಚಿತ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ರಾಮಗಢ ಉಪವಿಭಾಗೀಯ ಪೊಲೀಸ್ ಅಧಿಕಾರಿ ಅಲೋಕ್ ರಂಜನ್ ಘಟನೆಯ ಕುರಿತು ವಿವರ ನೀಡಿದ್ದು, ತಡರಾತ್ರಿ ಬಿಹಾರ ನೋಂದಣಿ ಸಂಖ್ಯೆಯ ಸ್ಕಾರ್ಪಿಯೋ ವಾಹನ ಅಪಘಾತಕ್ಕೀಡಾಗಿರುವ ಬಗ್ಗೆ ಮಾಹಿತಿ ಲಭ್ಯವಾಯಿತು. ವಾಹನದಲ್ಲಿ ಒಟ್ಟು 14 ಮಂದಿ ಪ್ರಯಾಣಿಸುತ್ತಿದ್ದು, ಆಸ್ಪತ್ರೆಗೆ ಕರೆತರುವಷ್ಟರಲ್ಲಿಯೇ 13 ಮಂದಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಎಲ್ಲ ಮೃತದೇಹಗಳನ್ನು ಸದ್ಯ ಶವಾಗಾರದಲ್ಲಿ ಇರಿಸಲಾಗಿದೆ ಎಂದಿದ್ದಾರೆ.



