ಚಂದ್ರಶೇಖರ ಕಂಬಾರ ಅವರ ಕತೆ | ನಾರ್ಸಿಸಸ್

Date:

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.

ಮೊದಲಿನಿಂದಲೂ ಹೊಂಚು ಹಾಕಿದ್ದವರಂತೆ ಥಟ್ಟನೇ ಎದ್ದು, ಬೆಡ್ ಶೀಟ್ ಸರಿಸಿ ಹಾಸಿಗೆಯ ತುಂಬ ಹುಡುಕಾಡಿದ. ಕಾಟಿನ ಸಂದಿಗೊಂದಿಗಳಲ್ಲಿ, ಸಂದೇಹ ಬಂದಲ್ಲಿ ಬೆರಳು ಸೇರಿಸಿ ಒರೆದ; ನಿಜವಾಗಿ ಒರೆದೆನೇ ಎಂದು ಬೆರಳು ಮೂಸಿನೋಡಿಕೊಂಡ. ಅಷ್ಟರಲ್ಲಿ ತೊಡೆಗೆ ಚಪ್ಪನೇ ಹೊಡಕೊಂಡು ಗಸಗಸ ತಿಕ್ಕಿ ಪತ್ತಾರನ ಕಣ್ಣಿನಿಂದ ಆ ಸ್ಥಳ ಪರೀಕ್ಷೆ ಮಾಡಿದ. ‘ಊರ ಬಿಟ್ಟ ಊರಿಗೆ ಬಂದರೂ ತಗಣೀ ಕಾಟೇನ ತಪ್ಪಲಿಲ್ಲ’- ಎಂದು ತನ್ನಲ್ಲೇ ರಾಗಬದ್ಧವಾಗಿ ಗೊಣಗಿಕೊಂಡ. ಹಾಗೆಂದು ತಾನು ಬಾಡಿಗೆ ಹಿಡಿದ ಆ ಹೊಸಮನೆಯನ್ನು, ಮನೆಯ ಯಜಮಾನನನ್ನು/ಳನ್ನು ಒಂದು ಸಲವೂ ಆಕ್ಷೇಪಿಸಲಿಲ್ಲ. ಮನೆಯ ಯಜಮಾನಿ ಶಾರಿ ಅಥವಾ ಶಾರದಾ ಹಿಂದೆ ಎಮ್ಮೆ ಓದುವಾಗ ಇವನ ಕ್ಲಾಸಮೇಟಾದದ್ದು ಇದಕ್ಕೆ ಮೊದಮೊದಲು ಕಾರಣವಾಗಿತ್ತು. ಬರಬರುತ್ತ ಅದೂ ಮಾಯವಾಯಿತು. ಅವಳೋ ಊಟಕ್ಕೆ ಕರೆದು ಗಂಡನ ಎದುರಿನಲ್ಲಿಯೇ ‘ರಾಮೂ ನಾವೂ ಎಮ್ಮೇದಲ್ಲಿದ್ದಾಗ ಅಲ್ಲಿ ಹೆಂಗಿತ್ತು? ಆವಾಗ ಹೆಂಗಾಗಿತ್ತು?’ ಎಂದು ಸೂಚ್ಯ ಉತ್ತರ ಬಯಸಿ ಹುಚ್ಚು ನಗೆ ನಗುತ್ತ ಕೇಳುತ್ತಿದ್ದರೆ ಉಂಡದ್ದು ವಾಂತಿಯಾಗುತ್ತಿತ್ತು. ಅವಳ ಮಾತು ಸಹ ಒಮ್ಮೊಮ್ಮೆ ಕೊಬ್ಬಿದ ತಗಣಿಯಂತೆ ಕಚ್ಚುತ್ತಿತ್ತು. ತನಗೆ ಕಾಟ ಕೊಡುವ ತಗಣಿಗಳು ಶಾರಿಯ ಮನೆಯ ಖಾಸಾ ತಗಣಿಗಳಲ್ಲವೆಂದು ಗೊತ್ತಿತ್ತು. ಇವಾದರೋ ಬಡಕಲು ಪ್ರಾಣಿ. ನಿನ್ನೆಯಲ್ಲ ಮೊನ್ನೆ ಅಂದರೆ ಬುಧವಾರ ರಾತ್ರಿ ಒಂದು ತಗಣಿಯನ್ನು ಜೀವಂತವಾಗಿ ಹಿಡಿದು, ಓಡಬಾರದಷ್ಟು ಮಾತ್ರ ಜೀವ ಉಳಿಸಿ, ಅಚ್ಚ ಬಿಳಿಯ ಕಾಗದ ಹಾಸಿ, ಅದರ ಮೇಲಿಟ್ಟು, ತತ್ವಜ್ಞಾನಿಯಂತೆ ಅಥವಾ ಪಶುವಿಜ್ಞಾನಿಯಂತೆ ಕೈಯ ಮೇಲೆ ಕೆನ್ನೆಯನ್ನೂರಿ ನಿಜವಾಗಿಯೂ ಗಂಭೀರವಾಗಿಯೇ ಅದನ್ನು ಪರಾಂಬರಿಸಿದ. ಹೃದಯ ಆರ್ದ್ರವಾಯಿತು. ಆ ಸಣಕಲು ದೇಹವನ್ನು ತನ್ನ ಮೈಯ ಯಾವುದಾದರೂ ಮೃದುಪ್ರದೇಶಕ್ಕೆ ಅಂಟಿಸಿಕೊಂಡು ಅದಕ್ಕೆ ಹೊಟ್ಟೆ ತುಂಬಾ ನೆತ್ತರೂಡುವಷ್ಟು ಕರುಣಾಚೇತಸನಾದ.

- Advertisement -

ಇಷ್ಟೆಲ್ಲಾ ಮೊನ್ನೆ ಮಾತ್ರ. ತಗಣಿಗಳ ಚೂರಿ ಚುಚ್ಚುವಂಥ ಕಡಿತದಿಂದ ಪಾರಾಗುವುದಕ್ಕಾಗಿ ಎಷ್ಟೋ- ಮುಖ್ಯವಾಗಿ ಮೂರು ಉಪಾಯಗಳನ್ನು ಕಂಡು ಹಿಡಿದಿದ್ದ: ಒಂದು- ಅಜ್ಜನ ನೆನಪು ಮಾಡಿಕೊಳ್ಳುವುದು. ಎರಡು- ಊರ ಹೊರಗಿನ ಪಾರ್ಕಿನಲ್ಲಿದ್ದ ಗಿಡ ಏರಿ ಗಂಟೆಗಟ್ಟಲೆ ಸಿಗರೇಟು ಸೇದುತ್ತ ಕುಳಿತುಕೊಳ್ಳುವುದು, ಮೂರು- ತಾನು ಸಮುದ್ರದಲ್ಲಿದ್ದೇನೆಂದು ಭಾವಿಸಿ ಈಜುವವರಂತೆ ಕೈ ಬೀಸುತ್ತ ಬಚ್ಚಲಲ್ಲಿ ಕೂಡುವುದು. ಈ ಮೂರೂ ಉಪಾಯಗಳನ್ನು ಅನುಸರಿಸುವಾಗ, ಅರೆ, ಒಂದು ತಗಣಿಯೂ ಅವನ ಬಳಿ ದೇವರಾಣೆ ಸುಳಿಯುತ್ತಿರಲಿಲ್ಲ. ಎಷ್ಟೋ ಸಲ ದೇವರೇ ಬದುಕು ಈ ಮೂರರಲ್ಲಿಯೇ ಮುಗಿಯಬಾರದಿತ್ತೇ ಎನ್ನಿಸಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮಹಿಳಾ ಮೀಸಲಾತಿ ಮರೆಯಲ್ಲಿ ಕ್ಷೇತ್ರ ಮರುವಿಂಗಡಣೆ: ವಿರೋಧ ಪಕ್ಷಗಳ...

2023ರ ಮಹಿಳಾ ಮೀಸಲಾತಿ ಕಾಯ್ದೆಯನ್ನು ಅನಗತ್ಯವಾಗಿ ಕ್ಷೇತ್ರ ಪುನರ್ವಿಂಗಡಣೆಯೊಂದಿಗೆ ತಳುಕು ಹಾಕಿರುವ ಮೋದಿ ಸರ್ಕಾರದ ನಡೆ, ಭಾರತೀಯ ಪ್ರಜಾಪ್ರಭುತ್ವ ಮತ್ತು ಸಂಸದೀಯ ಇತಿಹಾಸದಲ್ಲಿಯೇ ಒಂದು ಅಪರೂಪದ ರಾಜಕೀಯ ಹಾಗೂ ಸಾಂವಿಧಾನಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ....

ಖಾಸಗಿ ವೈದ್ಯರ ಎಡವಟ್ಟು; ಬಡ ಕುಟುಂಬದ ಆಧಾರ ಸ್ತಂಭ...

ಆತ ಕೂಲಿ‌ ಕೆಲಸ ಮಾಡಿಕೊಂಡು ಹಂಗೊ ಹೆಂಗೋ ಜೀವನ‌ ನಡೆಸಿಕೊಂಡು ಬಂದಿದ್ದ ಚಿರ ಯೌವ್ವನದ ಯುವಕ. ತನ್ನ ಮನೆ ಜವಾಬ್ದಾರಿಯನ್ನು ತನ್ನದೇ ಹೆಗಲ ಮೇಲೆರಿಸಿ ಕಷ್ಟಪಟ್ಟು ದುಡಿದು ತನ್ನ ಇಬ್ಬರು ಸಹೋದರಿಯರಿಗೆ ಮದುವೆಯನ್ನೂ...

ಭಾಷಣಗಳಲ್ಲಿ ಆಗಾಗ ಎಡವಟ್ಟು, ಸುಳ್ಳು-ಅತಿಶಯೋಕ್ತಿಯೇ ಮೇಲುಗೈ: ನವಭಾರತದ ‘ಪಪ್ಪು’...

ಒಂದು ಕಾಲದಲ್ಲಿ ರಾಹುಲ್ ಗಾಂಧಿ ಅವರನ್ನು ಅಪಹಾಸ್ಯ ಮಾಡಲು ಬಳಸುತ್ತಿದ್ದ 'ಪಪ್ಪು' ಎಂಬ ಪದವೇ ಇದೀಗ ಮೋದಿ ಅವರತ್ತ ತಿರುಗಿದೆ. 1987-88ರ ಡಿಜಿಟಲ್ ಕ್ಯಾಮೆರಾ-ಇಮೇಲ್ ಕಥೆಯಿಂದ ಹಿಡಿದು ಐತಿಹಾಸಿಕ ಪ್ರಮಾದಗಳವರೆಗೆ, ಮೋದಿ ಅವರ...

