ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳು, ದೃಶ್ಯಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನನ್ನ ನಾಯಕತ್ವ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ಜೆಡಿಎಸ್ ಪಕ್ಷದ ಕೆಲವು ಮುಖಂಡರು ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದು, ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡಿಸುವ ಪ್ರಯತ್ನ ನಡೆಸುತ್ತಿದ್ದಾರೆ. ರಾಜಕೀಯ ದ್ವೇಷದಿಂದ ನನ್ನ ವಿರುದ್ಧ ಅಪಪ್ರಚಾರ ಮಾಡುವುದು ಸರಿಯಲ್ಲ ಎಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ. ರವಿಕುಮಾರ್ ಗೌಡ ಗಣಿಗ ಬೇಸರ ವ್ಯಕ್ತಪಡಿಸಿದರು.
ಮಂಡ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರಿ ಕಾಲೇಜಿನಲ್ಲಿ ನೀರಿನ ಬಾಟಲಿ ವಿತರಣೆ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಆಹ್ವಾನಿಸದಂತೆ ನಾನು ತಡೆದಿದ್ದೇನೆ ಎಂಬ ಆರೋಪ ಸಂಪೂರ್ಣ ಸುಳ್ಳು. ನಾನು ಆ ಕಾಲೇಜಿನ ಅಧ್ಯಕ್ಷನಾಗಿದ್ದು, ಕುಮಾರಸ್ವಾಮಿ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವ ವಿಚಾರದಲ್ಲಿ ಯಾವುದೇ ಅಡ್ಡಿಪಡಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಲೇಜಿನ ಪ್ರಾಂಶುಪಾಲರಿಗೆ ಕರೆ ಮಾಡಿದ್ದ ಕೃಷ್ಣಯ್ಯನವರು, ಕುಮಾರಸ್ವಾಮಿ ಅವರನ್ನು ಕಾರ್ಯಕ್ರಮಗಳಿಗೆ ಆಹ್ವಾನಿಸುತ್ತಿಲ್ಲವೇಕೆ ಎಂದು ಪ್ರಶ್ನಿಸಿದ್ದರು. ಈ ವಿಚಾರ ನನ್ನ ಗಮನಕ್ಕೂ ಬಂದಿತ್ತು. ಈ ಸಂದರ್ಭದಲ್ಲಿ ಸಂಸದರನ್ನು ಶಿಷ್ಟಾಚಾರದಂತೆ ಆಹ್ವಾನಿಸಬೇಕು ಎಂದು ಸಹಜವಾಗಿ ಹೇಳಿದ್ದೆ. ಕಾಲೇಜಿನವರು ಆಹ್ವಾನ ಪತ್ರಿಕೆಗಳನ್ನು ಅವರ ಕಚೇರಿಗೆ ತಲುಪಿಸುತ್ತಿದ್ದರೂ ಕಾರ್ಯಕ್ರಮಗಳಿಗೆ ಆಗಮಿಸುತ್ತಿಲ್ಲ ಎಂದು ತಿಳಿಸಿದ್ದರು. ಮುಂದಿನ ದಿನಗಳಲ್ಲಿ ಆಹ್ವಾನ ಪತ್ರಿಕೆಯೊಂದಿಗೆ ದೂರವಾಣಿ ಮೂಲಕವೂ ಆಹ್ವಾನಿಸುವಂತೆ ಸೂಚಿಸಿದ್ದೆ. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಅವರ ಅನುಕೂಲದ ದಿನಾಂಕ ಪಡೆದುಕೊಂಡು ಆಹ್ವಾನಿಸಿ, ನಾನೂ ಭಾಗವಹಿಸುವುದಾಗಿ ತಿಳಿಸಿದ್ದೆ ಎಂದು ವಿವರಿಸಿದರು.
