ಕಬ್ಬಿಗೆ ಪ್ರತಿ ಟನ್‌ಗೆ ಕನಿಷ್ಠ ₹4,000 ಬೆಲೆ ನಿಗದಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಗುರುವಾರ ಜಿಲ್ಲೆಯ ವಿವಿಧೆಡೆ ರೈತರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಔರಾದ್ ತಾಲ್ಲೂಕಿನ ಸಂತಪೂರ, ಚಿಟಗುಪ್ಪ ತಾಲ್ಲೂಕಿನ ಮಂಗಲಗಿ ಟೋಲ್‌ಗೇಟ್, ಬೀದರ್ ತಾಲ್ಲೂಕಿನ ಬಗದಲ್ ಮತ್ತು ಆಣದೂರ, ಭಾಲ್ಕಿ ತಾಲ್ಲೂಕಿನ ಹಲಬರ್ಗಾ, ಭಾತಂಬ್ರಾ ಹಾಗೂ ಉಚ್ಚಾ ಸೇರಿದಂತೆ ಜಿಲ್ಲೆಯ ಹತ್ತುಕ್ಕೂ ಹೆಚ್ಚು ಸ್ಥಳಗಳಲ್ಲಿ ರೈತರು ರಸ್ತೆಗಿಳಿದು ಸರ್ಕಾರ ಮತ್ತು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಬ್ಬಿನ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಬೀದರ್ ನಗರದ ಉಸ್ತುವಾರಿ ಸಚಿವರ ಕಚೇರಿ ಎದುರು ರೈತ ಸಂಘಟನೆಗಳ ಸಮನ್ವಯ ಸಮಿತಿಯ ನೇತೃತ್ವದಲ್ಲಿ ಕಳೆದ ಏಳು ದಿನಗಳಿಂದ ಅಹೋರಾತ್ರಿ ಧರಣಿ ನಡೆಸಲಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಬ್ಬಿನ ದರ ನಿಗದಿಪಡಿಸಿದ್ದರೂ ಬೀದರ್ ಜಿಲ್ಲೆಯಲ್ಲಿ ಈವರೆಗೆ ದರ ನಿಗದಿಪಡಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಆರೋಪಿಸಿ ನ.19ರಂದು ಬೀದರ್ ಬಂದ್‌ಗೆ ಕರೆ ನೀಡಲಾಗಿತ್ತು.
ಬಂದ್ ಹಿನ್ನೆಲೆಯಲ್ಲಿ ನಗರದ ಬಸ್ ನಿಲ್ದಾಣ ಸೇರಿದಂತೆ ವಿವಿಧೆಡೆ ರೈತ ಸಂಘಟನೆಗಳ ಮುಖಂಡರು ಬಸ್ ಸಂಚಾರ ಸ್ಥಗಿತಗೊಳಿಸಿದರು. ಕೆಲವು ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿಸಿದರು. ಆದರೆ, ಬೆಳಿಗ್ಗೆ 11ಗಂಟೆಯಿಂದ ಎಂದಿನಂತೆ ವ್ಯಾಪಾರ ವಹಿವಾಟು ಮುಂದುವರೆಯಿತು. ನಗರದಲ್ಲಿ ಜನರಿಗೆ ಬಂದ್ ಬಿಸಿ ತಟ್ಟಲಿಲ್ಲ.

ರೈತರು ಚಿಟಗುಪ್ಪ ತಾಲ್ಲೂಕಿನ ಮಂಗಲಗಿ ಟೋಲ್‌ಗೇಟ್ ಸಮೀಪ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲು ತೆರಳುತ್ತಿದ್ದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಪಾಟೀಲ್ ಸೇರಿದಂತೆ 50ಕ್ಕೂ ಹೆಚ್ಚು ರೈತರು ಹಾಗೂ ಮಹಿಳೆಯರನ್ನು ಬಗದಲ್ ಸಮೀಪ ತಡೆದು ಪೊಲೀಸರು ವಶಕ್ಕೆ ಪಡೆದು ಬೀದರ್‌ನ ಸಿದ್ಧಾರೂಢ ಮಠಕ್ಕೆ ವಾಹನದಲ್ಲಿ ಕರೆದೊಯ್ದು ಬಿಡುಗಡೆ ಮಾಡಿದರು.