ಇದನ್ನು ಓದಿದ್ದೀರಾ?: ಗೀತಾ ಕುಲಕರ್ಣಿ ಅವರ ಕತೆ | ಸೇರಾ

ಹಾಗೇ ಹಾಸಿಗೆಯಲ್ಲಿ ಬಿದ್ದಿರಲಾರದೆ ಎದ್ದು ಗ್ಲಾಸಿಗೆ ವ್ಹಿಸ್ಕಿ ಬಗ್ಗಿಸಿಕೊಂಡು ಗುಟುಕರಿಸಿ ಥೇಟು ನಿಶೆಯಾಯಿತೆಂದೇ ಪ್ರಯತ್ನ ಮಾಡಿ ತಪ್ಪು ತಿಳಿದುಕೊಂಡು ಕನ್ನಡಿಯ ಎದುರು ನಿಂತು ಭಾರವಾದ ರೆಪ್ಪೆಗಳನ್ನು ಅರೆಯೆತ್ತಿ ನಿಲ್ಲಿಸಿ ನೋಡಿದ, ಹೆಲೋ ಎಂದ, ಯಾರು ನೀನು ಎಂದ. I love you my boy ಎಂದ. ತಾನು ಮಾಡುತ್ತಿರುವುದರ ಬಗೆಗೆ ನಗೆ ಬಂದು ಹಿಹೀ ನಗುನಗುತ್ತ ಹಾಲಿಗೆ ಬಂದು ಕುರ್ಚಿಯಲ್ಲಿ ಕುಕ್ಕರಿಸಿದ-

‘ಏನ್ ಏನ್ ಆಗ್ಯದಾದರೂ ಏನ್ನನಗ? ಇವ್ ಬಿಡು, ಇವರಪ್ಪನಂಥಾ ತಗಣಿ ಬಂದ ಹೊತ್ತ ಹೊತ್ತ ಒಗದರೂ ನಿದ್ದಿ ಮಾಡಲಿಲ್ಲ ಒಮ್ಮೊಮ್ಮಿ? ಏನ್ ಸ್ವಾರ್ಥಿ ಮಂದಿ ಇಲ್ಲೀದು ಅಂತೀನಿ. ಒಬ್ಬನಾದರೂ ಅವ್ವಗ ಹುಟ್ಟಿದ ಮಗಾ ಬಂದು ಅಪ್ಪಾ ನಿನಗ ನಿದ್ದಿಲ್ಲ, ಹೆಂಗ ಬದಕೀಯೋ ಅಂದನ? ಸಾಯೋದ ಸಾಯ್ತಿ, ಕಾರಣಾ ಹೇಳಿ ಸಾಯಂತ ಯಾವಳಾದರೂ- ಆ ಬಿಳೀ ಭೋಸಡಿ ಬಂದ ಕೇಳಿದಳ? ಕಣ್ಣಿಗಿ ಕಣ್ಣ ಹಚ್ಚದೇ ಸಾಯ್ತಾ ಇದೀನಿ…’

‘ಅಯ್ಯೋ…’ ಎಂದು ಗಡಬಡಿಸಿ ಗ್ಲಾಸು ಕೆಳಗಿಟ್ಟು ಧಪ್ಪನೆ ಎದೆ ಗುದ್ದಿಕೊಂಡ- ವನೇ ಎದೆ ನೋಡಿಕೊಂಡ, ಬೇಟೆ ಬಿದ್ದಿತ್ತು. ‘ಹಹ್ಹಹ್ಹ!’ ಎದ್ದು ಸದಾ ಬಾಗಿ ನಡೆಯುವವನು ಈಗ ಎದೆ ಸೆಟೆಸಿ ಅದೇ ಭಂಗಿಯಲ್ಲಿ ಕನ್ನಡಿಯ ಎದುರು ಹೋಗಿ ನಾಯಕನ ಮುಗುಳುನಗೆಯೊಂದನ್ನು ಬಡ ಕನ್ನಡಿಯತ್ತ ಉಗುಳಿದ.

‘ಆಹಾ! ಒಂದ್ಕಡೆ ಪ್ರಜಾಕೋಟಿಗಾಗಿ ಹುಲಿಬೇಟೆಯಾಡಿ ಬಂದಿರತಕ್ಕಂಥಾ ನಾಯಕರು ನಿಂತುಕೊಂಡಿದ್ದಾರೆ. ಇನ್ನೊಂದ್ಕಡೆ ಹಿಂದುಸ್ತಾನವ, ಮದ್ವೆಯಾಗದ ಆದರೆ ಸುಂದರಿಯರಾದ ಸುವಾಸಿನಿಯರು ಗಾವುದ ಗಾವುದ ದೂರದ ಕ್ಯೂದಲ್ಲಿ! ಮಾಲೆ ಕೈಯಲ್ಲಿ! ನಕ್ಕು ತುಟಿಯಲ್ಲಿ ತಂತಮ್ಮೊಳಗೆ ಆಡಿಕೊಳ್ಳುವಂಥವರಾಗಿದ್ದಾರೆ! ಏನಂಥ ಆಡಿಕೊಳ್ಳುವಂಥವರಾಗಿಧಾರೇ?…’

ಇದನ್ನು ಓದಿದ್ದೀರಾ?: ಎಸ್. ನಟರಾಜ ಬೂದಾಳು ಅವರ ಕತೆ | ಆಸಾದಿ

‘ಅಬಬಬಬಾ ಸಾಕಪೋ ಸಾಕು’

ದಣಿದವನಂತೆ ಬಂದು ಧಸ್ಸೆಂದು ಕುರ್ಚಿಯಲ್ಲಿ ಕುಳಿತ. ರೂಮಿನ ಅಸ್ತವ್ಯಸ್ತದ ಮಧ್ಯದಲ್ಲಿ ಪುಸ್ತಕದ ಕೆಳಗಡೆ ಸಿಕ್ಕು ತುದಿ ಮಾತ್ರ ಗೋಚರಿಸುವ ಕರೀ ಚೂರಿ ಕಂಡುಬಂತು. ಅಷ್ಟರಲ್ಲಿ ಬಾಗಿಲು ಬಡಿದ ಸದ್ದಾಯಿತು. ‘ಈ ಹೊತ್ತಿನ್ಯಾಗ್ಯಾರ ಬಂದಿರಬೇಕಪಾ?’ ಯೋಚನೆಯಲ್ಲಿಯೇ ಹೋಗಿ ಬಾಗಿಲು ತೆರೆದ. ಶಾರಿ ಮುಗುಳು ನಗುತ್ತ ಬಾಗಿಲಲ್ಲಿ ನಿಂತಿದ್ದಳು. ಏನೋ ಹೇಳಲಿದ್ದವಳು ಎದೆಯ ಮೇಲಿನ ಒಣಗಿದ್ದ ರಕ್ತ ನೋಡಿ ಕಣ್ಣರಳಿಸಿ

‘ಇದೇನು ರಕ್ತ ಇಲ್ಲಿ?’ ಎಂದು ಎದೆಯ ಮುಲಿನ ಒಣಗಿದ್ದ ನೆತ್ತರು ತೋರಿಸಿ ಕೇಳಿದಳು.

‘ಅದಾ? ತಗಣೀ ಕಾಟ!’

‘ತಗಣೀ ಕಾಟ! ತಗಣೀ ಕಾಟಾ- ಅದೂ ನಮ್ಮನೇಲಿ! ಎಲ್ಲಿ ನೋಡೋಣ’ ಎಂದು ಹೇಳುತ್ತ ಒಳಗೇ ಬಂದಳು.

‘ನಾ ಹೋದ ಹೋದಲ್ಲೆಲ್ಲಾ ಬರತಾವ ಪೀಡಾ’ ಎಂದು ಗೊಣಗುತ್ತ ಇವನೂ ಬೆನ್ನು ಹತ್ತಿ ಒಳಬಂದ. ಅಲ್ಲೇ ಇದ್ದ ಹಾಸಿಗೆ ಹೊರಳಿಸಿ ಒಂದು ಕಪ್ಪು ತಗಣಿ ಕಂಡರೂ ಕೊಲ್ಲದೆ ಹೇಳಿದಳು,

‘ಟಿಕ್ ಟ್ವೆಂಟಿ ತಂದು ಹೊಡೀಬಾರ್‍ದೆ?’

‘ಅಪ್ಪಿತಪ್ಪಿ ಅದರ ವಾಸನೆ ಅತಿಯಾದರೂ ಜನ ಸಾಯ್ತಾರಂತಲ್ಲ?’

‘ನಿಮಗೆಲ್ಲೋ ಹುಚ್ಚು’

‘ಸುಳ್ಳಲ್ಲ, ನಮ್ಮೂರಲ್ಲಿ ನಾಕೈದು ಜನ ಹೀಗೇ ಸತ್ತರು! ಒಬ್ಬನನ್ನು ಸ್ವತಾ ನಾನೇ ಹುಗದು ಬಂದೆ’

‘ಎಮ್ಮೇದಲ್ಲಿದ್ದಾಗಲೂ ಅಷ್ಟೆ, ಈಗಲೂ ಅಷ್ಟೆ ವಾದದಲ್ಲಿ ನಿಮ್ಮನ್ನು ಗೆಲ್ಲೋದು ಸಾಧ್ಯವಿಲ್ಲ’ ಎನ್ನುತ್ತ ರೂಮಿನ ತುಂಬೆಲ್ಲ ದೃಷ್ಟಿ ಹರಿಸಿ ಪುಸ್ತಕದ ಕೆಳಗಿನ ಚೂರಿಗೆ ಕೈ ಹಾಕಿ ಕೇಳಿದಳು.

‘ಓಹೋ! ಇದೇನಿಲ್ಲಿ ಚೂರಿ ಬಂತು! ಶತ್ರುಭಯವೆ?’

ಇದನ್ನು ಓದಿದ್ದೀರಾ?: ಗಿರೀಶ್ ಕಾರ್ನಾಡ್ ಅವರ ಕತೆ | ಅಳಿದ ಮೇಲೆ

‘ಛೇ ಛೇ, ಪುಸ್ತಕದ ಟ್ರಂಕಿನಲ್ಲಿ ಉಳಿದುಕೊಂಡು ಹಾಗೇ ಬಂದು ಬಿಟ್ಟಿತು. ನನಗದರ ಉಪಯೋಗವಿಲ್ಲ. ನೀವ್ಬೇಕಾದರೆ ತಗೋಬಹುದು.’

‘ಸದ್ಯ ಇದರಿಂದ ನನ್ನನ್ನು ಕೊಲ್ಲುವುದಿಲ್ಲ ತಾನೆ?’

ಪಸಂದಾದ ನಗಮಿಂಚೊಂದು ಮುಖದ ತುಂಬ ಒಯ್ಯಾರಿಸಿ ತುಟಿಗಳ ಕೊನೆಯಲ್ಲಿ ಹೆಪ್ಪುಗಟ್ಟಿತು. ಒಂದು ಸಲ ಎಲ್ಲೋ ತನ್ನ ಹಳ್ಳಿಯಲ್ಲಿ ಅವಳನ್ನು ನೋಡಿದ ಹಾಗೆ ನೆನಪು, ಅವಳೇ ಹೇಳಿದಳು.

