ಸುರಪುರ ಸಂವಿಧಾನ ಒದಗಿಸಿರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಶಿಕ್ಷಣ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯುವ ಮೂಲಕ ವಾಲ್ಮೀಕಿ ಸಮುದಾಯದ ಜನರು ಪ್ರಗತಿಯತ್ತ ಸಾಗಬೇಕು. ಶಾಖಾ ಮಠಗಳನ್ನು ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಶಕ್ತಿ ಕೇಂದ್ರಗಳನ್ನಾಗಿ ರೂಪಿಸಬೇಕು ಎಂದು ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಸುರಪುರ ತಾಲ್ಲೂಕಿನ ಬಂಡೋಳ್ಳಿ ಗ್ರಾಮದಲ್ಲಿ ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ಟ್ರಸ್ಟ್ ವತಿಯಿಂದ ಶನಿವಾರ ಆಯೋಜಿಸಿದ್ದ ವಾಲ್ಮೀಕಿ ಗುರುಪೀಠದ ಶಾಖಾ ಮಠ ಹಾಗೂ ಶೈಕ್ಷಣಿಕ ಸೌಲಭ್ಯಗಳ ಅಡಿಗಲ್ಲು ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಬಂಡೋಳ್ಳಿ ಶಾಖಾ ಮಠದ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ₹5 ಕೋಟಿ ಅನುದಾನ ನೀಡಿದೆ. ಮುಂದಿನ ಹಂತಗಳಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ಸುಮಾರು ₹25 ಕೋಟಿ ಅನುದಾನ ಒದಗಿಸಲಾಗಿದ್ದು, ವಸತಿ ನಿಲಯ, ಶಾಲೆ, ಉನ್ನತ ಶಿಕ್ಷಣ ಹಾಗೂ ತರಬೇತಿ ಕೇಂದ್ರಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ ಎಂದರು.
ಸಮಾಜದ ಅಭಿವೃದ್ಧಿಗೆ ಸರ್ಕಾರ, ಮಠ ಹಾಗೂ ಶಾಸಕರನ್ನೇ ಅವಲಂಬಿಸುವ ಮನೋಭಾವ ಬದಲಾಗಬೇಕು. ಸ್ವಂತ ಪರಿಶ್ರಮ ಮತ್ತು ಪ್ರಯತ್ನದಿಂದ ಕುಟುಂಬ ಹಾಗೂ ಸಮಾಜದ ಪ್ರಗತಿಗೆ ಶ್ರಮಿಸಬೇಕು. ಬಡತನದ ನಡುವೆಯೂ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಛಲ ಪ್ರತಿಯೊಬ್ಬರಲ್ಲಿರಬೇಕು. ಶಿಕ್ಷಣವೇ ಸಮಾಜವನ್ನು ಮುಖ್ಯವಾಹಿನಿಗೆ ತರುವ ಪ್ರಮುಖ ಸಾಧನವಾಗಿದೆ. ಬಂಡೋಳ್ಳಿ ಶಾಖಾ ಮಠವು ಮುಂದಿನ ಐದು ವರ್ಷಗಳಲ್ಲಿ ರಾಜನಹಳ್ಳಿ ಮಠದ ಮಾದರಿಯಲ್ಲಿ ಅಭಿವೃದ್ಧಿ ಹೊಂದಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಸಂಸದ ಜಿ. ಕುಮಾರ ನಾಯಕ ಮಾತನಾಡಿ, ವಾಲ್ಮೀಕಿ ಸಮುದಾಯವು ದೊಡ್ಡ ಜನಸಂಖ್ಯೆ ಹೊಂದಿದ್ದರೂ ಮೌನ ಹಾಗೂ ಸಂಕೋಚದ ಪ್ರವೃತ್ತಿಯಿಂದಾಗಿ ನಿರೀಕ್ಷಿತ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ. ಬಾಲ್ಯದಿಂದಲೇ ಶಿಕ್ಷಣ, ಜ್ಞಾನ ಮತ್ತು ಸಂಸ್ಕೃತಿಯನ್ನು ಬೆಳೆಸಬೇಕು. ಸಮುದಾಯದ ಅಭಿವೃದ್ಧಿಗೆ ರಾಜಕೀಯ ಹಾಗೂ ಧಾರ್ಮಿಕ ಚಟುವಟಿಕೆಗಳ ಜೊತೆಗೆ ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿಯೂ ಹೆಚ್ಚಿನ ಶ್ರಮ ಅಗತ್ಯವಿದೆ ಎಂದರು. ಶೇ.7ರ ಮೀಸಲಾತಿ ಹೋರಾಟ ಹಾಗೂ ಲಿಂಗಸುಗೂರು-ಸುರಪುರ ಸಂಪರ್ಕ ಕಲ್ಪಿಸುವ ಕೃಷ್ಣಾ ನದಿಗೆ ರಸ್ತೆ ಸೇತುವೆ ನಿರ್ಮಿಸುವ ಪ್ರಸ್ತಾವನೆಯ ಬಗ್ಗೆಯೂ ಪ್ರಸ್ತಾಪಿಸಿದರು.
