ಇತರ ಹಿಂದುಳಿದ ವರ್ಗಗಳ (ಒಬಿಸಿ) ಮೀಸಲಾತಿಯನ್ನು ಕಡಿತಗೊಳಿಸಿ ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸಲು ವಿರೋಧ ಪಕ್ಷಗಳು ಮುಂದಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಸಂವಿಧಾನ ದಿನದ ಅಂಗವಾಗಿ ತಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಲೇಖನದಲ್ಲಿ ಅವರು ಈ ನಡೆಯನ್ನು “ಅತ್ಯಂತ ಆಘಾತಕಾರಿ” ಎಂದು ಹೇಳಿದ್ದಾರೆ.
1949ರ ನವೆಂಬರ್ 26ರಂದು ಸಂವಿಧಾನ ರಚನಾ ಸಭೆಯು ಸಂವಿಧಾನವನ್ನು ಅಂಗೀಕರಿಸಿದ ದಿನದ ಸ್ಮರಣಾರ್ಥ ಬರೆದಿರುವ ಲೇಖನದಲ್ಲಿ, ಸಂವಿಧಾನ ಶಿಲ್ಪಿಗಳು ತಿರಸ್ಕರಿಸಿದ್ದ ಕಾರ್ಯಸೂಚಿಯನ್ನು ವಿರೋಧ ಪಕ್ಷಗಳು ಮುಂದೂಡುತ್ತಿವೆ ಎಂದು ಮೋದಿ ಟೀಕಿಸಿದ್ದಾರೆ. ಯಾವುದೇ ಪಕ್ಷದ ಹೆಸರನ್ನು ನೇರವಾಗಿ ಉಲ್ಲೇಖಿಸದಿದ್ದರೂ, ಅವರ ವಾಗ್ದಾಳಿ ಕಾಂಗ್ರೆಸ್ ಮೇಲೆಯೇ ಕೇಂದ್ರೀಕೃತವಾಗಿತ್ತು. “ಸಂವಿಧಾನ ನಿರ್ಮಾತೃಗಳು, ವಿಶೇಷವಾಗಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂಪೂರ್ಣವಾಗಿ ವಿರೋಧಿಸಿದ್ದ ಮುಸ್ಲಿಂ ಮೀಸಲಾತಿಯನ್ನು ಜಾರಿಗೆ ತರಲು ಮತ್ತು ಒಬಿಸಿ ಮೀಸಲಾತಿಯನ್ನು ಕಡಿತಗೊಳಿಸಲು ವಿರೋಧ ಪಕ್ಷದ ಅತಿದೊಡ್ಡ ಪಕ್ಷ ಬಯಸುತ್ತಿರುವುದು ಅತ್ಯಂತ ಆಘಾತಕಾರಿ” ಎಂದು ಅವರು ಬರೆದಿದ್ದಾರೆ.
“ಐದು ದಶಕಗಳ ಕಾಲ ಭಾರತವನ್ನು ಆಳುವ ಅವಕಾಶ ಪಡೆದಿದ್ದವರು” ಸಂವಿಧಾನವನ್ನು ದುರ್ಬಲಗೊಳಿಸಿದರು ಎಂದು ಮೋದಿ ಆರೋಪಿಸಿದ್ದಾರೆ. 1951ರ ಮೊದಲ ತಿದ್ದುಪಡಿಗೆ ಈ ವರ್ಷ 75 ವರ್ಷ ಹಾಗೂ ತುರ್ತು ಪರಿಸ್ಥಿತಿ ಅವಧಿಯಲ್ಲಿ ನ್ಯಾಯಾಂಗ ಪರಿಶೀಲನೆಯನ್ನು ಮೊಟಕುಗೊಳಿಸಿದ 42ನೇ ತಿದ್ದುಪಡಿಗೆ 50 ವರ್ಷ ತುಂಬುತ್ತಿರುವುದನ್ನು ಅವರು ನೆನಪಿಸಿದ್ದಾರೆ. ಭಾರತದ ಮೊದಲ ಸಾರ್ವತ್ರಿಕ ಚುನಾವಣೆಗೆ ಕೆಲ ತಿಂಗಳುಗಳ ಮುನ್ನ ಚುನಾಯಿತವಲ್ಲದ ತಾತ್ಕಾಲಿಕ ಸಂಸತ್ತು “ಮೂಲಭೂತ ಸ್ವಾತಂತ್ರ್ಯಗಳನ್ನು ನಿರ್ಬಂಧಿಸಲು” ಮತ್ತು “ಸಾರ್ವಜನಿಕ ವಿರೋಧವನ್ನು ಹತ್ತಿಕ್ಕಲು” ಮೊದಲ ತಿದ್ದುಪಡಿಯನ್ನು ಅಂಗೀಕರಿಸಿತು ಎಂದು ಅವರು ಹೇಳಿದ್ದಾರೆ.
