ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ವಿಮಾನ ದುರಂತದಲ್ಲಿ ನಿಧನರಾಗಿ ಹತ್ತು ತಿಂಗಳು ಕಳೆದಿದ್ದರೂ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ ಮತ್ತು ಸಮರ್ಪಕ ತನಿಖೆಯೂ ನಡೆದಿಲ್ಲ ಎಂದು ಎನ್‌ಸಿಪಿ (ಶರದ್ ಪವಾರ್ ಬಣ) ಶಾಸಕ ರೋಹಿತ್ ಪವಾರ್ ಶನಿವಾರ ಗಂಭೀರ ಆರೋಪ ಮಾಡಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ (X) ಮೂಲಕ ತಮ್ಮ ಅಸಮಾಧಾನ ಹೊರಹಾಕಿರುವ ಅವರು, ಒಬ್ಬ “ಮಹಾನ್ ವ್ಯಕ್ತಿತ್ವ”ವನ್ನು ಕಳೆದುಕೊಂಡಿದ್ದರೂ, ಈ ದುರಂತದ ಬಗ್ಗೆ ತನಿಖೆ ನಡೆಸಲು ಯಾರಿಗೂ ಕಾಳಜಿ ಇದ್ದಂತೆ ಕಾಣುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಅಜಿತ್ ಪವಾರ್ ವಿಮಾನ ದುರಂತ ಆಕಸ್ಮಿಕವಲ್ಲ, ಸಂಚು: ರೋಹಿತ್ ಪವಾರ್ ಗಂಭೀರ ಆರೋಪ
ಈ ವರ್ಷದ ಜನವರಿ 28ರಂದು ಪುಣೆ ಜಿಲ್ಲೆಯ ಬಾರಾಮತಿ ವಿಮಾನ ನಿಲ್ದಾಣದ ಬಳಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಅಂದಿನ ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಸೇರಿದಂತೆ ಐವರು ಮೃತಪಟ್ಟಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ರೋಹಿತ್ ಪವಾರ್, “ಅನೇಕರು ಸತ್ಯಕ್ಕಿಂತ ಅಧಿಕಾರಕ್ಕೆ ಹೆಚ್ಚು ಮಹತ್ವ ನೀಡಿದ್ದಾರೆ” ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಅಜಿತ್ ಪವಾರ್ ಮತ್ತು ಜನರಿಗೆ ನ್ಯಾಯ ಕೊಡಿಸಲು ತಮ್ಮ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
2023ರಲ್ಲಿ ಶರದ್ ಪವಾರ್ ಸ್ಥಾಪಿತ ಎನ್‌ಸಿಪಿಯಿಂದ ಅಜಿತ್ ಪವಾರ್ ಬೇರ್ಪಟ್ಟು ಬಿಜೆಪಿಯೊಂದಿಗೆ ಕೈಜೋಡಿಸಿದ ರಾಜಕೀಯ ಬೆಳವಣಿಗೆಗಳನ್ನು ನೆನಪಿಸಿಕೊಂಡಿರುವ ರೋಹಿತ್ ಪವಾರ್, ಆ ಸಂದರ್ಭದಲ್ಲಿ ತಾವು ಕೌಟುಂಬಿಕ ಸಂಬಂಧಗಳನ್ನು ಬದಿಗಿಟ್ಟು ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಹೋರಾಡಿದ್ದಾಗಿ ತಿಳಿಸಿದ್ದಾರೆ. ಅಹಲ್ಯಾನಗರ ಜಿಲ್ಲೆಯ ಕರ್ಜತ್-ಜಾಮ್‌ಖೇಡ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ರೋಹಿತ್ ಪವಾರ್, ಅಜಿತ್ ಪವಾರ್ ಬಂಡಾಯದ ನಂತರದಿಂದಲೂ ಶರದ್ ಪವಾರ್ ಬಣದಲ್ಲೇ ಗುರುತಿಸಿಕೊಂಡಿದ್ದಾರೆ.
ಜನವರಿ 28ರ ವಿಮಾನ ದುರಂತದ ಸುತ್ತಲಿನ ಅನುಮಾನಾಸ್ಪದ ಸಂದರ್ಭಗಳ ಬಗ್ಗೆ ರೋಹಿತ್ ಪವಾರ್ ನಿರಂತರವಾಗಿ ಪ್ರಶ್ನೆಗಳನ್ನು ಎತ್ತುತ್ತಲೇ ಬಂದಿದ್ದಾರೆ. ವಿಮಾನ ನಿರ್ವಹಣಾ ಸಂಸ್ಥೆ ವಿಎಸ್‌ಆರ್ ವೆಂಚರ್ಸ್ ಪಾತ್ರದ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಅವರು, ಈ ಪ್ರಕರಣದಲ್ಲಿ ಸಮಗ್ರ ತನಿಖೆ ನಡೆಸಬೇಕು, ಎಫ್‌ಐಆರ್ ದಾಖಲಿಸಬೇಕು ಹಾಗೂ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಬೇಕು ಎಂದು ಪದೇ ಪದೇ ಒತ್ತಾಯಿಸುತ್ತಿದ್ದಾರೆ.
ಸಂಸತ್ತಿನಲ್ಲಿ ಕ್ಷೇತ್ರ ಮರುವಿಂಗಡಣೆ ಸಂಬಂಧಿಸಿದ ಮಹಿಳಾ ಮೀಸಲಾತಿ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಬೆಂಬಲಿಸಲು ಎನ್‌ಸಿಪಿ (ಎಸ್‌ಪಿ) ನಿರ್ಧರಿಸಿರುವುದಕ್ಕೆ ಕೆಲವು ವಿಪಕ್ಷ ನಾಯಕರಿಂದ ಟೀಕೆಗಳು ವ್ಯಕ್ತವಾಗುತ್ತಿರುವ ರಾಜಕೀಯ ಸನ್ನಿವೇಶದ ನಡುವೆಯೇ ರೋಹಿತ್ ಪವಾರ್ ಅವರ ಈ ಹೇಳಿಕೆ ಹೊರಬಿದ್ದಿರುವುದು ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೆ ಚರ್ಚೆಗೆ ಗ್ರಾಸವಾಗಿದೆ.



