ರಾಜ್ಯದ ವಿದ್ಯುತ್ ಗ್ರಾಹಕರಿಗೆ 2027ರ ಏಪ್ರಿಲ್‌ನಿಂದ ದರ ಇಳಿಕೆಯ ಸಿಹಿಸುದ್ದಿ ಸಿಗುವ ಸಾಧ್ಯತೆಯಿದೆ. ಬಹುತೇಕ ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಂ) ಲಾಭದಲ್ಲಿರುವುದರಿಂದ ಯೂನಿಟ್‌ಗೆ ಸರಾಸರಿ 16ರಿಂದ 18 ಪೈಸೆ ಹಾಗೂ ಬೆಸ್ಕಾಂ ವ್ಯಾಪ್ತಿಯಲ್ಲಿ 30ರಿಂದ 35 ಪೈಸೆ ದರ ಕಡಿಮೆಯಾಗಲಿದೆ. ನವೆಂಬರ್ 30ರಂದು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಪ್ರತ್ಯೇಕ ವಾರ್ಷಿಕ ವರದಿ ಸಲ್ಲಿಸಲಿರುವ ಎಸ್ಕಾಂಗಳು, 2025–26ನೇ ಸಾಲಿನ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ದರ ಇಳಿಸುವಂತೆ ಮನವಿ ಮಾಡಲಿವೆ ಎಂದು ಇಂಧನ ಇಲಾಖೆಯ ಮೂಲಗಳು ತಿಳಿಸಿವೆ.
ಕಳೆದ ವರ್ಷ ಕೆಇಆರ್‌ಸಿ ಹೊರಡಿಸಿದ್ದ ಬಹುವಾರ್ಷಿಕ ದರ ಆದೇಶದಂತೆ 2027ರ ಏಪ್ರಿಲ್‌ನಿಂದ ಯೂನಿಟ್‌ಗೆ 34 ಪೈಸೆ ಹೆಚ್ಚಳವಾಗಬೇಕಿತ್ತು. ಆದರೆ, ಮುಂಬರುವ ಆರ್ಥಿಕ ವರ್ಷದಲ್ಲಿ ದರ ಏರಿಕೆ ಅಗತ್ಯವಿಲ್ಲದ ಕಾರಣ ಆ ಹೆಚ್ಚಳ ಜಾರಿಯಾಗುವ ಸಂಭವವಿಲ್ಲ. ಬದಲಿಗೆ, 2026–27ನೇ ಸಾಲಿನಲ್ಲಿ ಜಾರಿಯಲ್ಲಿರುವ ದರದಲ್ಲೇ ಕಡಿತವಾಗಲಿದ್ದು, ಕಂಪನಿವಾರು ಕೊಂಚ ವ್ಯತ್ಯಾಸವಿರಲಿದೆ. ಈ ದರ ಕಡಿತದಿಂದ ಬೆಸ್ಕಾಂ ವ್ಯಾಪ್ತಿಯೊಂದರಲ್ಲೇ ಗ್ರಾಹಕರಿಗೆ ಅಂದಾಜು ₹1,300 ಕೋಟಿ ಲಾಭ ವರ್ಗಾವಣೆಯಾಗಲಿದೆ.
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) ಹೊರತುಪಡಿಸಿ ಉಳಿದೆಲ್ಲ ಎಸ್ಕಾಂಗಳು ಆರ್ಥಿಕವಾಗಿ ಸುಸ್ಥಿತಿಯಲ್ಲಿವೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) 2025–26ನೇ ಸಾಲಿನಲ್ಲಿ ₹293.62 ಕೋಟಿ ಲಾಭ ಗಳಿಸಿದ್ದು, ಉಳಿದ ಕಂಪನಿಗಳೂ ಇದೇ ಸ್ಥಿತಿಯಲ್ಲಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಆದರೆ, ಕಳೆದ ವರ್ಷ ₹604.49 ಕೋಟಿ ಆದಾಯ ಖೋತಾ ಎದುರಿಸಿದ್ದ ಹೆಸ್ಕಾಂ ಆರ್ಥಿಕ ಸ್ಥಿತಿ ಈ ವರ್ಷವೂ ಸುಧಾರಿಸಿಲ್ಲ. ಹೀಗಾಗಿ ಹೆಸ್ಕಾಂ ದರ ಏರಿಕೆಗೆ ಪ್ರಸ್ತಾವ ಸಲ್ಲಿಸುವ ಸಾಧ್ಯತೆಯಿದೆ.
