ಮುಂಬರುವ 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅಯೋಧ್ಯೆ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಅವರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸವಾಲು ಎಸೆದಿದ್ದಾರೆ. ನವೆಂಬರ್ 19ರಂದು ಗೋರಖ್‌ಪುರ ಜಿಲ್ಲೆಯ ಕ್ಯಾಂಪಿಯರ್‌ಗಂಜ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಖಿಲೇಶ್ ಅಯೋಧ್ಯೆಯಿಂದ ನಾಮಪತ್ರ ಸಲ್ಲಿಸಿದರೆ ತಾವೂ ಅಲ್ಲಿಂದಲೇ ನಾಮಪತ್ರ ಸಲ್ಲಿಸಿ ಮುಖಾಮುಖಿ ಕಣಕ್ಕಿಳಿಯುವುದಾಗಿ ಹೇಳಿದ್ದಾರೆ.
ಅಖಿಲೇಶ್ ಅವರ ಹಿಂದಿನ ಸವಾಲನ್ನು ಉಲ್ಲೇಖಿಸಿ ವಾಗ್ದಾಳಿ ನಡೆಸಿದ ಯೋಗಿ, ನೇರವಾಗಿ ಎದುರಿಸುವ ಧೈರ್ಯವಿಲ್ಲದವರು ಮಾತ್ರ ಹಿಂದಿನಿಂದ ದಾಳಿ ಮಾಡುತ್ತಾರೆ ಎಂದು ಟೀಕಿಸಿದ್ದಾರೆ. ವಾಕ್ಸಮರ ನಡೆಸುವ ಬದಲು ನೇರ ಚುನಾವಣಾ ಕಣಕ್ಕೆ ಇಳಿಯುವಂತೆ ಅವರು ಸವಾಲು ಹಾಕಿದ್ದಾರೆ. ಇದೇ ವೇಳೆ, ಸಮಾಜವಾದಿ ಪಕ್ಷವು ಮಾಫಿಯಾ ಶಕ್ತಿಗಳಿಗೆ ಆಶ್ರಯ ನೀಡುತ್ತಿದ್ದು, ಯುವಕರ ಉದ್ಯೋಗ ಮತ್ತು ಮಹಿಳೆಯರ ಸುರಕ್ಷತೆಗೆ ಧಕ್ಕೆ ತಂದಿದೆ ಎಂದು ಯೋಗಿ ಆರೋಪಿಸಿದ್ದಾರೆ.
ಯೋಗಿ ಅವರ ತವರು ಕ್ಷೇತ್ರವಾದ ಗೋರಖ್‌ಪುರದಲ್ಲಿ ನವೆಂಬರ್ 18ರಂದು ಅಖಿಲೇಶ್ ಯಾದವ್ ‘ಪಿಡಿಎ (ಹಿಂದುಳಿದ, ದಲಿತ, ಅಲ್ಪಸಂಖ್ಯಾತ) ರಥಯಾತ್ರೆ’ ನಡೆಸಿದ ಮರುದಿನವೇ ಈ ಸವಾಲು ಹೊರಬಿದ್ದಿದೆ. ರಥಯಾತ್ರೆಯ ವೇಳೆ ಅಖಿಲೇಶ್ ಅವರು ಗೋರಖ್‌ಪುರದ ಅಭಿವೃದ್ಧಿ ಮಾದರಿ ಮತ್ತು ಆರೋಗ್ಯ ಸೇವೆಗಳ ಕುರಿತು ಪ್ರಶ್ನೆಗಳನ್ನು ಎತ್ತಿದ್ದರು. ಅಲ್ಲದೆ, 2027ರ ಪೂರ್ವಾಂಚಲ ಚುನಾವಣೆಯಲ್ಲಿ ಒಗ್ಗಟ್ಟಿನ ಪಿಡಿಎ ಶಕ್ತಿಯು ಗೋರಖ್‌ಪುರ ಜಿಲ್ಲೆಯ ಎಲ್ಲಾ ಒಂಬತ್ತು ಕ್ಷೇತ್ರಗಳಲ್ಲೂ ಬಿಜೆಪಿಯನ್ನು ಸೋಲಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದರು.
ಗೋರಖ್‌ಪುರದಲ್ಲಿ ಉಭಯ ನಾಯಕರ ಪ್ರಚಾರದ ನಡುವೆಯೇ ರಥಯಾತ್ರೆಯ ಸಂದರ್ಭದಲ್ಲಿ ಸಂಭವಿಸಿದ ಬಾಲಕನೊಬ್ಬನ ಸಾವಿನ ಪ್ರಕರಣ ರಾಜಕೀಯ ಸಂಘರ್ಷವನ್ನು ಮತ್ತಷ್ಟು ತೀವ್ರಗೊಳಿಸಿದೆ. ರಸ್ತೆಗಳಲ್ಲಿ ಅರಾಜಕತೆ ಸೃಷ್ಟಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಯೋಗಿ ಎಚ್ಚರಿಸಿದ್ದರೆ, ಈ ದುರ್ಘಟನೆಯ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಅಖಿಲೇಶ್ ಪ್ರತ್ಯಾರೋಪ ಮಾಡಿದ್ದಾರೆ.
ಈ ಸವಾಲು–ಪ್ರತಿಸವಾಲಿನ ರಾಜಕಾರಣಕ್ಕೆ ಅಕ್ಟೋಬರ್ ತಿಂಗಳ ಬೆಳವಣಿಗೆಗಳ ಹಿನ್ನೆಲೆಯೂ ಇದೆ. ಅಯೋಧ್ಯೆಯಿಂದ ಸ್ಪರ್ಧಿಸುವಂತೆ ಅಖಿಲೇಶ್ ನೀಡಿದ್ದ ಮೊದಲ ಹೇಳಿಕೆಯ ಬೆನ್ನಲ್ಲೇ, ಅಕ್ಟೋಬರ್‌ನಲ್ಲಿ ಬಲರಾಮ್‌ಪುರದಲ್ಲಿ ನಡೆದ ಕಾರ್ಯಕ್ರಮದಲ್ಲೂ ಯೋಗಿ ಇದೇ ರೀತಿ ನೇರ ಸ್ಪರ್ಧೆಯ ಸವಾಲು ಹಾಕಿದ್ದರು.
ಅಯೋಧ್ಯೆಯ ಹಿಂದಿನ ಚುನಾವಣಾ ಫಲಿತಾಂಶಗಳು ಮತ್ತು ಅವಧ್ ಪ್ರದೇಶದ ರಾಜಕೀಯ ಸಮೀಕರಣಗಳ ಹಿನ್ನೆಲೆಯಲ್ಲಿ, ಈ ಇಬ್ಬರು ಪ್ರಮುಖ ನಾಯಕರು ಅಯೋಧ್ಯೆಯಿಂದ ಮುಖಾಮುಖಿಯಾಗುವ ಸಾಧ್ಯತೆಯು ರಾಜ್ಯ ರಾಜಕಾರಣದಲ್ಲಿ ಭಾರಿ ಕುತೂಹಲ ಮೂಡಿಸಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. 2027ರ ವಿಧಾನಸಭಾ ಚುನಾವಣೆಗೆ ಇನ್ನೂ ಸಮಯವಿದ್ದರೂ, ಈ ಸವಾಲಿನ ರಾಜಕಾರಣವು ಉತ್ತರ ಪ್ರದೇಶದ ಚುನಾವಣಾ ಕಣವನ್ನು ಈಗಿನಿಂದಲೇ ರಂಗೇರಿಸಿದೆ.