ನೀರಿನ ಬಾಟಲಿ ವಿತರಣೆ ಕಾರ್ಯಕ್ರಮ ಮುಗಿಸಿ ತೆರಳುವ ಸಂದರ್ಭದಲ್ಲಿ ಈ ವಿಚಾರವನ್ನು ರಾಜಕೀಯ ವಿವಾದವನ್ನಾಗಿ ಮಾಡಲಾಗಿದೆ. ಕುಮಾರಸ್ವಾಮಿ ಅವರ ಮೇಲೆ ನನಗೆ ಪ್ರೀತಿ ಮತ್ತು ಗೌರವವಿದೆ. ನಮ್ಮ ರಾಜಕೀಯ ನಿಲುವುಗಳು ಬೇರೆ ಇರಬಹುದು. ರಾಜಕೀಯ ಹೋರಾಟವನ್ನು ರಾಜಕೀಯವಾಗಿಯೇ ಮಾಡುತ್ತೇವೆ. ಆದರೆ ಅವರು ಕಾರ್ಯಕ್ರಮಕ್ಕೆ ಬರದಂತೆ ತಡೆಯುವಷ್ಟು ಕೆಳಮಟ್ಟದ ರಾಜಕಾರಣ ಮಾಡುವ ಅಗತ್ಯ ನನಗಿಲ್ಲ. ಇಂತಹ ಆರೋಪಗಳಿಗೆ ಪ್ರತಿಕ್ರಿಯೆ ನೀಡುವುದಕ್ಕಿಂತ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುತ್ತೇನೆ ಎಂದರು.
ಟೇಪ್ ಅಂಟಿಸಿದ ಕೃತ್ಯ ಖಂಡನೀಯ
ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಭಾವಚಿತ್ರಗಳಿಗೆ ಟೇಪ್ ಅಂಟಿಸಿರುವ ಕೃತ್ಯ ತೀವ್ರ ಖಂಡನೀಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೇಂದ್ರದಲ್ಲಿ ಒಂದು ಪಕ್ಷ, ರಾಜ್ಯದಲ್ಲಿ ಮತ್ತೊಂದು ಪಕ್ಷ ಅಧಿಕಾರದಲ್ಲಿರಬಹುದು. ಆದರೆ ರಾಜಕೀಯ ನಾಯಕರ ಭಾವಚಿತ್ರಗಳಿಗೆ ಈ ರೀತಿಯ ಅವಮಾನ ಮಾಡುವುದು ಸರಿಯಲ್ಲ. ಈ ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರು ಯಾರೇ ಆಗಿದ್ದರೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ವಿಚಾರವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದು, ಜಿಲ್ಲಾ ಉಸ್ತುವಾರಿ ಸಚಿವರೂ ಅಗತ್ಯ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳು ವಿಮ್ಸ್ ನಿರ್ದೇಶಕರಿಗೆ ನೋಟಿಸ್ ನೀಡಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಟೇಪ್ ಅಂಟಿಸಲು ಯಾರು ಸೂಚನೆ ನೀಡಿದರು, ಯಾವ ಕಾರಣಕ್ಕಾಗಿ ಈ ಕೃತ್ಯ ಎಸಗಲಾಯಿತು, ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಸಮಗ್ರ ತನಿಖೆಯಿಂದ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ನಾಮಫಲಕ ವಿಚಾರಕ್ಕೆ ಸ್ಪಷ್ಟನೆ
ಇತ್ತೀಚಿನ ಕೆಡಿಪಿ ಸಭೆಯಲ್ಲಿ ಕುಮಾರಸ್ವಾಮಿ ಅವರ ನಾಮಫಲಕ ತೆರವುಗೊಳಿಸಿ ಅವಮಾನಿಸಲಾಗಿದೆ ಎಂಬ ಆರೋಪಕ್ಕೂ ಸ್ಪಷ್ಟನೆ ನೀಡಿದ ಅವರು, ಸಭೆಯಲ್ಲಿ ಆಸನ ವ್ಯವಸ್ಥೆಗೆ ಅನುಗುಣವಾಗಿ ನಾಮಫಲಕಗಳನ್ನು ಬದಲಾಯಿಸುವುದು ಸಾಮಾನ್ಯ ಪ್ರಕ್ರಿಯೆ. ಅಂದು ಕುಮಾರಸ್ವಾಮಿ ಅವರ ನಾಮಫಲಕದ ಜೊತೆಗೆ ನರೇಂದ್ರಸ್ವಾಮಿ ಅವರ ನಾಮಫಲಕವನ್ನೂ ತೆಗೆದುಕೊಂಡು ಹೋಗಲಾಗಿತ್ತು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಕುಮಾರಸ್ವಾಮಿ ಅವರ ನಾಮಫಲಕವನ್ನಷ್ಟೇ ತೆರವುಗೊಳಿಸಲಾಗಿದೆ ಎಂಬಂತೆ ಬಿಂಬಿಸಲಾಗಿದೆ. ವಾಸ್ತವಾಂಶವನ್ನು ಮರೆಮಾಚಿ ರಾಜಕೀಯ ವಿವಾದ ಸೃಷ್ಟಿಸುವುದು ಸರಿಯಲ್ಲ ಎಂದರು.
