ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಮಂಡಿಸಲಿರುವ ಕ್ಷೇತ್ರ ಪುನರ್ವಿಂಗಡಣೆ (ಡಿಲಿಮಿಟೇಶನ್) ಮಸೂದೆಗಳ ವಿರುದ್ಧ ವಿಪಕ್ಷಗಳ ಒಗ್ಗಟ್ಟನ್ನು ಬಲಪಡಿಸಲು ‘ಇಂಡಿಯಾ’ ಮೈತ್ರಿಕೂಟದ ನಾಯಕರು ಶತಪ್ರಯತ್ನ ಮಾಡುತ್ತಿದ್ದಾರೆ. ಮಸೂದೆಯನ್ನು ಬೆಂಬಲಿಸಲು ನಿರ್ಧರಿಸಿರುವ ಡಿಎಂಕೆ ಮತ್ತು ಎನ್‌ಸಿಪಿ (ಎಸ್‌ಪಿ) ನಾಯಕರಾದ ಎಂ.ಕೆ ಸ್ಟಾಲಿನ್ ಮತ್ತು ಶರದ್ ಪವಾರ್ ಅವರ ಮನವೊಲಿಸಲು ‘ಇಂಡಿಯಾ’ ನಾಯಕರು ಮುಂದಾಗಿದ್ದಾರೆ. ದೆಹಲಿಯಿಂದ ವಿಶೇಷ ವಿಮಾನದಲ್ಲಿ ಚೆನ್ನೈ ಹೊರಟಿದ್ದಾರೆ.
ಸಂಸತ್ತಿನಲ್ಲಿ ವಿಪಕ್ಷಗಳ ಒಗ್ಗಟ್ಟು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಈ ಭೇಟಿ ಅತ್ಯಂತ ನಿರ್ಣಾಯಕವಾಗಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಆಡಳಿತವಿರುವ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳು, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ, ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಮತ್ತು ಆರ್‌ಜೆಡಿ ಸಂಸದೆ ಮಿಸಾ ಭಾರತಿ ಅವರು ಚೆನ್ನೈಗೆ ತೆರಳಿದ್ದಾರೆ.
ಶನಿವಾರ (ನ.28) ಚೆನ್ನೈನಲ್ಲಿ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಡಿಎಂಕೆ ಸಂಸದರ ಸಭೆಯಲ್ಲಿ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗಳಿಗೆ ಬೆಂಬಲ ನೀಡುವ ನಿರ್ಣಯವನ್ನು ಅಂಗೀಕರಿಸಲಾಗಿತ್ತು. ಈ ಸಭೆಯ ಬಳಿಕ ಮಾತನಾಡಿದ್ದ ಡಿಎಂಕೆ ಸಂಸದ ಎ. ರಾಜಾ, “ನಾವು ಕಾಂಗ್ರೆಸ್ ಜೊತೆಗಿರಲಿ ಅಥವಾ ಇಲ್ಲದಿರಲಿ, ಅಧಿಕಾರದಲ್ಲಿರಲಿ ಅಥವಾ ಇಲ್ಲದಿರಲಿ, ಲೋಕಸಭೆಯಲ್ಲಿ ತಮಿಳುನಾಡಿನ 7.18%ರಷ್ಟು ಸ್ಥಾನಗಳ ಪಾಲಿನಲ್ಲಿ ಯಾವುದೇ ಬದಲಾವಣೆಯಾಗಬಾರದು ಎಂಬುದು ನಮ್ಮ ನಿರಂತರ ಬೇಡಿಕೆಯಾಗಿದೆ. ಈಗಿನ ಮಸೂದೆಯಲ್ಲಿ ಆ ಪಾಲನ್ನು ಕಾಯ್ದುಕೊಳ್ಳಲಾಗಿದೆ. ಕಾರ್ಯವಿಧಾನಕ್ಕೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳಿವೆ ಎಂಬುದು ನಿಜ; ಅವುಗಳನ್ನು ನಾವು ಬಗೆಹರಿಸಿಕೊಳ್ಳುತ್ತೇವೆ ಮತ್ತು ಅಗತ್ಯವಿದ್ದರೆ ತಿದ್ದುಪಡಿಯನ್ನೂ ಮಂಡಿಸುತ್ತೇವೆ” ಎಂದು ಪಕ್ಷದ ನಿಲುವನ್ನು ಸ್ಪಷ್ಟಪಡಿಸಿದ್ದರು.
ಅಂತೆಯೇ, ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ಮಹಾರಾಷ್ಟ್ರದ ಎನ್‌ಸಿಪಿ (ಎಸ್‌ಪಿ) ಕೂಡ ಮಸೂದೆಯನ್ನು ಬೆಂಬಲಿಸಲು ಮುಂದಾಗಿದೆ. ಪಕ್ಷವು ‘ಇಂಡಿಯಾ’ ತೊರೆದು, ಎನ್‌ಡಿಎ ಸೇರಲಿದ್ದು, ಮೋದಿ ಸಂಪುಟದಲ್ಲಿ ಎನ್‌ಸಿಪಿ (ಎಸ್‌ಪಿ) ನಾಯಕಿ ಸುಪ್ರಿಯಾ ಸುಳೆ ಅವರಿಗೆ ಮಂತ್ರಿಗಿರಿ ಪ್ರಾಪ್ತವಾಗಲಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ಇದೀಗ, ಎರಡೂ ಪಕ್ಷಗಳ ನಾಯಕರನ್ನು ಮಲವೊಲಿಸಲು ಇಂಡಿಯಾ ನಾಯಕರು ಕೊನೆಯ ಪ್ರಯತ್ನ ಮಾಡುತ್ತಿದ್ದಾರೆ.
ಸೋಮವಾರದಿಂದ ಆರಂಭವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಪೂರ್ವಭಾವಿಯಾಗಿ, ಶುಕ್ರವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ‘ಸಂವಿಧಾನದ 132ನೇ ತಿದ್ದುಪಡಿ ಮಸೂದೆ-2026’ ಮತ್ತು ‘ಕ್ಷೇತ್ರ ಪುನರ್ವಿಂಗಡಣೆ (ಎರಡನೇ) ಮಸೂದೆ-2026’ಕ್ಕೆ ಅನುಮೋದನೆ ನೀಡಲಾಗಿದೆ.


