ಬುದ್ಧರು ಬಿತ್ತಿದ ಸಮಾನತೆಯ ಬೀಜಕ್ಕೆ ಬಸವೇಶರು ಅರಿವಿನ ನೀರೆರೆದು ಹೆಮ್ಮರವಾಗಿಸಿದರು. ಆ ಹೆಮ್ಮರದ ಫಲವನ್ನು ಸಮಾಜದ ಪ್ರತಿಯೊಬ್ಬರಿಗೂ ತಲುಪಿಸುವ ಸೂತ್ರವನ್ನು ಡಾ. ಬಿ.ಆರ್. ಅಂಬೇಡ್ಕರ್ ನೀಡಿದರು. ಈ ಮಹಾನ್ ಚಿಂತಕರ ವಿಚಾರಧಾರೆಗಳ ಒಟ್ಟು ಸಾರವೇ ಭಾರತೀಯ ಸಂವಿಧಾನವಾಗಿದೆ ಎಂದು ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಸಿ.ಬಿ. ಶಶಿಧರ್ (ಟೂಡಾ) ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯ ಹಾಗೂ ತಿಪಟೂರಿನ ಜನಸ್ಪಂದನ ಟ್ರಸ್ಟ್ ವತಿಯಿಂದ ವಿಶ್ವವಿದ್ಯಾನಿಲಯದ ಸರ್ ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಆಯೋಜಿಸಿರುವ ಮೂರು ದಿನಗಳ ಸಂವಿಧಾನ ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ಸಂವಿಧಾನದ ತಳಹದಿಯನ್ನು ಆಳವಾಗಿ ಗ್ರಹಿಸಿದಾಗ ಅದರಲ್ಲಿ ಸಮಾನತೆಯ ಆಶಯ ಮತ್ತು ನೆಲದ ಅಧ್ಯಾತ್ಮ, ತತ್ವಶಾಸ್ತ್ರ ಹಾಗೂ ಅನುಭಾವ ಪರಂಪರೆಯ ಕೊಡುಗೆ ಸ್ಪಷ್ಟವಾಗಿ ಗೋಚರಿಸುತ್ತದೆ. ಬುದ್ಧರ ಸಮತ್ವದ ಚಿಂತನೆಗೆ ಬಸವಣ್ಣನವರ ಅರಿವಿನ ಪರಂಪರೆ ಹೊಸ ಆಯಾಮ ನೀಡಿತು. ಈ ಚಿಂತನೆಗಳನ್ನು ಸಮಾಜದ ಬದುಕಿನಲ್ಲಿ ಸಾಕಾರಗೊಳಿಸುವ ಮಾರ್ಗವನ್ನು ಡಾ. ಅಂಬೇಡ್ಕರ್ ಸಂವಿಧಾನದ ಮೂಲಕ ರೂಪಿಸಿದರು. ಇದರಿಂದಲೇ ಕುವೆಂಪು ಅವರ ‘ಮನುಜಮತ ವಿಶ್ವಪಥ’ದ ಆಶಯಕ್ಕೂ ಜೀವಸೆಲೆ ದೊರಕಿದೆ ಎಂದರು.
ಸಂವಿಧಾನದ ಅಳಿವು-ಉಳಿವಿನ ಕುರಿತು ಆತಂಕಗಳು ವ್ಯಕ್ತವಾಗುತ್ತಿರುವುದು ವಿಪರ್ಯಾಸ. ಸಂವಿಧಾನವನ್ನು ಕಳೆದುಕೊಳ್ಳುವುದೆಂದರೆ ಬುದ್ಧರ ಜ್ಞಾನ, ಬಸವಣ್ಣನವರ ಅರಿವು, ಅಂಬೇಡ್ಕರ್ ಅವರ ಪರಿಶ್ರಮ ಹಾಗೂ ಕುವೆಂಪು ಅವರ ಆಶಯಗಳನ್ನು ಕಳೆದುಕೊಂಡಂತೆ. ಬುದ್ಧ ಮತ್ತು ಬಸವೇಶರು ಜಗತ್ತಿಗೆ ಬೆಳಕಾದರೆ, ಅಂಬೇಡ್ಕರ್ ಆ ಬೆಳಕನ್ನು ದೇಶದಾದ್ಯಂತ ಪಸರಿಸಿದ ಆಧುನಿಕ ಪ್ರತಿಭೆ. ಇಂತಹ ಮಹನೀಯರ ಆಶಯಗಳ ಪ್ರತಿರೂಪವಾಗಿರುವ ಸಂವಿಧಾನವನ್ನು ಉಳಿಸಿ, ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.
ಮೈಸೂರು ರಂಗಾಯಣದ ನಿರ್ದೇಶಕ ತಿಪಟೂರು ಸತೀಶ್ ಮಾತನಾಡಿ, ಸಂವಿಧಾನವನ್ನು ವ್ಯವಸ್ಥಿತವಾಗಿ ಸಾರ್ವಜನಿಕ ಚರ್ಚೆಯಿಂದ ದೂರವಿಡಲಾಗಿತ್ತು. ಆದರೆ ಕಳೆದ ಹತ್ತು ವರ್ಷಗಳಲ್ಲಿ ಸಂವಿಧಾನದ ಕುರಿತು ಹೆಚ್ಚಿನ ಚರ್ಚೆಗಳು ನಡೆಯುತ್ತಿವೆ. ವಿದ್ಯಾರ್ಥಿಗಳು ಸಂವಿಧಾನದ ಆಶಯಗಳನ್ನು ಆಳವಾಗಿ ಅರ್ಥೈಸಿಕೊಂಡು, ಶೋಷಿತರು ಹಾಗೂ ನೊಂದವರ ಪರವಾಗಿ ಧ್ವನಿಯಾಗಬೇಕು. ಯಾವುದೇ ಘಟನೆಯನ್ನು ಏಕಮುಖವಾಗಿ ನೋಡದೆ ವಿವಿಧ ಆಯಾಮಗಳಲ್ಲಿ ವಿಮರ್ಶಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸುಫಿಯಾ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ. ರಮೇಶ್ ಅವರು ‘ಮೂಲಭೂತ ಹಕ್ಕುಗಳು ಮತ್ತು ರಕ್ಷಣೆ’ ಕುರಿತು ಗೋಷ್ಠಿ ನಡೆಸಿಕೊಟ್ಟರು. ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ನಾಹಿದಾ ಜಮ್ ಜಮ್ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಕೇಶವ, ವಿವಿ ಕಲಾ ಕಾಲೇಜಿನ ಪ್ರಾಂಶುಪಾಲೆ ದಾಕ್ಷಾಯಣಿ, ಶ್ರೀಕಾಂತ್ ಕೆಳಹಟ್ಟಿ, ದಿಲವಾರ್ ರಾಮದುರ್ಗ ಸೇರಿದಂತೆ ಹಲವರು ಉಪಸ್ಥಿತರಿದ್ದರು.



