ಬಸವಣ್ಣನವರ ಮತ್ತು ಲಿಂಗಾಯತ ಸಮುದಾಯದ ಕುರಿತು ಅಮೆರಿಕದ ಪ್ರಜೆಯಾದ ರವಿ ಹಂಜ್ ಅವರು ಖಾಸಗಿ ಯೂಟ್ಯೂಬ್ ವಾಹಿನಿಯಲ್ಲಿ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಡಾ. ಬಸವ ಮರುಳಸಿದ್ಧ ಸ್ವಾಮಿಗಳು ತೀವ್ರವಾಗಿ ಖಂಡಿಸಿದ್ದಾರೆ.
ಬಸವಣ್ಣನವರು ಕೇವಲ ಒಂದು ಸಮುದಾಯದ ಆರಾಧ್ಯ ವ್ಯಕ್ತಿಯಲ್ಲ; ಸರ್ವಜನಾಂಗದ ಏಳಿಗೆಗಾಗಿ ಶ್ರಮಿಸಿ, ಸಮಾನತೆ, ಪ್ರಗತಿ, ಮಾನವೀಯತೆ ಹಾಗೂ ಸರ್ವೋದಯದ ಆಶಯಗಳನ್ನು ಜಗತ್ತಿಗೆ ಸಾರಿದ ಮಹಾನ್ ದಾರ್ಶನಿಕ ಬಸವಣ್ಣನವರು ಭಾರತೀಯ ಸಾಂಸ್ಕೃತಿಕ ಮತ್ತು ಸಾಮಾಜಿಕ ಚಳವಳಿಯ ಚಲನಶೀಲ ಶಕ್ತಿಯಾಗಿದ್ದಾರೆ. ಅವರು ಸಮಸ್ತ ಮಾನವಕುಲದ ಒಳಿತಿಗಾಗಿ ಬದುಕಿದ ಮಹಾನ್ ಸುಧಾರಕರು. ಜಾತಿ, ವರ್ಗ, ಲಿಂಗಭೇದಗಳನ್ನು ಮೀರಿ ಸಮಾನತೆ, ಸ್ವಾತಂತ್ರ್ಯ, ಕಾಯಕ, ದಾಸೋಹ ಮತ್ತು ಮಾನವ ಘನತೆಯ ಮೌಲ್ಯಗಳನ್ನು ಪ್ರತಿಪಾದಿಸಿದ ಅವರ ಚಿಂತನೆಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ. ಇಂತಹ ಮಹಾನ್ ವ್ಯಕ್ತಿತ್ವದ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡುವುದು ಅವರ ತತ್ವಾದರ್ಶಗಳಿಗೆ ಮಾಡುವ ಅಪಮಾನ ಮಾತ್ರವಲ್ಲದೆ, ಸಮಾಜದ ಶಾಂತಿ, ಸೌಹಾರ್ದತೆ ಮತ್ತು ಸ್ವಾಸ್ಥ್ಯಕ್ಕೆ ಧಕ್ಕೆ ತರುವ ಕೃತ್ಯವೂ ಆಗಿದೆ. ರಾಜಪ್ರಭುತ್ವದ ಕಾಲಘಟ್ಟದಲ್ಲಿ ಅನುಭವ ಮಂಟಪದ ಮೂಲಕ ಮುಕ್ತ ಚರ್ಚೆ, ಸಮಾನ ಅವಕಾಶ, ಸಾಮಾಜಿಕ ನ್ಯಾಯ ಹಾಗೂ ಪ್ರಜಾತಾಂತ್ರಿಕ ಮೌಲ್ಯಗಳ ಮಹತ್ವವನ್ನು ಜಗತ್ತಿಗೆ ಸಾರಿದ ಬಸವಣ್ಣನವರ ಆಶಯಗಳನ್ನು ಸಮಾಜದಲ್ಲಿ ಅನುಷ್ಠಾನಗೊಳಿಸಲು ಶ್ರಮಿಸುತ್ತಿರುವವರಿಗೆ ಇಂತಹ ಕೃತ್ಯಗಳು ಅಪಾರ ಮಾನಸಿಕ ನೋವನ್ನುಂಟುಮಾಡುತ್ತವೆ.
ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಮಹನೀಯರ ವ್ಯಕ್ತಿತ್ವವನ್ನು ವಿಕೃತಗೊಳಿಸುವುದು, ಸಮುದಾಯಗಳ ಭಾವನೆಗಳನ್ನು ಘಾಸಿಗೊಳಿಸುವುದು ಹಾಗೂ ಸಮಾಜದಲ್ಲಿ ಗೊಂದಲ ಮತ್ತು ದ್ವೇಷಕ್ಕೆ ಕಾರಣವಾಗುವ ರೀತಿಯಲ್ಲಿ ಮಾತನಾಡುವುದು ಸಮರ್ಥನೀಯವಲ್ಲ. ಸಮಾಜದಲ್ಲಿ ಪರಸ್ಪರ ಗೌರವ, ಸಾಮರಸ್ಯ ಮತ್ತು ಸಹಬಾಳ್ವೆಯ ವಾತಾವರಣ ನಿರ್ಮಾಣವಾಗಬೇಕಾದರೆ, ಸಾರ್ವಜನಿಕ ಚರ್ಚೆಗಳಲ್ಲಿ ಜವಾಬ್ದಾರಿಯುತ ನಡವಳಿಕೆ ಅತ್ಯಗತ್ಯ. ಬಸವಣ್ಣನವರಂತಹ ವಿಶ್ವಮಾನ್ಯ ಮಹನೀಯರ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುವ ಪ್ರಯತ್ನಗಳನ್ನು ಸಹಿಸಲು ಸಾಧ್ಯವಿಲ್ಲ. ಈಗಾಗಲೇ ರವಿ ಹಂಜ್ ಬರೆದ ಕೃತಿಯನ್ನು ಸರ್ಕಾರ ನಿಷೇಧ ಮಾಡಲು ತೀರ್ಮಾನಿಸಿರುವ ವಿಷಯ ನಮ್ಮ ಗಮನಕ್ಕೆ ಬಂದಿದೆ.
ಆದರೆ ಇದು ಕೇವಲ ಕೃತಿ ನಿಷೇದಕಷ್ಟೇ ಸೀಮಿತವಾಗಬಾರದು :
ಬಸವಣ್ಣನವರು ಹಾಗೂ ಲಿಂಗಾಯತ ಸಮುದಾಯದ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿರುವ ರವಿ ಹಂಜ್ ಮತ್ತು ಈ ಕೃತ್ಯದ ಹಿಂದೆ ಪ್ರೇರಣೆ ನೀಡಿರುವ ವ್ಯಕ್ತಿಗಳು ಅಥವಾ ಶಕ್ತಿಗಳ ವಿರುದ್ಧ ಸಂಬಂಧಪಟ್ಟ ಕಾನೂನಿನಡಿ ಸೂಕ್ತ ತನಿಖೆ ನಡೆಸಿ, ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಆಗ್ರಹಿಸುತ್ತೇವೆ. ಸಮಾಜದ ಶಾಂತಿ, ಸೌಹಾರ್ದತೆ ಮತ್ತು ಮಹನೀಯರ ಘನತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ತುರ್ತಾಗಿ ಕ್ರಮವಹಿಸಬೇಕೆಂದು ಡಾ. ಬಸವ ಮರುಳಸಿದ್ಧ ಸ್ವಾಮೀಜಿಯವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.