ಔರಾದ್ ತಾಲ್ಲೂಕಿನ ಸಂತಪೂರ ಬಳಿ ಬೀದರ್-ಔರಾದ್ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಸಂತಪೂರ ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು. ಭಾಲ್ಕಿ ತಾಲ್ಲೂಕಿನ ದಾಡಗಿ ಕ್ರಾಸ್, ಭಾತಂಬ್ರಾ, ಉಚ್ಚಾ ಹಾಗೂ ಹಲಬರ್ಗಾ ಸೇರಿದಂತೆ ವಿವಿಧೆಡೆ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಗಳಿಗೆ ತಹಸೀಲ್ದಾರ್ ಮಲ್ಲಿಕಾರ್ಜುನ ವಡ್ಡನಕೇರಿ ಭೇಟಿ ನೀಡಿ ರೈತರ ಅಹವಾಲು ಆಲಿಸಿದರು.
ಹುಮನಾಬಾದ್ ತಾಲ್ಲೂಕಿನ ದುಬಲಗುಂಡಿ ಕ್ರಾಸ್, ಬಸವಕಲ್ಯಾಣ ತಾಲ್ಲೂಕಿನ ರಾಜೇಶ್ವರ ಸೇರಿದಂತೆ ಜಿಲ್ಲೆಯ ಹತ್ತುಕ್ಕೂ ಹೆಚ್ಚು ಕಡೆ ಸಾವಿರಾರು ರೈತರು ಪ್ರತಿಭಟನೆ ನಡೆಸಿ ಕಬ್ಬಿನ ಬೆಲೆ ನಿಗದಿಪಡಿಸುವಂತೆ ಪಟ್ಟು ಹಿಡಿದರು. ಮಂಗಲಗಿ ಟೋಲ್‌ಗೇಟ್ ಬಳಿ ಸಾವಿರಾರು ರೈತರು ರಾಷ್ಟ್ರೀಯ ಹೆದ್ದಾರಿ ತಡೆದು ಸಂಜೆವರೆಗೂ ಧರಣಿ ನಡೆಸಿದರು.
ಎರಡು ದಿನಗಳಲ್ಲಿ ದರ ನಿಗದಿಪಡಿಸದಿದ್ದರೆ ʼಬೀದರ್ ಚಲೋʼ
ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, “ಬೆಳಗಾವಿ, ಕಲಬುರಗಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಟನ್ ಕಬ್ಬಿಗೆ ₹3,600 ಬೆಲೆ ನಿಗದಿಪಡಿಸಲಾಗಿದೆ. ಆದರೆ, ಬೀದರ್ ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಜಿಲ್ಲಾಡಳಿತ ತಾರತಮ್ಯ ಮಾಡುತ್ತಿದೆ. ಕೂಡಲೇ ಎರಡು ದಿನಗಳೊಳಗೆ ಕಬ್ಬಿನ ದರ ನಿಗದಿಪಡಿಸದಿದ್ದರೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ರೈತರನ್ನು ಒಗ್ಗೂಡಿಸಿ ‘ಬೀದರ್ ಚಲೋ’ ಹೋರಾಟ ನಡೆಸಲಾಗುವುದು” ಎಂದು ಎಚ್ಚರಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ, “ಕಬ್ಬಿನ ಬೆಲೆ ನಿಗದಿಪಡಿಸುವಂತೆ ಕಳೆದ ಏಳು ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಜಿಲ್ಲಾಡಳಿತ ಸ್ಪಂದಿಸಿಲ್ಲ. ಹೀಗಾಗಿ ಬೀದರ್ ಬಂದ್‌ಗೆ ಕರೆ ನೀಡಬೇಕಾಯಿತು. ಇಷ್ಟಾದರೂ ರೈತರ ಸಮಸ್ಯೆ ಆಲಿಸುವ ಬದಲು ಪ್ರತಿಭಟನಾಕಾರರನ್ನೇ ಪೊಲೀಸರು ವಶಕ್ಕೆ ಪಡೆಯುತ್ತಿರುವುದು ಯಾವ ನ್ಯಾಯ? ಪ್ರತಿಭಟನೆ ಹತ್ತಿಕ್ಕುವ ಪ್ರಯತ್ನ ಮಾಡುವ ಬದಲು ಜಿಲ್ಲಾಡಳಿತ ರೈತರೊಂದಿಗೆ ಸಂವಾದ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು” ಎಂದು ಒತ್ತಾಯಿಸಿದರು.