‘ನನಗೀಗಲೇ ಬೇಕು. ಒಯ್ಯಲೆ?’

‘ಶಾರದಾ ಯಾಕಷ್ಟು ಅವಸರಾ ಮಾಡ್ತೀಯೆ, ಒಂದಷ್ಟ ಹಿಂದಿಂದೆಲ್ಲಾ ನೆನಪ್ನಾಡಿ ಮಾತಾಡೂಣು, ಸುಖದುಃಖ ಹೇಳಿಕೊಳ್ಳೋಣು, ಬಾರಲ್ಲ.’

ತಾನು ಹೇಳ ಅಥವಾ ಕೇಳಬೇಕೆಂದದ್ದು ಇದಲ್ಲ ಎಂದು ಗೊತ್ತಿತ್ತು.

‘ಅದೆಲ್ಲಾ ನಿಮ್ಮ ಮಾತುಕತೆ ನನಗೆ ಬೇಡ. ನಾನಿನ್ನೂ ಇದರಿಂದ ಎಷ್ಟೆಲ್ಲಾ ಕೆಲಸ ಮಾಡಬೇಕು’ ಎಂದು ಹೇಳಹೇಳುತ್ತ ಚೂರಿ ತೆಗೆದುಕೊಂಡು ಕತ್ತಲೆಯ ಕಪ್ಪಿನಲ್ಲಿ ಮಾಯವಾದಳು. ಕೊಟ್ಟ ಬರಿಗೈಯಾದ ಎಬರೇಶಿ ಹಾಸಿಗೆ, ಬೆಡ್‌ ಶೀಟು, ದಿಂಬು ಎತ್ತೆತ್ತಿ ಸಿಕ್ಕ ತಗಣಿ ಒರೆಯಲಾರಂಭಿಸಿದ: ಕರಿಯ ತಗಣಿ, ಕೆಂಪು ತಗಣಿ, ಸಾವಗರದ ತಗಣಿ, ಬಲಿತ, ಬಲಿಯಲಾರದ ಮುದಿ ತಗಣಿಗಳನ್ನು ಒರೆಯಲಾರಂಭಿಸಿದ. ಒಂದೊಂದು ತಗಣಿಯೂ ಮೈರಾವಣನ ರಕ್ತ ಬಿಂದು. ಬೇಸತ್ತು ಆರಾಮ ಕುರ್ಚಿಯ ಮೇಲೇ ಮಲಗಬೇಕೆಂದು ಎದ್ದ. ಎದ್ದು ಆ ಎಂದು ಆಕಳಿಸಿದಾಗ ಕೈ ನೆತ್ತಿಯ ತೂಗುದೀಪಕ್ಕೆ ತಾಗಿ ಅಲುಗಾಡತೊಡಗಿತು. ಒಳರೂಮಿನ ನೆರಳೂ ತಗಣಿಯ ಓಡಾಟದಂತೆ ಅಲುಗಾಡತೊಡಗಿದವು. ಕುರ್ಚಿಯ ಬೆನ್ನ ಕಡೆಗೆ ಮುಖ ಮಾಡಿ ನಾಟಕದ ಹನುಮನಂತೆ ಕೂತು ನೆರಳಿನ ಚಲನವಲನಗಳನ್ನು ನಿರೀಕ್ಷಿಸತೊಡಗಿದ, ಅಲ್ಲಿಂದಿಲ್ಲಿಂದಲ್ಲಿಗೆ- ಸಣ್ಣ ದೊಡ್ಡದಾಗಿ- ಸಣ್ಣ ದೊಡ್ಡದಾಗಿ ಕೊನೆಗೆ ಅತ್ತ ಸಣ್ಣಲ್ಲ ಇತ್ತ ದೊಡ್ಡದಲ್ಲದ ನೆರಳು, ಅಜ್ಜ ನಿಂತುಕೊಂಡ:

ಏನ ಬಣ್ಣದ ಬದಕ ಮಗಂದು! ಮೊದಲ ಹೌದನ್ನೋ ಹಂಗಾಮ. ಪಾಚ್ಛಾಪೂರ ಜೋಗತಿ ಸಾವಂತ್ರಿ ಮಗಳು ಬಸ್ಸಿ ಚಿಕ್ಕ ಪ್ರಾಯದಲ್ಲಿ ಕಾಲಿಟ್ಟಳೋ ಇಲ್ಲೊ- ಅಜ್ಜನ ಟೊಂಕದಾಗ ಹುಳಾ ಎದ್ದೂವ. ಮೊದಲ ಅಡ್ಡ ಗ್ವಾಡಿ ಗರತೇರ ಸೀಮ್ಯಾಗೆಲ್ಲಾ ನಿಶಾನಿ ಊರಿದ ಮಗಾ ಇಂವಾ: ಕಾವಲಿಲ್ಲದ ಹೊಲಾ ಕೇಳಬೇಕ? ಮಂಗಳಾರ ಸಂತಿ ನೆಂವ; ಹಾಸಿಕೊಳ್ಳೋ ಕಂಬಳಿ ನೆಂವ, ದಡೀ ದೋತರಾ ತೀಡಿ ಉಟಗೊಂಡೇನೊ: ಕೆಂಪ ರುಂಬಾಲ- ಗ್ವಾಡಂಬಿ ಮ್ಯಾಲ ಬರೂ ಹಾಂಗ ಸುತ್ತಿಕೊಂಡೇನೊ- ಬಿಳಿ ಎಲಿ, ಬಟ್ಟಲಡಿಕಿ, ಕೆಂಪನಗಿ- ನಡದಪಾ ಜೋ ಜೋ ಜೋಕುಮಾರ.

ಇದನ್ನು ಓದಿದ್ದೀರಾ?: ಅಗ್ರಹಾರ ಕೃಷ್ಣಮೂರ್ತಿ ಅವರ ಕತೆ | ಮನೋರಥ

ದೇವರ ಹರಿಕಿ ಮುಟ್ಟೋತನಕ ಮುಟ್ಟಗೊಡಾಕಿಲ್ಲ- ಅಂತ ಸಾವಂತ್ರಿ, ದೇವರಕಿತ ನಾಯೇನ ಕಮ್ಮಿ ಅಂತಿಂವಾ. ಮತ್ತೇನ್ಕೇಳ್ತಿ?- ಹೊಲೇರ ಹಿರೇರೆಲ್ಲಾ ಕೂಡಿ ಕತ್ತಲ ಮನ್ಯಾಗ ಹಾಕಿ, ಕೀಲಿ ಹಾಕಿದರ, ಯಾವುದೋ ಮಾಯೇದಿಂದ ತಾಟ ಹರದ, ಸಾವಂತ್ರಿ ಗುಡಸಲಕ ಬೆಂಕಿ ಹಚ್ಚಿ, ಕಾದ ಚೂರೀಲೆ ಬಸ್ಸಿನ ಇರದ ಹಗರಾಗಿ ಝುಮಝುಮ ನಸಕಿನ್ಯಾಗ ಹೊರಬಿದ್ದ. ಎಳೀ ಬಾಲಿ ಬಸ್ಸಿ ಹೊಸಲಾ ದಾಟಿ ಮೀರಿ ಹೋಗವನ ಅಂಗಿ ಚುಂಗಾ ಜಗ್ಗಿ ಹಿಡಿದು ಕಾಲಿಗೆ ಬಿದ್ದಳು. ಆಧಾರ ಕೊಡು ಅಂದಳು. ‘ಕ್ವಾಣಕ ತನ್ನ ಬಾಲೇನ ಭಾರ? ಬಾ’ ಅಂದ. ಮುಂದ ಮುಂದ ಅಜ್ಜ, ಹಿಂದಿನಿಂದ ಬಸ್ಸಿ- ಹೊಂಟನಲಾ ಬಾದುರ.

ಸೂಳೆಯಾದರೂ ತನ್ನ ಅಜ್ಜಿಗಿಂತ ಬಸ್ಸಿಯೇನು ಕಡಿಮೆ? ಒಂದು ಸಲ ಇವನ ಗೆಣಿತಾನಕ ಬಿದ್ದ ಮೇಲೆ ಇನ್ನೊಬ್ಬ ಗಂಡಸನ್ನ ಹೀಗೆ ಕೈ ಎತ್ತಿ ಮುಟ್ಟಿದರೆ ತಾ ಜೋಗತಿ ಅಲ್ಲಾ ಅಂದಳು. ಅಜ್ಜಿ ಅವಳನ್ನು ದೂರವಿಡಲಿಕ್ಕೆ ಖಟಪಟಿ ಮಾಡಿದರೆ ‘ದೇವರ ಮುರಧಾಂಗ ಮುರೀತಾನೆವ್ವಾ- ಇಂವನ್ನ ಹೆಂಗ ಬಿಡಲಿ?’ ಅಂದಳಂತೆ. ಅವಳ ಬದುಕಿನಲ್ಲಿಯೇ ಅವಳಿಗಿರುವ ಬಹುದೊಡ್ಡ ಆಸೆಯೆಂದರೆ ಅಜ್ಜನ ತೊಡೆಯ ಮೇಲೆ ತಲೆಯಿಟ್ಟು ಸಾಯುವದು. ಘೋಡಗೇರಿ ಗಜನಿಂಗಾ, ಸಾವಳಿಗಿ, ಗೋಕಾಂವಿ ಮಾನಿಂಗಾ, ಗುಡ್ಡದೆಲ್ಲವ್ವಾ, ಶಿರಸಂಗಿ ಕಾಳವ್ವಾ- ಇವರೆಲ್ಲರಿಗೆ ಈ ಆಸೆಯನ್ನೀಡೇರಿಸುವ ಜವಾಬ್ದಾರಿ ಹೊರಿಸಿದಳು. ತಾನೆಂದರೆ ಅವಳಿಗೆಷ್ಟು ಅಕ್ಕರತೆ! (ಬಸವ್ವನವರ ಬಸಮುಕಳೆವರ ಲವಂಗ ಲಟಪಟ ಗಿಣಿ ಮುಕಳೆವರ) ತನ್ನ ಮೊಮ್ಮಕ್ಕಳಲ್ಲೆಲ್ಲ ತನ್ನ ಮೇಲೇ ಅಜ್ಜನಿಗೆ ಹೆಚ್ಚು ಪ್ರೀತಿಯಿದ್ದುದರಿಂದ ಇರಬೇಕು. ಯಾರಾದರೂ ತನಗೆ ರಾಮ್ಯಾ ಎಂದರೆ ಅವಳೂ ಅಜ್ಜನಂತೇ ಸಿಟ್ಟಿಗೇಳುತ್ತಿದ್ದಳು. ಅಷ್ಟು ದೂರದ ಸಾಲೆಗೆ ಬಂದು. ಸಾಲೆ ಬಿದ್ದೊಡನೆ ತನ್ನನ್ನು ಎತ್ತಿಕೊಂಡು ‘ನನ್ನ ಸಾಲೀ ಸರದಾರ ಬರೀ ಬರದ ಬಂದ ನೀರ ನೀಡ್ರೇ’ ಎಂದು ಮನೆಯಲ್ಲಿಳಿಸಿ ಹೋಗುತ್ತಿದ್ದಳು.

