2020ರ ದೆಹಲಿ ಗಲಭೆ ಪ್ರಕರಣದಲ್ಲಿ ಆರೋಪಿಯಾಗಿ ಬಂಧಿತರಾಗಿ ಜೈಲಿನಲ್ಲಿರುವ ಉಮರ್ ಖಾಲಿದ್ ಅವರನ್ನು ‘ರಾಷ್ಟ್ರೀಯವಾದಿ’ ಎಂದು ಬಣ್ಣಿಸಿದ್ದ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಎಬಿವಿಪಿ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ ಹಿಂದೂಪರ ಹೋರಾಟಗಾರ ತೇಜಸ್ ಗೌಡ ದೂರು ನೀಡಿದ್ದಾರೆ. ಸಮಾಜದಲ್ಲಿ ದ್ವೇಷಭಾವನೆ ಮೂಡಿಸುವ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಬಿ.ಕೆ.ಹರಿಪ್ರಸಾದ್ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.
ದೂರು ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ತೇಜಸ್ ಗೌಡ, ‘ನಿನ್ನೆ ಸಂಜೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು ಉಮರ್ ಖಾಲಿದ್ ಅವರನ್ನು ರಾಷ್ಟ್ರೀಯವಾದಿ ಎಂದು ಹೇಳಿದ್ದಾರೆ. ದೆಹಲಿ ಗಲಭೆ ಪ್ರಕರಣದಲ್ಲಿ ಬಂಧಿತರಾಗಿರುವ ವ್ಯಕ್ತಿಯ ಬಗ್ಗೆ ವಿಧಾನಸೌಧದಲ್ಲಿ ನಿಂತು ಈ ರೀತಿಯ ಹೇಳಿಕೆ ನೀಡಲಾಗಿದೆ’ ಎಂದು ಆರೋಪಿಸಿದರು.
‘ಈ ಹೇಳಿಕೆಯಿಂದ ಸಮಾಜದಲ್ಲಿ ದ್ವೇಷ ಮೂಡುವ ಸಾಧ್ಯತೆಯಿದೆ. ಹೀಗಾಗಿ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ಭಯೋತ್ಪಾದಕರ ಬಗ್ಗೆ ಮಾತನಾಡುವವರು ಭಯೋತ್ಪಾದಕರಿಗೆ ಸಮ’ ಎಂದ ಅವರು, ಪೊಲೀಸರು ಕಾನೂನು ತಜ್ಞರ ಸಲಹೆ ಪಡೆದು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಕಾಲಮಾನ | ಭಾರತದಲ್ಲಿ ನ್ಯಾಯ ಪ್ರಧಾನತೆ-ಕೆಲವು ಬೆಳವಣಿಗೆಗಳತ್ತ ಒಂದು ನೋಟ…
ಇದೇ ವೇಳೆ, ಉಮರ್ ಖಾಲಿದ್ ಕುರಿತಾಗಿ ನಿರ್ದೇಶಕ ಲಲಿತ್ ವಾಚಾನಿ ನಿರ್ಮಿಸಿರುವ Prison Number 626710 Is Present ಸಾಕ್ಷ್ಯಚಿತ್ರದ ಪ್ರದರ್ಶನಕ್ಕೂ ವಿರೋಧ ವ್ಯಕ್ತವಾಗಿದೆ.
ಬೆಂಗಳೂರಿನ ನಾಗರಬಾವಿಯಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ಕಾನೂನು ಮತ್ತು ಸಮಾಜ ಸಮಿತಿಯು ಸೆಪ್ಟೆಂಬರ್ 14ರ ಸಂಜೆ 7 ಗಂಟೆಗೆ ಸಾಕ್ಷ್ಯಚಿತ್ರ ಪ್ರದರ್ಶನ ಆಯೋಜಿಸಿತ್ತು. ಆದರೆ, ಎಬಿವಿಪಿ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ, ಪ್ರದರ್ಶನ ರದ್ದುಗೊಳಿಸಲು ಕೇಂದ್ರ ಸಚಿವರ ಮಧ್ಯಪ್ರವೇಶಕ್ಕೆ ಒತ್ತಾಯಿಸಿತ್ತು. ವಿವಾದದ ಬೆನ್ನಲ್ಲೇ ಸಾಕ್ಷ್ಯಚಿತ್ರ ಪ್ರದರ್ಶನವನ್ನು ಮುಂದೂಡಲಾಗಿದೆ.




