ಬೆಂಗಳೂರು ನಗರದ ಸೋನೆಹಳ್ಳಿಕೆರೆ ವೃತ್ತದ ಸಮೀಪದ ಪಾದಚಾರಿ ಮಾರ್ಗಕ್ಕೆ ಹೊಂದಿಕೊಂಡಂತಿರುವ ಖಾಲಿ ನಿವೇಶನವೊಂದರಲ್ಲಿ ಶಂಕಿತ ವಸ್ತು ಪತ್ತೆಯಾಗಿದ್ದು, ಇದು ಕೆಲಕಾಲ ಬಾಂಬ್ ಆತಂಕಕ್ಕೆ ಕಾರಣವಾಯಿತು. ಕೂಡಲೇ ಎಚ್ಚೆತ್ತ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳ (BDDS) ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದೆ.
ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯರಲ್ಲಿ ಭೀತಿ ಮೂಡಿಸಿತ್ತು. ಖಾಲಿ ನಿವೇಶನದಲ್ಲಿ ಬಾಂಬ್ ಅನ್ನು ಹೋಲುವ ಶಂಕಿತ ವಸ್ತುವೊಂದು ಬಿದ್ದಿರುವುದನ್ನು ಗಮನಿಸಿದ ಸಾರ್ವಜನಿಕರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಬಾಂಬ್ ನಿಷ್ಕ್ರಿಯ ದಳ (BDDS), ಆ ವಸ್ತುವು ಕೇವಲ ಒಂದು ಖಾಲಿ ಪ್ಲಾಸ್ಟಿಕ್ ಟ್ಯೂಬ್‌ನಂತಹ ರಚನೆಯಾಗಿದ್ದು, ಅದರಿಂದ ಯಾವುದೇ ಅಪಾಯವಿಲ್ಲ ಎಂದು ಖಚಿತಪಡಿಸಿತು. ಬಳಿಕ ಅದನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, “ಯಾರೂ ಆತಂಕಪಡುವ ಅಗತ್ಯವಿಲ್ಲ. ಇದು ಯಾವುದೇ ಸಂಕೀರ್ಣ ಬ್ಯಾಟರಿಗಳಿಲ್ಲದ ವಸ್ತುವಾಗಿದೆ. ಬಹುಶಃ ಇದನ್ನು ಕ್ವಾರೆಯಲ್ಲಿ (ಗಣಿಗಾರಿಕೆ) ಬಳಸಲಾಗಿರಬಹುದು” ಎಂದು ಸ್ಪಷ್ಟಪಡಿಸಿದ್ದಾರೆ.
ನೈರುತ್ಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಎಸ್.ಕೆ. ಸೌಮ್ಯಲತಾ ಮಾತನಾಡಿ, ಸಾರ್ವಜನಿಕರಲ್ಲಿ ಅನಗತ್ಯ ಭೀತಿ ಉಂಟುಮಾಡುವ ಉದ್ದೇಶದಿಂದ ಯಾರೋ ಇದನ್ನು ಮಾಡಿರುವಂತೆ ತೋರುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. “ಬಾಂಬ್ ನಿಷ್ಕ್ರಿಯ ದಳವು ವಸ್ತುವನ್ನು ವಿಲೇವಾರಿ ಮಾಡಿದ್ದು, ಪರಿಶೀಲನೆಯಲ್ಲಿ ಅದು ಖಾಲಿಯಿರುವುದು ಪತ್ತೆಯಾಗಿದೆ” ಎಂದು ಅವರು ಮಾಹಿತಿ ನೀಡಿದ್ದಾರೆ.
ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸ್ಥಳದಲ್ಲಿ ಅನುಮಾನಾಸ್ಪದವಾಗಿ ಓಡಾಡಿದವರನ್ನು ಪತ್ತೆ ಹಚ್ಚಲು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.




