ಕೂಲಿ ಕಾರ್ಮಿಕರು ಗುಳೆ ಹೋಗದೆ ತಮ್ಮ ಗ್ರಾಮದಲ್ಲಿಯೇ ವಿಬಿ-ಜಿ ರಾಮ್ ಜಿ ಯೋಜನೆಯಡಿ ಉದ್ಯೋಗ ಪಡೆದು ಆರ್ಥಿಕವಾಗಿ ಸಬಲರಾಗಬೇಕು ಎಂದು ಕಮಲನಗರ ತಾಲೂಕು ಸಂಪನ್ಮೂಲ ವ್ಯಕ್ತಿ ಸೂರ್ಯಕಾಂತ್ ಎಕಲಾರ ಹೇಳಿದರು.
ಕಮಲನಗರ ತಾಲೂಕಿನ ಬೆಳಕುಣಿ (ಭೋ) ಗ್ರಾಮ ಪಂಚಾಯತಿಯಲ್ಲಿ 2026-27ನೇ ಸಾಲಿನ ನರೇಗಾ ಯೋಜನೆ, 15ನೇ ಹಣಕಾಸು ಹಾಗೂ ರಾಜ್ಯ ಹಣಕಾಸು ಆಯೋಗದ ಅನುದಾನಗಳ ಸಾಮಾಜಿಕ ಲೆಕ್ಕ ಪರಿಶೋಧನೆ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಮದ ಹಿರಿಯ ನಾಗರಿಕ ರೋಹಿದಾಸ್ ನರನಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನರೇಗಾ ಯೋಜನೆಯಡಿ ಕೊಳವೆಬಾವಿ, ಗಿಡ ನೆಡುವುದು, ದನದ ಕೊಟ್ಟಿಗೆ ನಿರ್ಮಾಣ ಹಾಗೂ ಕೃಷಿ ಜಮೀನಿಗೆ ಸಂಬಂಧಿಸಿದ ವಿವಿಧ ವೈಯಕ್ತಿಕ ಕಾಮಗಾರಿಗಳ ಸೌಲಭ್ಯಗಳಿವೆ. ಕಾರ್ಮಿಕರು ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಸಮುದಾಯ ಕಾಮಗಾರಿಗಳಲ್ಲಿಯೂ ಭಾಗವಹಿಸಿ ಉದ್ಯೋಗ ಪಡೆದುಕೊಳ್ಳಬೇಕು” ಎಂದು ತಿಳಿಸಿದರು.
ಯೋಜನೆಯ ಸೌಲಭ್ಯ ಪಡೆಯಲು ಮೊದಲು ಕೂಲಿ ಕಾರ್ಮಿಕರು ಜಾಬ್ ಕಾರ್ಡ್ ಹೊಂದಿರಬೇಕು. ಅಗತ್ಯ ದಾಖಲೆಗಳನ್ನು ಗ್ರಾಮ ಪಂಚಾಯತಿಗೆ ಸಲ್ಲಿಸಿ ಜಾಬ್ ಕಾರ್ಡ್ ಪಡೆದುಕೊಳ್ಳಬೇಕು. 2026-27ನೇ ಸಾಲಿನ ನರೇಗಾ ಯೋಜನೆ ಹಾಗೂ 15ನೇ ಹಣಕಾಸು ಮತ್ತು ರಾಜ್ಯ ಹಣಕಾಸು ಆಯೋಗದ ಅನುದಾನಗಳ ಸಾಮಾಜಿಕ ಲೆಕ್ಕ ಪರಿಶೋಧನೆ ವರದಿಯನ್ನು ಮಂಡಿಸಿದರು. ಇಲಾಖಾವಾರು ಕೈಗೊಂಡ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ವಿವರಗಳನ್ನು ಸಭೆಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಜುಲೈ 1ರಿಂದ ಜಾರಿಗೆ ಬಂದಿರುವ ‘ವಿಕಸಿತ ಭಾರತ-ಗ್ಯಾರಂಟಿ ಫಾರ್ ರೋಜಗಾರ ಅಂಡ್ ಆಜೀವಿಕ ಮಿಷನ್–ಗ್ರಾಮೀಣ’ (ವಿಬಿ-ಜಿ ರಾಮ್-ಜಿ ) ಯೋಜನೆಯ ಕುರಿತು ಮಾಹಿತಿ ನೀಡಿದರು. ಗ್ರಾಮೀಣ ರೈತರು, ಕೃಷಿ ಕೂಲಿಕಾರರು ಹಾಗೂ ಗ್ರಾಮಗಳ ಅಭಿವೃದ್ಧಿಗೆ ಪೂರಕವಾದ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳ ಸೌಲಭ್ಯಗಳನ್ನು ವಿವರಿಸಿದರು.
ಸಭೆಯಲ್ಲಿ ಸಾಮಾಜಿಕ ಪರಿಶೋಧನೆ ವರದಿಯ ಕುರಿತು ಗ್ರಾಮಸ್ಥರು ಚರ್ಚಿಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದವಲ್‌ಸಾಬ್ ಮಲೀಕ್ ಮಾತನಾಡಿ, ಕೂಲಿ ಕಾರ್ಮಿಕರಿಗೆ ಯೋಜನೆಯ ಉದ್ದೇಶ ಮತ್ತು ಸೌಲಭ್ಯಗಳು ಸಮರ್ಪಕವಾಗಿ ತಲುಪಬೇಕು. ಸಾಮಾಜಿಕ ಪರಿಶೋಧನೆ ವರದಿಯು ಪಾರದರ್ಶಕತೆ ಹಾಗೂ ಉತ್ತರದಾಯಿತ್ವದಿಂದ ಕೂಡಿದ್ದು, ಜನರಿಗೆ ಯೋಜನೆಯ ಕುರಿತು ಉತ್ತಮ ಮಾಹಿತಿ ಒದಗಿಸುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು, ಪಂಚಾಯಿತಿ ಡಿಇಒ ವಿವೇಕ್ ಸ್ವಾಮಿ, ಬಿಲ್ ಕಲೆಕ್ಟರ್, ಪಂಚಾಯಿತಿ ಸಿಬ್ಬಂದಿ, ಕೂಲಿ ಕಾರ್ಮಿಕರು, ಗ್ರಾಮಸ್ಥರು ಹಾಗೂ ಸಾಮಾಜಿಕ ಪರಿಶೋಧನೆ ತಂಡದ ಸದಸ್ಯರಾದ ಶೇಷರಾವ್ ವಿಠಲ್, ಸುನಿಲ್ ವಿಠಲ್, ಸಂಗೀತ ಮತ್ತು ಪ್ರಶಾಂತ್ ಉಪಸ್ಥಿತರಿದ್ದರು.
ಇದನ್ನೂ ಓದಿ : ಬೀದರ್ ಜಿಲ್ಲೆಯ ಇಬ್ಬರು ಕಲಾ ಸಾಧಕರಿಗೆ ರಾಜೋತ್ಸವ ಪ್ರಶಸ್ತಿ




