ಆತ ಕೂಲಿ ಕೆಲಸ ಮಾಡಿಕೊಂಡು ಹಂಗೊ ಹೆಂಗೋ ಜೀವನ ನಡೆಸಿಕೊಂಡು ಬಂದಿದ್ದ ಚಿರ ಯೌವ್ವನದ ಯುವಕ. ತನ್ನ ಮನೆ ಜವಾಬ್ದಾರಿಯನ್ನು ತನ್ನದೇ ಹೆಗಲ ಮೇಲೆರಿಸಿ ಕಷ್ಟಪಟ್ಟು ದುಡಿದು ತನ್ನ ಇಬ್ಬರು ಸಹೋದರಿಯರಿಗೆ ಮದುವೆಯನ್ನೂ ಮಾಡಿಸಿದ್ದ. ಅದರೆ ದಿಢೀರ್ ನಡೆದ ಅಪಘಾತ ನಂತರ ವೈದ್ಯರುಗಳ ಎಡವಟ್ಟು ಇದೀಗ ಆತನ ಕಾಲಿನ ಜೊತೆ ಒಂದು ಕುಟುಂಬದ ಆಧಾರ ಸ್ಥಂಬವನ್ನೇ ಮುರಿದು ಹಾಕಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಮುಡಿಪು ಸಮೀಪದ ಬೋಳಿಯಾರು ಪ್ರದೇಶದ ನಿವಾಸಿ ಉಮ್ಮರ್ ಫಾರೂಕ್ ಎಂಬಾತನ ವ್ಯಥೆ.
ಕೂಲಿ ನಾಲಿ ಮಾಡಿ ಆಡಂಬರದ ಜೀವನವಲ್ಲದಿದ್ದರೂ ಒಂದು ಮಟ್ಟಿನ ನೆಮ್ಮದಿಯ ಜೀವನವನ್ನು ಸಾಗಿಸುತ್ತಾ ತನ್ನ ತಾಯಿಯ ಜೊತೆ ಜೀವನ ಸಾಗಿಸುತ್ತಿದ್ದ. ತನ್ನ ಇಬ್ಬರು ಸಹೋದರಿಯರಿಗೆ ಮದುವೆ ಮಾಡಿಸಿದ ನಂತರ ಎರಡು ವರ್ಷಗಳ ಹಿಂದೆ ತಾನೂ ಮದುವೆಯಾಗಿ ಸುಂದರ ಸಂಸಾರವನ್ನು ನಡೆಸುತ್ತಿದ್ದ. ಆದರೆ ಕಳೆದ ವರ್ಷ ನಡೆದ ಬೈಕ್ ಅಪಘಾತವೊಂದು ತನ್ನ ಜೀವನವನ್ನೇ ಬರಡು ಮಾಡಿಬಿಟ್ಟಿತು.
ಬೈಕ್ ಅಪಘಾತಕ್ಕೊಳಗಾಗಿ ತನ್ನ ಕಾಲಿಗೆ ಗಂಭೀರ ಪೆಟ್ಟಾಗಿದ್ದ ಈತನಿಗೆ ನಂತರ ಶಾಪವಾಗಿದ್ದೇ ವೈದ್ಯರ ನಿರ್ಲಕ್ಷತನ. ಖಾಸಗಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷತನದಿಂದ ಈತನ ಕಾಲನ್ನೆ ಕಳೆದುಕೊಂಡು ನರಳುವಂತಾಗಿದೆ.
ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಎಂದಿನಂತೆ ಉಮ್ಮರ್ ಫಾರೂಕ್ ತನ್ನ ಕೂಲಿ ಕೆಲಸ ಮುಗಿಸಿ ತನ್ನ ಬೈಕಿನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಅಚಾನಕ್ಕಾಗಿ ಎದುರಿಗೆ ಬಂದ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ತನ್ನ ಕಾಲು ಭೀಕರವಾಗಿ ಗಾಯಗೊಂಡಿತ್ತು. ತಕ್ಷಣ ನಗರದ ಯೆನೆಪೋಯ ಆಸ್ಪತ್ರೆಗೆ ತೆರಳಿದರೂ ಅಲ್ಲಿಂದ ತೇಜಸ್ವಿನಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಅಲ್ಲಿ ಹತ್ತು ದಿನಗಳ ಕಾಲ ಚಿಕಿತ್ಸೆ ಪಡೆದು ಗಾಯಗೊಂಡ ಕಾಲು ಗುಣಮುಖವಾಗದ ಕಾರಣ ವೈದ್ಯರ ಸಲಹೆಯಂತೆ ಮುಂದಿನ ಚಿಕಿತ್ಸೆಗಾಗಿ ನಗರದ ಪ್ರತಿಷ್ಠಿತ ಎಜೆ ಆಸ್ಪತ್ರೆಗೆ ರವಾನಿಸಲಾಗಿತ್ತು. ತೇಜಸ್ವಿನಿ ಆಸ್ಪತ್ರೆಯಲ್ಲೂ ಸರಿಯಾದ ಚಿಕಿತ್ಸೆ ಲಭ್ಯವಾಗಿಲ್ಲ ಅನ್ನುವ ಆರೋಪವೂ ಉಮ್ಮರ್ ಫಾರೂಕ್ ಅವರಲ್ಲಿದೆ.
ನಗರದಲ್ಲಿರುವ ದುಬಾರಿ ಆಸ್ಪತ್ರೆಗಳಲ್ಲಿ ಒಂದಾದ ಎಜೆ ಆಸ್ಪತ್ರೆಗೆ ತೆರಳಿದಾಗ ಅಲ್ಲಿನ ವೈದ್ಯರು ಪರಿಶೀಲಿಸಿ ಆತನ
ಕಾಲನ್ನೆ ಕತ್ತರಿಸುವುದಾಗಿ ಸೂಚಿಸಿದ್ದಾರೆ. ತನ್ನ ಮುಂದಿನ ಬದುಕಿನ ಬಗ್ಗೆ ವ್ಯಾಘುಲರಾಗುವುದಕ್ಕಿಂತ ಜೀವ ಮುಖ್ಯವೆಂಬುದನ್ನು ಮನಗಂಡು ವೈದ್ಯರ ನಿರ್ದೇಶನದಂತೆ ಉಮ್ಮರ್ ಫಾರೂಕ್ ಸಂಬಂಧಿಕರು ಒಪ್ಪಿಗೆಯನ್ನು ಸೂಚಿಸಿದ ಮೇರೆಗೆ ಶಸ್ತ್ರ ಚಿಕಿತ್ಸೆ ನಡೆಸಿ ಮೊಣಕಾಲನ್ನು ಕತ್ತರಿಸಿ ಅಲ್ಲಿಗೆ ತೊಡೆಯ ಭಾಗದ ಮಾಂಸವನ್ನು ಜೋಡಿಸುತ್ತಾರೆ.
ಇನ್ನೇನು ಶಸ್ತ್ರ ಚಿಕಿತ್ಸೆ ಮೂಲಕ ತನ್ನ ಕಾಲನ್ನು ಕಳೆದುಕೊಂಡ ಸಂಕಟ ಒಂದೆಡೆ ಆದರೆ ಇತ್ತ ಪ್ರಾಣಕ್ಕೆ ಕುತ್ತಿಲ್ಲ ಎಂದು ನಿಟ್ಟುಸಿರು ಬಿಟ್ಟು, ಕತ್ತರಿಸಿದ ಕಾಲಿನ ಭಾಗಕ್ಕೆ ಕೃತಕ ಕಾಲಿನ ಜೋಡಣೆಗೆ ಯೋಚನೆ ನಡೆಸಿ ಅದಕ್ಕೆ ಬೇಕಾದ ತಯಾರಿ ನಡೆಸಲಾಗುತ್ತಿತ್ತು ಮತ್ತು ದಾನಿಗಳಿಂದ ಕೃತಕ ಕಾಲಿನ ಯೋಜನೆಯೂ ಆಗಿತ್ತು. ಆದರೆ ಅಷ್ಟರಲ್ಲೇ ಕಾಲಿನ ಮಾಂಸ ಜೋಡಿಸಿದ ಭಾಗದಲ್ಲಿ ಕಾಲು ಅಗಲವಾಗಿರುತ್ತದೆ ಮತ್ತು ಮಾಂಸ ಜೋಡಿಸಿದ ಭಾಗದಲ್ಲಿ ಕೃತಕ ಕಾಲು ಜೋಡಿಸಲು ಕಷ್ಟವಾಗುತ್ತದೆ.
