2022ರಲ್ಲಿ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ಚಿತ್ರರಂಗದ ನಿರ್ದೇಶಕ ಲಿಜು ಕೃಷ್ಣ ಅವರನ್ನು ಎರ್ನಾಕುಲಂ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಶನಿವಾರ (ನವೆಂಬರ್ 28) ಖುಲಾಸೆಗೊಳಿಸಿದೆ.
ಆರೋಪಗಳನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ಬಳಿ ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಾಧೀಶೆ ಕವಿತಾ ಗಂಗಾಧರನ್ ಅವರು, ನಿರ್ದೇಶಕರನ್ನು ಎಲ್ಲ ಆರೋಪಗಳಿಂದ ಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ.
ನಿವಿನ್ ಪೌಲಿ ಅಭಿನಯದ ‘ಪಡವೆಟ್ಟು’ ಚಿತ್ರದ ಮೂಲಕ ನಿರ್ದೇಶಕರಾಗಿ ಪದಾರ್ಪಣೆ ಮಾಡಿದ್ದ ಲಿಜು ಕೃಷ್ಣ ವಿರುದ್ಧ, ಅದೇ ಚಿತ್ರದ ಚಿತ್ರಕಥೆ ವಿಭಾಗದಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು 2022ರಲ್ಲಿ ದೂರು ನೀಡಿದ್ದರು. 2020 ಮತ್ತು 2021ರ ನಡುವೆ ಕಕ್ಕನಾಡಿನ ಫ್ಲ್ಯಾಟ್ ಹಾಗೂ ಇತರ ಸ್ಥಳಗಳಲ್ಲಿ ತನ್ನ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಮಹಿಳೆ ಫೇಸ್‌ಬುಕ್ ಪೋಸ್ಟ್ ಮತ್ತು ಪೊಲೀಸ್ ದೂರಿನಲ್ಲಿ ಆರೋಪಿಸಿದ್ದರು. ಈ ದೂರಿನ ಆಧಾರದ ಮೇಲೆ 2022ರ ಮಾರ್ಚ್ 6ರಂದು ಚಿತ್ರೀಕರಣದ ಕೊನೆಯ ದಿನದಂದು ಪೊಲೀಸರು ಲಿಜು ಕೃಷ್ಣ ಅವರನ್ನು ಬಂಧಿಸಿದ್ದರು.
ಇದನ್ನೂ ಓದಿ: ನಿರೀಕ್ಷಣಾ ಜಾಮೀನು ಕೋರಿ ಕೇರಳ ಹೈಕೋರ್ಟ್ ಮೆಟ್ಟಿಲೇರಿದ ಮಲಯಾಳಂ ಚಿತ್ರ ನಿರ್ದೇಶಕ ರಂಜಿತ್
ಪ್ರಕರಣ ದಾಖಲಾದ ಬೆನ್ನಲ್ಲೇ ಕೇರಳ ಚಲನಚಿತ್ರ ನಿರ್ದೇಶಕರ ಒಕ್ಕೂಟ (FEFKA) ಸಂತ್ರಸ್ತೆಯ ಪರ ನಿಂತು ಲಿಜು ಕೃಷ್ಣ ಅವರ ತಾತ್ಕಾಲಿಕ ಸದಸ್ಯತ್ವವನ್ನು ರದ್ದುಗೊಳಿಸಿತ್ತು. ಅಲ್ಲದೆ, ಚಿತ್ರದ ಶೀರ್ಷಿಕೆಯಿಂದ ನಿರ್ದೇಶಕರ ಹೆಸರನ್ನು ಕೈಬಿಡುವಂತೆ ದೂರುದಾರರು ನಿರ್ಮಾಣ ಸಂಸ್ಥೆಯನ್ನು ಒತ್ತಾಯಿಸಿದ್ದರು. ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ ಒಟ್ಟು 23 ಸಾಕ್ಷಿಗಳು, 17 ದಾಖಲೆಗಳು ಮತ್ತು ಇಬ್ಬರು ಪ್ರತಿವಾದಿ ಸಾಕ್ಷಿಗಳ ವಿಚಾರಣೆ ನಡೆಸಲಾಯಿತು.
ತೀರ್ಪಿನ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಲಿಜು ಕೃಷ್ಣ, “ಸತ್ಯಕ್ಕೆ ಜಯ ಸಿಕ್ಕಿದೆ, ನನಗೆ ಮತ್ತು ನನ್ನ ಕುಟುಂಬಕ್ಕೆ ಅಂತಿಮವಾಗಿ ನ್ಯಾಯ ದೊರೆತಿದೆ” ಎಂದು ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ. ಕಳೆದ ಐದು ವರ್ಷಗಳಿಂದ ತಾವು ಮತ್ತು ತಮ್ಮ ಪೋಷಕರು ತೀವ್ರ ಅವಮಾನ ಹಾಗೂ ಮಾನಸಿಕ ಹಿಂಸೆ ಅನುಭವಿಸಿದ್ದು, ತಮ್ಮ ಊರಿನಲ್ಲಿ ಪೋಷಕರು ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಿಗೂ ಹೋಗದೆ ಮನೆಯಲ್ಲೇ ಬಂಧಿಯಾಗಿದ್ದರು ಎಂದು ಹೇಳಿದ್ದಾರೆ. ತಮ್ಮ ಚಿತ್ರ ಬಿಡುಗಡೆಯಾಗುವುದನ್ನು ತಡೆಯಲು ಮಹಿಳಾ ನಿರ್ದೇಶಕಿಯೊಬ್ಬರು ತಮ್ಮನ್ನು ಉದ್ದೇಶಪೂರ್ವಕವಾಗಿ ಈ ಪ್ರಕರಣದಲ್ಲಿ ಸಿಲುಕಿಸಿದ್ದರು ಎಂದು ಆರೋಪಿಸಿದ್ದಾರೆ.
ಇನ್ನು ಲಿಜು ಕೃಷ್ಣ ಖುಲಾಸೆಗೊಂಡ ಬೆನ್ನಲ್ಲೇ, ದೂರುದಾರ ಮಹಿಳೆ ತಮ್ಮ ಪ್ರತಿಕ್ರಿಯೆಯನ್ನು ಹಂಚಿಕೊಂಡಿದ್ದಾರೆ. ನ್ಯಾಯಾಲಯದ ಈ ತೀರ್ಪಿನಿಂದ ತಮಗೆ ತೀವ್ರ ನಿರಾಸೆಯಾಗಿದ್ದು, ಸತ್ಯಕ್ಕಾಗಿ ಮತ್ತು ನ್ಯಾಯಕ್ಕಾಗಿ ನಡೆಸುತ್ತಿರುವ ತಮ್ಮ ಕಾನೂನು ಹೋರಾಟವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ತೀರ್ಪಿನ ಪ್ರತಿ ಕೈಸೇರಿದ ಬಳಿಕ ಅದನ್ನು ಕೂಲಂಕಷವಾಗಿ ಪರಿಶೀಲಿಸಿ, ಮುಂದಿನ ಕಾನೂನು ಕ್ರಮಗಳ ಬಗ್ಗೆ ವಕೀಲರೊಂದಿಗೆ ಚರ್ಚಿಸುವುದಾಗಿ ಸಂತ್ರಸ್ತೆ ತಿಳಿಸಿದ್ದಾರೆ. ಪ್ರಕರಣದ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯ ಪರಿಗಣಿಸಿದ ರೀತಿಯ ಬಗ್ಗೆ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.



