ನೀಟ್ (NEET) ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸಿ ಹಾಗೂ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ರದ್ದುಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಹುಮನಾಬಾದ್ ತಾಲೂಕಾ ಸಮಿತಿ ವತಿಯಿಂದ ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಹುಮನಾಬಾದ್ ಪಟ್ಟಣದ ಮಾಜಿ ಸಂಸದ ದಿ.ರಾಮಚಂದ್ರ ವೀರಪ್ಪ ವೃತ್ತದಿಂದ ಡಾ.ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ಮುಖಾಂತರ ತೆರಳಿದರು. ಬಳಿಕ ಪ್ರಧಾನ ಮಂತ್ರಿಗಳ ಹೆಸರಿಗೆ ಬರೆದ ಮನವಿಯನ್ನು ತಹಸೀಲ್ದಾರ್ ಅಂಜುಮ್ ತಬಸುಮ್ ಅವರಿಗೆ ಸಲ್ಲಿಸಿದರು.
ʼದೇಶದ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುವ ರೀತಿಯಲ್ಲಿ ನೀಟ್ ಪರೀಕ್ಷೆಯಲ್ಲಿ ಅಕ್ರಮಗಳು ನಡೆಯುತ್ತಿರುವುದು ಅತ್ಯಂತ ಖಂಡನೀಯ. ವಿದ್ಯಾರ್ಥಿಗಳು ಹಗಲು-ರಾತ್ರಿ ಶ್ರಮಪಟ್ಟು ಪರೀಕ್ಷೆಗೆ ಸಿದ್ಧತೆ ನಡೆಸಿದರೂ, ಪ್ರಶ್ನೆಪತ್ರಿಕೆ ಸೋರಿಕೆಯಿಂದ ಅವರ ಪರಿಶ್ರಮ ವ್ಯರ್ಥವಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಆತಂಕ ಮತ್ತು ನಿರಾಶೆ ಉಂಟಾಗಿದ್ದು, ಈ ಘಟನೆಯು ದೇಶದ ಪರೀಕ್ಷಾ ವ್ಯವಸ್ಥೆಯ ಮೇಲಿನ ಸಾರ್ವಜನಿಕರ ವಿಶ್ವಾಸಕ್ಕೆ ಧಕ್ಕೆ ತಂದಿದೆʼ ಎಂದರು.
ʼರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಯ ಕಾರ್ಯವೈಖರಿ ಕುರಿತು ಗಂಭೀರ ಅನುಮಾನಗಳು ವ್ಯಕ್ತವಾಗಿದ್ದು, ಪ್ರತಿ ವರ್ಷ ನಡೆಯುವ ಪರೀಕ್ಷೆಗಳಲ್ಲಿ ಇಂತಹ ಅಕ್ರಮಗಳು ನಡೆಯುತ್ತಿರುವುದು ವಿದ್ಯಾರ್ಥಿ ಹಾಗೂ ಪೋಷಕರಲ್ಲಿ ಆತಂಕ ಮೂಡಿಸಿದೆ.. ಅಷ್ಟೇ ಅಲ್ಲದೆ, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಅತಂತ್ರಕ್ಕೆ ಸಿಲುಕಿದೆʼ ಎಂದು ದೂರಿದರು.
ʼನೀಟ್ (NEET) ಪರೀಕ್ಷೆಯನ್ನು ಸಂಪೂರ್ಣ ಪಾರದರ್ಶಕ ರೀತಿಯಲ್ಲಿ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಈ ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾದ ಎಲ್ಲಾ ಅಧಿಕಾರಿಗಳು ಹಾಗೂ ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ, ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಯನ್ನು ರದ್ದುಗೊಳಿಸಿ, ಪಾರದರ್ಶಕ ಮತ್ತು ವಿಶ್ವಾಸಾರ್ಹ ಹೊಸ ಪರೀಕ್ಷಾ ವ್ಯವಸ್ಥೆಯನ್ನು ರೂಪಿಸಬೇಕು. ಈ ಘಟನೆಗೆ ನೈತಿಕ ಹೊಣೆ ಹೊತ್ತು ಕೇಂದ್ರ ಶೀಕ್ಷಣ ಸಚಿವರು ತಕ್ಷಣ ರಾಜೀನಾಮೆ ನೀಡಬೇಕು; ಎಂದು ಆಗ್ರಹಿಸಿದರು.
ಇದನ್ನೂ ಓದಿ : ಬೀದರ್ | ಬ್ರಿಮ್ಸ್ ವೈದ್ಯನ ಮೇಲೆ ಹಲ್ಲೆ ಪ್ರಕರಣ : ಸಂಸದ ಸಾಗರ್ ಖಂಡ್ರೆ, ಡಿಸಿ ಶಿಲ್ಪಾ ಶರ್ಮಾ ಭೇಟಿ, 7 ಜನರ ಬಂಧನ
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್‌ವಾದ) ತಾಲೂಕಾಧ್ಯಕ್ಷ ರಾಹುಲ್ ಉದ್ದಾ, ಶಶಿಕಾಂತ ಡಾಂಗೆ, ಗೌಸೋದ್ದೀನ್, ಅಮನ್ ಖಾನ್, ವಿದ್ಯಾಸಾಗರ ಸಾಧುನೂರ್, ಅವಿನಾಶ್ ಗಾಯಕವಾಡ, ವಿನೋದ ಮೇಲಕೇರಿ, ತುಕಾರಾಮ ಮುಸ್ತಾಪುರೆ, ಮೋಹನ್, ಶ್ರೀನಿವಾಸ ಕಟ್ಟಿಮನಿ, ಶಿವಾನಂದ ಕಟ್ಟಿಮನಿ, ನೀಲಕಂಠ ಶೆಟ್ಟಿ, ಕಿಶೋರ, ಪ್ರಭು ಸಂತೋಷಕರ್, ಶ್ರೀಕಾಂತ ಸೇರಿದಂತೆ ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಮತ್ತಿತರರಿದ್ದರು.




