ಮುಂಬರುವ ವಿಧಾನಸಭಾ ಚುನಾವಣೆಗಳು ಮತ್ತು ಸಮಯದ ಅಭಾವದ ಹಿನ್ನೆಲೆಯಲ್ಲಿ, ಪ್ರತ್ಯೇಕ ಚಳಿಗಾಲದ ಅಧಿವೇಶನವನ್ನು ಕರೆಯುವ ಬದಲು ಕಳೆದ ಆಗಸ್ಟ್‌ನಲ್ಲಿ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದ್ದ ಸಂಸತ್ತಿನ ಮುಂಗಾರು ಅಧಿವೇಶನವನ್ನೇ ಡಿಸೆಂಬರ್ ಮೊದಲ ವಾರದಲ್ಲಿ 2 ರಿಂದ 3 ದಿನಗಳ ಕಾಲ ವಿಸ್ತರಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಕೇಂದ್ರದ ಈ ಹಠಾತ್ ನಡೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ಡಿಸೆಂಬರ್ 3 ರಿಂದ 5 ಅಥವಾ ಡಿಸೆಂಬರ್ 6ರಂದು ಅಲ್ಪಾವಧಿಯ ನೋಟಿಸ್ ನೀಡಿ ವಿಶೇಷ ಕಲಾಪ ಕರೆಯುವ ಸಾಧ್ಯತೆಗಳಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಸಂಸದೀಯ ಸಂಪ್ರದಾಯದಂತೆ, ಪೂರ್ಣ ಪ್ರಮಾಣದ ಹೊಸ ಅಧಿವೇಶನವನ್ನು (ಚಳಿಗಾಲದ ಅಧಿವೇಶನ) ಕರೆಯಬೇಕಾದರೆ ಸಂಸದರಿಗೆ ಕನಿಷ್ಠ 14 ದಿನಗಳ ಮುಂಚಿತವಾಗಿ ನೋಟಿಸ್ ನೀಡಬೇಕು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಅಷ್ಟು ಸಮಯಾವಕಾಶವಿಲ್ಲ. ಇದಕ್ಕೆ ಪರ್ಯಾಯವಾಗಿ ಸರ್ಕಾರವು ಲೋಕಸಭೆಯ ಕಾರ್ಯವಿಧಾನದ ‘ನಿಯಮ 15’ ಅನ್ನು ಬಳಸಿಕೊಳ್ಳಲು ಮುಂದಾಗಿದೆ. ಈ ನಿಯಮದ ಪ್ರಕಾರ, ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದರೂ, ರಾಷ್ಟ್ರಪತಿಗಳು ಅಧಿವೇಶನವನ್ನು ಅಧಿಕೃತವಾಗಿ ಮುಕ್ತಾಯಗೊಳಿಸದಿದ್ದರೆ, ಲೋಕಸಭಾ ಸ್ಪೀಕರ್ ಯಾವುದೇ ಸಮಯದಲ್ಲಿ ಅಲ್ಪಾವಧಿ ನೋಟಿಸ್ ನೀಡಿ ಸದನದ ಕಲಾಪವನ್ನು ಮತ್ತೆ ಕರೆಯುವ ಅಧಿಕಾರ ಹೊಂದಿರುತ್ತಾರೆ. ಕಳೆದ ಆಗಸ್ಟ್ 13ರಂದು ಉಭಯ ಸದನಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತೇ ಹೊರತು ಮುಕ್ತಾಯಗೊಳಿಸಿರಲಿಲ್ಲ. ಇದೇ ತಾಂತ್ರಿಕ ಅಂಶ ಈಗ ಸರ್ಕಾರದ ನೆರವಿಗೆ ಬರುತ್ತಿದೆ.
ಈ ವಿಶೇಷ ಕಲಾಪದ ಪ್ರಮುಖ ಅಜೆಂಡಾ ದೇಶದ ರಾಜಕೀಯ ಚಿತ್ರಣವನ್ನೇ ಬದಲಿಸಬಲ್ಲ ಎರಡು ಪ್ರಮುಖ ಮಸೂದೆಗಳಿಗೆ ಅಂಗೀಕಾರ ಪಡೆಯುವುದಾಗಿದೆ.
ಸಂವಿಧಾನ (131ನೇ ತಿದ್ದುಪಡಿ) ಮಸೂದೆ, 2026: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು (ಮೂರನೇ ಒಂದು ಭಾಗ) ಮೀಸಲಾತಿಯನ್ನು ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯ ಮೂಲಕ ಜಾರಿಗೊಳಿಸುವ ಹುನ್ನಾರ ಕೇಂದ್ರ ಸರ್ಕಾರದ್ದಾಗಿದೆ.