ರೈತರ ಬೇಡಿಕೆಗಳೇನು?
ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್‌ಎಸ್‌ಕೆ) ಪುನರಾರಂಭಿಸಿ ಕಬ್ಬು ಬೆಳೆಗಾರರ ಹಿತ ಕಾಪಾಡಬೇಕು. ಬರಗಾಲ ಪೀಡಿತ ಪ್ರದೇಶದ ಎಲ್ಲ ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಮಾಡಬೇಕು. ಬೆಳೆ ನಷ್ಟಕ್ಕೊಳಗಾದ ರೈತರಿಗೆ ಬೆಳೆ ವಿಮೆ ಪರಿಹಾರದ ಹಣವನ್ನು ತ್ವರಿತವಾಗಿ ಜಮೆ ಮಾಡಬೇಕು. ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ನಿಯಮಾವಳಿಗಳಡಿ ಅರ್ಹ ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಬೇಕು. ಡಾ.ಎಂ.ಎಸ್.ಸ್ವಾಮಿನಾಥನ್ ವರದಿಯ ಶಿಫಾರಸುಗಳನ್ನು ತಕ್ಷಣವೇ ಕಾನೂನಿನ ರೂಪಕ್ಕೆ ತರಬೇಕು. ಬೀದರ್ ಜಿಲ್ಲೆಯನ್ನು ಬರಗಾಲ ಪೀಡಿತ ಜಿಲ್ಲೆಯೆಂದು ಘೋಷಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ಶುಲ್ಕವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ರೈತರು ಬೇಡಿಕೆಗಳನ್ನು ಮಂಡಿಸಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ಬಾಬುರಾವ್ ಹೊನ್ನಾ, ಶಿವರಾಯ ಮುದಾಳೆ, ಕೆ.ಡಿ.ಗಣೇಶ, ಈಶ್ವರ್ ಸಿಂಗ್ ಠಾಕೂರ್, ಗುಂಡರೆಡ್ಡಿ, ರಾಜಶೇಖರ್ ನಾಗಮೂರ್ತಿ, ಸಂತೋಷ ರೆಡ್ಡಿ ಆಣದೂರ, ಮಲ್ಲಿಕಾರ್ಜುನ ಬಿರಾದರ್, ಸೋಮನಾಥ ಟೋಕರೆ ಭಾತಂಬ್ರಾ, ರಾಜೇಶ್ವರ ಶಿವಚಾರ್ಯ ಸ್ವಾಮೀಜಿ, ಶಾಂತಮ್ಮಾ ಮೂಲಗೆ, ಬಸವರಾಜ ಅಷ್ಟೂರೆ, ಚಂದ್ರಶೇಖರ್ ಪಾಟೀಲ್ ಹೋಚಕನಳ್ಳಿ ಸೇರಿದಂತೆ ಜಿಲ್ಲೆಯ ರೈತ ಸಂಘಟನೆ ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದರು.
ಇದನ್ನೂ ಓದಿ : ಬೀದರ್ | ಲೇಖಕ ರವಿ ಹಂಜ್ ಭಾವಚಿತ್ರಕ್ಕೆ ಬೂಟಿನೇಟು, ʼಬಸವ ಮಂಟಪʼ ಕೃತಿ ನಿಷೇಧಕ್ಕೆ ಆಗ್ರಹ