ಆಯ್ತಾರಮಾಸಿ, ಪುರಮಾಸೇ ಹುಗ್ಗಿ ಉಂಡು, ಎಲೆಡಿಕೆ ಹಾಕಿ, ಅಜ್ಜ ರುಂಬಾಲು ಸುತ್ತಿದ, ಅಜ್ಜಿ ಮುಂದೆ ಬಂದು ‘ಗೌಡಾ ಮೂರ ದಿನದಿಂದ ಕನಸಿನ್ಯಾಗ ಕರೀದೇವರ ಬಂದ ಕರಧಾಂಗಾಗಾಕ ಹತ್ತೇತಿ, ಈ ಅಮಾಸೀ ಒಂದ ನೀ ಪಾಲಸಾಕೇ ಬೇಕು’ ಅಂದಳು. ಎಲಿ ತಿಂದ ತುಟಿಯಂತೇ ಕಣ್ಣು ಕೆಂಪಗಾದದ್ದು ಆ ಬೆಳಕಿನಲ್ಲಿ ಕಾಣುತ್ತಿತ್ತು. ಸ್ವಲ್ಪ ಹೊತ್ತು ಸುಮ್ಮನೇ ನಿಂತ. ಅಜ್ಜಿ ಕೂಡಲೇ ಅವನ ಕಾಲು ಹಿಡಿದು ‘ನಾ ನಿನ್ನ ಎಂದ ಏನ ಕೇಳಿಲ್ಲ. ಕೈ ಹಿಡದ ತಪ್ಪಿಗೆ ಇದೊಂದ ಮಾತ ನಡಿಸಿಕೊಡೊ ಹಿರಿಯಾ’ ಎಂದ ಸೆರಗೊಡ್ಡಿ ಬೇಡಿಕೊಂಡಳು. ಅಲ್ಲೇ ಗೂಟಕ್ಕೆ ಬಾರುಕೋಲು ತೂಗುಬಿದ್ದಿತ್ತು. ಅಜ್ಜ ಅಜ್ಜಿಯ ಜೊತೆಗೆ ಮಾತಾಡುವುದು ಬಹಳ ಕಡಮೆ. ಮಾತಾಡಿದರೆ ಬಾರುಕೋಲಿನಿಂದಲೇ ಮಾತಾಡುತ್ತಿದ್ದುದುಂಟು. ಬಾರುಕೋಲಿನಿಂದ ಅವಳ ಚರ್ಮಾ ಹರಿದು ಚಿಂದಿ ಚಿಂದಿ ಮಾಡಿದ. ಬಿಡಿಸಿಕೊಳ್ಳಬಂದ ತಂದೆಯ ಚರ್ಮ ಬೆನ್ನ ಮೇಲೆ ಬರೇ ಮೂರುಕಡೆ ಮಾತ್ರ ಹರಿಯಿತು. ಅಜ್ಜಿ ಹಸೀ ಚಿಪ್ಪಾಡಿಯಾಗಿ ಬಿದ್ದರೂ ಅಜ್ಜನ ಸಿಟ್ಟು ಹೋಗಿರಲಿಲ್ಲ. ‘ಅಚ್ಚಾ’ ಎಂದು ತಾನು ಚೀರಿ ಗಡಗಡ ನಡುಗುತ್ತ ಆಳುತ್ತಿರುವುದನ್ನು ಕಂಡು ಬಾರುಕೋಲು ನೀಟಾಗಿ ಗೂಟಕ್ಕೆ ತೂಗುಹಾಕಿ ಕತ್ತಲೆಯ ಕರಿ ನೀರನ್ನು ಈಸುತ್ತ ಹೊರಬಿದ್ದ. ದೇಹದಲ್ಲಿ ಎಂದಿನ ಬಿಸಿ ಇರಲಿಲ್ಲವೇನೊ ಊದಿ ಒಲೆ ಹೊತ್ತಿಸುವಾಗಿನಂತೆ ಒಂದೆರಡು ಸಲ ಕೆಮ್ಮಿದ. ಮುಂದೆ ಹನುಮಂತ ದೇವರ ಗುಡಿ ದಾಟುವಾಗ ಮಲಗಿದ್ದ ಹಂದಿಯ ಮೇಲೆ ಕಾಲಿಟ್ಟಾಗ- ಮುದಿಕಿಯ ಮುದ್ದೆ ದೇಹವೇ ಎಂದು ಸಂಕಲ್ಪಿಸುವಷ್ಟರಲ್ಲಿಯೇ ಹಂದಿ ಡ್ರೊಂಯೋ- ಎಂದು ಓಡಿ ಹೋಯಿತಂತೆ. ಬಸ್ಸಿಯ ಗುಡಿಸಲಿಗೆ ಬಂದರೆ- ಹಿಲಾಲ ಬೆಳಕಾ- ದೊಡ್ಡ ಹಡಲಿಗಿ. ಮೈ ಕೈಗಿ ತಲೀಗಿ ಕುಂಕುಮಾ ಬಂಡಾರ- ಮೈಮ್ಯಾಗ ಚೂರ ಸೀರಿಲ್ಲಾ- ಇವನನ್ನು ನೋಡಿದೊಡನೆಯೇ ಎಲ್ಲವ್ವ ಮೈಯಲ್ಲಿ ಬಂದು ಕುಣಿಯಲಾರಂಭಿಸಿದಳಂತೆ! -ಹೀಗೆಂದು ಆಮೇಲೆ ಅವನೇ ಹೇಳಿದ್ದು.

ಇದನ್ನು ಓದಿದ್ದೀರಾ?: ಸಿದ್ಧಲಿಂಗಯ್ಯ ಅವರ ಕತೆ | ಮತಾಂತರ

ತಂದೆ ತಾಯಿ ಅಜ್ಜಿಯ ಮೈ ಕಾಸಿ ಕಾಸಿ ಎಂತೆಂಥವೋ ಬೇರು ಅರೆದು ತೇಪೆ ಹಚ್ಚಿ ಒಂದು ಮಾಡಲು ಪ್ರಯತ್ನಿಸುತ್ತಿದ್ದರು. ಹೊರಗೆ ‘ರಾಮೂ’ ಎಂದು ಕರೆದಂತಾಗಿ ತಂದೆ ಹೋಗಿ ಬಾಗಿಲು ತೆಗೆದರೆ- ಅಜ್ಜ! ಆ ರಾತ್ರಿ ಮನೆಗೆ ಬರುತ್ತಾನೆಂದು ಯಾರಿಗೂ ಅನ್ನಿಸಿರಲಿಲ್ಲ. ಒಳಬಂದು, ಕಾಲ್ಮರಿ ಕಳೆದು, ರುಂಬಾಲು ತೆಗೆದು ಬಾರುಕೋಲಿನ ಗೂಟಕ್ಕೆ ತೂಗುಹಾಕಿ, ಸೀದಾ ದೇವರ ಮನೆಯ ಕರೀ ಕತ್ತಲೆಯಲ್ಲಿ ಕರಗಿಬಿಟ್ಟ.

ಮಾರನೆಯ ದಿನ ತಾನು ಏಳುವುದಕ್ಕೆ ಮುನ್ನವೇ ಅಜ್ಜ ಪಂಡರಾಪುರಕ್ಕೆ ಹೋಗಿಬಿಟ್ಟಿದ್ದ. ಅನೇಕರಂತೆ ಬಸ್ಸಿ ಸಹ ಈ ಸುದ್ದಿ ಕೇಳಿ ನಕ್ಕಳು. ಏಳು ರಾತ್ರಿ ಏಳು ಹಗಲಿಯಾಗಿ ಎಂಟನೇ ಹಗಲು ಅಜ್ಜ ಹಾಜರಾದ, ಎಂಥಾ ಬದಲಾವಣೆ! ಹೆಣ್ಣು ಎಂದರೆ ಜೊಲ್ಲು ಸುರಿಸುತ್ತಿದ್ದವನು ವಿಠಲಾ ಎಂದರೆ ಕಣ್ಣೀರು ಸುರಿಸಲಾರಂಭಿಸಿದ. ಅವನು ಬಂದ ಒಂದೆರಡು ದಿನ ‘ಕಚ್ಚಿಗಿ ಜಳ ಬಡದರ ತಾನೇ ಬರತಾನ ಬಿಡ’ ಎಂದು ಸುಮ್ಮನಿದ್ದಳು. ನಾಲ್ಕು ದಿನ-ಐದು ದಿನ, ಒಂದು ವಾರವಾಯ್ತು. ಆಮೇಲೆ ಮಾತ್ರ ಬಸ್ಸಿ ಚಡಪಡಿಸತೊಡಗಿದಳು. ಅಜ್ಜನ ಮನೆಗೂ ತನ್ನ ಗುಡಿಸಲಿಗೂ ಎಡತಾಕಹತ್ತಿದಳು. ‘ಗೌಡ ನಮ್ಮ ಕೇರೀ ಮರತೇ ಬಿಟ್ಟೇನ?’ ಎಂದು ವ್ಯಂಗ್ಯವಾಗಿ, ಸೂಚ್ಯವಾಗಿ, ಸಾಂಕೇತಿಕವಾಗಿ, ಧ್ವನಿ ಎತ್ತರಿಸಿ, ತಗ್ಗಿಸಿ- ಅನೇಕ ರೀತಿಯಲ್ಲಿ ಅಂದು, ಆಡಿ, ಕೆಮ್ಮಿ, ನೋಡಿದಳು. ಅಜ್ಜ ಒಂದೆರಡು ಸಲ ಮುಗುಳು ನಕ್ಕುದೆಷ್ಟೋ ಅಷ್ಟೆ. ಈ ಮಧ್ಯೆ ಊರಿನ ಅನೇಕ ಗಣ್ಯರು ತಂತಮ್ಮ ಧ್ವಜಗಳನ್ನು ಬಸ್ಸಿಯ ಗುಡಿಸಲ ಮೇಲೆ ಹಾರಾಡಿಸಲಿಕ್ಕೆ ಪ್ರಯತ್ನಿಸಿದಾಗ ಬಸ್ಸಿಯಿಂದ ತಟ್ಲೀಪೂಜೆಯಾಯಿತು. ಹೊಳೆಗೆ ಹೋಗಿ ಜಳಕಾ ಮಾಡಿ ಬಂದು- ‘ನಿನ್ನ ಉಸಾಬರಿ ನಮಗ ಸಾಕು ತಾಯಿ’ ಎಂದು ಮನಸಾರೆ ಅವಳ ದಿಕ್ಕಿಗೆ ಕೈಮುಗಿದು ಕೈ ತೊಳಕೊಂಡರು. ದಿನಗಳೆದಂತೆ ಬಸ್ಸಿ ಸುಡುಸುಡು ಸುಡಲಾರಂಭಿಸಿದಳು. ಜೋಗಾಡುವದನ್ನು ಬಿಟ್ಟಳು. ನೋಡಿದ ಗಂಡಗಂಡಸರೆಲ್ಲ ನಾಯಾಗಿ ಜೊಲ್ಲು ಸುರಿಸಬೇಕು- ಅಂಥಾ ಬಸ್ಸಿ ಪಾಪ ಸೊರಗಿ ಕಡ್ಡಿಯಾದಳು. ಅವಳ ಮನೆಗೆ ತಾನು ಹೋಗುವುದನ್ನೂ ಅಜ್ಜಿ ನಿಲ್ಲಿಸಿದಳು.

