ಸಂವಿಧಾನ ನಮಗೆ ನೀಡಿರುವ ಹಕ್ಕುಗಳ ಕುರಿತು ಪ್ರತಿಯೊಬ್ಬರೂ ಅರಿವು ಹೊಂದಿರಬೇಕು. ಅದೇ ರೀತಿ ಸಂವಿಧಾನ ವಿಧಿಸಿರುವ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಪಾಲಿಸಬೇಕು ಎಂದು ನೌಬಾದ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ. ಶಂಕರ್ ಗಣಗೊಂಡ ಹೇಳಿದರು.
ಸಂವಿಧಾನ ದಿನ ಪ್ರಯುಕ್ತ ಕಾಲೇಜಿನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಹಕ್ಕುಗಳನ್ನು ಕೇಳುವ ನಾವು ಕರ್ತವ್ಯಗಳನ್ನು ಮರೆಯಬಾರದು. ಜವಾಬ್ದಾರಿಯುತ ನಾಗರಿಕರಾಗಿ ನಡೆದುಕೊಳ್ಳುವುದೇ ಸಂವಿಧಾನಕ್ಕೆ ಸಲ್ಲಿಸುವ ನಿಜವಾದ ಗೌರವ ಎಂದು ತಿಳಿಸಿದರು.
ನಿರ್ವಹಣಾ ಶಾಸ್ತ್ರದ ಸಹಪ್ರಾಧ್ಯಾಪಕ ಗೌತಮ ಚಕ್ರವರ್ತಿ ಅವರು ವಿಶೇಷ ಉಪನ್ಯಾಸ ನೀಡಿ, “ಸಂವಿಧಾನವು ಕೇವಲ ಕಾನೂನುಗಳ ಪುಸ್ತಕವಲ್ಲ. ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕು, ಸ್ವಾತಂತ್ರ್ಯ, ನ್ಯಾಯ ಮತ್ತು ಘನತೆಯನ್ನು ಖಾತ್ರಿಪಡಿಸುವ ಮಹತ್ವದ ಸಾಮಾಜಿಕ ಒಪ್ಪಂದವಾಗಿದೆ: ಎಂದು ತಿಳಿಸಿದರು.
ಪ್ರಾಧ್ಯಾಪಕ ಡಾ.ಸಂಗಶೆಟ್ಟಿ ಶೆಟಕಾರ್ ಅವರು, “ಬುದ್ಧನ ಕರುಣೆ, ಬಸವಣ್ಣನವರ ಸಮಾನತೆ, ಕಾಯಕ ಮತ್ತು ದಾಸೋಹದ ಪರಿಕಲ್ಪನೆಗಳು ಹಾಗೂ ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ಚಿಂತನೆಗಳು ಭಾರತೀಯ ಸಂವಿಧಾನದ ಆಶಯಗಳಲ್ಲಿ ಪ್ರತಿಫಲಿಸಿವೆ” ಎಂದರು.
“12ನೇ ಶತಮಾನದಲ್ಲಿಯೇ ಬಸವಣ್ಣನವರು ವಚನಗಳ ಮೂಲಕ ಜಾತಿ ವ್ಯವಸ್ಥೆ, ಅಸಮಾನತೆ ಮತ್ತು ಸಾಮಾಜಿಕ ಶೋಷಣೆಯನ್ನು ಪ್ರಶ್ನಿಸಿದ್ದರು. ವಚನಗಳ ಆಶಯಗಳು ಹಾಗೂ ಭಾರತೀಯ ಸಂವಿಧಾನದ ಮೌಲ್ಯಗಳ ನಡುವೆ ಮಹತ್ವದ ಸಾಮ್ಯತೆ ಇದೆ. ಸಮಾಜದಲ್ಲಿ ಸತ್ಯವನ್ನು ಸತ್ಯವೆಂದು ಹೇಳುವ ಧೈರ್ಯ ಪ್ರತಿಯೊಬ್ಬರಲ್ಲೂ ಇರಬೇಕು” ಎಂದು ಹೇಳಿದರು.

ಡಾ.ಸಂಜೀವ್ ಕುಮಾರ್ ಕೊಹಿನೂರ್ ಅವರು, “ಪ್ರಸ್ತುತ ಸಮಾಜದಲ್ಲಿ ಮನುವಾದಿ ಚಿಂತನೆಗಳು ಮತ್ತು ಅವುಗಳಿಂದ ಎದುರಾಗುತ್ತಿರುವ ಸವಾಲುಗಳನ್ನು ಇತಿಹಾಸದ ಬೆಳಕಿನಲ್ಲಿ ಅರ್ಥಮಾಡಿಕೊಳ್ಳುವ ಅಗತ್ಯವಿದೆ” ಎಂದರು.
ಬುದ್ಧನ ಕಾಲದಿಂದಲೂ ಸಾಮಾಜಿಕ ಸಮಾನತೆಯ ವಿಚಾರಧಾರೆಗಳಿಗೆ ವಿರೋಧ ವ್ಯಕ್ತವಾಗಿರುವುದನ್ನು ಇತಿಹಾಸದಲ್ಲಿ ಕಾಣಬಹುದು. ಬೌದ್ಧ ಧರ್ಮದ ಪ್ರಭಾವ ಕುಗ್ಗಲು ಕಾರಣವಾದ ಬೆಳವಣಿಗೆಗಳು ಹಾಗೂ ಬಸವಣ್ಣನವರು ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಹೋರಾಡಿದ ಸಂದರ್ಭದಲ್ಲಿ ಎದುರಿಸಿದ ವಿರೋಧಗಳನ್ನು ಅಧ್ಯಯನ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಡಾ. ರಿಜ್ವಾನಾ ನಿಜವಾನ್ ಗಡ್ಕರಿ ನಿರ್ವಹಿಸಿದರು. ಡಾ. ಜೈಭಾರತ್ ಮಂಗೇಶ್ಕರ್ ವಂದಿಸಿದರು. ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಇದನ್ನೂ ಓದಿ : ಬೀದರ್ | ನ.28, 29ರಂದು 47ನೇ ಶರಣ ಕಮ್ಮಟ, ಅನುಭವ ಮಂಟಪ ಉತ್ಸವ