ಮಂಡ್ಯದಲ್ಲಿ ಎಆರ್ಎಐ ಘಟಕ ಸ್ಥಾಪನೆಗೆ ಜಮೀನು ನೀಡುವ ವಿಚಾರದಲ್ಲಿ ಜನತಾದಳದವರು ಅಪಪ್ರಚಾರ ಮಾಡುತ್ತಿದ್ದಾರೆ. ವಾಸ್ತವವಾಗಿ ಸಂಸ್ಥೆಯವರು ಆರಂಭದಲ್ಲಿ 100 ಎಕರೆ ಜಮೀನು ಕೇಳಿದ್ದರು. ಈ ಹಿನ್ನೆಲೆಯಲ್ಲಿ ಮುದ್ದನಹಳ್ಳಿ ಸೇರಿದಂತೆ ಎರಡು ಕಡೆ ಜಮೀನು ಗುರುತಿಸುವ ಪ್ರಯತ್ನ ನಡೆಸಲಾಗಿತ್ತು. ಅಧಿಕಾರಿಗಳು, ಸಂಸ್ಥೆಯ ಪ್ರತಿನಿಧಿಗಳು ಹಾಗೂ ಸಂಬಂಧಪಟ್ಟವರೊಂದಿಗೆ ಸಭೆ ನಡೆಸಿ ಸಾರ್ವಜನಿಕರಿಗೆ ಯೋಜನೆಯ ಮಾಹಿತಿ ನೀಡುವಂತೆಯೂ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದೆ ಎಂದು ತಿಳಿಸಿದರು.
ನಂತರ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ 100 ಎಕರೆ ಜಮೀನು ನೀಡುವ ಪ್ರಸ್ತಾಪ ಮುಂದಿಟ್ಟಾಗ ಕುಮಾರಸ್ವಾಮಿ ಅವರು 500 ಎಕರೆ ಜಮೀನು ಬೇಕೆಂದು ಕೇಳಿದ್ದರು. ನಮ್ಮ ಕ್ಷೇತ್ರದಲ್ಲಿ 500 ಎಕರೆ ಜಮೀನು ಲಭ್ಯವಿಲ್ಲ. ಬಹುತೇಕ ಪ್ರದೇಶ ನೀರಾವರಿ ಭೂಮಿಯಾಗಿರುವುದರಿಂದ ಅಷ್ಟು ಪ್ರಮಾಣದ ಜಮೀನು ಒದಗಿಸುವುದು ಕಷ್ಟ ಎಂದು ಅಂದೇ ಸ್ಪಷ್ಟಪಡಿಸಿದ್ದೆ. ಬಳಿಕ ಸುಮಾರು ಎಂಟು ತಿಂಗಳ ಕಾಲ ಈ ವಿಚಾರದಲ್ಲಿ ಯಾವುದೇ ಪ್ರಸ್ತಾಪ ಬಂದಿರಲಿಲ್ಲ ಎಂದು ವಿವರಿಸಿದರು.