ಈ ಕುರಿತು ಬೇರೆ ವೈದ್ಯರನ್ನು ಸಂಪರ್ಕಿಸಿದಾಗ ಅಲ್ಲಿನ ವೈದ್ಯರ ಹೇಳಿರುವ ಪ್ರಕಾರ ಈಗಾಗಲೇ ನಡೆಸಿದ ಶಸ್ತ್ರ ಚಿಕಿತ್ಸೆಯ ಸಮಯದಲ್ಲಿ ಕತ್ತರಿಸಿದ ಜಾಗದಲ್ಲಿ ಅಳತೆ ಮೀರಿ ಕತ್ತರಿಸಿಲಾಗಿದೆ ಮತ್ತು ಹೆಚ್ಚುವರಿ ಮಾಂಸ ಜೋಡಿಸಲಾಗಿದೆ. ಹೀಗಾಗಿ ಕೃತಕ ಕಾಲು ಜೋಡಿಸಬೇಕೆಂದರೆ ಇನ್ನೂ ಸ್ವಲ್ಪ ಕತ್ತರಿಸಬೇಕೆಂಬ ಸಲಹೆ ನೀಡಿರುತ್ತಾರೆ. ಈಗಾಗಲೇ ಒಂದು ಶಸ್ತ್ರ ಚಿಕಿತ್ಸೆದ ರೋಸಿ ಹೋಗಿದ್ದ ಬಡಪಾಯಿ ಕುಟುಂಬಕ್ಕೆ ಇದೊಂದು ಇನ್ನೊಂದು ಆಘಗಾತವಾಗಿತ್ತು. ಈಗಾಗಲೇ ನಡೆಸಿದ ಶಸ್ತ್ತ ಚಿಕಿತ್ಸೆಯಿಂದ ಆರ್ಥಿಕ ಮತ್ತು ದೈನಂದಿನ ಜಿವನದ ಹಳಿ ತಪ್ಪಿರುವಾಗಲೇ ಇನ್ನೊಂದು ಶಸ್ತ್ತ ಚಿಕಿತ್ಸೆ ಮತ್ತು ಮತ್ತೊಂದು ವರ್ಷದ ವಿಶ್ರಾಂತಿ ಊಹಿಸಲೂ ಸಾಧ್ಯವಾಗದಂತಾಗಿತ್ತು.
ಹೀಗಿರುವಾಗಲೂ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಮೊದಲ ಬಾರಿ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರ ನಿರ್ಲಕ್ಷ್ಯದಿಂದ ಈ ಅಚಾತುರ್ಯ ನಡೆದಿದೆ ಎಂದು ಆರೋಪಿಸಿ ಮತ್ತೆ ಎಜೆ ಆಸ್ಪತ್ರೆಯ ವೈದ್ಯರ ಬಳಿ ವಿಚಾರಿಸಿದಾಗ, ಎಜೆ ಆಸ್ಪತ್ರೆಯ ವೈದ್ಯರು ನಿರ್ಲಕ್ಷ್ಯತನದ ಪರಮಾವಧಿ ತೋರಿ ಕುಟುಂಬದ ಆರೋಪವನ್ನು ಸಂಪೂರ್ಣವಾಗಿ ತಳ್ಳಿ ಹಾಕಿದ್ದಲ್ಲದೇ, “ನೀವೇನು ಬೇಕಾದರೂ ಮಾಡಿ, ನಮ್ಮಿಂದ ಯಾವುದೇ ತಪ್ಪು ನಡೆದಿಲ್ಲ” ಎಂಬ ಬಾಲಿಶತನದ ಉತ್ತರವನ್ನು ನೀಡಿ ಅವರನ್ನು ಕಡೆಗಣಿಸಿದ್ದಾರೆ ಎಂದು ಉಮ್ಮರ್ ಫಾರೂಕ್ ಆರೋಪಿಸಿದ್ದಾರೆ.