370 ಮತ್ತು 35ಎ ವಿಧಿಗಳು 70 ವರ್ಷಗಳಿಗೂ ಹೆಚ್ಚು ಕಾಲ ಜಮ್ಮು ಮತ್ತು ಕಾಶ್ಮೀರಕ್ಕೆ ಪೂರ್ಣ ಸಂವಿಧಾನದ ಲಾಭವನ್ನು ನಿರಾಕರಿಸಿದ್ದವು. 2019ರವರೆಗೂ ಅಲ್ಲಿನ ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ), ಒಬಿಸಿ ಸಮುದಾಯಗಳು ಮತ್ತು ಮಹಿಳೆಯರ ಹಕ್ಕುಗಳನ್ನು ದಮನ ಮಾಡಲಾಗಿತ್ತು ಎಂದು ಮೋದಿ ಹೇಳಿದ್ದಾರೆ.
ಸಂವಿಧಾನವನ್ನು “ನಮ್ಮ ಜೀವನ ಪಯಣದ ಅವಿಭಾಜ್ಯ ಅಂಗ” ಎಂದು ಬಣ್ಣಿಸಿರುವ ಪ್ರಧಾನಿ, ತಮ್ಮ ಸಾಮಾನ್ಯ ಹಿನ್ನೆಲೆಯ ಬಾಲ್ಯವನ್ನು ಸ್ಮರಿಸಿದ್ದಾರೆ. “ಒಬ್ಬರ ಹುಟ್ಟಿನ ಸಂದರ್ಭಗಳು ಇನ್ನು ಮುಂದೆ ಅವರ ಭವಿಷ್ಯದ ಮಿತಿಗಳನ್ನು ನಿರ್ಧರಿಸುವುದಿಲ್ಲ” ಎಂದು ಬರೆದಿದ್ದಾರೆ. ಡಾ. ರಾಜೇಂದ್ರ ಪ್ರಸಾದ್, ಡಾ. ಅಂಬೇಡ್ಕರ್ ಮತ್ತು ಸಂವಿಧಾನ ರಚನಾ ಸಭೆಯ ಸದಸ್ಯರಿಗೆ ಗೌರವ ಸಲ್ಲಿಸಿರುವ ಅವರು, ನಾಗರಿಕರೊಂದಿಗೆ ಸಂವಿಧಾನದ ನಂಟನ್ನು ಗಟ್ಟಿಗೊಳಿಸಲು ತಮ್ಮ ಸರ್ಕಾರವು ದಶಕದ ಹಿಂದೆಯೇ ನವೆಂಬರ್ 26ನ್ನು ಸಂವಿಧಾನ ದಿನವಾಗಿ ಆಚರಿಸಲು ಆರಂಭಿಸಿತು ಎಂದು ತಿಳಿಸಿದ್ದಾರೆ.
ಸಂವಿಧಾನವು “ಮೊದಲನೆಯದಾಗಿ ಮತ್ತು ಪ್ರಮುಖವಾಗಿ ಒಂದು ಸಾಮಾಜಿಕ ದಾಖಲೆ” ಎಂಬ ವಿದ್ವಾಂಸ ಗ್ರ್ಯಾನ್‌ವಿಲ್ ಆಸ್ಟಿನ್ ಅವರ ಮಾತನ್ನು ಉಲ್ಲೇಖಿಸಿರುವ ಮೋದಿ, ಸುಮಾರು 50 ಕೋಟಿ ಭಾರತೀಯರು ಬಡತನದಿಂದ ಹೊರಬಂದಿದ್ದಾರೆ ಎಂಬ ವಿಶ್ವಬ್ಯಾಂಕ್ ವರದಿಯನ್ನು ಪ್ರಸ್ತಾಪಿಸಿದ್ದಾರೆ. ಜತೆಗೆ ಪಿಎಂ ಆವಾಸ್ ಯೋಜನೆ, ಉಜ್ವಲಾ ಯೋಜನೆ ಮತ್ತು ಆಯುಷ್ಮಾನ್ ಭಾರತ್ ಸೇರಿದಂತೆ ಎನ್‌ಡಿಎ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳನ್ನು ಪಟ್ಟಿ ಮಾಡಿದ್ದಾರೆ.