ಒಂದು ವಾರ ಕಳೆದಿತ್ತೋ, ಇಲ್ಲವೋ ಬಸ್ಸಿ ಕದ್ದುಕೊಟ್ಟ ಚುಮ್ಮರಿ ಕಾರದಾನಿಯನ್ನು ತಾನು ತಿಂದದ್ದೇ ನೆವವಾಗಿ ನಾಲೈದು ಸಲ ವಾಂತಿಯಾಯಿತು. ವೈದ್ಯರು ಬಂದು ಮದ್ದುಕೊಟ್ಟು ‘ಗೌಡ್ರೇ ಇದು. ಯಾರೋ ವಿಷಾ ಕೊಟ್ಟದ್ದು’- ಎಂದು ಹೇಳಿದಾಗ ಬಸ್ಸಿ ಕೊಟ್ಟ ಕಾರದಾನಿ ಚುಮ್ಮರಿ ತಿಂದದ್ದನ್ನು ತಂಗಿ ಹೇಳಿತು. ಅಜ್ಜ ಕಾದು ಕಾದು ವಿಠಲನಂತೇ ಕರ್‍ರಗಾದ. ಅಜ್ಜಿ ಬೆನ್ನು ಬಾರಿಸಿದ ಬಾರುಕೋಲನ್ನೇ ತೆಗೆದುಕೊಂಡು ಮಟಾ ಮಟಾ ಮಧ್ಯಾಹ್ನ- ಹೊರಟ. ಮಾರನೇ ದಿನವೇ ಊರಿನಲ್ಲೆಲ್ಲಾ ಗುಜು ಗುಜು- ಬಸ್ಸಿ ಉರುಲು ಹಾಕಿಕೊಂಡಳು. ಆ ದಿನ ನಿಜವಾಗಿಯೂ ತಬ್ಬಲಿಯಾದಂತಾಗಿ ಆ ಅಶಕ್ತತೆಯಲ್ಲೂ ತಾನು ‘ಬಸ್ಸಿ’ ಎಂದು ಧ್ವನಿ ತೆಗೆದು ಅತ್ತದ್ದೂ ತಾಯಿ ಸಿಟ್ಟಿನಿಂದ ಕೆನ್ನೆಗೆ ತಿವಿದು ‘ಆಕೇನ ನಿಮ್ಮವ್ವಾ ಆಳತಿ?’ ಎಂದು ಹೇಳಿದ್ದೂ ತನಗಿನ್ನೂ ನೆನಪು, ತನ್ನ ಅಜ್ಜ ಸತ್ತಾಗ ಸಹ ತನಗೆ ಆ ರೀತಿ ದುಃಖವಾಗಲಿಲ್ಲ.

ಇದನ್ನು ಓದಿದ್ದೀರಾ?: ಡಿ.ಆರ್. ನಾಗರಾಜ್ ಅವರ ಕತೆ | ನಗರದೇವಿಯ ದರ್ಶನ

ಶನಿವಾರ ಸತ್ತವಳು ಮಂಗಳವಾರ ಜೋಗತಿ ಅಬಾಯೀ ಮೈಯಲ್ಲಿ ಭೂತವಾಗಿ ಬಂದೇ ಬಿಟ್ಟಳು. ನಮ್ಮ ಮನೆಯ ಹೊಸಲಿಗೆ ತಲೆ ತಲೆ ಹೊಡೆದಳು. ಅಜ್ಜಿಯನ್ನು ಕೈ ಮಾಡಿ ಕರೆಕರೆದು, ನೆಲಕ್ಕೆ ಅಂಗೈ ತಿಕ್ಕುತ್ತ ‘ನನಗೆ ದಕ್ಕದ ಗೌಡ ನಿನಗೂ ದಕ್ಕದಿರಲೇ’ ಎಂದಳು. ‘ನೀ ಹಿಡಿದ ಚಿನ್ನೆಲ್ಲಾ ಮಣ್ಣಾಗ್ಲೇ’- ಎಂದಳು. ‘ನಿನ್ನ ವೋಸಂತರದಾನ ಗಂಡಸರೆಲ್ಲಾ- ನನ್ನಂಥಾ ಹೆಣ್ಣೆಂಬ ಬಾಲೇರ್‍ನ ಮುಟ್ಟಧಾಂಗಾಗ್ಲೇ’ ಎಂದಳು. ‘ಜೋಗಾಡ್ಲೆ’ ಎಂದಳು. ‘ಕೊಡಾ ಹೊರ್‍ಲೇ’ ಎಂದಳು. ಅಂದು, ಹಿಡಿಮಣ್ಣು ಮನೆಯ ಮೇಲೆ ತೂರಿ ಶಪಿಸಿದಳು-

ಶಪಿಸಿದಳು. ಅಜ್ಜನ ಬದಲು ಪಂಡರಾಪುರ ರುಕುಮಾಯಿಯಂಥ ಬಸ್ಸಿಯ ನೆರಳು ನಿಂತುಕೊಂಡಿತು. ಒಂದೆರಡು ಸಲ ಮೈ ತುಂಬಿದ ಜೋಗತಿ ಕೇಳಿದ್ದು ಈಗಲೂ ನೆನಪು: ಹೇಳೋ ನನ್ನ ರಾಜಾ, ನಿನಗ ನಾ ಇಸಾ ಕೊಟ್ಟಿದ್ದ ಖರೇ ಏನೊ?

*

‘ಖರೆ’ ಎಂದವನು ಎದ್ದು ಬಚ್ಚಲ ಮನೆಗೆ ಹೋಗಿ, ಬರುವಾಗ ಕನ್ನಡಿಯ ಎದುರು ನಿಂತ. ಕನ್ನಡಿಯೊಳಗಿನ ಹುಡುಗ ಹಸನಾದ ನಗೆ ನಗುತ್ತ ಕೆಳಗಿಳಿದು ಬಂದ. ಬಲೆ ಮುದ್ದು ಮುದ್ದಾಗಿದ್ದ. ತಾನೂ ಒಂದು ಕಾಲಕ್ಕೆ ಹೀಗೇ ಇದ್ದನೇನೋ ಅಥವಾ ಹೀಗೇ ಆಗಬೇಕೆಂದಿದ್ದೆನೇನೋ ಎನ್ನಿಸಿತು. ಆ ನಗಿ ಮುಖ, ಆ ಹಾಲುಗೆನ್ನೆ, ಎಸಳುಸಂಪಿಗೆ ಮೂಗು, ಬಟ್ಟಲಗಣ್ಣು, ಕುಡಿಹುಬ್ಬು, ಆ ಕಥೆ, ಆ ಹರೆ- ರಂಭೆಯರೋ, ನಟಿಯರೋ- ಚೆಂದುಳ್ಳ ಕಾಲೇಜು ಹುಡಿಗಿಯರೋ ಅವರನ್ನೆಲ್ಲ ಇವನ ಮೇಲೆ ನಿವಾಳಿಸಿ ಚೆಲ್ಲಬೇಕು. ನೋಡಿದೊಡನೆ ರಾಮುವಿಗೆ ಬಹಳ ಆನಂದವಾಯಿತು. ಇವನ ಜೊತೆಗೆ ಮಾತಾಡಲೇಬೇಕೆನ್ನಿಸಿತು. ಹುಡುಗ ಒಯ್ಯಾರದಿಂದ ಬಂದು ರಾಮುವಿನ ಹಾಸಿಗೆಯ ಮೇಲೇ ಕುಳಿತ. ಇವನೂ ಹೋಗಿ ಅವನ ಪಕ್ಕದಲ್ಲೇ ಕುಳಿತ. ಹುಡುಗ ಬಹಳ ದಿನದ ಸಲಿಗೆಯಿಂದೆಂಬಂತೆ ಕೇಳಿದ.

‘ಏನ್‌ಸಾರ್? ಏನ್ನೀವು ಹೀಗೆ ಹೇಳೋದು? ಬಸ್ಸಿ ವಿಷಾ ಕೊಟ್ಟದ್ದು ನಿಜವಾ?’

(ಎಲಾ ಎಲಾ ಎಷ್ಟು ಮುದ್ದು ಮುದ್ದಾಗಿ ಬಾಯಿ ತೆರೀತಾನೆ ಪೋರ!) ವಿಷಾ ಕೊಟ್ಟಿದ್ದ ಖರೇ ಅಂದೆ. ಅಲತಗೀ ಕಾಶೀ ಹತ್ರ ಹೋದಾಗ ಏನಾತು?’

‘ಆಯ್ತೇನು ಹೇಳಿ?’

‘ಏನಾತ ಗೊತ್ತಿಲ್ಲ ನಿನಗ? ಪಡಕೊಳ್ಳಾಕ ಹ್ವಾದಾಂವ ಕಳಕೊಂಡ ಬಂದ’

‘ಆಹಾ! ನನಗೊತ್ತಿಲ್ಲಾಂತ ತಿಳಿದಿರಾ? ನನಗೆಲ್ಲಾ ಗೊತ್ತು. ನೀವು ನನ್ನಿಂದೇನೋ ಮುಚ್ಚಿಡತಾ ಇದೀರ. ಅಥವಾ ನನ್ನ ಜೊತೆ ಚೇಷ್ಟೆ ಮಾಡ್ತಾ ಇದೀರ’

‘ಇಂವಗ ಗಿಣೀ ಏನಾರ ಮಾತ ಕಲಿಸಿತೇನೂ ಅಂತೀನಿ. ಅಲ್ಲೊ ಹುಡುಗಾ, ನಿನ್ನ ಜೋಡಿ ನಗಚೇರಿಕಿ ಯಾಕ ಮಾಡ್ಲೊ? ಆದದ್ದ ಆಧಾಂಗ ಹೇಳೋ ಪಾ’

‘ಆದದ್ದೇ ಬೇರೆ. ನೀವ್ಹೇಳೋದೇ ಬೇರೆ.’

