ವಿಶ್ವಗುರು ಬಸವಣ್ಣನವರು ಹಾಗೂ ಸಂವಿಧಾನದ ಕುರಿತು ಅವಹೇಳನಕಾರಿ ಮತ್ತು ಆಧಾರರಹಿತ ಹೇಳಿಕೆ ನೀಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜನಪರ ಸಂಘಟನೆಗಳ ಒಕ್ಕೂಟ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಿತು.
ಹುಬ್ಬಳ್ಳಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಯಿಂದ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಸಂಘಟನೆಗಳ ಮುಖಂಡರು, ರವಿ ಹಂಜ್, ಕನ್ಹೇರಿ ಮಠದ ಶ್ರೀಗಳು ಹಾಗೂ ವಿಶ್ವೇಶ್ವರ ಭಟ್ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಮಾತನಾಡಿದ ಮನಗುಂಡಿಯ ಬಸವಾನಂದ ಶ್ರೀಗಳು, ಬಸವಣ್ಣನವರ ಕುರಿತು ಉದ್ದೇಶಪೂರ್ವಕವಾಗಿ ಸುಳ್ಳು ಹಾಗೂ ಸತ್ಯಕ್ಕೆ ದೂರವಾದ ವಿಚಾರಗಳನ್ನು ಹರಡುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
ರವಿ ಹಂಜ್ ಬರೆದಿರುವ ಪುಸ್ತಕದ ಉದ್ದೇಶ ಬಸವಣ್ಣನವರ ವ್ಯಕ್ತಿತ್ವವನ್ನು ಕುಗ್ಗಿಸಿ, ಚೆನ್ನಬಸವಣ್ಣನವರನ್ನು ಎತ್ತಿಹಿಡಿಯುವುದಾಗಿದೆ ಎಂದು ಟೀಕಿಸಿದರು.ಬಸವಭಕ್ತರು ರವಿ ಹಂಜ್ ಅವರ ಚಟುವಟಿಕೆಗಳ ಕುರಿತು ಅವರು ಕಾರ್ಯನಿರ್ವಹಿಸುತ್ತಿದ್ದ ಕಂಪನಿಗೆ ಇ-ಮೇಲ್ ಮೂಲಕ ಮಾಹಿತಿ ನೀಡಿದ್ದು, ಕಂಪನಿಯು ಅವರನ್ನು ಕೆಲಸದಿಂದ ವಜಾಗೊಳಿಸಿರುವುದಾಗಿ ತಿಳಿದುಬಂದಿದೆ. ವ್ಯಕ್ತಿಗಳು ಅಥವಾ ನ್ಯಾಯಾಲಯ ನೀಡಲಾಗದ ಶಿಕ್ಷೆಯನ್ನು ಕಂಪನಿಯೇ ನೀಡಿದೆ ಎಂದು ಹೇಳಿದ ಶ್ರೀಗಳು, ಬಸವಣ್ಣನವರ ಕುರಿತು ಅವಹೇಳನ ಮಾಡುವವರಿಗೆ ಕಾನೂನುಬದ್ಧ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಈ ವಿಚಾರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ವಿಶ್ವ ಹಿಂದೂ ಪರಿಷತ್ ತಮ್ಮ ನಿಲುವು ಸ್ಪಷ್ಟಪಡಿಸಿ, ವಿವಾದಿತ ಪುಸ್ತಕವನ್ನು ಖಂಡಿಸಬೇಕು. ಮೌನ ವಹಿಸುವುದು ಇಂತಹ ಕೃತ್ಯಗಳಿಗೆ ಬೆಂಬಲ ನೀಡಿದಂತಾಗುತ್ತದೆ ಎಂದು ಹೇಳಿದರು.
ಬಸವಣ್ಣನವರು ಕಾಯಕ, ದಾಸೋಹ, ಸಮಾನತೆ ಹಾಗೂ ಮಾನವೀಯತೆಯ ತತ್ವಗಳನ್ನು ಜಗತ್ತಿಗೆ ಸಾರಿದ ಮಹಾನ್ ದಾರ್ಶನಿಕರು. 770 ಶರಣರ 20 ಸಾವಿರಕ್ಕೂ ಅಧಿಕ ವಚನಗಳ ಪರಂಪರೆಯಲ್ಲಿ ಬಸವಣ್ಣನವರು ಖಜಾನೆ ಲೂಟಿ ಮಾಡಿದ ಉಲ್ಲೇಖವಿಲ್ಲ. ಇಂತಹ ಮಹಾನ್ ವ್ಯಕ್ತಿತ್ವದ ಕುರಿತು ಆಧಾರರಹಿತ ಆರೋಪಗಳನ್ನು ಮಾಡುವುದು ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಗೆ ಅಪಮಾನ ಮಾಡಿದಂತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ರವಿ ಹಂಜ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು, ವಿವಾದಿತ ‘ಬಸವ ಮಂಟಪ’ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಹಾಗೂ ಪ್ರಕರಣದ ಹಿಂದಿರುವ ಶಕ್ತಿಗಳನ್ನು ಪತ್ತೆಹಚ್ಚಲು ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡ ರಚಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ಪ್ರತಿಭಟನೆಯಲ್ಲಿ ರುದ್ರಾಕ್ಷಿ ಮಠದ ಬಸವಲಿಂಗ ಶ್ರೀಗಳು, ಮುಳ್ಳೊಳ್ಳಿಯ ಶಿವಯೋಗಿ ಶ್ರೀಗಳು, ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಬಸವರಾಜ ಸೂಳಿಬಾವಿ, ಗುರುನಾಥ ಉಳ್ಳಿಕಾಶಿ, ಸದಾನಂದ ಡಂಗನವರ, ಬಾಬಾಜಾನ ಮುಧೋಳ, ಮಹೇಶ ಪತ್ತಾರ, ಶಿವಕುಮಾರ ಮೆಣಸಿನಕಾಯಿ, ಭಾಷಾಸಾಬ ತಳೆವಾಡ, ಲಿಂಗರಾಜ ಅಂಗಡಿ, ಅನ್ವರ್ ಮುಧೋಳ, ಸಮೀಮ್ ಮುಲ್ಲಾ, ಮೌಲಾಲಿ ಮುಲ್ಲಾ, ಕುಮಾರ ಪಾಟೀಲ, ಗಂಗಾಧರ ತೆರೂರ, ಮಂಜುನಾಥ ಉಳ್ಳಿಕಾಶಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.