ಉಮ್ಮರ್ ಫಾರೂಕ್ ಹಾಗೂ ಅವರ ಕುಟುಂಬದ ಅರೋಪದಂತೆ ತನ್ನದಲ್ಲದ ತಪ್ಪಿಗೆ ವೈದ್ಯರ ನಿರ್ಲಕ್ಷ್ಯತನ ಮತದರು ಅರೆಬರೆ ಶಸ್ತ್ರ ಚಿಕಿತ್ಸೆಯ ಪರಿಣಾಮವಾಗಿ ಉಮ್ಮರ್ ಫಾರೂಕ್ ಅವರಿಗೆ ಕೃತಕ ಕಾಲೂ ಜೋಡಿಸಲಾಗದೆ, ಉದ್ಯೋಗಕ್ಕೂ ತೆರಳಲಾಗದೆ ಈತನನ್ನೆ ನಂಬಿದ ಇಡೀ ಕುಟುಂಬ ನರಕ ಯಾತನೆ ಪಡೆಯುತ್ತಿದ್ದು ಇದೀಗ ಸಂಘಟನೆಗಳ ಮೂಲಕ ಹೋರಾಟದ ಹಾದಿಯನ್ನು ನೋಡುತ್ತಿದೆ.
ಇತ್ತ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಎಡ ಯುವಜನ ಸಂಘಟನೆ ಡಿವೈಎಫ್ಐ “ಅನ್ಯಾಯಕ್ಕೊಳಗಾದ ಉಮ್ಮರ್ ಫಾರೂಕ್ ಪರವಾಗಿ ಕಾನೂನು ರೀತ್ಯಾ ಹೋರಾಟವನ್ನು ಮಾಡಲಿದ್ದೇವೆ. ಯುವಕನಿಗೆ ಕೂಡಲೇ ಪರಿಹಾರವನ್ನು ಒದಗಿಸಬೇಕು, ಈ ಸಂಬಂಧ ಜಿಲ್ಲಾ ಆರೋಗ್ಯ ಇಲಾಖೆ, ಜಿಲ್ಲಾಡಳಿತ ಮಧ್ಯಪ್ರವೇಶ ಮಾಡಿ ಸೂಕ್ತ ತನಿಖೆಗೆ ಒಳಪಡಿಸಿ, ಫಾರೂಕ್ ಅವರಿಗೆ ಪರಿಹಾರ ಒದಗಿಸಬೇಕು” ಎಂದು ಜಿಲ್ಲಾ ಕಾರ್ಯದರ್ಶಿ ರಿಝ್ವಾನ್ ಹರೇಕಳ ಈದಿನ.ಕಾಮ್ ಗೆ ತಿಳಿಸಿದ್ದಾರೆ.
ಒಟ್ಟಿನಲ್ಲಿ ಉಮ್ಮರ್ ಫಾರೂಕ್ ಅವರ ಆರೋಪಿಸಿದಂತೆ ತನ್ನದಲ್ಲದ ತಪ್ಪಿಗೆ ವೈದ್ಯರ ಸಂಪೂರ್ಣ ನಿರ್ಲಕ್ಷ್ಯತನಕ್ಕೆ ಯುವಕನ ಕಾಲಿನ ಜೊತೆಗೆ ಒಂದು ಇಡೀ ಕುಟುಂಬದ ಆಧಾರ ಸ್ಥಂಭವೇ ಮುರಿತಕ್ಕೊಳಗಾಗಿದೆ. ಸಂಬಂಧಪಟ್ಟಂತ ಅಧಿಕಾರಿಗಳು ವೈದ್ಯರು ಈ ಬಗ್ಗೆ ಸೂಕ್ಷ್ಮವಾಗಿ ಪರಿಶೀಲಿಸಿ ಉಮ್ಮರ್ ಫಾರೂಕ್ ಅವರಿಗೆ ನ್ಯಾಯ ಒದಗಿಸಬೇಕಾಗಿದೆ.



