ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟ ತಯಾರಿಸಿ ವಿತರಿಸುತ್ತಿರುವ ಅಕ್ಷರ ದಾಸೋಹ ನೌಕರರ ಉದ್ಯೋಗಕ್ಕೆ ಕುತ್ತು ತರುವ ಕ್ಲಸ್ಟರ್ ಕಿಚನ್ ಸೆಂಟರ್ ಯೋಜನೆಯನ್ನು ಕೈಬಿಡುವಂತೆ ಆಗ್ರಹಿಸಿ, ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ನೇತೃತ್ವದಲ್ಲಿ ನವೆಂಬರ್ 25ರಿಂದ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಅನಿರ್ದಿಷ್ಟಾವಧಿ ಹೋರಾಟ ಹಮ್ಮಿಕೊಳ್ಳಲಾಗಿದೆ.
ಅಕ್ಷರ ದಾಸೋಹ ಯೋಜನೆ ಆರಂಭವಾದಾಗಿನಿಂದ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಅಡುಗೆ ನೌಕರರು ಮಕ್ಕಳಿಗೆ ಬಿಸಿಯೂಟ ತಯಾರಿಸಿ ವಿತರಿಸುತ್ತಿದ್ದಾರೆ. ಆದರೆ, ಶಿಕ್ಷಕರ ಮೇಲಿನ ಕೆಲಸದ ಹೊರೆ ಕಡಿಮೆ ಮಾಡುವ ಉದ್ದೇಶದಿಂದ ಕ್ಲಸ್ಟರ್ ಮಟ್ಟದಲ್ಲಿ ಕಿಚನ್ ಸೆಂಟರ್‌ಗಳನ್ನು ಆರಂಭಿಸಿ, ಸಂಘ-ಸಂಸ್ಥೆಗಳು, ಮಹಿಳಾ ಸಂಘಗಳು ಹಾಗೂ ಸ್ವಸಹಾಯ ಸಂಘಗಳ ಮೂಲಕ ಅಡುಗೆ ಮಾಡಿಸುವಂತೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಶಿಕ್ಷಣ ಇಲಾಖೆಗೆ ಮನವಿ ಮಾಡಿರುವುದು ಖಂಡನೀಯ ಎಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಆಕ್ರೋಶ ವ್ಯಕ್ತಪಡಿಸಿದೆ.
ಕ್ಲಸ್ಟರ್ ಕಿಚನ್ ಸೆಂಟರ್‌ಗಳ ಸ್ಥಾಪನೆಯಿಂದ ಪ್ರಸ್ತುತ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾವಿರಾರು ಅಡುಗೆ ನೌಕರರು ಉದ್ಯೋಗ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ. ಯೋಜನೆಯ ಮೂಲ ಆಶಯವನ್ನು ಮರೆತು, ಬಡ ಮಹಿಳೆಯರ ಜೀವನೋಪಾಯಕ್ಕೆ ಆಧಾರವಾಗಿರುವ ಉದ್ಯೋಗವನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ಸಂಘದ ಪದಾಧಿಕಾರಿಗಳು ಆರೋಪಿಸಿದ್ದಾರೆ.
ಈ ಸಂಬಂಧ ಬೀದರ್ ಜಿಲ್ಲಾ ಪಂಚಾಯತ್ ಸಿಇಒ ಗಿತ್ತೆ ಮಾಧವ್ ವಿಠಲರಾವ್ ಅವರಿಗೆ ಮನವಿ ಸಲ್ಲಿಸಿ, “ರಾಜ್ಯಾದ್ಯಂತ ಲಕ್ಷಾಂತರ ಬಡ, ವಿಧವಾ ಹಾಗೂ ವಿಚ್ಛೇದಿತ ಮಹಿಳೆಯರು ತಿಂಗಳಿಗೆ ಕೇವಲ ₹300ರಿಂದ ₹650ರ ಅಲ್ಪ ಸಂಭಾವನೆಗೆ ಕೆಲಸ ಮಾಡುತ್ತಾ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಇಂತಹ ಮಹಿಳೆಯರ ಬದುಕಿಗೆ ಆಧಾರವಾಗಿರುವ ಉದ್ಯೋಗವನ್ನು ಕಿತ್ತುಕೊಳ್ಳುವ ಕ್ಲಸ್ಟರ್ ಕಿಚನ್ ಸೆಂಟರ್ ವ್ಯವಸ್ಥೆ ಜಾರಿಗೊಳಿಸಬಾರದು” ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಬೀದರ್ | ಕಬ್ಬಿಗೆ ₹4,000 ಬೆಲೆ ನಿಗದಿಗೆ ಆಗ್ರಹ: ಸಿಡಿದ ಆಕ್ರೋಶ, ವಿವಿಧೆಡೆ ರೈತರಿಂದ ʼರಸ್ತಾ ರೋಕೊʼ
ಬಿಸಿಯೂಟ ನೌಕರರ ಉದ್ಯೋಗ ಮತ್ತು ಕೆಲಸದ ಭದ್ರತೆ ಕಾಪಾಡಬೇಕು, ಕ್ಲಸ್ಟರ್ ಕಿಚನ್ ಸೆಂಟರ್ ಪ್ರಾರಂಭಿಸುವ ಪ್ರಸ್ತಾವವನ್ನು ಕೈಬಿಡಬೇಕು ಹಾಗೂ ಅಡುಗೆ ನೌಕರರ ಹಿತಾಸಕ್ತಿಗಳನ್ನು ರಕ್ಷಿಸಬೇಕು ಎಂಬ ಪ್ರಮುಖ ಬೇಡಿಕೆಗಳೊಂದಿಗೆ ನವೆಂಬರ್ 25ರಿಂದ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಹೋರಾಟ ನಡೆಯಲಿದೆ. ಹೋರಾಟದ ಅಂಗವಾಗಿ ಅಂದಿನಿಂದ ರಾಜ್ಯದ ಬಿಸಿಯೂಟ ಅಡುಗೆ ನೌಕರರು ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ಪುಷ್ಪಾ ಮಜಗೆ, ಪ್ರಧಾನ ಕಾರ್ಯದರ್ಶಿ ರೇಖಾ ಹಮೀಲಪೂರಕರ್ ಹಾಗೂ ಖಜಾಂಚಿ ರುಕ್ಮಿಣಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