ಇತ್ತೀಚೆಗೆ ಮುಖ್ಯಮಂತ್ರಿ ಅವರು ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮತ್ತೆ ಜಮೀನು ನೀಡುವ ವಿಚಾರ ಪ್ರಸ್ತಾಪವಾಗಿದ್ದು, ಇದೀಗ ಲಭ್ಯವಿರುವ 100 ಎಕರೆ ಜಮೀನು ನೀಡಲು ಮುಂದಾಗಿದ್ದೇವೆ. ಆದರೆ ಜಮೀನು ನೀಡಿಲ್ಲ ಎಂದು ಆರೋಪಿಸುವ ಮೂಲಕ ಜನತಾದಳದ ಮುಖಂಡರು ಗೊಂದಲ ಸೃಷ್ಟಿಸುತ್ತಿದ್ದಾರೆ. ರೈತರನ್ನು ಎತ್ತಿಕಟ್ಟಿ ಗಲಾಟೆ ಮಾಡಿಸುವ ಪ್ರಯತ್ನವೂ ನಡೆಯುತ್ತಿದೆ ಎಂಬ ವಿಚಾರ ಗಮನಕ್ಕೆ ಬಂದಿದೆ ಎಂದು ಆರೋಪಿಸಿದರು. ಜಿಲ್ಲಾಡಳಿತವು ಜಮೀನು ಹಸ್ತಾಂತರಕ್ಕೆ ಸಂಬಂಧಿಸಿದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಿದೆ. ಸರ್ಕಾರದ ಕಾರ್ಯದರ್ಶಿಗಳ ಹಂತದಲ್ಲಿ ಪರಿಶೀಲನೆ ಹಾಗೂ ಸಚಿವ ಸಂಪುಟದ ಅನುಮೋದನೆ ಸೇರಿದಂತೆ ಅಗತ್ಯ ಆಡಳಿತಾತ್ಮಕ ಪ್ರಕ್ರಿಯೆಗಳು ಪೂರ್ಣಗೊಳ್ಳಬೇಕಿದೆ. ಕಡತವನ್ನು ಸಚಿವ ಸಂಪುಟದ ಮುಂದೆ ಮಂಡಿಸಿ ಅನುಮೋದನೆ ದೊರೆತ ನಂತರ ಜಮೀನು ಹಸ್ತಾಂತರ ಹಾಗೂ ಖಾತೆ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಎಆರ್ಎಐ ಘಟಕ ಸ್ಥಾಪನೆಗೆ ನಾವು ಸಂಪೂರ್ಣ ಸಹಕಾರ ನೀಡಲು ಸಿದ್ಧರಿದ್ದೇವೆ ಎಂದು ಸ್ಪಷ್ಟಪಡಿಸಿದರು.
ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ಸಮಯ ವ್ಯರ್ಥ ಮಾಡುವ ಬದಲು ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಎಲ್ಲ ಪಕ್ಷಗಳ ಜನಪ್ರತಿನಿಧಿಗಳು ಕೈಜೋಡಿಸಬೇಕು. ಆಸ್ಪತ್ರೆಯ ಭಾವಚಿತ್ರಗಳ ಪ್ರಕರಣ ಸತ್ಯಾಸತ್ಯತೆ ತನಿಖೆಯಿಂದ ಹೊರಬರಲಿ. ತಪ್ಪಿತಸ್ಥರ ವಿರುದ್ಧ ಕ್ರಮವಾಗಲಿ ಎಂಬುದೇ ನಮ್ಮ ನಿಲುವು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್, ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್,ನಗರಸಭೆ ಮಾಜಿ ಸದಸ್ಯ ಶ್ರೀಧರ್,ಮುಖಂಡರಾದ ಧನಂಜಯ, ಹರೀಶ್ ಉಪಸ್ಥಿತರಿದ್ದರು.