ಕ್ಷೇತ್ರ ಪುನರ್ವಿಂಗಡಣೆ ಮಸೂದೆ, 2026 : ಜನಸಂಖ್ಯೆಯ ಆಧಾರದ ಮೇಲೆ ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳ ಗಡಿಗಳನ್ನು ಮರುನಿಗದಿಪಡಿಸುವ ಮಸೂದೆ.
ಈ ಸಾಂವಿಧಾನಿಕ ತಿದ್ದುಪಡಿ ಮಸೂದೆ ಅಂಗೀಕಾರವಾಗಲು ಲೋಕಸಭೆಯಲ್ಲಿ ಮೂರನೇ ಎರಡರಷ್ಟುಬಹುಮತ ಅತ್ಯಗತ್ಯ. ಅಂದರೆ, 543 ಸದಸ್ಯ ಬಲದ ಲೋಕಸಭೆಯಲ್ಲಿ ಕನಿಷ್ಠ 361 ಸಂಸದರ ಬೆಂಬಲ ಬೇಕಾಗುತ್ತದೆ. ಇದಕ್ಕಾಗಿ ಸರ್ಕಾರ ಈಗಾಗಲೇ ತೆರೆಮರೆಯಲ್ಲಿ ಮಿತ್ರಪಕ್ಷಗಳು ಹಾಗೂ ಇತರ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಿ ಸಂಖ್ಯಾಬಲ ಕ್ರೋಢೀಕರಿಸುವ ಅಂತಿಮ ಸಿದ್ಧತೆಯಲ್ಲಿದೆ.
ಈ ರಾಜಕೀಯ ಬೆಳವಣಿಗೆಗಳ ಬೆನ್ನಲ್ಲೇ ಪಂಜಾಬ್ ವಿಧಾನಸಭಾ ಚುನಾವಣೆಯ ಕಾವು ಕೂಡ ಏರಿದೆ. ಡಿಸೆಂಬರ್ 8ರಂದು ಪಂಜಾಬ್‌ನಲ್ಲಿ ಬಿಜೆಪಿ ಮತ್ತು ಶಿರೋಮಣಿ ಅಕಾಲಿದಳ ಜಂಟಿಯಾಗಿ ಬೃಹತ್ ರ್ಯಾಲಿ ನಡೆಸಲಿವೆ. ಮೈತ್ರಿ ಪುನರ್‌ಸ್ಥಾಪನೆಯಾದ ಬಳಿಕ ನಡೆಯುತ್ತಿರುವ ಮೊದಲ ಬೃಹತ್ ಶಕ್ತಿ ಪ್ರದರ್ಶನ ಇದಾಗಿದ್ದು, ಈ ರ್ಯಾಲಿಗೂ ಮುನ್ನವೇ ಸಂಸತ್ ಕಲಾಪ ಮುಗಿಸುವ ಲೆಕ್ಕಾಚಾರ ಸರ್ಕಾರದ್ದಾಗಿದೆ.
ಇದರ ಮುಂದುವರಿದ ಭಾಗವಾಗಿ, ಡಿಸೆಂಬರ್ 15 ರಿಂದ 18ರ ನಡುವೆ ಕೇಂದ್ರ ಸಚಿವ ಸಂಪುಟದ ಮೇಜರ್ ಸರ್ಜರಿ ನಡೆಯುವ ಸಾಧ್ಯತೆಯಿದೆ. ಮುಂಬರುವ ಚುನಾವಣೆಗಳು ಮತ್ತು ಮೈತ್ರಿ ಧರ್ಮವನ್ನು ಗಮನದಲ್ಲಿಟ್ಟುಕೊಂಡು, ಶಿರೋಮಣಿ ಅಕಾಲಿದಳ ಮತ್ತು ಜನತಾದಳ ಯುನೈಟೆಡ್ ಪಕ್ಷಗಳ ಪ್ರಮುಖ ನಾಯಕರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸುವ ಮೂಲಕ ಎನ್‌ಡಿಎ ಮೈತ್ರಿಕೂಟವನ್ನು ಮತ್ತಷ್ಟು ಬಲಪಡಿಸಲು ವರಿಷ್ಠರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಒಟ್ಟಾರೆಯಾಗಿ, ಡಿಸೆಂಬರ್ ತಿಂಗಳ ಮೊದಲ ಎರಡು ವಾರಗಳು ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಶಾಸನಾತ್ಮಕ ಮತ್ತು ಸಾಂಸ್ಥಿಕ ಬದಲಾವಣೆಗಳಿಗೆ ಸಾಕ್ಷಿಯಾಗಲಿವೆ.