ಇದನ್ನು ಓದಿದ್ದೀರಾ?: ಗೀತಾ ನಾಗಭೂಷಣ ಅವರ ಕತೆ | ಕಿಚ್ಚಿಲ್ಲದ ಬೇಗೆಯಲ್ಲಿ ಬೆಂದೆನವ್ವಾ…

(ಒಮ್ಮೆರೆ ಇವನ್ಹಾಂಗ ಸುದ್ದ, ಸುಸೂತ್ರ ಮಾತಾಡಿದ್ನೆ? ಛಿ) ಛೇ ಹೋಗೊ ನಿನ ಮಂಜಾಳ ಹೋಗ್ಲಿ. ಆತಪಾ ನಿನಗ ನನಕೆಂತ ಹೆಚ್ಚ ಗೊತ್ತಿದ್ದವರ್‍ಹಾಂಗ ಕಾಣತತಿ ಹೇಳ್ಹಂಗಾರ ನೋಡೂಣು, ಏನೇನಾತು?

‘ಹೇಳಲಾ?’

‘ಹೂಂ’

ಆ ಹುಡುಗನ ತುಟಿಯ ಚಲನವಲನಗಳನ್ನೇ ಜೊಲ್ಲು ಸುರಿಸಿ ನೋಡುತ್ತ ಹೂಂಗುಟ್ಟತೊಡಗಿದ.

‘ಒಂದಾನೊಂದು ಕಾಲ್ದಲ್ಲಿ ಒಂದಾನೊಂದು ಊರ್‍ನಲ್ಲಿ ಒಬ್ಬ ರಾಜ ಇದ್ದ’

‘ರಾಜನ ಆ ಠೀವಿ, ಆ ಗಾಂಭೀರ್ಯ, ಆ ಪಾಂಡಿತ್ಯ ಎಲ್ಲಾ ಸೇರಿ ಪ್ರಜೆಗಳೆಲ್ಲಾ ಅವನನ್ನ ಬಹುವಾಗಿ ಗೌರವಿಸುತ್ತಾ ಇದ್ದರು. ರಾಜ ಕೂತಲ್ಲಿ ಓಲಗ ಸೇರತಿತ್ತು. ಹೀಗಿರೋವಾಗ ಒಂದು ವರ್ಷ ಅರಸರು ಒಂದು ಹೊಸಾ ಕಿರೀಟ ಮಾಡಿಸಿದರು. ಅದು ತುಂಬಾ ಚೆನ್ನಾಗಿತ್ತು. ಅದರಲ್ಲಿ ಒಂದು ಎಳ್ಳುಕಾಳು ಮುಳ್ಳು ಮೊನೆಯಷ್ಟು ಕೂಡ ದೋಷ ಇರಲಿಲ್ಲ. ಅಷ್ಟೇ ಅಲ್ಲಾ; ಇದರೊಳಗೆ ಯಾರಾದರೂ ಎಳ್ಳಕಾಳಿನಷ್ಟ ಕುಂದ ತೋರಿಸಿದರೆ ಅವರಿಗೆ ಉಡೀತುಂಬ ಬಹುಮಾನ ಕೊಡತೇನೆ ಅಂತ ಅರಸ ಡಂಗರಾ ಸಾರಿದ. ಉಡಿತುಂಬ ಬಹುಮಾನದ ಆಸೆಯಿಂದ ಅನೇಕ ಜನ ಬಂದರು; ಕಿರೀಟ ನೋಡಿದರು. ಇದ ಭಾಳ ಅದ್ಭುತದಪಾ ಅಂತ ಹೇಳಿ ಹೇಳಿ ವಾಪಸ್ಸ್ ಹೋದರು, ಯಾರಿಗೇನೂ ದೋಷ ತಗೀಲಿಕ್ಕಾಗಲಿಲ್ಲ. ಆವಾಗ ಒಬ್ಬ ಸನ್ಯಾಸಿ ಬಂದ. ನಾನೂ ಆ ಕಿರೀಟ ನೋಡ್ತೇನೆ ಅಂದ. ಸೇವಕರು ಪಾಪ ಸನ್ಯಾಸಿಗೂ ಬಹುಮಾನದ ಆಸೆ ಹುಟ್ಟಿತಲ್ಲಾ ಅಂತ ಅವನನ್ನೂ ಅರಮನೆಗೆ ಕರೆದುಕೊಂಡು ಹೋದರು. ಅರಸನಿಗೆ ಭೆಟ್ಟಿ ಮಾಡಿಸಿದರು. ಸರಿ. ಅರಸ ಅವನಿಗೂ ಕಿರೀಟ ತೋರಿಸಿದ. ಸನ್ಯಾಸಿ ಆ ಈ ಕಡೆ ಕಿರೀಟ ಹೊರಳಿಸಿ ನೋಡಿದ. ನೋಡಿ ಏನ್ಹೇಳಿದಾ? ಅರಸರೇ ಕಿರೀಟ ಎಲ್ಲಾ ಸರಿ ಆಗ್ಯದ, ಆದರ ಇದರ ನಡುವ ಒಂದ ಮೂರ ಮೂಲಿ ಕೆಂಪ ರತ್ನದ ಹರಳ ಸೇರಿಸಿದ್ದರ ಶೋಭಾ ಹೆಚ್ಚುತಿತ್ತು, ಅಂದ.

‘ಹೂಂ’

‘ಕೂಡಲೆ ಅರಸ ಅರಮನೆಯೊಳಗಿನ ಅಷ್ಟೂ ರತ್ನಾ ತರಿಸಿ ನೋಡಿದಾ. ಎಲ್ಲಾ ಐಮೂಲಿ ಆರಮೂಲಿ ರತ್ನ- ಅದರೊಳಗ ಮೂರಮೂಲಿ ರತ್ನ ಒಂದೂ ಇರಲಿಲ್ಲ. ಹಾಂಗಾದರ ಗುರುಗಳೂ ಮೂರಮೂಲಿ ರತ್ನ ಎಲ್ಲಿ ಆತಿ? ಸನ್ಯಾಸಿ ಹೇಳಿದ- ‘ಹಿಂಗ ಗುಡ್ಡದ ಮ್ಯಾಲ ಗುಡ್ಡ ಏಳಗುಡ್ಡಾ ದಾಟಿದನಂತರ ಎಲ್ಲವ್ವನ ಗುಡ್ಡಾ ಆ ಗುಡ್ಡದ ನೆತ್ತೀಮ್ಯಾಲೆ ಒಬ್ಬ ಜೋಗತಿ, ಆಕೀ ಹೆಸರ ಕಾಶಿ. ಆ ಕಾಶಿ. ಆ ಕಾಶೀ ಹತ್ರ ಒಂದು ಮುರ್‍ಮೂಲಿ ರತ್ನ ಅದ. ನೀವಾಕೀನ ಚೂರೀಲೆ ಇರದ ಕೊಲ್ಲಾಕ ಹೋದಾಗ ನಿಮಗ ಮಾವಾ ಅಂತಾಳ, ಆಕೀ ಬಾಯ್ಲೆ ನೀವ್ ಮಾವಾ ಅನ್ನಿಸಿಕೊಂಡ್ರ- ಹೀಂಗ ಬಾಯ್ಲೆ ಮಾವಾ ಅಂದ, ಕೈಲೆ ರತ್ನಾ ಕೊಡತಾಳ’ ಅಂದರು.

ಇದನ್ನು ಓದಿದ್ದೀರಾ?: ಸೇಡಿಯಾಪು ಕೃಷ್ಣಭಟ್ಟರ ಕತೆ | ನಾಗರ ಬೆತ್ತ

‘ಹೂಂ’

‘ಆಯ್ತು, ಹಾಗಾದರೆ ಹೊರಟೆ ಅಂತಂದು ರಾಜರು ಕುದುರೀ ಏರಿಹೊರಟರು. ಒಂದಾಯ್ತು ಎರಡಾಯ್ತು ಏಳಗುಡ್ಡಾ ಇಳಿದನಂತರ ಎಲ್ಲವ್ವನ ಗುಡ್ಡ ಬಂತು, ನೆತ್ತೀಮೇಲೆ ಹೋದರು. ಜೋಗತಿ ಕಾಶಿ ಕೆಂಪ ಉಗುಳಿ ಕೆಂಪ ನಗತಾ ಕೂತಿದ್ಲು, ‘ಹಾಂಗಾದರ ಕಾಶೀ, ಹಿಂತಾ ಮಾತ ಹೀಂಗ, ನೀ ನಮಗ ಮಾವಾ ಅನ್ನಾಕಬೇಕು.’ ‘ಏನ್ರಿ ರಾಜರ ತಾವ್ ಯಾರು? ನಾ ಯಾರು? ಮನ್ಯಾಗ ಶೇಕುಂತಲಾನಂಥಾ ಹೆಂತೀ ಬಿಟ್ಟ ಇದೇನ ಆಸೆ ಮಾಡಿದಿರಿ?’ ‘ಏನ ಇದಿಲ್ಲಾ ಅದಿಲ್ಲಾ ಜೀಂವ ಬೇಕಾದರ ನೀ ಅನ್ನಾಕ ಬೇಕೂ.’ ಅರಸರು ಗಟ್ಟಿ ಮುಟ್ಟಿ ಕೂತೇ ಬಿಟ್ರು. ಕಾಶಿ ಅವರ ಮನಸ್ಸ ಪರಿವರ್ತನ ಮಾಡಲಿಕ್ಕೆ ಎಷ್ಟೇ ಪ್ರಯತ್ನ ಮಾಡಿದರೂ ಇವರೇನ ಹಿಂದ ಹೆಜ್ಜೆ ಇಡಲಿಲ್ಲಾ. ಕಡೀಕಂದ್ರ ಕಾಶಿ ಅಂದ್ಲು: ಹಾಂಗಾದರ ಅರಸರ ನಾ ಮಣಕ ಆಗಿ ಓಡತೇನು. ನೀವ್ ಕ್ವಾಣಾಗಿ ಬೆನ್ನ ಹತ್ತಿ ನನ್ನ ಮುಟ್ಟರಿ. ಮುಟ್ಟಿದರ ನಾನಾದರೂ ನಿಮಗ ಮಾವಾ ಅಂತೇನು’ ಅಂದ್ಲು. ಆಗಲೆಂದರಿವರೂ, ಆಕಿ ಮಣಕಾಗಿ ಓಡಿದಳು ಮುಂದ ಮುಂದ; ಅರಸರು ಕ್ವಾಣಾಗಿ ಬೆನ್ನ ಹತ್ತಿದರು. ಹಿಂದ ಹಿಂದ. ಓಡಿ ಓಡಿ ಮಣಕ ಒಡಕ ಹೊಳೆ ಹಾರಿತು. ಕ್ವಾಣ ಕೂಡ ಹೊಳೆ ಹಾರಿತು. ಕೊನೆಗೆ ಕಾಶಿ ಮಾವಾ ಅಂದ್ಲು, ಇವರಿಗೆ ರತ್ನಾ ಕೊಟ್ಟು…’

‘ಏ ತಡೀ ಇಲ್ಲಿ, ನೋಡಾಕ ಹೆಂತಾ ಚೆಂದದಿ, ಯಾಕ ಸುಳ್ಳ ಹೇಳತಿಯೊ?’

