ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ಪ್ರಕ್ರಿಯೆಯಲ್ಲಿ ಪರಿಶಿಷ್ಟ ಜಾತಿ (ಎಸ್ಸಿ) ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಮಾದಿಗ ಸಮುದಾಯದ ಯುವ ಮುಖಂಡ ಆಸ್ಕರ್ ಫರ್ನಾಂಡೀಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಮಾದಿಗ, ಹೊಲೆಯ ಸೇರಿದಂತೆ ವಿವಿಧ ಉಪಜಾತಿಗಳನ್ನು ಒಳಗೊಂಡ ದಲಿತ ಸಮುದಾಯದ 85 ಸಾವಿರಕ್ಕೂ ಅಧಿಕ ಮತದಾರರಿದ್ದಾರೆ. ಇಷ್ಟೊಂದು ದೊಡ್ಡ ಸಂಖ್ಯೆಯ ಮತದಾರರನ್ನು ಹೊಂದಿರುವ ಕ್ಷೇತ್ರದಲ್ಲಿ ಜಿಲ್ಲಾ ಪಂಚಾಯಿತಿ ಮಟ್ಟದಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾದ ಕ್ಷೇತ್ರದಲ್ಲಿ ಒಂದೂ ಇಲ್ಲದಂತಾಗಿರುವುದು ದಲಿತ ಸಮುದಾಯದ ರಾಜಕೀಯ ಪ್ರಾತಿನಿಧ್ಯದ ದೃಷ್ಟಿಯಿಂದ ಕಳವಳಕಾರಿ ಸಂಗತಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕ್ಷೇತ್ರದಲ್ಲಿ ಈ ಹಿಂದೆ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಔರಾದ್ (ಎಸ್) ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ಸಾಮಾನ್ಯ ಮಹಿಳಾ ಕ್ಷೇತ್ರವನ್ನಾಗಿ ಬದಲಿಸಿರುವುದಕ್ಕೆ ತಮ್ಮ ವಿರೋಧವಿಲ್ಲ. ಆದರೆ, ಮೀಸಲಾತಿ ಬದಲಾವಣೆ ಸಂದರ್ಭದಲ್ಲಿ ಬೇರೆ ಯಾವುದಾದರೂ ಕ್ಷೇತ್ರವನ್ನು ಪರಿಶಿಷ್ಟ ಜಾತಿಗೆ ಮೀಸಲಿಡುವ ಮೂಲಕ ದಲಿತ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಬಹುದಿತ್ತು ಎಂದು ವಿಶ್ಲೇಷಿಸಿದ್ದಾರೆ.
ಮನ್ನಾಏಖ್ಖೇಳ್ಳಿ ತಾಲ್ಲೂಕು ಪಂಚಾಯಿತಿ ಕ್ಷೇತ್ರದಲ್ಲಿ ಈ ಹಿಂದೆ ಇದ್ದ ಸಾಮಾನ್ಯ ಮಹಿಳಾ ಮೀಸಲಾತಿಯನ್ನೇ ಮುಂದುವರಿಸಿರುವುದಕ್ಕೂ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅವರು, ಮೀಸಲಾತಿ ನಿರ್ಧಾರಗಳು ದಲಿತ ಸಮುದಾಯದ ರಾಜಕೀಯ ಪಾಲ್ಗೊಳ್ಳುವಿಕೆಗೆ ಅವಕಾಶ ಕಲ್ಪಿಸುವಂತಿರಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ಬೀದರ್ | ಬರದಲ್ಲೂ ಪಪ್ಪಾಯಿ ಬೆಳೆದು ₹25 ಲಕ್ಷ ಗಳಿಕೆ: ರೈತ ವೆಂಕಟರೆಡ್ಡಿ ತೋಟಕ್ಕೆ ಶಾಸಕರ ಭೇಟಿ
ಪ್ರಸ್ತುತ ಪ್ರಕಟಿಸಿರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಮೀಸಲಾತಿಯಿಂದ ಕ್ಷೇತ್ರದ ದಲಿತ ಸಮುದಾಯದ ರಾಜಕೀಯ ಪ್ರಾತಿನಿಧ್ಯಕ್ಕೆ ಧಕ್ಕೆಯಾಗುವ ಆತಂಕವಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ದಲಿತಪರ ಚಿಂತಕರು, ಬುದ್ಧಿಜೀವಿಗಳು ಹಾಗೂ ಯುವಕರು ಮೀಸಲಾತಿ ಕುರಿತು ಕಳವಳ ವ್ಯಕ್ತಪಡಿಸಿದ್ದು, ಸಮುದಾಯಕ್ಕೆ ನ್ಯಾಯಯುತ ಪ್ರಾತಿನಿಧ್ಯ ಕಲ್ಪಿಸುವಂತೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲಾಗುವುದು ಎಂದು ಒತ್ತಾಯಿಸಿದ್ದಾರೆ.





