ಅಧಿಕಾರ ಮತ್ತು ಹುದ್ದೆಗಳ ಬೆನ್ನತ್ತಿ ಹೋಗುವವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಗುರುತಿಸಿಕೊಳ್ಳಬಹುದು. ಆದರೆ, ಸಂಘಟನೆಯನ್ನು ಬಲಪಡಿಸುವ ಆಸಕ್ತಿ ಇರುವವರು, ಪಕ್ಷದ ಬೆಳವಣಿಗೆ ಬಯಸುವವರು ನನ್ನೊಂದಿಗೆ ಕೈಜೋಡಿಸಬಹುದು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ನೂತನ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದರು.
ಬೆಂಗಳೂರಿನಲ್ಲಿ ಇಂದು ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ್ ಅವರನ್ನು ಭೇಟಿಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇದು ಮುಂಬರುವ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಹಾಗೂ ಕಾಂಗ್ರೆಸ್ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗುವ ಸಾಧ್ಯತೆಯಿದೆ.
“ಯಾರಿಗೆ ಅಧಿಕಾರ ಬೇಕೋ ಅವರು ಡಿ.ಕೆ. ಶಿವಕುಮಾರ್ ಅವರ ಹಿಂದೆ ಹೋಗಲಿ. ಯಾರು ಪಕ್ಷವನ್ನು ಸಂಘಟಿಸಲು ಮತ್ತು ಬಲಪಡಿಸಲು ಬಯಸುತ್ತಾರೋ ಅವರು ನನ್ನೊಂದಿಗೆ ಬರಬಹುದು. ನಾವೆಲ್ಲರೂ ಜವಾಬ್ದಾರಿಗಳನ್ನು ಹಂಚಿಕೊಂಡು ಒಟ್ಟಿಗೆ ಮುನ್ನಡೆಯೋಣ. ನಾನು ಪಕ್ಷದ ಕಾರ್ಯಕರ್ತರಿಗೆ ಈ ಭರವಸೆ ನೀಡುತ್ತೇನೆ ಮತ್ತು ಅವರ ಬೆನ್ನಿಗೆ ನಿಲ್ಲುತ್ತೇನೆ. ಸಾಂಸ್ಥಿಕ ಬದಲಾವಣೆಗಳ ಬಗ್ಗೆ ಪಕ್ಷದ ಕಾರ್ಯಕರ್ತರು ಆತಂಕ ಪಡುವ ಅಗತ್ಯವಿಲ್ಲ ಮತ್ತು ಅವರ ಹಿತರಕ್ಷಣೆಯ ಜವಾಬ್ದಾರಿಯನ್ನು ನಾವು ವಹಿಸಿಕೊಳ್ಳುತ್ತೇವೆ” ಹರಿಪ್ರಸಾದ್ ಭರವಸೆ ನೀಡಿದರು.
ಇದನ್ನೂ ಓದಿ: ಈ ದಿನ ಸಂಪಾದಕೀಯ | ಗೋವು ರಾಷ್ಟ್ರೀಯ ಪ್ರಾಣಿಯಲ್ಲ, ತಾಯಿಯಲ್ಲ; ಬಿಜೆಪಿಯ ಮತಬ್ಯಾಂಕ್
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹಿರಿಯ ನಾಯಕಿ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಸೇರಿದಂತೆ ರಾಷ್ಟ್ರೀಯ ನಾಯಕರು ಪಕ್ಷದ ಸಂಘಟನೆಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಅವರು ಪಕ್ಷವನ್ನು ಕಟ್ಟಲು ಹೋರಾಡುತ್ತಿದ್ದಾರೆ. ಅವರ ಪ್ರಯತ್ನಗಳಿಗೆ ನಾವು ಶಕ್ತಿ ತುಂಬಬೇಕಾದರೆ, ನಾವೂ ಕೂಡ ಬೀದಿಗೆ ಇಳಿದು ಹೋರಾಟಗಳಲ್ಲಿ ಭಾಗವಹಿಸಬೇಕು” ಎಂದರು.
ತಮ್ಮ ಹೇಳಿಕೆಯಲ್ಲಿ ಯಾವುದೇ ಗೂಢಾರ್ಥವಿಲ್ಲ ಮತ್ತು ಸಾಂಸ್ಥಿಕ ಜವಾಬ್ದಾರಿಗಳ ಹಿನ್ನೆಲೆಯಲ್ಲಿ ಮಾತ್ರ ಇದನ್ನು ಅರ್ಥಮಾಡಿಕೊಳ್ಳಬೇಕು ಎಂದು ತಮ್ಮ ಹೇಳಿಕೆಯನ್ನು ಹರಿಪ್ರಸಾದ್ ಸಮರ್ಥಿಸಿಕೊಂಡಿದ್ದಾರೆ.