ವಿದ್ಯುತ್ ದರ ಇಳಿಕೆಯ ಪ್ರಯೋಜನ ಕೇವಲ ಗ್ರಾಹಕರಿಗೆ ಮಾತ್ರ ಸೀಮಿತವಾಗದೆ, ರಾಜ್ಯ ಹಣಕಾಸು ಇಲಾಖೆಗೂ ಸಬ್ಸಿಡಿ ಮರುಪಾವತಿ ಹೊರೆ ತಗ್ಗಲಿದೆ. ರೈತರು ಬಳಸುವ ಹತ್ತು ಅಶ್ವಶಕ್ತಿ ಒಳಗಿನ ನೀರಾವರಿ ಪಂಪ್‌ಸೆಟ್‌ಗಳಿಗೆ ಉಚಿತವಾಗಿ ವಿದ್ಯುತ್ ಪೂರೈಸಲಾಗುತ್ತಿದ್ದು, ಇದಕ್ಕೆ ತಗಲುವ ವೆಚ್ಚವನ್ನು ಸರ್ಕಾರವೇ ಸಂಬಂಧಪಟ್ಟ ಕಂಪನಿಗಳಿಗೆ ಮರುಪಾವತಿ ಮಾಡುತ್ತಿದೆ. ಗೃಹ ಜ್ಯೋತಿ ಯೋಜನೆಯಡಿ ಇದೇ ವ್ಯವಸ್ಥೆ ಇರುವುದರಿಂದ, ದರ ಕಡಿಮೆಯಾದಂತೆ ಸರ್ಕಾರ ಪಾವತಿಸಬೇಕಾದ ಒಟ್ಟಾರೆ ಮೊತ್ತವೂ ಇಳಿಕೆಯಾಗಲಿದೆ.
ಪ್ರಸ್ತುತ ಕೃಷಿ ಬಳಕೆಯ ವಿದ್ಯುತ್‌ಗೆ ರಾಜ್ಯದ ಐದೂ ಎಸ್ಕಾಂ ವ್ಯಾಪ್ತಿಯಲ್ಲಿ ಪ್ರತ್ಯೇಕ ದರ ನಿಗದಿಪಡಿಸಲಾಗಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್‌ಗೆ ₹6.57, ಮೆಸ್ಕಾಂ ವ್ಯಾಪ್ತಿಯಲ್ಲಿ ₹7.40, ಚೆಸ್ಕಾಂ ಮತ್ತು ಹೆಸ್ಕಾಂ ವ್ಯಾಪ್ತಿಯಲ್ಲಿ ತಲಾ ₹7.73 ಹಾಗೂ ಜೆಸ್ಕಾಂ ವ್ಯಾಪ್ತಿಯಲ್ಲಿ ₹7.79 ದರ ನಿಗದಿಯಾಗಿದೆ. ಇದೇ ದರದ ಅನ್ವಯ ಲೆಕ್ಕಾಚಾರ ಮಾಡಿ, ಹಣಕಾಸು ಇಲಾಖೆಯು ಆಯಾ ಕಂಪನಿಗಳಿಗೆ ಹಣ ಪಾವತಿಸುತ್ತಿದೆ.
ವಿದ್ಯುತ್ ಸೋರಿಕೆ ಹಾಗೂ ಪ್ರಸರಣ ನಷ್ಟ ತಗ್ಗಿರುವ ಜತೆಗೆ, ಆದಾಯ ಹೆಚ್ಚಳ, ವಿದ್ಯುತ್ ಖರೀದಿಯ ಸಮರ್ಪಕ ನಿರ್ವಹಣೆ, ವೆಚ್ಚ ಇಳಿಕೆ ಮತ್ತು ಆರ್ಥಿಕ ಶಿಸ್ತು ಪಾಲನೆ ಎಸ್ಕಾಂಗಳ ಲಾಭಕ್ಕೆ ಕಾರಣವಾಗಿವೆ ಎಂದು ಇಂಧನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರ್ಥಿಕ ಸುಧಾರಣೆಯಲ್ಲಿ ಸಮರ್ಪಕ ಬಿಲ್ಲಿಂಗ್ ವ್ಯವಸ್ಥೆಯೂ ಮುಖ್ಯ ಪಾತ್ರ ವಹಿಸಿದೆ. ಪ್ರೋಬ್ ರೀಡಿಂಗ್ ಪದ್ಧತಿಯಿಂದ ಸಿಬ್ಬಂದಿಯ ಹಸ್ತಕ್ಷೇಪ ಕಡಿಮೆಯಾಗಿ ಬಿಲ್ಲಿಂಗ್ ನಿಖರತೆ ಹೆಚ್ಚಿದ್ದು, ಸ್ಮಾರ್ಟ್ ಮೀಟರ್ ಬಳಕೆಯಿಂದ ಗ್ರಾಹಕರ ವಿದ್ಯುತ್ ಬಳಕೆಯ ನಿಖರ ದಾಖಲಾತಿ ಸುಲಭವಾಗಿದೆ.