‘ಸುಳ್ಳೆನಿದೆ ಹೇಳಿ ಇದರಲ್ಲಿ?’

‘ಕ್ವಾಣಾಗಿ ಅರಸ ಓಡುವಾಗ ತಲೀಮ್ಯಾಲ ಕೊಂಬ ಮೂಡ್ಯಾವಿಲ್ಲೊ ಅಂತ ಬರಿ ತಲಿ ಹಿಡಹಿಡಕೊಂಡ ನೋಡತಿರಲಿಲ್ಲಾ?’

‘ಹೌದು’

‘ಗುರತಿಗಿ ನಿಮ್ಮ ಕೈಯಾನ ಸಿಕ್ಕೇದ ಉಂಗರಾ ಕೊಡಾಕ ಬೇಕ್ರಿ ರಾಜರ ಅಂತ ಆಕಿ ಅಂದು ಇಸಗೊಳ್ಲಿಲ್ಲಾ?’

‘ಹೌದು’

‘ಮತ್ತೆನ ಹೌದಂತೀನ ಮಳ್ಳ? ರತ್ನಾ ತರಾಕ ಹ್ವಾದಾಂವಾ ರತ್ನಾ ಕಳಕೊಂಬಂಧಾಂಗಾತಿಲ್ಲೋ? ಅರಸಾಗಿ ಹ್ವಾದಾಂವಾ ಬಿಕನೇಸ್ಯಾಗಿ ತಿರುಗಿ ಬಂದಿಲ್ಲೋ?’

‘ಏನ್ರಿ, ಏನ್ಹೇಳ್ತೀರಾ ಅಂತೇನೆ. ರಾಜ ಬಸ್ಸಿ ಹತ್ರ ರತ್ನಾ ಕೇಳಿದ್ದ ಸ್ವತಃ ನಾನೇ . ಕಿವಿಯಾರೆ ಕೇಳಿದ್ದೇನೆ’

‘ನಿನ್ನಾಜ್ಜನ, ಚೆಂದ ಮಂದೆಲ್ಲಾ ಹೀಂಗ ದಡ್ಡರ ಇರತಾರೇನಂತೇನ ಅಲ್ಲೊ ನಿಮ್ಮ ರಾಣಿ ಹಂತ್ಯಾಕೈತಿ ಹೋಗ್ರಿ ಅನಲಿಲ್ಲಾ ಕಾರೆ?’

‘ಅರೆ ಹೌದಾ?’

‘ಮತ್ತೆ ಓಡಿ ಓಡಿ ರಾಣಿ ಹಂತ್ಯಾಕ ಹ್ವಾದರ ಆರ್ಯಪುತ್ರಾ ಬೆರಳುಂಗುರವೆಲ್ಲಿ? ಅಂತ ಅವಳು, ತಗಿಯೇ ನಿನ. ರತ್ನೆಲ್ಲೇತಿ ತಾ ಅಂತ ಇಂವ. ಆಕೆ ಇವನ ಜೇಬಿನ ತುಂಬೆಲ್ಲಾ ಉಂಗರಾ ಹುಡಕೋದು, ಅರಸ ಆಕಿ ಮೈಯಾಗೆಲ್ಲಾ ರತ್ನಾ ಹುಡಕೋದು- ಈ ಹುಡಿಕ್ಯಾಟದಾಗ ಏಳೆಂಟ ವರ್ಷ ಹಿಂಗ ಕಳದ ಹ್ವಾದುವ.’

ಇದನ್ನು ಓದಿದ್ದೀರಾ?: ದ.ರಾ. ಬೇಂದ್ರೆ ಕತೆ | ಮಗುವಿನ ಕರೆ

‘ಆದರೂ ನಾ ಹೇಳತೇನೆ ಪಡೆದ ಅನುಭವವೆ ರತ್ನವಲ್ಲವೆ? ಇದ್ದಕ್ಕಿದ್ದಂತೆ ಅನಿರೀಕ್ಷಿತವಾಗಿ- ಕತ್ತಲೆಯಲ್ಲಿ ಮಕ್ಕಳು ಹೆದರಿ ಎತ್ತರದ ಧ್ವನಿಯಲ್ಲಿ ಹಾಡುವಂತೆ ರಾಮೂನ ಧ್ವನಿ ಏರಿ ಬಿಸಿಯಾಯಿತು.

‘ಅದನೇನ ಸುಡತೀನ? ಆದ ನೋವಿಗೆಲ್ಲಾ ಅನುಭವದ ರತ್ನ ಪಾ ಇದು ಅಂತ ಎಷ್ಟ ದಿನ ಕುಸೀ ಪಡಾಂವ? ಅದನ್ಹೇಳ ನನಗ’

‘ಜೀವಂವಾಗಿದೇನೆ ಅಂತ ನಿಮಗೆ ಗೊತ್ತಾಗೋದು ಆಗಲೇ ಅಲ್ಲವಾ?’

‘ಛಿನಿನ ಬೀಳಿ ಕಾಗದ ಮ್ಯಾಗ ಹೆಸರ ಬರೆಯೋದ ಬಿಟ್ಟ ನಿನಗಿನ್ನೊಂದ ಗೊತ್ತ ಇಲ್ಲ.’

ಅಷ್ಟರಲ್ಲಿ ದಿಗ್ಗನೆ ಶಾರಿ ಒಳಬದಳು. ಒಳಬಂದವಳು ಅವಸರವಸರದಿಂದ ‘ರಾಮೂ ನಿನ್ನ ಚೂರಿ ತಕ್ಕೊ’ ಎಂದಳು. ಅವಳ ಕೈ ಎಳೆದು ಕೂಡ್ರಿಸಿಕೊಳ್ಳಲು ಪ್ರಯತ್ನಿಸಿದ.

‘ಬಾರೆ ಏನವಸರ?’

‘ಅಯ್ಯಯ್ಯೋ ನನ್ನ ಯಜಮಾನರು ಬರೋ ಹೊತ್ತಾಯ್ತು ಬೇಗ ತಕ್ಕೊ ಅಂದರ’

‘ಕೂತ್ಕೊ ಅಂದರ’

‘ಅಬ್ಬಬ್ಬ, ನಿನಗೆ ಟೈಮುಗೀಮ ಏನೇನೂ ಇಲ್ಲ. ನೀನು ಅಂದಿಗೂ ಅಷ್ಟೆ, ಇಂದಿಗೂ ಅಷ್ಟೆ. ಹೊತ್ತಾಯ್ತು ಅಂದರೆ’ ಎಂದು ಉತ್ತರಕ್ಕೂ ಕಾಯದೆ ಚೂರಿ ಕೊಟ್ಟು ಹೊರಟು ಹೋದಳು. ಇನ್ನೊಂದೆರಡು ನಿಮಿಷ ಸಿಕ್ಕಿದರೆ ಅವಳ ಕೆನ್ನೆಗೆರಡು ಏಟು ಬಿಗಿಯುತ್ತಿದ್ದ. ಅವನು ಹಾಗೆ ಸಿಟ್ಟಿನಲ್ಲಿರುವಾಗಲೇ ಹುಡುಗ ಆಶ್ಚರ್ಯದಿಂದ ಮುಗ್ಧನೇತ್ರನಾಗಿ ಕೇಳಿದ-

‘ಏನೂಂದ್ರೆ, ನೀವು ಚೂರಿ ಅವಳ ಕೈಲಿ ಕೊಟ್ಟು ಇಲ್ಲಿ ಬಂದು ಕೂತಿದ್ರಾ?’

ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ

‘ಇನ್ನೇನ್ಮಾಡ್ಲಿ? ಆಕೀಗಿ ನಾ ಬ್ಯಾಡ; ನನ್ನ ಚೂರಿ ಮಾತ್ರ ಬೇಕು.’ ಈ ಮಾತು ಹೇಳಹೇಳುತ್ತಿರುವಂತೆ ಕಲ್ಲಾಗಿದ್ದ ರಾಮೂ ಕರಗಿ ನೀರಾಗಿ ಹರಿದ. ಅನೇಕರ ಕರುಣೆಗೆ ಪಾತ್ರನಾದ ಅಸಹಾಯಕ, ಅನಾಥ ಶಿಶುವಾದ. ಆ ಪ್ರಜ್ಞೆ ಬಂದೊಡನೆ ಎದ್ದು ಹೋಗಿ ಗ್ಲಾಸಿಗೆ ವ್ಹಿಸ್ಕಿ ಬಗ್ಗಿಸಿಕೊಂಡು ಗಟಗಟಾ ಕುಡಿದ. ಬಂದು ಹಾಸಿಗೆಯಲ್ಲಿ ಹತ್ತು ನಿಮಿಷ ಸುಮ್ಮನೆ ಕುಳಿತ. ತಕ್ಷಣವೇ ಹುಡುಗನ ಅಸ್ತಿತ್ವ ಗೊತ್ತಾಗಿ ನಿನಗೂ ಬೇಕೆ- ಎಂದು ಕೈಸನ್ನೆಯಿಂದಲೇ ಕೇಳಿದ.

‘ನನಗೆ ಚೂರಿ ಬೇಕು’

‘ನಿನಗೂ ಚೂರೀನ ಬೇಕಾತ?’

‘ನನಗೆ ಚೂರಿಯೂ ಬೇಕು, ನೀವೂ ಬೇಕು’ ಎನ್ನುತ್ತ ಇವನ ಕೈಲಿದ್ದ ಚೂರಿ ತಕ್ಕೊಂಡು ಆಡತೊಡಗಿದ. ಅವನನ್ನೇ ನೋಡುತ್ತ ರಾಮೂ ಗಂಭೀರವಾದ ಧ್ವನಿಯಲ್ಲಿ ಕೇಳಿದ,

‘ಏನೋ ನಿನ್ಹೆಸರು?’

‘ರಾಮಚಂದ್ರ’

‘ಏನಂದಿ? ರಾಮಚಂದ್ರ? ನನ್ಹೆಸರೇ ನಿನಗ್ಹೆಂಗ ಇರತೈತೊ? ನಗಚೇರಿಕಿ ಮಾಡ್ತೀಯೇನ್?’

