ಬೀದರ್ ಜಿಲ್ಲೆಯ ಬಸವಕಲ್ಯಾಣ ನಗರದ ಅನುಭವ ಮಂಟಪ ಪರಿಸರದಲ್ಲಿ ನವೆಂಬರ್ 28 ಮತ್ತು 29ರಂದು 47ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ ಆಯೋಜಿಸಲಾಗಿದ್ದು, ತುಮಕೂರಿನ ಪ್ರಸಿದ್ಧ ತ್ರಿವಿಧ ದಾಸೋಹ ಕ್ಷೇತ್ರವಾದ ಸಿದ್ಧಗಂಗಾ ಮಠದ ಪೀಠಾಧಿಪತಿ ಸಿದ್ಧಲಿಂಗ ಮಹಾಸ್ವಾಮೀಜಿ ಅವರನ್ನು ಉತ್ಸವಕ್ಕೆ ಆಹ್ವಾನಿಸಲಾಗಿದೆ.
ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಅವರು ಬುಧವಾರ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ, ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವದ ಕುರಿತು ವಿವರಿಸಿದರು.
ನವೆಂಬರ್ 28ರಂದು ಅನುಭವ ಮಂಟಪದ ಅಧ್ಯಕ್ಷ ನಾಡೋಜ ಬಸವಲಿಂಗ ಪಟ್ಟದ್ದೇವರ ನೇತೃತ್ವದಲ್ಲಿ ನಡೆಯಲಿರುವ ಉತ್ಸವ ಸಮಾರಂಭಕ್ಕೆ ದಿವ್ಯ ಸಾನ್ನಿಧ್ಯ ವಹಿಸುವಂತೆ ಸಿದ್ಧಲಿಂಗ ಮಹಾಸ್ವಾಮೀಜಿ ಅವರನ್ನು ಕೋರಿದರು.
ಇದನ್ನೂ ಓದಿ : ಬೀದರ್ | ಜಿಲ್ಲಾ ಪಂಚಾಯತಿ 34, ತಾಲೂಕು ಪಂಚಾಯತಿ 123 ಸ್ಥಾನಗಳಿಗೆ ಮೀಸಲಾತಿ ಪ್ರಕಟ
ಗುರುಬಸವ ಪಟ್ಟದ್ದೇವರು ಮಾತನಾಡಿ, “ರಾಜ್ಯದಲ್ಲಿ ಸಿದ್ಧಗಂಗಾ ಮಠವು ಸಾವಿರಾರು ಬಡ ಮಕ್ಕಳಿಗೆ ಅನ್ನ, ಅಕ್ಷರ ಹಾಗೂ ಆಶ್ರಯ ನೀಡುವ ಮೂಲಕ ಅವರ ಭವಿಷ್ಯ ರೂಪಿಸುವ ಮಹತ್ವದ ಕಾರ್ಯ ಮಾಡುತ್ತಿದೆ. ಅಂತಹ ಮಠದ ಪೀಠಾಧಿಪತಿ ಸಿದ್ಧಲಿಂಗ ಮಹಾಸ್ವಾಮೀಜಿ ಅವರು ಅನುಭವ ಮಂಟಪ ಉತ್ಸವದ ದಿವ್ಯ ಸಾನ್ನಿಧ್ಯ ವಹಿಸಲು ಒಪ್ಪಿಗೆ ನೀಡಿರುವುದು ಸಂತಸ ತಂದಿದೆ” ಎಂದು ತಿಳಿಸಿದರು.