ಮಾಜಿ ಸಚಿವ ನರಸಿಂಹನಾಯಕ (ರಾಜುಗೌಡ) ಮಾತನಾಡಿ, ಕನಕ ಗುರುಪೀಠ ಮತ್ತು ಮಹರ್ಷಿ ವಾಲ್ಮೀಕಿ ಗುರುಪೀಠಗಳು ಸಗರನಾಡಿನ ಎರಡು ಕಣ್ಣುಗಳಿದ್ದಂತೆ. ಅವು ಶಿಕ್ಷಣ, ಸಂಸ್ಕೃತಿ ಮತ್ತು ಸಾಮಾಜಿಕ ಅಭಿವೃದ್ಧಿಯ ಶಕ್ತಿ ಕೇಂದ್ರಗಳಾಗಬೇಕು. ಸಮಾಜದ ವಿಚಾರ ಬಂದಾಗ ಪಕ್ಷಭೇದ ಮರೆತು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ವಾಲ್ಮೀಕಿ ಸಮಾಜಕ್ಕೆ ದೊರೆತಿರುವ ಶೇ.7ರ ಮೀಸಲಾತಿಯನ್ನು ಉಳಿಸಿಕೊಳ್ಳಲು ಎಲ್ಲ ಪಕ್ಷಗಳ ನಾಯಕರು ಒಗ್ಗಟ್ಟಿನಿಂದ ಹೋರಾಡಬೇಕು ಎಂದು ಹೇಳಿದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಪೀಠಾಧ್ಯಕ್ಷ ಜಗದ್ಗುರು ಡಾ. ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ₹25 ಕೋಟಿ ವೆಚ್ಚದಲ್ಲಿ ಒಂದು ಸಾವಿರ ಮಕ್ಕಳ ವಸತಿ ಹಾಗೂ ಶಿಕ್ಷಣಕ್ಕೆ ನೆರವಾಗುವ ಸಂಕಲ್ಪ ಕೈಗೊಂಡಿರುವುದು ಸಂತಸದ ಸಂಗತಿಯಾಗಿದೆ. ಅಹಿಂದ ಸಮುದಾಯದ ನಾಯಕತ್ವ, ಸಾಮಾಜಿಕ ನ್ಯಾಯ ಹಾಗೂ ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಸತೀಶ ಜಾರಕಿಹೊಳಿ ಅವರು ನೀಡುತ್ತಿರುವ ಕೊಡುಗೆ ಶ್ಲಾಘನೀಯ ಎಂದರು.
ಸಮಾರಂಭದಲ್ಲಿ ಪರಿಶಿಷ್ಟ ಪಂಗಡಗಳ ಸಚಿವ ಟಿ. ರಘುಮೂರ್ತಿ, ಜಗಳೂರು ಶಾಸಕ ಬಿ. ದೇವೇಂದ್ರಪ್ಪ, ಸಂಡೂರು ಶಾಸಕಿ ಅನ್ನಪೂರ್ಣ ತುಕಾರಾಂ, ಮಾಜಿ ಸಂಸದ ಡಾ. ಬಿ.ವಿ. ನಾಯಕ, ಎಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು, ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು, ಮಾಜಿ ಸಚಿವ ರಾಜುಗೌಡ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಇದನ್ನು ಓದಿದ್ದೀರಾ? ಯಾದಗಿರಿ | ಗೃಹರಕ್ಷಕರಿಗೆ ವರ್ಷಪೂರ್ತಿ ಕರ್ತವ್ಯ, ಸಮಾನ ವೇತನಕ್ಕೆ ಆಗ್ರಹ; ಡಿ.1ರಂದು ಬೆಳಗಾವಿ ಚಲೋ
ಗೋಲಪಲ್ಲಿಯ ವರದಾನೇಶ್ವರ ಮಹಾಸ್ವಾಮಿಗಳು ಭೂಮಿಪೂಜೆ ನೆರವೇರಿಸಿದರು. ಶಾಸಕ ರಾಜಾ ವೇಣುಗೋಪಾಲ ನಾಯಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಠಕ್ಕೆ ಕಡಿಮೆ ದರದಲ್ಲಿ ಜಮೀನು ಒದಗಿಸಿದ ಸುಜಾತಾ ವೇಣುಗೋಪಾಲ ಜೇವರ್ಗಿ ಅವರನ್ನು ಅಭಿನಂದಿಸಲಾಯಿತು. ಸಮಾಜದ ಮುಖಂಡರು, ಮಠದ ಧರ್ಮದರ್ಶಿಗಳು ಹಾಗೂ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಜನರು ಭಾಗವಹಿಸಿದ್ದರು. ಕಾರ್ಯಕ್ರಮ ನಿರೂಪಣೆ: ಅಮರಯ್ಯ ಸ್ವಾಮಿ