‘ನಿಜವಾಗ್ಯೂ ನನ್ಹೆಸರು ರಾಮಚಂದ್ರ’

ಈ ಮಾತನ್ನು ಕೇಳಿದ ಮೇಲಂತೂ ಶಾರಿಯ ಮೇಲಿನ ಕೋಪವೆಲ್ಲ ಈ ಹುಡುಗನ ಮೇಲೆ ಬರಲಾರಂಭಿಸಿತು. ನಿಶೆ ಬೇರೆ ನೆತ್ತಿಗೇರಿತ್ತು. ಯಾವುದಕ್ಕೂ ಅವನೀಗ ಜಗಳ ತೆಗೆಯಲು ಅಥವಾ ಪ್ರಸಂಗ ಬಂದರೆ ಕಡದಾಡಲು ಸಿದ್ದನಿದ್ದ. ಅಲ್ಲದೆ ಈ ಹುಡುಗ ಚೂರಿಯನ್ನಾಡಿಸುತ್ತಿದ್ದಂತೆ ಸುಳ್ಳು ಹೇಳಿ ತನ್ನನ್ನೂ ಆಡಿಸುತಿದ್ದಾನೆಂದು ಹೊಳೆಯಿತು. ಇಂಥ ಸಂದರ್ಭದಲ್ಲಿ ಹೂಂ ಎನ್ನುವವರಿಲ್ಲದಿದ್ದರೆ, ಜಗಳಾಡುವವರಿಲ್ಲದಿದ್ದರೆ ಅಳುತ್ತಿದ್ದ ಅಥವಾ ಜೋಕು ಹೇಳಿ ತಂತಾನೆ ನಗುತ್ತಿದ್ದ. ಅರೆಗಣ್ಣ ತುದಿಗೆ ರಾಮಚಂದ್ರನೆಂಬಾತನ ಚಂದುಳ್ಳ ಮೈ ಬೇರೆ ಮಿರುಗುತ್ತಿತ್ತು.

ಇದನ್ನು ಓದಿದ್ದೀರಾ?: ಅಮರೇಶ ನುಗಡೋಣಿ ಅವರ ಕತೆ | ತಮಂಧದ ಕೇಡು

‘ಯಾರ್‍ನಿನ್ನ ಹಡೆದೋರು?’

‘ತಾಯಿ, ತಂದೆಗೆ’

ಗೀಸಿ ಹಾಕಿದರೆ ಗೇಣು ಕೂಡ ಆಗದ ಈ ಮಗನ ಒಗರೆಷ್ಟು? ತಾನೇನು ಕಡಿಮೆ? ಎಂದು ಧೇನಿಸಿ ಅವನಿಗಿಂತ ಎತ್ತರದ ಧ್ವನಿಯಲ್ಲಿ ಮೈತುಂಬಿದವನಂತೆ ಉತ್ತರಿಸಲಾರಂಭಿಸಿದ.

‘ನನ್ನನ್ನ ಬಸ್ಸಿ ನಮ್ಮಜ್ಜನಿಗೆ ಹಡದ್ದು.’

‘ನನ್ತಾಯಿ ನನಗೆ ಕನಸು ಕೊಟ್ಟರು’

‘ಮಡಸೇ ನನ್ನವ್ವ ನನಗ ದುಃಖಾ ಕೊಟ್ಲು’

‘ನನ್ತಾಯಿ ನನಗೆ ಭವಿಷ್ಯ ಕೊಟ್ಟರು’

‘ನನ್ನವ್ವ ನನಗೆ ಭೂತಾ ಕೊಟ್ಲು’

‘ನನ್ತಾಯಿ ನನಗೆ ಮೈಕೊಟ್ಟರು’

‘ನನ್ನವ್ವ ನನಗ ಚೂರಿ ಕೊಟ್ಲು’

‘ನನ್ತಾಯಿ ನನಗೆ ಆತ್ಮ ಕೊಟ್ಟರು’

ಇದನ್ನು ಓದಿದ್ದೀರಾ?: ಉಮಾ ರಾವ್ ಅವರ ಕತೆ | ಅಗಸ್ತ್ಯ

ಏನು ಹೇಳಬೇಕೆಂಬುದೇ ಹೊಳೆಯದಾಯಿತು. ಸೋತೆ ಎನ್ನಿಸಿತು. ಈ ಪೋರನಿಂದ ಸೋಲೆ? ಸಿಟ್ಟು ಸೇಡುಗಳೆಲ್ಲ ಒಟ್ಟಾಗಿ ಕುಂತಲ್ಲಿಯೇ ಮೂರು ಲೋಕ ನೋಡಿ ನುಂಗುವಂತೆ ಅಕರಾಳ ವಿಕರಾಳ ಕಣ್ಣು ಕಿಸಿದು ಆ ಹುಡುಗನ ಕೈಯಲ್ಲಿನ ಚೂರಿ ಕಸಿದುಕೊಂಡು ಅವನನ್ನು ಬಿಗಿದಪ್ಪಿ ಚೂರಿಯಿಂದ ಇರಿಯಲಾರಂಭಿಸಿದ. ರಾಮಚಂದ್ರ ಸತ್ತೆನೋ ಎಂದು ಚೀರುತ್ತಿದ್ದರೂ ಬಿಡದೆ ತೊಡೆಗೆ, ಎದೆಗೆ, ಕೆನ್ನೆಗೆ, ತುಟಿಗೆ, ಕಣ್ಣಿಗೆ- ನೆತ್ತರು ಚಿಲ್ಲೆಂದು ಸಿಡಿದು ಕೋಣೆಯ ತುಂಬ- ಅಯ್ಯೋಪಾಪ ಸಿಡಿದು, ಮಡುನಿಂತ ನೆತ್ತರಿನಲ್ಲಿ ಪ್ರತಿಬಿಂಬ ಕಂಡು ದಿಟ್ಟಿಸಿ ನೋಡಿದ- ಬಸ್ಸಿ ಟೊಂಕದ ಮೇಲೆ ಕೈ ಊರಿಕೊಂಡು ರುಕುಮಾಯಿಯಂತೆ ನಿಂತಿದ್ದಳು.

Chandrashekara Kambara

ಚಂದ್ರಶೇಖರ ಕಂಬಾರ(1937): ಪ್ರಮುಖ ಕವಿ, ಕತೆಗಾರ, ಕಾದಂಬರಿಕಾರ, ನಾಟಕಕಾರ, ಜಾನಪದ ತಜ್ಞ ಮತ್ತು ಚಲನಚಿತ್ರ ನಿರ್ದೇಶಕರು. ಜನವರಿ 2, 1937ರಲ್ಲಿ ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲಿ ಜನನ. ಗೋಕಾಕನಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ. ಬೆಳಗಾವಿಯಲ್ಲಿ ಬಿಎ ಪದವಿ. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂಎ ಮತ್ತು ಪಿಎಚ್‌.ಡಿ ಪದವಿ ಪಡೆದಿದ್ದಾರೆ. ಮೊದಲಿಗೆ ಸಾಗರದ ಲಾಲ್ ಬಹದ್ದೂರ್ ಶಾಸ್ತ್ರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿದರು. ಅಮೆರಿಕದ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಸ್ವಲ್ಪಕಾಲ ಬೋಧಕರಾಗಿ ಕಾರ್ಯನಿರ್ವಹಿಸಿದರು. ಬೆಂಗಳೂರಿನ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ನಂತರ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸ್ಥಾಪಕ ಕುಲಪತಿಯಾದರು. ಕನ್ನಡ ವಿಶ್ವವಿದ್ಯಾಲಯ ಕಟ್ಟುವಲ್ಲಿ ಅವರು ತೋರಿದ ಬುದ್ಧಿವಂತಿಕೆ ಮತ್ತು ಬದ್ಧತೆ ವಿಶಿಷ್ಟವಾದುದು. ಪ್ರಕಟಿತ ಕೃತಿಗಳು: ಮುಗುಳು, ಹೇಳತೇನ ಕೇಳ, ತಕರಾರಿನವರು, ಸಾವಿರಾರು ನೆರಳು, ಬೆಳ್ಳಿ ಮೀನು, ಅಕ್ಕಕ್ಕು ಹಾಡುಗಳೆ, ಈ ವರೆಗಿನ ಹೇಳತೇನ ಕೇಳ, ಹಂಪಿಯ ಕಲ್ಲುಗಳು, ಎಲ್ಲಿದೆ ಶಿವಾಪುರ(ಕವನ ಸಂಕಲನಗಳು); ಬೆಂಬತ್ತಿದ ಕಣ್ಣು, ನಾರ್ಸಿಸ್ಸ್, ಋಷ್ಯಶೃಂಗ, ಜೋಕುಮಾರಸ್ವಾಮಿ, ಚಾಲೇಶ, ಸಂಗ್ಯಾಬಾಳ್ಯಾ ಅನ್ಬೇಕೊ ನಾಡೊಳಗ, ಕಿಟ್ಟಿಯ ಕಥೆ, ಜೈಸಿದ್ದನಾಯಕ, ಆಲಿಬಾಬ, ಕಾಡುಕುದುರೆ, ನಾಯಿಕಥೆ, ಖಾರೋಖಾರ, ಮತಾಂತರ, ಹರಕೆಯ ಕುರಿ, ಸಾಂಬಶಿವ ಪ್ರಹಸನ, ಸಿರಿಸಂಪಿಗೆ, ಮಹಾಮಾಯಿ(ನಾಟಕಗಳು); ಅಣ್ಣತಂಗಿ, ಕರಿಮಾಯಿ, ಜಿ.ಕೆ.ಮಾಸ್ತರ್ ಪ್ರಣಯ ಪ್ರಸಂಗ, ಸಿಂಗಾರೆವ್ವ ಮತ್ತು ಅರಮನೆ, ಶಿಖರ ಸೂರ್ಯ, ಶಿವನ ಡಂಗುರ(ಕಾದಂಬರಿಗಳು); ಚಕೋರಿ(ಮಹಾಕಾವ್ಯ); 17 ಸಂಶೋಧನಾ ಗ್ರಂಥಗಳನ್ನು ರಚಿಸಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಸ್ಥಾಪಕ ಕುಲಪತಿ, ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕ, ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ, ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಮತ್ತು ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಚಿಕಾಗೊ, ನ್ಯೂಯಾರ್ಕ್, ಬರ್ಲಿನ್, ಮಾಸ್ಕೋ, ಜಪಾನ್ ವಿಶ್ವವಿದ್ಯಾನಿಲಯಗಳಲ್ಲಿ ಜಾನಪದ ಮತ್ತು ರಂಗಭೂಮಿ ಕುರಿತ ಉಪನ್ಯಾಸಗಳನ್ನು ನೀಡಿದ್ದಾರೆ. ಪ್ರತಿಷ್ಠಿತ ಜ್ಞಾನಪೀಠ, ಪದ್ಮಭೂಷಣ, ಪದ್ಮಶ್ರೀ, ನಾಡೋಜ, ಸಂತ ಕಬೀರ್, ಕಾಳಿದಾಸ್ ಸಮ್ಮಾನ್, ಪಂಪ ಪುರಸ್ಕಾರಗಳಲ್ಲದೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬರಗೂರು ರಾಮಚಂದ್ರಪ್ಪ ಅವರ ಕತೆ | ಕ್ಷಾಮ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ರೇಖಾರಾಣಿ ಅವರ ಕತೆ | ಪ್ರೀತಿಯಲ್ಲಿ ಕ್ಷಮೆಯಿರಲಿ…

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ವಿ.ಕೃ. ಗೋಕಾಕ್ ಅವರ ಕತೆ | ಹತಭಾಗ್ಯನ ಭಾಗ್ಯ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಕಾಳೇಗೌಡ ನಾಗವಾರ ಅವರ ಕತೆ | ಕೂಡಿಕೆ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...